Homeಕರ್ನಾಟಕದೇವರ ಕುರಿತ 'ಅನಿಕೇತನ' ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

ದೇವರ ಕುರಿತ ‘ಅನಿಕೇತನ’ ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

- Advertisement -
- Advertisement -

ನಮ್ಮ ನಾನುಗೌರಿ.ಕಾಂನ ಬರಹಗಾರಾದ ಪಿ.ಕೆ ಮಲ್ಲನಗೌಡರ್ ರವರು ದೇವರ ಕುರಿತು ತಮ್ಮ ಮಗ ‘ಅನಿಕೇತನ’ನ ಕಲ್ಪನೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸುವುದರ ಕುರಿತು ನಾವೆಲ್ಲರೂ ಯೋಚಿಸಬೇಕಿದೆ.

ಗಣೇಶ ವಿಸರ್ಜನೆ ವೇಳೆ ರಸ್ತೆಯಲ್ಲಿ ಕುಣಿದ ಮಗ ಅಲೈ ದೇವರ ಮೆರವಣಿಗೆಯಲ್ಲೂ ಕುಣಿದು ಬಂದಿದ್ದಾನೆ. ದೇವರ ಕುರಿತಾಗಿ ಮಕ್ಕಳ ಕಲ್ಪನೆಗಳೇ ಸುಂದರ ಮತ್ತು ವಿಚಿತ್ರ.

ಕಳೆದ ವಾರ ಎಲ್ಲಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ 9ನೇ ದಿನದ ಗಣಪತಿಯ ವಿಸರ್ಜನೆ ಜೋರಾಗಿ ನಡೆದಿದೆ. ಜತೆಯಲ್ಲೇ ಅಲೈ (ಮೊಹರಂ) ದೇವರುಗಳ ಮೆರವಣಿಗೆ ಕೂಡ. ಇನ್ನೊಂದು ಕಡೆ ಕೋಲಾರದಲ್ಲಿ ಗಣೇಶ ವಿಸರ್ಜನೆಗೆ ಹೋದ ಆರು ಮಕ್ಕಳು ಜೀವ ತೆತ್ತಿವೆ…
ದೇವರ ಕುರಿತಾಗಿ ಮಕ್ಕಳಲ್ಲಿ ಸುಂದರ ಮತ್ತು ವಿಚಿತ್ರ ಕಲ್ಪನೆ ಮತ್ತು ಭಾವಗಳಿರುತ್ತವೆ. ಆದರೆ ಬರುಬರುತ್ತ ಉತ್ತರ ಕರ್ನಾಟಕದಲ್ಲಿ ಮತೀಯವಾದಿ ಸಂಘಟನೆಗಳ ಜಾಲ ಹೆಚ್ಚಿದಂತೆ ಗಣೇಶ ಉತ್ಸವ ಮತ್ತು ಮೊಹರಂ ಒಂದಕ್ಕೊಂದು ಸ್ಪರ್ಧಿ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಸಮಾಧಾನದ ಅಂಶವೆಂದರೆ ಜನ ಈ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಗಣೇಶನೂ ಬೇಕು ಮತ್ತು ಅಲೈ ದೇವರುಗಳೂ ಬೇಕು. ವಕ್ರತುಂಡ ಹಾಡುವ ಮಕ್ಕಳೇ ಅಲೈ ದೇವರನ್ನು ಇಟ್ಟಿರುವ ಮಸೀದಿ ಮುಂದೆ ತೋಡಿದ ಕುಣಿಯ ಸುತ್ತ ‘ಅಲೈ..ಅಲೈ’ ಎಂದು ಕುಣಿದು ಸಂಭ್ರಮಿಸುತ್ತವೆ.

