Homeಮುಖಪುಟಶೇರು ಮಾರುಕಟ್ಟೆಯಲ್ಲಿ ಮತ್ತೊಂದು ಹಗರಣದ ಆರೋಪ; ಶೇರು ಇತಿಹಾಸದ ಕಣ್ಣೋಟ

ಶೇರು ಮಾರುಕಟ್ಟೆಯಲ್ಲಿ ಮತ್ತೊಂದು ಹಗರಣದ ಆರೋಪ; ಶೇರು ಇತಿಹಾಸದ ಕಣ್ಣೋಟ

- Advertisement -
- Advertisement -

ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಬಹುದಾದ ಮತ್ತೊಂದು ಹಗರಣ ಬೆಳಕಿಗೆ ಬಂದದ್ದೇ ತಡ ಶೇರುಗಳು ಹಾಗೂ ಶೇರು ಮಾರುಕಟ್ಟೆಗಳು ಮತ್ತೊಮ್ಮೆ ಸುದ್ದಿಯಲ್ಲಿವೆ. 1991ರಲ್ಲಿ ವಿತ್ತ ಮಾರುಕಟ್ಟೆ ಉದಾರೀಕರಣಗೊಂಡಿತು; ಇದರ ನಂತರದ ಕಾಲಘಟ್ಟದಲ್ಲಿ ಕನಿಷ್ಟವೆಂದರೂ 10 ಭಾರೀ ಹಗರಣಗಳು ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡಿವೆ. 1992ರ ಹರ್ಷದ್ ಮೆಹ್ತಾ ಹಗರಣದಿಂದ ಪ್ರಾರಂಭವಾದ ದೊಡ್ಡ ಹಗರಣಗಳು ಮಾರುಕಟ್ಟೆಗಳನ್ನು ಅಲುಗಾಡಿಸಿ, ಆರ್ಥಿಕತೆಯಲ್ಲಿ ಭೀತಿಯನ್ನು ಸೃಷ್ಟಿಸಿವೆ. ಹಗರಣವೊಂದು ಬೆಳಕಿಗೆ ಬಂದಾಗಲೆಲ್ಲಾ, ಆರೋಪಿಸಲಾಗುವ ಹಗರಣದ ಮೊತ್ತ, ಅದರಿಂದ ಉಂಟಾದ ಬಂಡವಾಳ ನಷ್ಟಗಳು, ಈ ವಹಿವಾಟುಗಳಲ್ಲಿ ಸಂಕೀರ್ಣತೆ ಹೆಚ್ಚಿದಂತೆಯೇ ಹೆಚ್ಚುತ್ತಾ ಸಾಗಿವೆ. ಅದಾನಿ ಸಮೂಹವು ತನ್ನ ಶೇರುಗಳ ಬೆಲೆಯ ಮ್ಯಾನಿಪುಲೇಶನ್ ಅಕ್ರಮದಲ್ಲಿ ತೊಡಗಿಸಿಕೊಂಡಿದೆ ಎನ್ನಲಾಗುತ್ತಿರುವ ಹಗರಣದಲ್ಲಿ ’ಡಿರೈವೇಟಿವ್’ಗಳು, ’ಫ್ಯೂಚರ್’ಗಳು, ’ಆಪ್ಷನ್’ಗಳು ಮತ್ತು ’ಶಾರ್ಟ್ ಮತ್ತು ಲಾಂಗ್ ಟ್ರೇಡಿಂಗ್’ ಎಂಬಂತಹ ಸಂಕೀರ್ಣ ಸಾಧನಗಳನ್ನು ಬಳಸಿಕೊಳ್ಳಲಾಗಿದೆ. ಹಗರಣದ ಸ್ವರೂಪ ಹೆಚ್ಚೆಚ್ಚು ತಾಂತ್ರಿಕವಾದಂತೆಲ್ಲಾ, ಆ ವಿಚಾರವಾಗಿ ನಡೆಯುವ ಸಾರ್ವಜನಿಕ ಚರ್ಚೆಗಳು ಕಡಿಮೆಯಾಗುತ್ತವೆ. ಸಾರ್ವಜನಿಕ ಚರ್ಚೆಗಳು ಕಡಿಮೆಯಾದಂತೆಲ್ಲಾ, ಸರ್ಕಾರಿ ಸಂಸ್ಥೆಗಳನ್ನು ಮತ್ತು ನಿಯಂತ್ರಣ ಸಂಸ್ಥೆಗಳನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುವುದು ಕೂಡ ಕಡಿಮೆಯಾಗುತ್ತದೆ. ಆದಾಗ್ಯೂ, ಪ್ರತಿಬಾರಿ ಹೊಸ ಪ್ರಕರಣಗಳು ಬೆಳಕಿಗೆ ಬಂದಂತೆಲ್ಲಾ, ಸಾರ್ವಜನಿಕ ಉದ್ದಿಮೆಗಳ ಮೂಲಕ ನಷ್ಟವಾಗುತ್ತಿರುವ ಸಾರ್ವಜನಿಕರ ಹಣದ ಮೊತ್ತ ಹೆಚ್ಚುತ್ತಲೇ ಸಾಗಿದೆ. ಹೀಗಾಗಿ, ಸರ್ಕಾರಗಳನ್ನು ಉತ್ತರದಾಯಿಗಳನ್ನಾಗಿಸಲು ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವರನ್ನು ಸಶಕ್ತಗೊಳಿಸುವ ಅಗತ್ಯವಿದೆ.

