Homeಕರ್ನಾಟಕಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಮತ್ತೊಬ್ಬ ಅಸಮಾಧಾನಿತ ಹಿರಿಯ ನಾಯಕ ರಾಜಕೀಯ ನಿವೃತ್ತಿ ಘೋಷಣೆ

ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಮತ್ತೊಬ್ಬ ಅಸಮಾಧಾನಿತ ಹಿರಿಯ ನಾಯಕ ರಾಜಕೀಯ ನಿವೃತ್ತಿ ಘೋಷಣೆ

- Advertisement -
- Advertisement -

ಮಂಗಳವಾರ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಘೋ‍ಷಣೆ ಮಾಡಿದ ಮೇಲೆ ಪಕ್ಷದಲ್ಲಿ ಅಸಮಾಧಾನದ ಕಿಚ್ಚು ಹೆಚ್ಚುತ್ತಲೇ ಇದೆ. ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಮಂಗಳವಾರ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಪಕ್ಷ ಟಿಕೆಟ್‌ ನೀಡದಿರುವ ಕುರಿತು ನನಗೆ ಅಸಮಾಧಾನ ಇಲ್ಲ. ಆದರೆ, ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಮಾಡಿರುವ ಕೆಲಸವನ್ನು ಗೌರವಿಸುವ ಕ್ರಮ ಇದಲ್ಲ” ಎಂದು ಪಕ್ಷದ ಮೇಲಿನ ಬೇಸರ ವ್ಯಕ್ತಪಡಿಸಿದರು.

”ಪ್ರಾಮಾಣಿಕ ರಾಜಕಾರಣಕ್ಕೆ ಈಗ ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು” ಎಂದು ಅಳಲು ತೋಡಿಕೊಂಡರು.

”ನಾನು ಇನ್ನು ರಾಜಕಾರಣದಲ್ಲಿ ಇರಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು. ಚುನಾವಣಾ ಪ್ರಚಾರಕ್ಕೂ ಹೋಗದಿರಲು ನಿರ್ಧರಿಸಿದ್ದೇನೆ” ಎಂದು ಬಿಜೆಪಿಯೊಂದಿಗಿನ ತಮ್ಮ ಸಂಬಂಧವನ್ನು ಬಹುತೇಕ ಕಡಿತಗೊಳಿಸುವ ಮಾತುಗಳನ್ನು ಅವರು ಆಡಿದ್ದಾರೆ.

ಇದನ್ನೂ ಓದಿ: ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಔಟ್: ಪಕ್ಷಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ

ಸಚಿವ ಎಸ್​.ಅಂಗಾರ ಆರು ಸುಳ್ಯ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ಶಾಸಕರಾಗಿದ್ದರು. ಆದರೂ ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನಗೊಂಡಿರುವ ಅಂಗಾರ, ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದ ಸಚಿವ ಎಸ್.ಅಂಗಾರ ಅವರು ಬಳಿಕ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡುವರೆ ವರ್ಷದಿಂದ ಮೀನುಗಾರಿಕೆ ಸಚಿವರಾಗಿದ್ದರು. ಸುಳ್ಯದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿದ್ದರು.

ಕರ್ನಾಟಕ ಬಿಜೆಪಿಯ ಹಿರಿಯ ನಾಯಕರು ಒಬ್ಬರಿಂದೊಬ್ಬರು ನಿವೃತ್ತಿಯಾಗುತ್ತಿದ್ದಾರೆ. ಮೊದಲಿಗೆ ಬಿಎಸ್ ಯಡಿಯೂರಪ್ಪ ಅವರು ಚುನಾವಣೆ ಕಣದಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದರು. ಇನ್ನು ಮತ್ತೋರ್ವ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಸಹ ಟಿಕೆಟ್ ಕೈತಪ್ಪುವ ಸುಳಿವು ಇದ್ದಿದ್ದರಿಂದ ಮಂಗಳವಾರವಷ್ಟೇ ಚುನಾವಣೆಗೆ ನಿವೃತ್ತಿ ಘೋಷಿಸಿದರು, ಆದರೆ ರಾಜಕೀಯದಲ್ಲಿ ಇರುತ್ತೇನೆ ಎಂದಿದ್ದಾರೆ.

ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸಹ ಸ್ವಯಂ ಪ್ರೇರಿತವಾಗಿಯೇ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ದಾವಣಗೆರೆ ಬಿಜೆಪಿ ಶಾಸಕ ಎಸ್.ಎ ರವೀಂದ್ರನಾಥ್ ಅವರೂ ಸಹ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಇದೀಗ ಸತತ ಆರು ಬಾರಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಸುಳ್ಯ ಶಾಸಕ ಎಸ್.​ಅಂಗಾರ ಅವರು ಈ ಬಾರಿ ಬಿಜೆಪಿ ಟಿಕೆಟ್​ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಸಕ್ರಿಯ ರಾಜಕಾರಣಕ್ಕೆ ಗುಡ್​ಬೈ ಹೇಳಿದ್ದಾರೆ.

ಬುಧವಾರ ಬೆಳಿಗ್ಗೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ. ಇತ್ತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಕೂಡ ಟಿಕೆಟ್ ವಿಚಾರಕ್ಕೆ ಹೈಕಮಾಂಡ್ ವಿರುದ್ದವೇ ಗುಡುಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಾತುಗಳನ್ನಾಡಿದ್ದಾರೆ.

ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಕಿಚ್ಚು ಹೆಚ್ಚಾಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...