Homeಅಂಕಣಗಳುಗಿಗ್ ದುಡಿಮೆಗಾರರಿಗೆ ವಿಮೆ ಸ್ವಾಗತಾರ್ಹ; ಶೋಷಣೆ ತಡೆಗಟ್ಟುವ ಕ್ರಮಗಳು ಯಾವಾಗ?

ಗಿಗ್ ದುಡಿಮೆಗಾರರಿಗೆ ವಿಮೆ ಸ್ವಾಗತಾರ್ಹ; ಶೋಷಣೆ ತಡೆಗಟ್ಟುವ ಕ್ರಮಗಳು ಯಾವಾಗ?

- Advertisement -
- Advertisement -

ಸಿದ್ದರಾಮಯ್ಯನವರು ತಾವು ಮಂಡಿಸಿದ 14ನೆಯ ಬಜೆಟ್ ಭಾಷಣವನ್ನು ವಿಶೇಷ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಸುಮಾರು ಎರಡೂವರೆ ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಓದಿ ಗಮನ ಸೆಳೆದರು. ಹಲವು ಮಾನವ ಅಭಿವೃದ್ಧಿ ಕಲ್ಯಾಣ ಯೋಜನೆಗಳಿಂದ, ಅದರಲ್ಲಿಯೂ ಐದು ಗ್ಯಾರಂಟಿಗಳ ಜಾರಿಯ ಬಗ್ಗೆ ಗಮನ ಸೆಳೆದಿರುವ ಈ ಬಜೆಟ್ ಹಲವು ವಲಯಗಳನ್ನು ಗಂಭೀರವಾಗಿ ಪರಿಗಣಿಸದಿರುವುದಕ್ಕೂ ಟೀಕೆಗೆ ಗುರಿಯಾಗುತ್ತಿದೆ. ಅದರಲ್ಲಿ ಒಂದು ಕಾರ್ಮಿಕ ವಲಯ. ಕಳೆದ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಗಳವರೆಗೆ ವಿಸ್ತರಿಸುವ ಕರಾಳ ಕಾರ್ಖಾನೆ ತಿದ್ದುಪಡಿ ಕಾಯ್ದೆಯನ್ನು ತಂದಿತ್ತು. ಅದನ್ನು ಕ್ಯಾನ್ಸಲ್ ಮಾಡುವ ಬಗ್ಗೆ, ಕಾರ್ಮಿಕರ ಹಿತರಕ್ಷಣೆಗೆ ಮತ್ತಷ್ಟು ಮಾತುಗಳನ್ನು ಈ ಬಜೆಟ್ ಆಡಬಹುದಿತ್ತು. ಬಜೆಟ್ ಹೊರತಾಗಿಯೂ ಕರಾಳ ತಿದ್ದುಪಡಿಯನ್ನು ರದ್ದು ಮಾಡಬಹುದಾದರೂ ಬಜೆಟ್‌ಅನ್ನು ಅದಕ್ಕಾಗಿ ಉಪಯೋಗಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಳೆದುಕೊಂಡಿತು. ಹಾಗೆಯೇ ಇ-ಕಾಮರ್ಸ್ ವಲಯದಲ್ಲಿ ಟ್ಯಾಕ್ಸಿ ಡ್ರೈವರ್‌ಗಳಾಗಿ, ಡೆಲಿವರಿ ಪಾರ್ಟ್‌ನರ್‌ಗಳಾಗಿ ತೊಡಗಿಸಿಕೊಂಡಿರುವ ಗಿಗ್ ದುಡಿಮೆಗಾರರಿಗೆ ನಾಲ್ಕು ಲಕ್ಷ ಮೊತ್ತದ ಜೀವವಿಮೆ ಮತ್ತು ಅಪಘಾತ ವಿಮೆಯನ್ನು ಸರ್ಕಾರ ಷೋಷಿಸಿದೆ. ಇದಕ್ಕೆ ನೋಂದಾಯಿಸಿಕೊಳ್ಳುವ ಕ್ರಮ, ಇದರ ಫಲಾನುಭವಿಗಳು ಅಂದಾಜು ಸಂಖ್ಯೆ, ಈ ವಿಮೆಯ ಪ್ರೀಮಿಯಮ್‌ಅನ್ನು ಯಾವ ಸಂಸ್ಥೆಗೆ ಕಟ್ಟಲಾಗುತ್ತದೆ, ಈ ಯೋಜನೆಯ ಅಂದಾಜು ಖರ್ಚು, ಇದಕ್ಕೆ ಸಂಪನ್ಮೂಲವನ್ನು ಹೇಗೆ ಕ್ರೋಢೀಕರಿಸಲಾಗುತ್ತದೆ ಮುಂತಾದ ವಿವರಗಳು ಸದ್ಯಕ್ಕೆ ಲಭ್ಯವಿಲ್ಲದಿದ್ದರೂ, ಈ ಘೋಷಣೆಯನ್ನು ಮಾಧ್ಯಮಗಳಲ್ಲಿ ಕೊಂಡಾಡಲಾಯಿತು. ಆದರೆ ಗಿಗ್ ಉದ್ಯೋಗ ವಲಯದ ದುಡಿಮೆಗಾರರಿಗೆ ನೀಡಿರುವ ಕಾಸ್ಮೆಟಿಕ್ ಸೌಲಭ್ಯ ಮಾತ್ರವಿದು ಎಂಬುದು ಮೇಲ್ನೋಟಕ್ಕೇ ಮನದಟ್ಟಾಗುತ್ತದೆ. ’ಭಾಗ್ಯ, ’ಶಕ್ತಿ’ ಮುಂತಾದ ಕಲ್ಯಾಣ ಯೋಜನೆಗಳನ್ನು ಟೀಕಿಸಿಕೊಂಡು, ಫ್ರೀ ರೈಡ್-ಫ್ರೀ ಡೆಲಿವರಿ-ಫ್ರೀ ಪಿಜ್ಜಾಗೆ ಕೈಯೊಡ್ಡುವ ಪ್ರಿವಿಲೆಜ್-ಸವಲತ್ತುಗಳನ್ನುಳ್ಳ ಮಂದಿಯಿಂದ ಹಾಗೂ ಇಂತಹವರನ್ನು ಉತ್ತೇಜಿಸುವ ಕಾರ್ಪೊರೆಟ್ ದೈತ್ಯ ಸಂಸ್ಥೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಗಿಗ್ ಆರ್ಥಿಕ ವಲಯದ ದುಡಿಮೆಗಾರರಿಗೆ ಘೋಷಿಸಿರುವ ಈ ಸೌಲಭ್ಯ ಏನೇನೂ ಸಾಲದು.