ಜನರ ನಡುವೆ ವ್ಯಾಪಾರ ಪ್ರಾರಂಭವಾದ ಅನಾದಿ ಕಾಲದಿಂದಲೂ ಬಂಡವಾಳ, ಲಾಭ ಮತ್ತು ನಷ್ಟಗಳ ಹಂಚಿಕೆ ನಡೆಯುತ್ತಲೇ ಸಾಗಿದೆ. ಆದಾಗ್ಯೂ, ಯುರೋಪ್ ವಸಾಹತುಶಾಹಿಯ ಹುಟ್ಟು ವ್ಯಾಪಾರಗಳ ಬುನಾದಿಯನ್ನೇ ಬದಲಾಯಿಸಿದವು. 16ನೇ ಶತಮಾನದ ಆರಂಭದಲ್ಲಿ, ಆಫ್ರಿಕಾ ಮತ್ತು ಏಷ್ಯಾದಿಂದ ಲೂಟಿ ಮಾಡಿದ ಸಂಪತ್ತನ್ನು ತಮ್ಮ ದೇಶಕ್ಕೆ ಜಲಮಾರ್ಗವಾಗಿ ಯುರೋಪಿಯನ್ ಯಾತ್ರಿಕರು ಸಾಗಿಸಿಕೊಳ್ಳಲು ಪ್ರಾರಂಭಿಸಿದ್ದು, ಪಶ್ಚಿಮ ಯುರೋಪಿಯನ್ ದೇಶಗಳಲ್ಲಿ ಗ್ರಾಹಕ ಕೇಂದ್ರಿತ ವ್ಯಾಪಾರ-ವಹಿವಾಟಗಳನ್ನು ಉತ್ತೇಜಿಸಿತು. ಕ್ರಮೇಣವಾಗಿ, ಧೈರ್ಯವುಳ್ಳ ಜಲಯಾತ್ರಿಕರು ಇನ್ನಷ್ಟೂ ಲೂಟಿ ಯಾತ್ರೆಗಳನ್ನು ಕೈಗೊಳ್ಳಲು ಸಾಲ ಪಡೆಯಲು ಶುರುವಿಟ್ಟರು. ಆದರೂ, ಹಡಗು ಮುಳುಗುವಿಕೆಯ, ಕಡಲುಗಳ್ಳರ ದಾಳಿ ಹಾಗೂ ಕದನಗಳಿಂದಾಗಿ ಉಂಟಾಗಬಹುದಾದ ನಷ್ಟಗಳಿಂದಾಗಿ ಈ ಲೂಟಿಯಾತ್ರೆಗಳಿಗೆ ಹಣಕಾಸು ಒದಗಿಸುವುದರಿಂದ ನಷ್ಟವುಂಟಾಗಬಹುದು ಎಂಬ ಭಯ ಯುರೋಪಿಯನ್ ಫೈನಾನ್ಷಿಯರ್‌ಗಳು ಅಥವಾ ಹೂಡಿಕೆದಾರರಿಗಿತ್ತು (ಇವರಲ್ಲಿ ಹೆಚ್ಚಿನವರು ರಾಜಮನೆತನಗಳೊಂದಿಗೆ ಹೆಚ್ಚು ಸಂಬಂಧವಿರಿಸಿಕೊಂಡಿದ್ದವರು). ಈ ವ್ಯವಹಾರದ ನಷ್ಟವನ್ನು ಹಂಚಿಕೊಳ್ಳಲು ಈ ಬಡ್ಡಿವ್ಯಾಪಾರಿಗಳು ಅಥವಾ ಹೂಡಿಕೆದಾರರು ಒಂದು ಗುಂಪಾಗಿ ಲೂಟಿಯಾತ್ರೆಗಳಿಗೆ ಬಂಡವಾಳ ಒದಗಿಸಲು ಪ್ರಾರಂಭಿಸಿದರು (ಇದನ್ನು ಆಧುನಿಕ ಭಾರತದಲ್ಲಿ ಎಸ್‌ಬಿಐ ನೇತೃತ್ವದ ಸಾಲದಾತರ ಒಕ್ಕೂಟಕ್ಕೆ ಹೋಲಿಸಬಹುದು). ಇದರೊಟ್ಟಿಗೆ ಹೆಚ್ಚು