Homeಮುಖಪುಟಸಿನಿಮಾದಲ್ಲಿ ಮಹಿಳೆಯರು, ಮಕ್ಕಳ ಕುರಿತ ಆಕ್ಷೇಪಾರ್ಹ ದೃಶ್ಯಗಳು: ನಿರ್ದೇಶಕ ಮಹೇಶ್ ಮಂಜ್ರೇಕರ್‌ ವಿರುದ್ಧ ದೂರು

ಸಿನಿಮಾದಲ್ಲಿ ಮಹಿಳೆಯರು, ಮಕ್ಕಳ ಕುರಿತ ಆಕ್ಷೇಪಾರ್ಹ ದೃಶ್ಯಗಳು: ನಿರ್ದೇಶಕ ಮಹೇಶ್ ಮಂಜ್ರೇಕರ್‌ ವಿರುದ್ಧ ದೂರು

- Advertisement -
- Advertisement -

ಮರಾಠಿ ಚಿತ್ರ ‘ನಾಯ್‌ ವರನ್ ಭಾತ್ ಲೋನ್‌ಚಾ ಕೋನ್ ನಾಯ್‌ ಕೋನ್‌ಚಾ’ದಲ್ಲಿ ಮಹಿಳೆಯರು ಮತ್ತು ಮಕ್ಕಳ ಕುರಿತ ಆಕ್ಷೇಪಾರ್ಹ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮಹೇಶ್ ಮಂಜ್ರೇಕರ್‌ ವಿರುದ್ಧ ಮುಂಬೈನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಜತೆಗೆ ಎರಡು ಕಡೆ ಪ್ರತ್ಯೇಕ ದೂರುಗಳು ದಾಖಲಾಗಿವೆ.

2022ರ ಜನವರಿ 14ರಂದು ಚಲನಚಿತ್ರ ಬಿಡುಗಡೆಯಾಗಿದ್ದು, ಮಹೇಶ್ ಮಂಜ್ರೇಕರ್‌ ಮೇಲೆ ಆಕ್ರೋಶ ವ್ಯಕ್ತವಾಗಿದೆ.

ಸೆಕ್ಷನ್ 292 (ಅಶ್ಲೀಲ ವಿಷಯದ ಮಾರಾಟ ಇತ್ಯಾದಿ) , 295 (ಸಾರ್ವಜನಿಕವಾಗಿ ಅಶ್ಲೀಲ ಕೃತ್ಯಗಳು ಅಥವಾ ಪದಗಳಿಗೆ ಶಿಕ್ಷೆ), ಐಪಿಸಿಯ 34 (ಸಾಮಾನ್ಯ ಉದ್ದೇಶ) ಮತ್ತು ಮಹಿಳೆಯರನ್ನು ಅಸಭ್ಯವಾಗಿ ಪ್ರಾತಿನಿಧಿಸುವ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳುವಂತೆ ಮುಂಬೈನ ಕ್ಷತ್ರಿಯ ಮರಾಠಾ ಸೇವಾ ಸಂಸ್ಥಾ ಸಂಸ್ಥೆಯು ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಇನ್ನೊಂದೆಡೆ ವಕೀಲ ಡಿ.ವಿ.ಸರೋಜ್, ಸಮಾಜದಲ್ಲಿ ಸಾಮರಸ್ಯ ಕದಡುವ ವಿಚಾರದ ಹಿನ್ನೆಲೆಯಲ್ಲಿ ಚಿತ್ರದ ವಿರುದ್ಧ ಮಹಾರಾಷ್ಟ್ರದಾದ್ಯಂತ ಪ್ರತಿಭಟನೆಗಳು ನಡೆದಿದ್ದು, ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ, ನಿರ್ದೇಶಕರು ಮತ್ತು ಇತರ ತಯಾರಕರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್ ಸಿ) ಅಧ್ಯಕ್ಷ ಪ್ರಸೂನ್ ಜೋಶಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ನ್ಯಾಯಾಲಯ ಜನವರಿ 31 ರಂದು ಇದರ ವಿಚಾರಣೆ ನಡೆಸಲಿದೆ.