ಮಕ್ಕಳು ದೇವರ ಬಗ್ಗೆ ಸೃಷ್ಟಿಸಿಕೊಳ್ಳುವ ಕಲ್ಪನೆಗಳು ಹೇಗಿರಬೇಕು? ಅದರಲ್ಲಿ ತಂದೆ ತಾಯಿ ಪಾತ್ರವೇನು? ತಜ್ಞರು ಈ ಬಗ್ಗೆ ಹೇಳಬೇಕು. ಆದರೆ, ದೇವರ ಕುರಿತೂ ಪ್ರಶ್ನಿಸುವ ಗುಣ ಅವರಲ್ಲಿ ಬಂದಾಗಲಷ್ಟೇ ಅವರ ಕಲ್ಪನಾ ಶಕ್ತಿ ಇನ್ನಷ್ಟು ಹರಿತವಾಗಬಹುದು.

ಮನುಷ್ಯನ ಮುಖ ಆನೆಗೆ: ಮಗನ ಬೊಂಬಾಟ್ ಕಲ್ಪನೆ
ಮಗ ಅನಿಕೇತನ ಆಗ ಒಂದೂವರೆ ವರ್ಷದವನೂ ಆಗಿರಲಿಲ್ಲ. ನನ್ನ ಹೆಂಡತಿ ನಾಕೈದು ಬಾರಿ ‘ಗಣೇಶನಿಗೆ ಆನೆ ಮುಖ ಹೇಗೆ ಬಂತು?’ ಎಂದು ಹೇಳುವ ಕತೆಯನ್ನು ಅವನಿಗೆ ಹೇಳುತ್ತ ಬಂದಿದ್ದಳು. ಆಗ ನಾವು ಬಾಡಿಗೆಗಿದ್ದ ಮನೆಯ ಓನರು ಪ್ರೊ. ಬಡಿಗೇರ್ ರಾಜ್ಯ ವಿಜ್ಞಾನ ಪರಿಷತ್‍ನ ಸದಸ್ಯರಾಗಿದ್ದವರು ಮತ್ತು ವೈಜ್ಞಾನಿಕ ಮನೋಭಾವದವರು. ನಾನು ಮತ್ತು ಅವರು ಹೇಳುತ್ತಿದ್ದ ಹೊಸ ಬಗೆಯ ಕತೆಗಳೇ ಅನಿಕೇತನನ ಮೇಲೆ ಪ್ರಭಾವ ಬೀರಿದ್ದವೋ ಏನೋ ಗೊತ್ತಿಲ್ಲ.

ಒಮ್ಮೆ ನಾವೆಲ್ಲರೂ ಕುಳಿತಾಗ ಪ್ರೊಫೆಸರ್ ಮಗ ಅಜಿತ್ (ಸಾಫ್ಟ್ ವೇರ್ ಇಂಜಿನಿಯರ್ ಮತ್ತು ವನ್ಯಜೀವಿ ಪ್ರಿಯ) ಅನಿಕೇತನನಿಗೆ ಕತೆಯೊಂದನ್ನು ಹೇಳಲು ಕೇಳಿದಾಗ ಗಣೇಶನ ಗಜಮುಖದ ಕತೆ ಹೇಳಿದ ಅನಿಕೇತನ ಜೋರಾಗಿ ನಗುತ್ತ, “ಅಜಿತ್ ಮಾಮಾ, ಅಲ್ಲಿ ಶಿವ ಗಣೇಶನ ರುಂಡ ಕಟ್ ಮಾಡ್ಯಾನಲ್ಲ, ಅದನ್ನ ತಗಂಡ್ ಹೋಗಿ ಆ ಆನಿಗೆ ಹಚ್ಚಿಬಿಡೋಣ ಬಾ.. ಪಾಪ ಆ ಆನಿ” ಎಂದುಬಿಟ್ಟ…
ಎಲ್ಲರಿಗೂ ಖುಷಿ ಮತ್ತರು ಆಶ್ಚರ್ಯ. ವನ್ಯಜೀವಿ ಪ್ರಿಯ ಅಜಿತ್ ಅಂತೂ ಅಂದಿನಿಂದ ಅನಿಕೇತನನ ಫ್ಯಾನೇ ಆಗಿಬಿಟ್ಟ.

