ಗ್ರಾಚ್ಯುಟಿ, ಹೆಚ್ಚುವರಿ ಕ್ವಾಂಟಮ್ ಪಿಂಚಣಿ ಮತ್ತು ಕೊಡುಗೆ ಪಿಂಚಣಿ ಯೋಜನೆಗಳನ್ನು ರದ್ದುಗೊಳಿಸುವ ಪಿಆರ್‌ಸಿ (Professional Regulation Commission -ವೃತ್ತಿಪರ ನಿಯಂತ್ರಣ ಆಯೋಗ) ಸಾಧನಾ ಸಮಿತಿಯ ನಿರ್ಧಾರಗಳ ವಿರುದ್ಧ 48 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಸರ್ಕಾರಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯ ನಿಮ್ಮನಪಲ್ಲಿ ಮಂಡಲದ ಬಾಳಿನಾಯನಿಪಲ್ಲಿಯ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರಾಗಿರುವ ವಿಷ್ಣುವರ್ಧನ್ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಂಡಿರುವುದನ್ನು ಶಿಕ್ಷಕ ಸಂಘದ ಮುಖಂಡರು ಖಂಡಿಸಿದ್ದಾರೆ ಹಾಗೂ ಪ್ರಶ್ನಿಸಿದ್ದಾರೆ.
ಅವರು ತಮ್ಮ ಮುಷ್ಕರದ ಸಮಯದಲ್ಲೂ ತರಗತಿಗಳನ್ನು ತಪ್ಪಿಸಿಲ್ಲ, ಅವರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಆದರೂ, ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಶಿಕ್ಷಕರ ಸಂಘ ಹೇಳಿದೆ.
ಹೊಸ ಪಿಆರ್‌ಸಿ ವಿರುದ್ಧ ಸೋಮವಾರ ಮುಂಜಾನೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಶಿಕ್ಷಕ, ಮಂಗಳವಾರ ಸಂಜೆ 4 ಗಂಟೆವರೆಗೆ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ, ಅವರು ನೀರನ್ನು ಮಾತ್ರ ಸೇವಿಸಿದ್ದರು.
“ಪಿಆರ್‌ಸಿ ಸಾಧನಾ ಸಮಿತಿಯ ಚುಕ್ಕಾಣಿ ಹಿಡಿದಿರುವ ನಾಯಕರಲ್ಲಿ ಬದ್ಧತೆಯ ಕೊರತೆಯಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ನಿರ್ಣಾಯಕ ಫಿಟ್‌ಮೆಂಟ್ ಸಮಸ್ಯೆ, ಎಚ್‌ಆರ್‌ಎ, ಗ್ರಾಚ್ಯುಟಿ, ಹೆಚ್ಚುವರಿ ಕ್ವಾಂಟಮ್ ಪಿಂಚಣಿ ಮತ್ತು ಕೊಡುಗೆ ಪಿಂಚಣಿ ಯೋಜನೆಗಳನ್ನು (ಸಿಪಿಎಸ್) ರದ್ದು ಮಾಡಲು ಸಮಿತಿ ಮುಂದಾಗಿದೆ. ಈ ಮೂಲಕ, ಉದ್ಯೋಗಿಗಳ ಪ್ರಮುಖ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಶಿಕ್ಷಕರ ಸಂಘ ಆರೋಪಿಸಿದೆ.
ನೌಕರರು, ಶಿಕ್ಷಕರು ಮತ್ತು ಪಿಂಚಣಿದಾರರ ಪ್ರಧಾನ ಸಮಸ್ಯೆಗಳ ಬಗ್ಗೆ ಏಕಪಕ್ಷೀಯ ನಿಲುವು ತಳೆಯುವ ಮೂಲಕ ಪಿಆರ್‌ಸಿ ಸಾಧನಾ ಸಮಿತಿಯ ಮುಖಂಡರು ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿರುವ ಆಂಧ್ರಪ್ರದೇಶ ಶಿಕ್ಷಕರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪ್ರತಿಭಟನೆಯ ಭಾಗವಾಗಿ ಫೆ.11ರಂದು ರಾಜ್ಯದ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಕ್ಕೂಟದ ಮುಖಂಡರು ಮನವಿ ಪತ್ರ ಸಲ್ಲಿಸಲಿದ್ದಾರೆ. ಫೆ. 12ರಂದು ಬೃಹತ್ ಹೋರಾಟ ನಡೆಯಲಿದೆ. ಪ್ರತಿಭಟನೆಯ ಪೂರ್ವಭಾವಿಯಾಗಿ, ಫೆಬ್ರವರಿ 7 ರಿಂದ ಶಿಕ್ಷಕರು ಕಪ್ಪು ಬ್ಯಾಡ್ಜ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಇದನ್ನೂ ಓದಿರಿ: ಹಿಜಾಬ್‌ಗಾಗಿ ದನಿಯೆತ್ತಿದ ವಿದ್ಯಾರ್ಥಿನಿಯರ ಫೋನ್ ನಂಬರ್, ವಿಳಾಸ ಲೀಕ್ ಮಾಡಿದ ಉಡುಪಿ ಕಾಲೇಜು!