Homeಮುಖಪುಟಆತ್ಮಹತ್ಯೆಯೊಂದರ ಅನಾಥ ಕಥನ!

ಆತ್ಮಹತ್ಯೆಯೊಂದರ ಅನಾಥ ಕಥನ!

- Advertisement -
- Advertisement -

ಅವತ್ತು ಮಾರ‍್ನಾಮಿ ಹಬ್ಬ. ಹಟ್ಟಿಯೆಲ್ಲಾ ದಸರಾ ನೋಡಲು ಖಾಲಿಯಾಗಿತ್ತು. ಅವ್ವ ಮಾತ್ರ ಮನೆಯಲ್ಲಿದ್ದಳು. ಸೂರ್ಯ ಮುಳುಗಿ ಜೋಪಡಿಯ ಮೋಟು ಗೋಡೆಯ ಮೇಲೆ ಚಿಮಣಿ ಬುಡ್ಡಿ ಈಗಲೂ.. ಆಗಲೂ….. ಎಂಬಂತೆ ಉಸಿರು ಉಯ್ಯುತ್ತಿತ್ತು. ಒಲೆ ಊದುತ್ತಾ ಉಸಿರುಗಟ್ಟಿಕೊಂಡೆ ಮಡಿಕೆಯಲ್ಲಿ ಮುದ್ದೆ ತಿರುವುತ್ತಿದ್ದ ಅವ್ವನ ಮುಖದಲ್ಲಿ ಕಣ್ಣೀರು,ಬೆವರು ಒಂದಾಗಿ ಉಕ್ಕುತ್ತಿದ್ದವು. ಮತ್ತೆ ಮತ್ತೆ ಸೆರಗಿಗೆ ಕಣ್ಣೀರು,ಬೆವರ ಕುಡಿಸುತ್ತಾ ಒಲೆಯ ಉರಿಯಲ್ಲಿ ಬೇಯುತ್ತಿದ್ದಳು.

ತಿನ್ನೋ ..ಉಣ್ಣೊ ಐದು ಮಕ್ಕಳ ಮನೆ ಅದು. ಗಂಡ-ಹೆಂಡ್ತಿ ಇಬ್ರೂ ಕೂಲಿ- ನಾಲಿ ದುಡಿದ್ರೂ ಸಾಲ ತೀರೋದಿರ‍್ಲಿ. ಮಕ್ಕಳಿಗೆ ಮೂರು ಹೊತ್ತು ಮುದ್ದೆ ಉಣ್ಸೋಕೂ ಆಗ್ತಿರ‍್ಲಿಲ್ಲ. ಇನ್ನೂ ಮಕ್ಕಳ ಓದು, ಬಟ್ಟೆ-ಬರೆ ….ಇವೆಕ್ಕೆಲ್ಲಾ …..ಎಲ್ಲಿಂದ ಹೊಂಚೋದೊ. ಮನೆ ಬಾಗಿಲು ತುಳಿದು ತುಳಿದು ಹೋಗಿದ್ದ ಸಾಲಗಾರ ಗಡುವು ಕೊಟ್ಟಿದ್ದ. ದಣಿವರಿಯದೆ ದುಡಿವ ಅಪ್ಪ ಸಾಲಕ್ಕೆ ಕುಗ್ಗಿ ಹೋಗಿದ್ದ.

ಅಲ್ಲೆ ಎಲ್ಲೋ ಓಣಿಯೊಳಗೆ ಮಕ್ಳೆಲ್ಲಾ ಆಡೋಕೋಗಿದ್ದೋ. ಬೆಳಗ್ಗೆ ಎದ್ದು ಹೋದ ಅಪ್ಪನ ದಾರಿಯನ್ನೆ ಅವ್ವ ಕಾಯುತ್ತಿದ್ದಳು. ಕತ್ತಲು ಗಾಢವಾಗಿ ಕವಿಯುತ್ತಲೆ ಇತ್ತು. ನಡುಮನೆಯಲ್ಲಿ ಕುಳಿತರೆ ಅವ್ವನ ಅಡುಗೆ ಮನೆಗೆ ಕಾಲು ಚಾಚುತ್ತವೆ. ಇಂತಹ ನಡುಮನೆಗೆ ಅಪ್ಪ ಬಂದದ್ದು ಅವ್ವನಿಗೆ ಸುಳಿವೆ ಸಿಕ್ಕಲಿಲ್ಲ. ಮೋಟು ಬೀಡಿಯ ನಾತವಾದರೂ ಬರಬೇಕಿತ್ತು. ಅದೂ ಇಲ್ಲ; ಅವಳಿನ್ನೂ ಮುದ್ದೆ ತಿರುವುತ್ತಾ ಒಲೆ ಮುಂದೆ ಬೇಯುತ್ತಲೆ ಇದ್ದಳು. ದಬ್ಬೆ ಗೋಡೆಯ ಮೂಲೆಗೊರಗಿದ್ದ ಅಪ್ಪನ ಕಣ್ಣ ಮುಂದೆ ದಾರಿಗಳೆಲ್ಲಾ ಕತ್ತಲು ಕವಿದು ಕಾಣದಂತಾಗಿದ್ದವು. ಅವನಾಗಲೇ ಹತಾಶೆಗೆ ಜಾರಿಬಿಟ್ಟಿದ್ದ. ಅದೆಲ್ಲಿ ಸಂಪಾದಿಸಿ ತಂದಿದ್ದನೊ..?ಏನೋ…..? ಹತ್ತಿ ಗಿಡಕ್ಕೆ ಹೊಡೆಯೋ ಔಸತಿ. ಸದ್ದಿಲ್ಲದೆ ಕುಡಿದು ಕೆಮ್ಮಿ ಹೊರಳಾಡಿದಾಗಲೆ ಅವ್ವ ಎಚ್ರವಾದ್ಳು.

ಎದೆ ಎದೆ ಬಡಿದುಕೊಂಡು ಬಾರಾಡಿದಳು ಅಪ್ಪನನ್ನು ತಬ್ಬಿಕೊಂಡು. ಮೆಗ್ಗಾನ್ ಆಸ್ಪತ್ರೆಗೆ ಹೊತ್ತೊಯ್ದು ಕೂಡಿದಳು. ಡಾಕ್ಟ್ರು, ನರ್ಸುಗಳಿಗೆಲ್ಲಾ ಕಾಲಿಡಿದು ಕಾಡಾಡಿಬಿಟ್ಟಳು. ಎದೆಮೂಳೆ ಚಕ್ಕಳ ಬಿಟ್ಟುಕೊಂಡು ಒಣಗಿದ ಬಿದಿರು ದಬ್ಬೆಯಂತಿದ್ದ ಅಪ್ಪ ಸಾವಿನ ಜೊತೆ ವೀರಕಲಿಯಂತೆ ರಣಯುದ್ಧವನ್ನೆ ಮಾಡುತ್ತಿದ್ದ. ಏಳೆಂಟು ವರ್ಷದ ನಾನು ಕಿಟಕಿಗೆ ಆತುಕೊಂಡು ನಿಂತು ಅಪ್ಪನ ಪರದಾಟವನ್ನು ದೃಷ್ಟಿ ಕದಲಿಸದಂತೆ ನೋಡುತ್ತಲೆ ಇದ್ದೆ.