ಅಮೆಜಾನ್‌ನಂತಹ ದೈತ್ಯ ಇಕಾಮರ್ಸ್ ಸಂಸ್ಥೆಗಳ ಸೇವಾ ವ್ಯವಹಾರವನ್ನೇ ಉದಾಹರಣೆಯಾಗಿ ನೋಡಬಹುದು. ತನ್ನ ’ಪ್ರೈಮ್’ ಯೋಜನೆಗೆ ನೋಂದಾಯಿಸಿಕೊಂಡಿರುವ ಪ್ರತಿಷ್ಠಿತ ಗ್ರಾಹಕರು ಆರ್ಡರ್ ಮಾಡುವ ವಸ್ತುಗಳನ್ನು ಒಂದೇ ದಿನದಲ್ಲಿ ಒದಗಿಸುವ, ಬೇಡವೆಂದರೆ ವಾಪಸ್ ಕಳುಹಿಸಲು ವ್ಯವಸ್ಥೆ ಕಲ್ಪಿಸುವ, ಕೆಲವೊಮ್ಮೆ ಊಹಿಸಲಸಾಧ್ಯವಾದಷ್ಟು ರಿಯಾಯಿತಿ ಕೊಟ್ಟು ಸಂತೃಪ್ತಿಪಡಿಸುವ “ಮೋಹಕ” ವ್ಯವಸ್ಥೆಗೆ ಬಲಿಪಶುಗಳ್ಯಾರು ಗೊತ್ತೇ? ಒಂದು: ಮಾರುಕಟ್ಟೆಯ ಬಹುತೇಕ ವಹಿವಾಟನ್ನು ಆಕ್ರಮಿಸಿಕೊಂಡಿರುವ ಅಮೆಜಾನ್‌ನಂತಹ ದೈತ್ಯ ಟೆಕ್-ಇಕಾಮರ್ಸ್ ಸಂಸ್ಥೆಗಳಲ್ಲಿ, ಬೇರೆ ಮಾರ್ಗಗಳಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರಲು ನೋಂದಣಿ ಮಾಡಿಕೊಳ್ಳುವ ಸಣ್ಣಗಾತ್ರದ, ಏಕವ್ಯಕ್ತಿ ರೂಪದ ಸಂಸ್ಥೆಗಳು; ಇವರು ಈ ಇ-ಕಾಮರ್ಸ್ ಸಂಸ್ಥೆಗಳು ನಿರ್ದೇಶಿಸುವ ನಿಯಮಗಳನ್ನು ಪಾಲಿಸಿ ವ್ಯವಹಾರ ಮಾಡಲು ನಲುಗಿ ಹೋಗುತ್ತವೆ; ತೀವ್ರ ರಿಯಾಯತಿಯ ಸ್ಪರ್ಧೆಯಲ್ಲಿ ಅತಿ ಕಡಿಮೆ ಮಾರ್ಜಿನ್‌ಗೆ ವ್ಯಾಪಾರ ಮಾಡುವುದು, ಯಾರಾದರೂ ಯಾವುದೇ ಸಮಯದಲ್ಲಾದರೂ ಉತ್ಪನ್ನವನ್ನು ಖರೀದಿಸಿದ ಕೂಡಲೇ ಪ್ಯಾಕ್ ಮಾಡಿ ಕಳುಹಿಸುವ ಒತ್ತಡ, ಗ್ರಾಹಕನಿಗೆ ಸೇವೆ ನೀಡುವ ಆಧಾರದಲ್ಲಿ ನೀಡುವ ರೇಟಿಂಗ್ ಮೇಲೆ ಅವಲಂಬಿಸಿರುವ ಆದ್ಯತೆಯ ವ್ಯಾಪಾರ- ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಈ ಬಂಡವಾಳಶಾಹಿ ಕಂಪನಿಗಳು ಸೃಷ್ಟಿಸುತ್ತವೆ. ಬಂಡವಾಳ ಮತ್ತು ದುಡಿಮೆ ಮಾರ್ಕೆಟ್‌ಪ್ಲೇಸ್‌ನಲ್ಲಿ ನೋಂದಣಿ ಮಾಡಿಕೊಂಡು ದುಡಿಯುವ ಈ ಜನರದ್ದು; ಅಪಾರ ಲಾಭ ಇ-ಕಾಮರ್ಸ್ ನಡೆಸುವವರಿಗೆ ಮತ್ತು ಅಷ್ಟೋ ಇಷ್ಟೋ ಸಂತೃಪ್ತಿ ಈ ಇ-ಕಾಮರ್ಸ್ ಆಪ್ ಬಳಕೆದಾರರಿಗೆ ಎನ್ನುವಂತಾಗಿದೆ. ಎರಡನೆಯದಾಗಿ, ಸಾಗಾಣೆ, ರಿಟರ್ನ್, ಪ್ಯಾಕಿಂಗ್ ಇವುಗಳಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿಯ ಬಗ್ಗೆಯೂ ಹಲವು ಅಧ್ಯಯನಗಳಾಗಿವೆ. ವಿಪರೀತ ಪ್ಲಾಸ್ಟಿಕ್ ಬಳಕೆ, ಅತಿಯಾದ ಕೊಳ್ಳುಬಾಕುತನ ಇವೆಲ್ಲವೂ ಭೂಮಿಯ ವಾತಾವರಣಕ್ಕೆ ಮಾಡುತ್ತಿರುವ ಅಪಾಯ ಅಷ್ಟಿಷ್ಟಲ್ಲ. ಇನ್ನು ಮೂರನೆಯದಾಗಿ ಇಂತಹ ಇ-ಕಾಮರ್ಸ್ ಕಂಪನಿಗಳಿಗೆ ಕೆಳಹಂತದಲ್ಲಿ ಉದ್ಯೋಗ ಮಾಡುವವರು ಮತ್ತು ಆ ಸಂಸ್ಥೆಯ ಉದ್ಯೋಗಿಗಳಲ್ಲದ, ಆದರೆ ಗ್ರಾಹಕರ ಮತ್ತು ಈ ಸಂಸ್ಥೆಗಳ ನಡುವೆ ಸೇತುವೆಯಾಗುವ ಡೆಲಿವರಿ ಪಾರ್ಟ್‌ನರ್‌ಗಳ ಪರಿಪಾಟಲು. ಅಮೆಜಾನ್ ವೇರ್‌ಹೌಸ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೀಡುವ ಕಿರುಕುಳದ ಬಗ್ಗೆ ಸಾಕಷ್ಟು ವರದಿಗಳಿವೆ. ಊಟದ ಮತ್ತು ಶೌಚಾಲಯದ ಬಿಡುವಿಗೂ ಹೋರಾಟ ಮಾಡುವ ಸ್ಥಿತಿಯನ್ನು ವಿರೋಧಿಸಿ ಅಮೆರಿಕದಂತಹ ದೇಶಗಳಲ್ಲಿ ಯೂನಿಯನ್ ಕಟ್ಟಿಕೊಳ್ಳಲು ಕೂಡ ಕಷ್ಟಪಟ್ಟ ಎಷ್ಟೋ ಪ್ರಕರಣಗಳಿವೆ. ಇನ್ನು ಡೆಲಿವರಿ ಪಾರ್ಟ್‌ನರ್‌ಗಳು ಒಂದು ಕಡೆ ತಾವು ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳ ಜತೆಯಲ್ಲೂ ಹಾಗೂ ಮತ್ತೊಂದು ಬದಿಯಲ್ಲಿ ಗ್ರಾಹಕರ ಕಡೆಯಿಂದಲೂ ಅಸಹನೆ, ತಾರತಮ್ಯವನ್ನು ಎದುರಿಸಿದ ಹಲವಾರು ಉದಾಹರಣೆಗಳಿವೆ. ಈ ಎಲ್ಲವೂ ಹೆಚ್ಚು ರಿಯಾಯಿತಿ, ಕೊಳ್ಳುಬಾಕುತನ, ಒಂದು ದಿನಕ್ಕೆ ಬಂದು ಸೇರಬೇಕೆಂಬ ಹುಂಬತನವುಳ್ಳ ಎಲೀಟ್ ವರ್ಗವನ್ನು ತೃಪ್ತಿಪಡಿಸುವುದಕ್ಕೋಸ್ಕರ ನಡೆಯುತ್ತಿದೆ.