ಲಾಭವನ್ನು ಗಳಿಸಲು ಬೇರೆ ಬೇರೆ ಹಡಗುಗಳಿಗೆ ಹಣಕಾಸು ಒದಗಿಸಲು ಪ್ರಾರಂಭಿಸಿದರು (ನಾವು ಪೋರ್ಟ್‌ಫೋಲಿಯೊ ವೈವಿಧ್ಯೀಕರಣ ಮತ್ತು ನಿರ್ವಹಣೆ ಎಂದು ಕರೆಯುತ್ತೇವೆ). ಒಟ್ಟಿನಲ್ಲಿ, ಒಂದಷ್ಟು ಹಡಗುಗಳು ಮುಳುಗಿ ನಷ್ಟ ಅನುಭವಿಸಿದರೂ, ಮರಳಿ ಬರುವ ಅನೇಕ ಹಡಗುಗಳು ಅವರಿಗೆ ಲಾಭವನ್ನು ಒದಗಿಸುತ್ತಿದ್ದವು. ಪ್ರತಿ ಲೂಟಿಯಿಂದಾಗುವ ಲಾಭದಲ್ಲಿ ತಮ್ಮ ಹೂಡಿಕೆಗೆ ಅನುಗುಣವಾಗಿ ’ಪಾಲು’ (ಶೇರು)ಗಳನ್ನು ಈ ಸಾಲದಾತರು ಪಡೆದುಕೊಳ್ಳುತ್ತಿದ್ದರು. ಈ ’ಪಾಲು’ (ಶೇರು) ವಿತ್ತ ಮಾದರಿಯು ನೆದಲ್ಯಾಂಡ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಾಲಾನಂತರದಲ್ಲಿ ಸಂಘಟಿತ ವ್ಯವಹಾರವಾಗಿ ವಿಕಸನಗೊಂಡಿತು. ಈ ಮೂಲಕ ಲೂಟಿಕೋರರು ಈಸ್ಟ್ ಇಂಡಿಯನ್ ಶಿಪ್ಪಿಂಗ್ ಕಂಪನಿಗಳಾಗಿ ಬೆಳೆದರೆ, ಸಾಲದಾತರು ಹೂಡಿಕೆದಾರ ಕಂಪನಿಗಳಾಗಿ ವಿಕಸನಗೊಂಡರು. ಅತ್ಯಂತ ’ಧೈರ್ಯಶಾಲಿ’ (ಸ್ಥಳೀಯರನ್ನು ಕೊಲ್ಲುವವರು) ಮತ್ತು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ (ದೂರದ ಏಷ್ಯಾಕ್ಕೆ ಹೋದವರು) ಹಡಗು ಕಂಪನಿಗಳಿಗೆ ಹಣಕಾಸು ಒದಗಿಸಿದವರು ಆ ಕಾಲದ ಅತ್ಯಂತ ಯಶಸ್ವಿ ಹೂಡಿಕೆದಾರರೆನಿಸಿದರು (ನಮ್ಮ ಕಾಲದ ವಾರನ್ ಬಫೆಟ್‌ಗಳು ಮತ್ತು ಜುನ್‌ಜುನ್‌ವಾಲಾಗಳಂತೆ). ವ್ಯಾಪಾರಗಳು ಎಷ್ಟರಮಟ್ಟಿಗೆ ಹೆಚ್ಚಿತ್ತೆಂದರೆ ಹಡಗು ಹಿಂದಿರುಗುವ ಮೊದಲೇ ತಮ್ಮ ಪಾಲಿನ ’ಶೇರನ್ನು’ ಲಾಭಕ್ಕಾಗಿ ಮಾರಾಟ ಮಾಡಲು ಪ್ರಾರಂಭಿಸಿದರು.