ಅಪ್ಪನ ಕೊರಳಿಗೆ ಪಾಶ ಬಿಗಿದಿದ್ದ ಯಮನೊಂದಿಗೆ‌ ನನ್ನವ್ವ ರಣಚಂಡಿಯಂತೆ ಜಗಳಕ್ಕಿಳಿದು ಬಿಟ್ಟಿದ್ದಳು. ಹಗಲೂ ರಾತ್ರಿ …..ಕಾದಾಡಿದಳು. ಕೊನೆಗೂ ಗೆದ್ದಳು. ಯಮನಿಂದ ಸತ್ಯವಾನನ್ನು ಉಳಿಸಿಕೊಂಡ ಸಾವಿತ್ರಿಯಂತೆ. ಅಪ್ಪನಿಗೆ ಇನ್ನೆಂದೂ ಡಿಪ್ರೆಷನ್ ಹತ್ತಿರ ಸುಳಿಯದಂತೆ ಕಾದಳು. ಅಪ್ಪ ಹತ್ತಾರು ವರ್ಷ ಬದುಕಿದ. ಆತ್ಮಹತ್ಯೆ ಯ ಮಾತಾಡುವವರನ್ನು ಗದರಿಸಿ ಧೈರ್ಯ ತುಂಬುತ್ತಿದ್ದ. ದುಡಿದ, ಸಾಲ ತೀರಿಸಿದ. ಮಕ್ಕಳೆಲ್ಲಾ ಕೈಗೆ ಬಂದು ಸುಖ ಕಾಣುವ ಹೊತ್ತಿಗೆ ಚಿರನಿದ್ರೆಗೆ ಜಾರಿಬಿಟ್ಟ.

**********

ಉದಯೋನ್ಮುಖ ನಟ ಸುಶಾಂತ್ ರಜಪೂತ್‌‌ನ ಆತ್ಮಹತ್ಯೆಯೊಂದು sensation issue ಆಗಿ ಎಲ್ಲರೂ ಮಿಡಿಯುವಾಗ 35 ವರ್ಷಗಳ ಹಿಂದೆ ಅಜ್ಞಾತವಾಗಿದ್ದ ನನ್ನಪ್ಪನ ಆತ್ಮಹತ್ಯೆ ಯತ್ನದ ಅನಾಥ ಕತೆಯೊಂದು ನೆನಪಾಯಿತು.

ಈ ದೇಶದಲ್ಲಿ ಪ್ರತಿ 24 ಗಂಟೆಗೆ 28 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2018 ರ NCR ವರದಿಪ್ರಕಾರ
2018 ರಲ್ಲಿ 1.3 ಲಕ್ಷ ಜನ ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ಗಂಟೆಗೆ ಒಬ್ಬ ನಿರುದ್ಯೋಗಿ ಆತ್ಮಹತ್ಯೆಯ ಹಾದಿ ತುಳಿದು ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಸುತ್ತಾನೆ.

ಪ್ರೀತಿ, ಪ್ರೇಮ, ಕೌಟುಂಬಿಕ ಕಲಹದಂತಹ, ಕೇವಲ ವೈಯುಕ್ತಿಕ ಕಾರಣಗಳಷ್ಟೇ ಆತ್ಮಹತ್ಯೆ ಮಾಡಲು ಕಾರಣವಲ್ಲ. ಈ ದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳೂ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿವೆ. ಇಂತಹ ಕಾರಣಗಳು ಸೃಷ್ಟಿಸುವ Depression ಅಪಾಯಕಾರಿಯಾದದ್ದು.

ವಿಪರ್ಯಾಸವೆಂದರೆ ಇವ್ಯಾವು ಬೆಳಕಿಗೆ, ಚರ್ಚೆಗೆ, ಮರುಕಕ್ಕೆ, ಧಾರುಣ ದುಃಖಕ್ಕೆ ದಕ್ಕುವುದೇ ಇಲ್ಲ…… ಈ ಹೊತ್ತಿನ ಮಾಧ್ಯಮಗಳು ಅಭಿಪ್ರಾಯ ಉತ್ಪಾದಿಸುವಲ್ಲಿ (manufacturing consent) ಸದಾ choice ನ ರೇಸ್‌ನಲ್ಲಿರುತ್ತವೆ.

Any way, ಸುಶಾಂತ್ ನಿನ್ನದು ಸಾಯುವ ವಯಸ್ಸಲ್ಲ. ನಿನ್ನ ಆತ್ಮಕ್ಕೆ ಚಿರಶಾಂತಿಯನ್ನು ಪ್ರಕೃತಿ ಕರುಣಿಸಲಿ.


ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರವನ್ನು ‘ಡಿಲೀಟ್’ ಮಾಡಿ: ಮಹಾರಾಷ್ಟ್ರ ಪೋಲಿಸರ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...