ಗಿಗ್ ಆರ್ಥಿಕ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಆಪ್ ಮೂಲದ ಕಾರು ಮತ್ತು ಬೈಕ್ ಟ್ಯಾಕ್ಸಿ ಚಾಲಕರು, ಫುಡ್ ಡೆಲಿವರಿ ಆಪ್‌ಗಳ ಜೊತೆಗೆ ಆಹಾರ ಕೊಂಡೊಯ್ಯುವ ವರ್ಕರ್ಸ್ ಹೀಗೆ ಎಲ್ಲರೂ ದ್ವಿ-ಶೋಷಣೆಯನ್ನು ಅನುಭವಿಸುತ್ತಾರೆ. ಇತ್ತ ತಾವು ಪಾರ್ಟ್‌ನರ್ ಆಗಿರುವ ಸಂಸ್ಥೆಗಳ ಕಾರ್ಮಿಕರೂ ಅವರಲ್ಲ. ಅವರಿಗೆ ಕಾರ್ಮಿಕ ಕಾನೂನುಗಳ ಅನ್ವಯವೂ ಆಗುವುದಿಲ್ಲ; ’ಜೀರೋ ಹವರ್ಸ್’ ಎಂಬ ಕಲ್ಪನೆಯ ಒಪ್ಪಂದದಲ್ಲಿ ತಮಗೆ ಬೇಕಾದಾಗ ಮಾತ್ರ ಆಪ್‌ಅನ್ನು ಚಾಲೂ ಮಾಡಿಕೊಂಡು ಕರ್ತವ್ಯ ನಿರ್ವಹಿಸಬಹುದು ಎಂಬ ಆಧಾರದಲ್ಲಿ ಕೆಲಸ ಮಾಡುವ ಇವರು, ಗ್ರಾಹಕರು ನೀಡುವ ’ರೇಟಿಂಗ್’ಗೆ ಬಲಿಪಶುಗಳಾಗಿ ತಾವು ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳು ಯಾವ ಮಾತುಕತೆಗೂ ಆಸ್ಪದ ನೀಡದೆ ನೋಂದಣಿಯನ್ನು ರದ್ದುಪಡಿಸಿರುವ ಪ್ರಕರಣಗಳು ಕೂಡ ಇವೆ. ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯಗಳೂ ಇಲ್ಲದ ಅನಿಶ್ಚಿತತೆಯ ಕೆಲಸದ ವಾತಾವರಣದಲ್ಲಿ ಈ ಕಾರ್ಮಿಕರು ದುಡಿಯುತ್ತಿದ್ದರೆ, ಇವರನ್ನು ನಿಯೋಜಿಸಿಕೊಳ್ಳುವ ಕಂಪನಿಗಳು ಬಿಲಿಯನ್‌ಗಟ್ಟಲೆ ಹಣ ಮಾಡುತ್ತಿವೆ. ಆ ಸಂಸ್ಥೆಗಳಲ್ಲಿ ಉನ್ನತ ಮಟ್ಟದಲ್ಲಿರುವ ಉದ್ಯೋಗಿಗಳು ಮಾತ್ರ ದಪ್ಪ ಗಾತ್ರದ ಸಂಬಳದ ಜೊತೆಗೆ ಕಲ್ಯಾಣ ಯೋಜನೆಗಳನ್ನು ವ್ಯಂಗ್ಯ ಮಾಡಿಕೊಂಡು ಗಹಗಹಿಸುತ್ತಿರುತ್ತಾರೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ಮಾಜಿ ಸಚಿವ ಮುನಿರತ್ನ ಸೇರಿ ನಾಲ್ವರ ವಿರುದ್ಧ FIR ದಾಖಲು

ಇಂತಹ ಅಸಮಾನ ಸಮಾಜದಲ್ಲಿ, ಅಸಮಾನ ಆರ್ಥಿಕ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿರುವ ಮತ್ತು ಕಾರ್ಮಿಕ ಕಾನೂನುಗಳ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿರುವ ಇ-ಕಾಮರ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಿ, ಗಿಗ್ ದುಡಿಮೆಗಾರರಿಗೆ ಕಾರ್ಮಿಕ ಸ್ಥಾನಮಾನವನ್ನೂ ಅದರ ಜೊತೆಗೆ ಬರುವ ಹಕ್ಕುಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಸರ್ಕಾರಗಳು ಹಾಕಿಕೊಳ್ಳುವುದು ಇಂದಿನ ಅಗತ್ಯ. ಅದಕ್ಕೆ ಪೂರ್ವ ಪೀಠಿಕೆಯನ್ನಾದರೂ ಈ ಬಜೆಟ್‌ನಲ್ಲಿ ಹಾಕಬೇಕಿತ್ತು. ಈಗ ಆ ದುಡಿಮೆಗಾರರಿಗೆ ನಾಲ್ಕು ಲಕ್ಷದ ವಿಮೆಯನ್ನು ಘೋಷಿಸಿರುವುದು ಸ್ವಾಗತಾರ್ಹ ಸಂಗತಿಯಾದರೂ, ಇ-ಕಾಮರ್ಸ್ ಸಂಸ್ಥೆಗಳಿಗೆ ಉತ್ತರದಾಯಿತ್ವ ವಹಿಸುವ ಯಾವ ಕ್ರಮಗಳ ಬಗ್ಗೆಯೂ ಮಾತಿಲ್ಲ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಡುಗಡೆ ಮಾಡಿದ್ದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಗಿಗ್ ದುಡಿಮೆಗಾರರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಅದಕ್ಕೆ 3000 ಕೋಟಿ ಪ್ರಾಥಮಿಕ ಅನುದಾನವನ್ನು ನೀಡುವ ಭರವಸೆ ನೀಡಿತ್ತು. ಸಾಗಾಣೆ, ಆಹಾರ ವಿತರಣೆ, ಇ-ಫಾರ್ಮಸಿ ಮುಂತಾದ ವಲಯಗಳಲ್ಲಿ ಕೆಲಸ ಮಾಡುವ ಅನೌಪಚಾರಿಕ ದುಡಿಮೆಗಾರರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸುವ ಕಾನೂನಿನ ಭರವಸೆ ನೀಡಿತ್ತು. ಮೊದಲನೆಯ ಬಜೆಟ್‌ನಲ್ಲಿ ಕನಿಷ್ಠ ವೆಲ್‌ಫೇರ್ ಬೋರ್ಡ್ ಸ್ಥಾಪನೆಯ ಪ್ರಸ್ತಾಪವನ್ನಾದರೂ ಮಾಡಬಹುದಿತ್ತು! ಆಗಿಲ್ಲ.

ಮೇ 2023ರಲ್ಲಿ ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗಿಗ್ ದುಡಿಮೆಗಾರರನ್ನು ಭೇಟಿ ಮಾಡಿ ಅವರ ಕಷ್ಟಸುಖಗಳನ್ನು ಕೇಳಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಗಿಗ್ ದುಡಿಮೆಗಾರರ (ನೋಂದಣಿ ಮತ್ತು ಕಲ್ಯಾಣ) ಮಸೂದೆ, 2023ಅನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದರು. ಗಿಗ್ ದುಡಿಮೆಗಾರರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಅದರಲ್ಲಿ ಗಿಗ್ ವರ್ಕರ್ಸ್ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ, ಅವರ ಕುಂದುಕೊರತೆಗಳನ್ನು ಆಲಿಸುವ, ಎಲ್ಲಾ ಆಪ್ ವೇದಿಕೆಗಳಲ್ಲಿ ನಡೆಯುವ ಪೇಮೆಂಟ್ ವ್ಯವಹಾರವನ್ನು ಮೇಲ್ವಿಚಾರಣೆ ಮಾಡುವ, ತಪ್ಪೆಸಗುವ ಇ-ಕಾಮರ್ಸ್ ಸಂಸ್ಥೆಗಳಿಗೆ ದಂಡ ಹಾಕಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಆ ಮಸೂದೆ ಮಾತಾಡಿತ್ತು. ಅದಿನ್ನೂ ಕಾನೂನು ಆಗಿರುವ ಬಗ್ಗೆ ಮಾಹಿತಿಯಿಲ್ಲ. ಆದರೆ ಕರ್ನಾಟಕ ಇದರೆಡೆಗೆ ಹೆಜ್ಜೆ ಇಡುವ ತುರ್ತಂತೂ ಇದೆ.