ಕೆಲವೊಮ್ಮೆ ಪ್ರಯಾಣಿಕರು ಮತ್ತು ಇತರ ಹಡಗುಗಳಿಂದ, ’ಲೂಟಿ’ಯಾಗಿ ಏನು ಒದಗಲಿದೆ ಎಂಬ ಮಾಹಿತಿಯನ್ನು ಆಧರಿಸಿದ, ಇಲ್ಲವೇ ಇಡಿಯಾಗಿ ಊಹಾಪೋಹಗಳ ಮೇಲೆಯೇ ಈ ಶೇರುಗಳ ಮಾರಾಟ ನಡೆಯುತ್ತಿತ್ತು (ಪ್ರತಿದಿನ ಬೆಳಗ್ಗೆ 8:00 ಗಂಟೆಗೆ ಸರಿಯಾಗಿ ಶೇರು ಮಾರುಕಟ್ಟೆಯಲ್ಲಿ ಏನಾಗಬಹುದು ಎಂಬುದನ್ನು ಊಹಿಸುವ 100 ಸುದ್ದಿ ಮಾಧ್ಯಮಗಳಂತೆಯೇ). ಕೆಲ ಸಮಯದಲ್ಲೇ, ಹಡಗುಗಳಲ್ಲಿನ ಶೇರುಗಳೇ ಮಾರಾಟದ ವಸ್ತುಗಳಾಗಿ ಮಾರ್ಪಾಡಾಯಿತು. ಹೀಗಿರುವಾಗ, ನಷ್ಟ ಅನುಭವಿಸುವ ಸಂಭಾವ್ಯತೆಯನ್ನು ಕಡಿಮೆಗೊಳಿಸಿಕೊಂಡು, ಸಣ್ಣ ಮೊತ್ತದ ಲಾಭ ಮಾಡಿಕೊಳ್ಳಲು ’ಸ್ಮಾರ್ಟ್ ಇನ್ವೆಸ್ಟರುಗಳು’ ತಮ್ಮ ಶೇರುಗಳನ್ನು ಹಡಗು ಬರುವ ಮೊದಲೇ ಮಾರಿದರು. ಕೆಲವರು, ಮನೆಗಳನ್ನು ಕಟ್ಟಲು ಅಥವಾ ಆಭರಣಗಳನ್ನು ಖರೀದಿಸಲು ತಮ್ಮ ಹಡಗಿನ ಶೇರುಗಳನ್ನು (ನಾವು ಗಿರವಿ ಎನ್ನುತ್ತೇವೆ) ಅಡವಿಟ್ಟು ಸಾಲ ಪಡೆದರು. ಎಲ್ಲರಿಗಿಂತಲೂ ಹಚ್ಚಿನ ಜ್ಞಾನ, ಅತ್ಯಂತ ಅಧಿಕೃತ ಸುದ್ದಿ, ವ್ಯವಹಾರದಲ್ಲಿ ಚಾಕಚಕ್ಯತೆ, ಮತ್ತು ಮಾರ್ಕೆಟಿಂಗ್ ಕೌಶಲ್ಯಗಳನ್ನು ಹೊಂದಿದ್ದ ಹೂಡಿಕೆದಾರರು ಹಡಗಿನಲ್ಲಿನ ತಮ್ಮ ಶೇರುಗಳಿಂದ ಹೆಚ್ಚಿನ ಲಾಭವನ್ನು ಗಳಿಸಿದರು. ಆದಾಗ್ಯೂ, ಈ ಉದ್ಯಮದ ಬೆಳವಣಿಗೆಯು ಹೂಡಿಕೆದಾರರ ನಡುವೆ ಜಗಳಗಳನ್ನು (ನಾವು ಸ್ಪರ್ಧೆ ಎಂದು ಕರೆಯುತ್ತೇವೆ) ತಂದೊಡ್ಡಿತು ಮತ್ತು ಈ ವ್ಯವಹಾರದ ಆಟದಿಂದ ಸ್ಮಾರ್ಟ್ ಅಲ್ಲದ ಹೂಡಿಕೆದಾರರನ್ನು ಹೊರದೂಡಿತು. ವ್ಯವಹಾರಗಳು ಬೆಳೆಯುತ್ತಲೇ ದೊಡ್ಡ ಮೊತ್ತದ ಬಂಡವಾಳವನ್ನು ಹೂಡುವ, ನಷ್ಟವನ್ನು ಹಂಚಿಕೊಳ್ಳಲು ಹೆಚ್ಚಿನ ಹೂಡಿಕೆದಾರರ ಅಗತ್ಯ ಕಂಡುಬಂತು. ತದನಂತರ, ಸರ್ಕಾರಗಳೂ ಇದರಲ್ಲಿ ಕಾಲಿರಿಸಿದವು. ರಾಜಮನೆತನದವರು ಹಣದ ಚಲಾವಣೆಗೆ ಸೂಕ್ತ ಸಾಧನವನ್ನು ಒದಗಿಸಿದರು (ನಮ್ಮ ಕಾಲದ ಆರ್‌ಬಿಐ ಮತ್ತು ಕೇಂದ್ರ ಬ್ಯಾಂಕ್‌ಗಳಂತೆ), ವ್ಯವಹಾರದಾಟದ ನಿಯಮಗಳನ್ನು ರೂಪಿಸಿದರು (ಭಾರತದಲ್ಲಿ SEBI ನಂತೆ), ಹಡಗುಗಳಿಗೆ ಮತ್ತು ಲೂಟಿಗೆ ಮಿಲಿಟರಿ ರಕ್ಷಣೆಯನ್ನು ಒದಗಿಸಿದರು. ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು, ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು, ಡಚ್ ರಾಜಮನೆತನವು 1602ರಲ್ಲಿ ’ದಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ’ ಎಂಬ ಒಂದು ಸರ್ಕಾರಿ ಸ್ವಾಮ್ಯದ ಕಂಪನಿಯನ್ನು ಸ್ಥಾಪಿಸಿ ನೆದರ್‌ಲ್ಯಾಂಡ್ಸ್‌ನಲ್ಲಿದ್ದ ಎಲ್ಲಾ ಹಡಗು ಕಂಪನಿಗಳನ್ನು ಅದರಡಿ ವಿಲೀನಗೊಳಿಸಿತು. ಯಾವುದೇ ದೇಶದ ಮೇಲೆ ಯುದ್ಧ ಸಾರಲು ಮತ್ತು ಯಾವುದೇ ದೇಶವನ್ನು ವಸಾಹತು ರಾಷ್ಟ್ರವನ್ನಾಗಿಸಲು ಈ ಕಂಪನಿಗೆ ಅಧಿಕಾರವನ್ನು ನೀಡಲಾಯಿತು. ಆಮ್‌ಸ್ಟರ್‌ಡ್ಯಾಮಿನಲ್ಲಿ ಸ್ಥಾಪಿಸಲಾದ ಕಚೇರಿಯ ಮೂಲಕ, ಕಂಪನಿಯ ಶೇರನ್ನು ರಾಜ್ಯದ ಯಾವುದೇ ನಿವಾಸಿಯು ಖರೀದಿಸಬಹುದಾಗಿತ್ತು ಮತ್ತು ಕಚೇರಿಯ ಮಧ್ಯಸ್ಥಿಕೆಯಲ್ಲಿ, ಮಾರುವವರು, ಕೊಳ್ಳುವವರಿಬ್ಬರೂ ಒಪ್ಪಿದ ಮೊತ್ತಕ್ಕೆ ಈ ಶೇರುಗಳನ್ನು ಮತ್ತೊಬ್ಬ ನಿವಾಸಿಗೆ ಮಾರಾಟ ಮಾಡಬಹುದಿತ್ತು. ಲೂಟಿ ಮಾಡುವ ಮೂಲಕ ಮತ್ತು ಮತ್ತೊಬ್ಬರನ್ನು, ಮತ್ತೊಂದು ಸಮಾಜವನ್ನು ವಸಾಹತು ಆಗಿ ಇರಿಸಿಕೊಳ್ಳುವ ಮೂಲಕ ಕಂಪನಿಯು ಎಷ್ಟು ಲಾಭ ಗಳಿಸಿದೆ ಎಂಬುದನ್ನು ಅವಲಂಬಿಸಿ ಶೇರಿನ ಬಂಡವಾಳ ಮೌಲ್ಯವು ಆಗಾಗ್ಗೆ ಬದಲಾಗುತ್ತಿತ್ತು. ಹೀಗಾಗಿ, ಮೊದಲ ಸ್ಟಾಕ್ (ಶೇರು) ಎಕ್ಸ್‌ಚೇಂಜ್ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಸ್ಥಾಪನೆಯಾಯಿತು.

ಇದನ್ನೂ ಓದಿ: Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ಆದರೆ, ಲಂಡನ್ನಿನಲ್ಲಿ, ಒಳಬರುವ ಹಡಗುಗಳ ಲೂಟಿಯ ಬಗ್ಗೆ ನಡೆಯುತ್ತಿದ್ದ ಊಹಾಪೋಹಗಳ ಮತ್ತು ಲೆಕ್ಕಾಚಾರಗಳ ಆಧಾರದಲ್ಲಿ ಈ ಶೇರುಗಳ ವ್ಯಾಪಾರ ಕಾಫಿ ಅಂಗಡಿಗಳಲ್ಲಿ (ಕೆಫೆಗಳು) ನಡೆಯತೊಡಗಿತು. ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸುತ್ತಿದ್ದದ್ದು ಕಾಫಿ ಶಾಪ್‌ಗಳಲ್ಲಿ ಗ್ರಾಹಕರನ್ನು ಭೇಟಿ ಮಾಡುತ್ತಿದ್ದ ’ಸ್ಟಾಕ್ ಅಥವಾ ಶೇರ್ ಬ್ರೋಕರ್‌ಗಳು’. ಅಂದು ಈಸ್ಟ್ ಇಂಡಿಯಾ ಕಂಪನಿಯ ಶೇರುಗಳು ಅತಿ ಹೆಚ್ಚು ಮಾರಾಟವಾಗುತ್ತಿದ್ದವು ಮತ್ತು ಅತೀ ಹೆಚ್ಚು ಮೌಲ್ಯಯುತವಾಗಿದ್ದವು, ಬ್ರಿಟಿಷ್ ರಾಜಮನೆತನವು ಈಸ್ಟ್ ಇಂಡಿಯಾ ಕಂಪನಿಯನ್ನು ಬೆಂಬಲಿಸಿದ್ದು ಇದಕ್ಕೆ ಕಾರಣ. ಕಾಲಾನಂತರದಲ್ಲಿ, ಕೈಗಾರಿಕೆಗಳಿಗೆ ಅಗತ್ಯವಾಗಿದ್ದ ಕಚ್ಚಾ ವಸ್ತುಗಳನ್ನು ಹಡಗುಗಳು ಹೊತ್ತು ತಂದವು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯಿಂದಾಗಿ ಹುಟ್ಟಿಕೊಂಡ ಕಾರ್ಖಾನೆಗಳು ಭಾರೀ ಹೂಡಿಕೆಯನ್ನು ಬೇಡುತ್ತಿದ್ದವು. ಹೀಗಾಗಿ, ಲಂಡನ್ನಿನಲ್ಲಿ ವ್ಯವಹಾರಗಳಿಗೆ ಹಣಕಾಸು ಒದಗಿಸಲು ಶೇರು ವಿನಿಮಯ (ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು) ಕೇಂದ್ರಗಳು 16ನೇ ಶತಮಾನದ ಉತ್ತರಾರ್ಧದಲ್ಲಿ ಸ್ಥಾಪಿಸಲ್ಪಟ್ಟವು. ಇದಕ್ಕೂ ಮುನ್ನ ಲಂಡನ್ನಿನಲ್ಲಿ ಸರಕು ಮತ್ತು ಕೃಷಿ ಉತ್ಪನ್ನಗಳ ದಾಸ್ತಾನುಗಳಲ್ಲಿ ಶೇರುಗಳ ವ್ಯಾಪಾರ ನಡೆಸಲು ಉದ್ದೇಶಿಸಿ ಸ್ಥಾಪಿಸಲಾಗಿದ್ದ ರಾಯಲ್ ಎಕ್ಸ್‌ಚೇಂಜನ್ನು ಈ ವಿನಿಮಯ ಕೇಂದ್ರಗಳು ಅನುಕರಿಸುತ್ತಿದ್ದವು. ಬಹುಶಃ ಶೇರು ವಿನಿಮಯದ ಈ ಹೊಸ ಆವೃತ್ತಿಯು ಸ್ಟಾಕ್ ಎಕ್ಸ್‌ಚೇಂಜ್ ಎಂದಾದದ್ದು ಆಗಲೇ ಇರಬೇಕು. ನಂತರ, ಸ್ಟಾಕ್ ಬ್ರೋಕರ್‌ಗಳು ಉದ್ಯಮಗಳ ಮಾಲೀಕರು ಮತ್ತು ಹೂಡಿಕೆದಾರರ ನಡುವೆ ವ್ಯವಹಾರಗಳನ್ನು ಕುದುರಿಸುವುದಕ್ಕೆ ಮುಂದಾದರು. ಆಮ್‌ಸ್ಟರ್‌ಡ್ಯಾಮಿನ ಹಡಗುಗಳಂತೆಯೇ, ಕಾರ್ಖಾನೆಗಳ ಶೇರುಗಳನ್ನು ದಲ್ಲಾಳಿಗಳ ಮೂಲಕ ಕೊಂಡುಕೊಳ್ಳುವ ಪಡೆದುಕೊಳ್ಳುವ ವ್ಯಾಪಾರ ನಡೆಸಬಹುದಿತ್ತು. 1792ರಲ್ಲಿ ಅಮೆರಿಕದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಂತೆಯೇ, ವಸಾಹತುಶಾಹಿ ಎಲ್ಲೆಡೆ ಹಬ್ಬುತ್ತಾ, ಬೆಳೆಯುತ್ತಾ ಹೋದಂತೆ, ಪ್ರಪಂಚದಾದ್ಯಂತ ಸ್ಟಾಕ್ ಎಕ್ಸ್‌ಚೇಂಜ್‌ಗಳು ಸ್ಥಾಪನೆಯಾದವು.

