Homeಮುಖಪುಟನ್ಯಾಷನಲ್ ಕಾಲೇಜು ಆಡಳಿತ ಮಂಡಳಿಯಿಂದ ದಲಿತ ವಿರೋಧಿ ನಡೆ; ಪರಿಶಿಷ್ಟ ಸಮುದಾಯದ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ...

ನ್ಯಾಷನಲ್ ಕಾಲೇಜು ಆಡಳಿತ ಮಂಡಳಿಯಿಂದ ದಲಿತ ವಿರೋಧಿ ನಡೆ; ಪರಿಶಿಷ್ಟ ಸಮುದಾಯದ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಕಿರುಕುಳ

- Advertisement -
- Advertisement -

ಗಾಂಧಿ ತತ್ವಗಳಿಗೆ ಹೆಸರುವಾಸಿಯಾಗಿದ್ದ, ವೈಜ್ಞಾನಿಕ ಚಿಂತನೆಯನ್ನು ತಾನು ಸಾಯುವವರೆಗೂ ಪ್ರತಿಪಾದಿಸಿದ, ಸಾವಿರಾರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿದ ಎಚ್. ನರಸಿಂಹಯ್ಯ ಸೇವೆ ಸಲ್ಲಿಸಿದ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಇದೀಗ ‘ದಲಿತ ವಿರೋಧಿ’ ನಿಲುವು ತೆಗೆದುಕೊಂಡು, ಜನರ ಕೆಂಗಣ್ಣಿಗೆ ಗುರಿಯಾಗಿದೆ.

1920ರಲ್ಲಿ ಆರಂಭವಾದ ಬೆಂಗಳೂರಿನ ನ್ಯಾಷನಲ್ ಎಜುಕೇಷನ್ ಸೊಸೈಟಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಮೂಲಕ, ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಆದರೆ, ಕಳೆದ ಹಲವು ವರ್ಷಗಳಿಂದ ದಲಿತ ಸಮುದಾಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿರೋಧಿಯಾಗಿ ಈ ಸಂಸ್ಥೆಯಲ್ಲಿ ಕಾರ್ಯಚಟುವಟಿಗಳು ನಡೆಯುತ್ತಿವೆ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಕಳೆದ 13 ವರ್ಷದಿಂದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರವಿಕುಮಾರ್ ಭಾಗಿ ಅವರನ್ನು ಪದವಿ ಕಾಲೇಜಿನಿಂದ ಪಿಯು ಕಾಲೇಜಿಗೆ ಹಿಂಬಡ್ತಿ ನೀಡಲಾಗಿದೆ. ಅಲ್ಲದೇ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಲು ಸೇವಾ ಧೃಢೀಕರಣ ಪತ್ರವನ್ನು ಕಾಲೇಜಿನ ಪ್ರಾಂಶುಪಾಲರು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶದಿಂದ ಸಾವಿರಾರು ಬಡ ಮಕ್ಕಳು ನ್ಯಾಷನಲ್ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಆದರೆ, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಶುಲ್ಕ ಕೂಡ ಹೆಚ್ಚು ಮಾಡಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಜತೆಗೆ ಸಭೆ ನಡೆಸಿದ ಡಾ. ರವಿಕುಮಾರ್ ಭಾಗಿ ಬೆಂಬಲಿಗರು.

ಸದ್ಯ ಈ ವಿಚಾರವಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಚಿಂತರಾದ ಶ್ರೀಪಾದ್ ಭಟ್, ಬಂಜಗೆರೆ ಜಯಪ್ರಕಾಶ್ ಸೇರಿದಂತೆ 50ಕ್ಕೂ ಹೆಚ್ಚು ಜನ ಬಸವನಗುಡಿ ನ್ಯಾಷನಲ್ ಕಾಲೇಜಿನ ಕಾರ್ಯದರ್ಶಿ ವೆಂಕಟಶಿವರೆಡ್ಡಿ ಜತೆಗೆ ಇಂದು ಮಾತುಕತೆ ನಡೆಸಿ, ಆದೇಶ ಹಿಂಪಡೆಯುವಂತೆ ತಾಕೀತು ಮಾಡಿದ್ದಾರೆ.