ಜುಲೈ 2022ರ ನೀತಿ ಆಯೋಗದ ವರದಿಯ ಪ್ರಕಾರ 77 ಲಕ್ಷ ಗಿಗ್ ದುಡಿಮೆಗಾರರು ಭಾರತದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದು ಈಗಾಗಲೇ ದುಪ್ಪಟ್ಟು ಆಗಿರುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿಯೇ 2 ಲಕ್ಷಕ್ಕಿಂತಲೂ ಹೆಚ್ಚು ಗಿಗ್ ವರ್ಕರ್ಸ್ ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಮಾನವನ ಅಭಿವೃದ್ಧಿಯ ವಿವಿಧ ಕಾಲಘಟ್ಟಗಳಲ್ಲಿ ಉದ್ಯೋಗ ವ್ಯವಸ್ಥೆಯಲ್ಲಿ ಬದಲಾದ ಪರಿಸ್ಥಿತಿ ಪ್ರಭುತ್ವಗಳಿಗೆ ಹಲವು ಸವಾಲುಗಳನ್ನು ಒಡ್ಡಿದೆ. ಕೈಗಾರಿಕಾ ಕ್ರಾಂತಿ ಜಗತ್ತಿನಾದ್ಯಂತ ದೊಡ್ಡ ಸವಾಲನ್ನು ಒಡ್ಡಿ, ದಮನಿತರ ಶೋಷಣೆಗೆ ಸುಲಭ ಮಾರ್ಗವನ್ನು ಹಾಕಿಕೊಟ್ಟಿತ್ತು. ಅಲ್ಲಿಂದ ಕಾರ್ಮಿಕ ಸಂಘಟನೆಗಳು ಹುಟ್ಟಿ, ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿ ಕಾನೂನುಗಳು ಜಾರಿಯಾಗುವ ಹೊತ್ತಿಗೆ ಎಷ್ಟೋ ಜನ ತಮ್ಮ ಜೀವಗಳನ್ನು ತೆತ್ತಿದ್ದರು. ಈಗ ಗಿಗ್ ವ್ಯವಸ್ಥೆ ಚುರುಕು ಪಡೆದುಕೊಳ್ಳುತ್ತಿದೆ. ವೇಗವಾಗಿ ಬೆಳೆಯುತ್ತಿದೆ. ಕೈಗಾರಿಕಾ ಕ್ರಾಂತಿಯ ಆರಂಭಿಕ ಹಂತದ ದೌರ್ಜನ್ಯದ ತೀವ್ರ ಮಟ್ಟ ಈ ವ್ಯವಸ್ಥೆಯ ಸಂದರ್ಭದಲ್ಲಿ ಇಲ್ಲವಾದರೂ, ಶೋಷಣೆಯ ಹೊಸ ರೂಪವಾಗಿಯೇ ಈ ವ್ಯವಸ್ಥೆ ಜನ್ಮತಳೆದಿದೆ. ನಾರ್ವೆಯಂತಹ ದೇಶಗಳು ಈ ’ಜೀರೋ ಹವರ್’ ಕಾಂಟ್ರಾಕ್ಟ್‌ಗಳನ್ನು ನಿಷೇಧಿಸುವ ಕಾನೂನನ್ನು ತಂದಿವೆ. ಆ ನಿಟ್ಟಿನಲ್ಲಿ ಗಿಗ್ ದುಡಿಮೆಗಾರರ ಕಾರ್ಮಿಕ ಹಕ್ಕುಗಳನ್ನು ಗುರುತಿಸುವದರಲ್ಲಿ ಕೆಲವು ನಾರ್ಡಿಕ್ ದೇಶಗಳು ಕೆಲಸ ಮಾಡುತ್ತಿವೆ. ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳಿಗೆ ಮುಂದಾಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...