ಭಾರತೀಯ ಸ್ತ್ರೀ ಶಕ್ತಿ ಎನ್‌ಜಿಒನ ಅಧ್ಯಕ್ಷೆ ಸೀಮಾ ದೇಶಪಾಂಡೆ, “ಚಿತ್ರದ ಟ್ರೇಲರ್‌ ಬಗ್ಗೆ ಈ ಹಿಂದೆಯೇ ಮುಂಬೈ ಪೊಲೀಸ್ ಡಿಸಿಪಿ ವಲಯ 5ಕ್ಕೆ ತೆರಳಿ ದೂರು ನೀಡಿದ್ದು, ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲಾಗಿದೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಐಪಿಸಿ ಸೆಕ್ಷನ್ 292 (ಅಶ್ಲೀಲತೆ), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಜೊತೆಗೆ ಮಹಿಳೆಯರನ್ನು ಅಸಭ್ಯವಾಗಿ ಪ್ರಾತಿನಿಧಿಸುವ ನಿಷೇಧ ಕಾಯ್ದೆ, 1986ರ ಸೆಕ್ಷನ್ 2 (ಸಿ) ಮತ್ತು ಸೆಕ್ಷನ್ 13 ಆರ್/ಡಬ್ಲ್ಯೂ ಎಸ್ 21 ಪೋಕ್ಸೊ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಕ್ರಮ ತೆಗೆದುಕೊಳ್ಳುವಂತೆ ಸೀಮಾ ದೇಶಪಾಂಡೆ  ಮನವಿ ಮಾಡಿದ್ದಾರೆ.

ನಾಗ್ಪುರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಭಾರತೀಯ ಸ್ತ್ರೀ ಶಕ್ತಿಯ ಅರ್ಜಿದಾರ ನೀಲಂ ಪಾರ್ವಟೆರ ದೂರಿನ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತುಕೊಳ್ಳಲಿದೆ.

ನೀಲಂರ ಅರ್ಜಿಯ ಪ್ರಕಾರ, ಜನವರಿ 10ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದನ್ನು ಗಮನಿಸಿದ ನಂತರವಷ್ಟೇ ದೂರು ನೀಡಲಾಗಿದೆ. ಟ್ರೇಲರ್‌‌ ಅಪ್ರಾಪ್ತ ಮಕ್ಕಳೊಂದಿಗಿನ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಿರುವುದರಿಂದ ಚಿತ್ರ ಬಿಡುಗಡೆಯಾಗಬಾರದೆಂದು ಅರ್ಜಿ ಸಲ್ಲಿಸಲಾಗಿತ್ತು. ಆದಾಗ್ಯೂ, ಮಹೇಶ್ ಮಜ್ರೇಕರ್ ನಿರ್ದೇಶನದ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಅರ್ಜಿದಾರರು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿದ್ದಾರೆ. ಚಿತ್ರಕ್ಕೆ ನೀಡಲಾದ ಪ್ರಮಾಣಪತ್ರವನ್ನು ಪರಿಶೀಲಿಸಲು ನ್ಯಾಯಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮೂಲಕ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಚಿತ್ರದಲ್ಲಿನ ಅಪ್ರಾಪ್ತರ ಪಾತ್ರಗಳನ್ನು ನಿರ್ವಹಿಸಿರುವ ಮಕ್ಕಳು, ವಯಸ್ಸಾದ ಮಹಿಳೆಯರೊಂದಿಗೆ ಅನೈತಿಕ ಲೈಂಗಿಕ ಸಂಬಂಧ ಹೊಂದಿರುವಂಥ ದೃಶ್ಯಗಳಿವೆ. ಇವು ಕಾನೂನುಬಾಹಿರ ಮತ್ತು ಮಕ್ಕಳ ಅಶ್ಲೀಲತೆ ಕಾಯ್ದೆಯಡಿ ಬರುತ್ತವೆ. ಟ್ರೇಲರ್ ನಲ್ಲಿ ತೋರಿಸಲಾದ ಲೈಂಗಿಕ ದೃಶ್ಯಗಳು ಚಿತ್ರದಲ್ಲಿಲ್ಲ. ಆದರೂ, ಚಿತ್ರದಲ್ಲಿ ಅಪ್ರಾಪ್ತರನ್ನು ಬಳಸಿಕೊಂಡ ಅಸಂಬದ್ಧ ದೃಶ್ಯಗಳು ಸಹ ಕ್ರಿಮಿನಲ್ ಕೃತ್ಯವಾಗಿದೆ ಎಂದು ಆರೋಪಿಸಲಾಗಿದೆ.


ಇದನ್ನೂ ಓದಿರಿ: ಭಯೋತ್ಪಾದಕ ‘ಗೋಡ್ಸೆ’ ಕುರಿತ ಸಿನಿಮಾ ಬಿಡುಗಡೆ ತಡೆಗಾಗಿ ಸುಪ್ರೀಂಗೆ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...