Homeಮುಖಪುಟಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ: 6 ಕಾರ್ಮಿಕರ ಸಾವು!

ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ: 6 ಕಾರ್ಮಿಕರ ಸಾವು!

- Advertisement -
- Advertisement -

ಕಳೆದ ಶುಕ್ರವಾರ ಒಡಿಶಾದಲ್ಲಿ ನಡೆದಿದ್ದ ಭೀಕರ ತ್ರಿವಳಿ ರೈಲು ದುರಂತದ ಘಟನಾ ಸ್ಥಳದ ಸನಿಹವೇ ಮತ್ತೊಂದು ರೈಲು ದುರಂತ ಬುಧವಾರ ಸಂಭವಿಸಿದ್ದು ಆರು ಕಾರ್ಮಿಕರು ಸಾವಿಗೀಡಾಗಿದ್ದಾರೆ.

ಒಡಿಶಾದ ಜಾಜ್‌ಪು‌ ಜಿಲ್ಲೆಯ ಜಾಜ್‌ಪುರ್ ಕಿಯೋಂಜಾರ್‌ ರಸ್ತೆ ರೈಲು ನಿಲ್ದಾಣದ ಬಳಿ ಬುಧವಾರ ಮಧ್ಯಾಹ್ನ ಸರಕು ಸಾಗಣೆ ರೈಲೊಂದು ಹರಿದು 6 ಕಾರ್ಮಿಕರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ”ದಿಢೀರ್‌ನೇ ಗುಡುಗು-ಮಿಂಚು ಸಹಿತ ಮಳೆ ಪ್ರಾರಂಭವಾಗಿದ್ದರಿಂದ ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆಶ್ರಯ ಪಡೆಯಲು ಸರಕು ಸಾಗಣೆ ರೈಲಿನ ಕೆಳಗೆ ನಿಂತಿದ್ದರು. ಈ ವೇಳೆ ರೈಲು ಚಲಿಸಿದ್ದರಿಂದ ಕೆಳಗೆ ಸಿಲುಕಿ 6 ಕಾರ್ಮಿಕರು ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಆ ಭಾಗದ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಒಡಿಶಾದ ಬಾಲೇಶ್ವರ ರೈಲು ದುರಂತದಲ್ಲಿ ಕನಿಷ್ಠ 288 ಜನ ಮೃತಪಟ್ಟು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದುರಂತ ನಡೆದು ಐದು ದಿನಗಳ ನಂತರ ಮತ್ತೊಂದು ಘಟನೆ ನಡೆದಿದೆ. ಸುಡುವ ಶಾಖದ ಹೊರತಾಗಿಯೂ, ರೈಲುಗಳ ಅಪಘಾತದಲ್ಲಿ ಸಿಲುಕಿದ ಕೊಳೆತ ಅವಶೇಷಗಳನ್ನು ನೋಡಲು ಜನರು ಸ್ಥಳಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಸತ್ತವರ ಸಂಖ್ಯೆ 500 ರಷ್ಟಿದೆ, ಆದರೆ ಕೇಂದ್ರ ಕಡಿಮೆ ಲೆಕ್ಕ ತೋರಿಸುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

ಒಡಿಶಾದ ಬಾಲೇಶ್ವರ ರೈಲು ದುರಂತ ಸಂಭವಿಸಿದ್ದು ಹೇಗೆ?

ಒಡಿಶಾದ ಬಾಲೇಶ್ವರ ಜಿಲ್ಲೆಯ ಬಹನಾಗಾ ನಿಲ್ದಾಣದ ಬಳಿ ನಡೆದ ಭೀಕರ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈವರೆಗೆ ಅಧಿಕೃತ ಮಾಹಿತಿಯ ಪ್ರಕಾರ ಕನಿಷ್ಠ 288 ಮಂದಿ ಸಾವನ್ನಪ್ಪಿದ್ದಾರೆ. 900ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಲ್ಲಮೂಲಗಳ ಪ್ರಕಾರ ಗಾಯಾಳುಗಳ ಪೈಕಿ ಕನಿಷ್ಠ 100 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇತ್ತ ಸಾವಿನ ಸಂಖ್ಯೆ ಕೂಡ 300ರ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಲೂ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, 200 ಆಂಬುಲೆನ್ಸ್‌ಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿವೆ. 50 ಮೊಬೈಲ್ ಕ್ಲಿನಿಕ್ ಸೇರಿದಂತೆ ನೂರಾರು ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ತುರ್ತು ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನಿಂದ ಹೊರಟಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ ರೈಲು, ಶಾಲಿಮಾರ್ ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಈ ಅಫಘಾತ ಸಂಭವಿಸಿದೆ. ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗಾ ನಿಲ್ದಾಣದ ಬಳಿ ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಈ ಭೀಕರ ದುರಂತ ಸಂಭವಿಸಿದೆ.

ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳುವ ಪ್ರಕಾರ, ಒಡಿಶಾದ ಬಾಲೇಶ್ವರ ಬಳಿ ನಿಲ್ಲಿಸಿದ್ದ ಗೂಡ್ಸ್‌ ರೈಲಿಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ 10-12 ಬೋಗಿಗಳು ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದಿತ್ತು. ಕೆಲವೇ ನಿಮಿಷಗಳ ನಂತರ ಅದೇ ಹಳಿಯಲ್ಲಿ ಯಶವಂತಪುರದಿಂದ ಹೌರಾಕ್ಕೆ ಮತ್ತೊಂದು ಸೂಪರ್‌ಫಾಸ್ಟ್‌ ರೈಲು ಬಂದಿದೆ. ಆದರೆ ಅಪಘಾತ ಸಂಭವಿಸಿದ ವಿಷಯ ತಿಳಿಯದ ಕಾರಣ, ಆಗಲೇ ಹಳಿತಪ್ಪಿದ ಬೋಗಿಗಳಿಗೆ ಯಶವಂತಪುರ-ಹೌರಾ ರೈಲು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read