ಹನುಮಂತನ ಗಲ್ಲಗಳೇಕೆ ಉಬ್ಬಿವೆ ಗೊತ್ತಾ?
ಒಂದಿನ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೇವು. ಒಂದೂವರೆ ವರ್ಷದ ಅನಿಕೇತನ ಅವರ ಮನೆಯ ಹಾಲ್‍ನಲ್ಲಿ ಹಾಕಿದ್ದ ಹನುಮಂತನ ದೊಡ್ಡ ಫೋಟೊ ನೋಡುತ್ತಲೇ ಇದ್ದ. ಅಲ್ಲಿವರೆಗೂ ಅವನು ಆ ಗಾತ್ರದ ಹನುಮಂತನ ಫೋಟೊ ನೋಡಿರಲಿಲ್ಲ. ನಂತರ ಬಾಯಲ್ಲಿ ನೀರು ತುಂಬಿಕೊಳ್ಳುವುದು, ಎರಡು ಕ್ಷಣ ಹನುಮಂತನ ಫೋಟೊ ನೊಡುವುದು, ಹೊರಗೆ ಹೋಗಿ ನೀರನ್ನು ಉಗುಳಿ ಬಂದು ಜೋರಾಗಿ ನಗುವುದು… ಎರಡು ಮೂರು ಸಲ ಹೀಗೆ ಮಾಡಿದ ಅವನನ್ನು ಅವರ ಅವ್ವ’ಏನಾಗಿದೆ ನಿನಗೆ?’ ಎಂದು ಜಬರಿಸಿದಳು.

‘ಅವ್ವಾ, ಹನುಮಂತ ಬಾಯಿ ಮುಕ್ಕಳಿಸಾಕ ನೀರು ಹಾಕ್ಕೊಂಡಾನ. ಆದ್ರ ಹೊಳ್ಳಿ ಅದನ್ನ ಹೊರಗ ಉಗಳಾಕ ಬರವಲ್ದು ಅಂವಂಗ… ಹ ಹ ಹಾ… ಅದಕ್ಕ ಅವ್ನ ಗಲ್ಲುಮ್ ಅಂತಾ ಉಬ್ಬ್ಯಾವ ನೋಡ್ಬೇ’ ಎಂದು ಅನಿಕೇತನ ತನ್ನ ‘ಸಂಶೋಧನೆ’ಯನ್ನು ಮಂಡಿಸಿದ.!!

ಪ್ರಶ್ನೆ ಕೇಳುವ, ಕೆಲವು ಪ್ರಶ್ನೆಗಳಿಗೆ ತಮ್ಮದೇ ಕಲ್ಪನೆಯ ಉತ್ತರ ಸೃಷ್ಟಿಸುವ ಮಕ್ಕಳು ಸಾಕಷ್ಟಿವೆ. ಆದರೆ, ದೇವರ ಬಗ್ಗೆ ಹೀಗೆಲ್ಲ ಪ್ರಶ್ನೆ ಕೇಳುವ, ವಿಡಂಬನೆ ಮಾಡುವ ಮಕ್ಕಳನ್ನೇ ಕೆಲವು ಪೋಷಕರು ಬೈದು ಗದರಿಸುತ್ತಾರೆ. ಅಂತಹ ಒಂದು ಮನಸ್ಥಿತಿಯನ್ನು ಮತೀಯವಾದಿ ಸಂಘಟನೆಗಳು ಬಿತ್ತಿವೆ.

ಆದರೆ, ಸಾವಿರಾರು ಅನಿಕೇತನರು ನಿನ್ನೆ ಗಣೇಶನ ಮುಂದೆಯೂ, ಅಲೈ ದೇವರ ಮುಂದೆಯೂ ಕುಣಿದಿ ಬಂದಿದ್ದಾರೆ. ನಮಗಂತೂ ಆಶಾವಾದ ಇದ್ದೇ ಇದೆ. ದೇವರು ಮತ್ತು ಮತದ ಹೆಸರಲ್ಲಿ ಈ ಸಮಾಜವನ್ನು ಅಷ್ಟು ಸುಲಭವಾಗಿ ಒಡೆಯಲಾಗುವುದಿಲ್ಲ ಎಂದು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...