ಕೈಗಾರಿಕೀಕರಣವು 18ನೇ ಶತಮಾನದ ದ್ವಿತೀಯಾರ್ಧದಲ್ಲಿ ವಸಾಹತು ರಾಷ್ಟ್ರಗಳಗೂ ಹಬ್ಬಿತು. ಭಾರತದಲ್ಲಿ, ಇದು ಜವಳಿ ಗಿರಣಿಗಳ ಸ್ಥಾಪನೆಗೆ ಕಾರಣವಾಯಿತು. ರಾಜಮನೆತನಗಳ ಬೆಂಬಲಹೊಂದಿದ್ದ ಭಾರತೀಯ ಉದ್ಯಮಿಗಳು, ಬ್ರಿಟಿಷ್ ಜವಳಿ ಗಿರಣಿಗಳಲ್ಲಿ ಹೂಡಿಕೆಮಾಡಲು ಪ್ರಾರಂಭಿಸಿದರು. ಇದು ಬ್ರಿಟಿಷರು ಸ್ಥಳೀಯ ನಿಷ್ಠೆಯನ್ನು ಸಂಪಾದಿಸಲು ಮತ್ತು ನಷ್ಟಗಳನ್ನು ಹಂಚಿಕೊಂಡು-ಭರಿಸಲು ಸಹಾಯ ಮಾಡಿರಬಹುದು. 1875ರಲ್ಲಿ, ಭಾರತೀಯ ದಲ್ಲಾಳಿಗಳ ಗುಂಪು ಬಾಂಬೆ ಸ್ಟಾಕ್ ಎಕ್ಸ್‌ಚೇಂಜನ್ನು ಸ್ಥಾಪಿಸಿತು. ಹಣಕಾಸು ಅಗತ್ಯವಿರುವ ಕಂಪನಿಗಳು ಮತ್ತು ಕಾರ್ಖಾನೆಗಳು ಎಕ್ಸ್‌ಚೇಂಜಿನಲ್ಲಿ ನೊಂದಾಯಿಸಿಕೊಂಡವು ಮತ್ತು ದಲ್ಲಾಳಿಗಳು ಹೂಡಿಕೆದಾರರನ್ನು (ರಾಜಮನೆತನಗಳನ್ನೂ ಸೇರಿದಂತೆ ಶ್ರೀಮಂತ ಭಾರತೀಯರು) ಎಕ್ಸ್‌ಚೇಂಜಿಗೆ ಕರೆತಂದು, ನೊಂದಾಯಿತ ಕಂಪನಿಗಳ ಶೇರುಗಳನ್ನು ಮಾರಾಟ ಮಾಡಿದರು.

ಶೇರುದಾರರು ದಲ್ಲಾಳಿಗಳ ಮೂಲಕ ತಮ್ಮ ಶೇರುಗಳನ್ನು ಇತರರಿಗೆ ಎಕ್ಸ್‌ಚೇಂಜು ನಿರ್ಧರಿಸಿದ ದರಕ್ಕೆ ಮಾರಾಟ ಮಾಡುತ್ತಿದ್ದರು. ಸಮಯ ಉರುಳಿದಂತೆ, ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು ಸ್ಥಾಪಿಸಲಾಯಿತು. ಸ್ವಾತಂತ್ರ್ಯಾ ನಂತರದಲ್ಲಿ, ಈ ಸ್ಟಾಕ್ ಎಕ್ಸ್‌ಚೇಂಜ್‌ಗಳು ಸೆಕ್ಯುರಿಟೀಸ್ ಕಾಂಟ್ರಾಕ್ಟ್ಸ್ ರೆಗ್ಯುಲೇಶನ್ ಆಕ್ಟ್ 1956ರ ಅಡಿಯಲ್ಲಿ ಕಾರ್ಯನಿರ್ವಹಿಸತೊಡಗಿದವು. 1990ರವರೆಗೆ, ಶೇರು ಮಾರುಕಟ್ಟೆಗಳಲ್ಲಿ ತೊಡಗಿಸಿಕೊಂಡವರು ಮತ್ತು ಶೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದವರಲ್ಲಿ ಹೆಚ್ಚಿನವರು ಶ್ರೀಮಂತರಾಗಿದ್ದರು. ಅವರೊಡನೆ, ಮಧ್ಯಮ ವರ್ಗದ ಹಿನ್ನಲೆಯ ಶಿಕ್ಷಿತರು ಕೂಡ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಉದಾರೀಕರಣದ ನಂತರದಲ್ಲಿ, ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು ನಿಯಂತ್ರಿಸಲು 1988ರಲ್ಲಿ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾವನ್ನು (SEBI) ಭಾರತ ಸರ್ಕಾರ ಸ್ಥಾಪಿಸಿತು. ಅಲ್ಲದೇ, 1993ರಲ್ಲಿ ಭಾರತದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (NSE) ಸ್ಥಾಪಿಸಲು ನೆರವು ಒದಗಿಸಿತು ಮತ್ತು ಕಂಪನಿಗಳ ಶೇರುಗಳ ಮೇಲೆ ಸಾರ್ವಜನಿಕ ಹೂಡಿಕೆಯನ್ನು ಉದಾರಗೊಳಿಸಿತು. ಸರಕುಗಳನ್ನು ಉತ್ಪಾದಿಸಲು ಹಣಕಾಸು ಮತ್ತು ಹೂಡಿಕೆಯ ಅಗತ್ಯವಿದ್ದ ಕಾರ್ಪೊರೆಟ್ ಭಾರತವು ಆರ್ಥಿಕತೆಯನ್ನು ಮುನ್ನಡೆಸಬೇಕಿತ್ತು. ಡಚ್ ರಾಜ್ಯ ಹದಿನೇಳನೇ ಶತಮಾನದಲ್ಲಿ ತನ್ನ 14 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ವಸಾಹತಿನಿಂದ ಗಳಿಸಲಾದ ಲಾಭದಲ್ಲಿ ತಮ್ಮ ಶೇರನ್ನು ಪಡೆದುಕೊಳ್ಳಲು ಅವಕಾಶ ನೀಡಿದಂತೆಯೇ, ಭಾರತದ ಪ್ರತಿಯೊಬ್ಬರೂ (ಮಾತುಗಳಲ್ಲಿ ಮಾತ್ರ ವಾಸ್ತವದಲ್ಲಲ್ಲ) ಕಂಪನಿಗಳಲ್ಲಿ ಹೂಡಿಕೆ ಮಾಡಿ, ಅದು ಬೆಳೆದಂತೆ, ಅದರಲ್ಲಿ ತನ್ನ ಪಾಲಿನ ಲಾಭವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಯಿತು. 400 ವರ್ಷಗಳ ನಂತರವೂ, ಪ್ರಪಂಚದ ಅತೀ ದೊಡ್ಡ ಪ್ರಜಾತಂತ್ರ ರಾಷ್ಟ್ರದ ಆರ್ಥಿಕತೆಯು ವಸಾಹತು ವ್ಯಾಪಾರ-ವಹಿವಾಟು ಮಾದರಿಯ ವ್ಯವಸ್ಥೆಯನ್ನೇ ಪಾಲಿಸುತ್ತಿದೆ. ಆದರೆ, ಒಂದು ವ್ಯತ್ಯಾಸದೊಂದಿಗೆ. ಹದಿನೇಳನೇ ಶತಮಾನದ ಡಚ್ಚರಿಗೆ ವಿಭಿನ್ನವಾಗಿ, ಭಾರತೀಯ ಕಂಪನಿಗಳ ಶೇರುಗಳನ್ನು ವಿದೇಶಿ ಹೂಡಿಕೆದಾರರು ನೇರವಾಗಿ (ವಿದೇಶಿ ನೇರ ಹೂಡಿಕೆದಾರರು ಅಥವಾ Foreign Direct Investors ಎಂದು ಕರೆಯಲಾಗುತ್ತದೆ), ಅಥವಾ ಸ್ಟಾಕ್ ಎಕ್ಸ್‌ಚೇಂಜ್ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ Foreign Institutional Investors ಎಂದು ಕರೆಯಲಾಗುತ್ತದೆ), ಮತ್ತು ಭಾರತೀಯ ಸಾಂಸ್ಥಿಕ ಹೂಡಿಕೆದಾರರೆಲ್ಲರೂ (Indian Institutional Investors) ಕೆಲವು ಇತಿಮತಿಗಳೊಳಗಡೆ ಖರೀದಿಸಬಹುದು. ಅಂದರೆ, ಭಾರತೀಯ ಕಂಪನಿಗಳ ಶೇರುಗಳ ಬೆಲೆಯನ್ನು ನಿರ್ಧರಿಸಲು ಶ್ರೀಮಂತರೊಂದಿಗೆ ಸಾಮಾನ್ಯ ನಾಗರಿಕರು ಸೆಣೆಸುತ್ತಾರೆ.

ಈ ವಸಾಹತುಶಾಹಿ ಆರ್ಥಿಕತೆಯ ಮಾದರಿಯು, ವಿದೇಶಿ ಹೂಡಿಕೆದಾರರನ್ನು ಮುಕ್ತವಾಗಿ ಒಳಗೊಂಡಾಗ, ತನ್ನ ನಾಗರಿಕರಿಗೆ ಸಮಾನ ಆರ್ಥಿಕ ಅವಕಾಶವನ್ನು ಒದಗಿಸಲು ಆಶಿಸುವ ಪ್ರಜಾಸತ್ತಾತ್ಮಕ ರಾಷ್ಟ್ರವೊಂದರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು?

(ಮುಂದುವರಿಯುತ್ತದೆ…)

ಡಾ.ಅಕ್ಕಮಹಾದೇವಿ ಹಿಮಾಂಶು,
ಜಾಗತಿಕ ಆರೋಗ್ಯ ಮತ್ತು ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಂಶೋಧಕರು ಮತ್ತು ವೈದ್ಯರು.

(ಕನ್ನಡಕ್ಕೆ) ಶಶಾಂಕ್ ಎಸ್ ಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...