ಚರ್ಚೆಯಲ್ಲಿ ಮಾತನಾಡಿದ ಪ್ರಾಧ್ಯಾಪಕ ಡಾ.ರವಿಕುಮಾರ್ ಭಾಗಿ, ‘ಕಳೆದ 13 ವರ್ಷದಿಂದ ಬಸವನಗುಡಿಯ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪದವಿ, ಸ್ನಾತಕೋತ್ತರ ಪದವಿಗಳಿಗೆ ಬೋಧಿಸುತ್ತಿದ್ದು, ಪಿಎಚ್‌ಡಿ ಪದವಿಯನ್ನು ಹೊಂದಿದ್ದೇನೆ. ಸ್ನಾತಕೋತ್ತರ ಕೇಂದ್ರದ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾವ ಸೂಚನೆಯನ್ನು ನೀಡದೆ ಏಕಾಏಕಿ ದುರುದ್ದೇಶದಿಂದ ಜಯನಗರ ನ್ಯಾಷನಲ್ ಪಿಯುಸಿ ಕಾಲೇಜಿಗೆ ಹಿಂಬಡ್ತಿ ನೀಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪ್ರಾಂಶುಪಾಲರಾದ ವೈ.ಸಿ.ಕಮಲಾ ಅವರು ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳಲ್ಲಿ ನೇರವಾಗಿಯೇ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಾನು ಪರಿಶಿಷ್ಟ ಜಾತಿಗೆ ಸೇರಿದವನು. ಡಾ. ಶಿವಣ್ಣ ಇವರು ಪ್ರವರ್ಗ-1ರ ಬೆಸ್ತರ್ ಜಾತಿಗೆ ಸೇರಿದ್ದಾರೆ. ನಾವಿಬ್ಬರು ಸಂಶೋಧನಾ ಮಾರ್ಗದರ್ಶಕರಾದರೆ ಸಂಸ್ಥೆಗೆ ಹೆಮ್ಮೆ ಎಂಬುದನ್ನು ಲೆಕ್ಕಿಸದೇ, ದಲಿತರು ಸಂಶೋಧನಾ ಮಾರ್ಗದರ್ಶಕರಾಗಬಾರದು ಎಂಬ ಜಾತಿವಾದಿ ಮನಸ್ಥಿತಿಯಿಂದ ಇಬ್ಬರೂ ಸಂಶೋಧನಾ ಮಾರ್ಗದರ್ಶಕರಾಗುವುದನ್ನು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ವ್ಯವಸ್ಥಿತವಾಗಿ ತಡೆಹಿಡಿದಿದ್ದಾರೆ. ಆ ಮೂಲಕ ಇಬ್ಬರಿಗೂ ಅನ್ಯಾಯ ಎಸಗುತ್ತಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿರುವ ಜಾತಿ ಕಿರುಕುಳದ ಬಗ್ಗೆ ಇದು ಒಂದು ಉದಾಹರಣೆ ಅಷ್ಟೆ. ಈ ಸಂಸ್ಥೆಯ ಆಧೀನದಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ದಲಿತ, ಹಿಂದುಳಿದ ನೌಕರರು ಕಿರುಕುಳದ ಜತೆಗೆ ಈ ತಾರತಮ್ಯಗಳನ್ನು ಎದುರಿಸುತ್ತ ಅಸಹಾಯಕ ಸ್ಥಿತಿಯ ಭಯದಲ್ಲಿ ಕಾರ್ಯನಿರ್ವಹಿಸುತ್ತ ಜೀವಿಸುತ್ತಿದ್ದಾರೆ’ ಎಂದು ಹೇಳಿದರು.

ಪ್ರಾಧ್ಯಾಪಕ ರವಿಕುಮಾರ ಭಾಗಿ ಅವರ ಹಿಂಬಡ್ತಿ ಬಗ್ಗೆ ಮಾತನಾಡಿದ ಕಾರ್ಯದರ್ಶಿ ವೆಂಕಟಶಿವ ರೆಡ್ಡಿ, ‘ಪದವಿಯಿಂದ ಪಿಯು ಕಾಲೇಜಿಗೆ ಹಾಕಿರುವುದು ಹಿಂಬಡ್ತಿಯಲ್ಲ; ಇಲ್ಲಿ ಪಿಜಿ ಕೋರ್ಸ್ ಇಲ್ಲ. ಶನಿವಾರ ಅಥವಾ ಸೋಮವಾರ ಆಡಳಿತ ಮಂಡಳಿ ಜತೆಗೆ ಮಿಟೀಂಗ್ ಮಾಡಿ ರವಿಕುಮಾರ್ ಭಾಗಿ ಅವರ ಹಿಂಬಡ್ತಿ ಹಾಗೂ ಪಿಎಚ್‌ಡಿ ಸಂಶೋಧನಾ ಸೇವಾ ಧೃಢೀಕರಣ ಪತ್ರ ನೀಡುವ ಬಗ್ಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ. ವಾರ್ಷಿಕ ಕಾರ್ಯಚಟುವಟಿಕೆಗಳ ಪಟ್ಟಿಯಲ್ಲಿ ಅಂಬೇಡ್ಕರ್ ಜಯಂತಿ ಇಲ್ಲ ಎಂದರೆ ನಾನೇನು ಮಾಡಲಿ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ‘ನಾನು ಗೌರಿ.ಕಾಂ’ ಜತೆಗೆ ಮಾತನಾಡಿದ ರವಿಕುಮಾರ್ ಭಾಗಿ, ‘ಡಿಎಸ್ಎಸ್ ಮುಖಂಡರು, ಬಂಜಗೆರೆ ಜಯಪ್ರಕಾಶ್, ಎಎಲ್ಎಫ್, ಸಿಪಿಐ (ಎಂ) ಸೇರಿದಂತೆ ಹಲವು ಪ್ರಗತಿಪರ ಮುಖಂಡರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಮೇಲೆ ನಡೆಯುತ್ತಿರುವ ಕಿರುಕುಳದ ಬಗ್ಗೆ ನಾನು ಹೇಳಿದ್ದೇನೆ. ಇದೇ ರೀತಿ ಹಲವರಿಗೆ ಕಿರುಕುಳ ನೀಡಿ ಇಲ್ಲಿಂದ ಹೊರಹೋಗುವಂತೆ ಮಾಡಿದ್ದಾರೆ. ದಲಿತರನ್ನೆ ಮಾತ್ರ ಯಾಕೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ದಲಿತರು ಈ ಸಂಸ್ಥೆಯಲ್ಲಿ ಇರಲೇಬಾರದಾ? ನಾನು ಸಂಸ್ಥೆಗೆ ಏನಾದರೂ ದ್ರೋಹ ಬಗೆದಿದ್ದೀನಾ? ಯಾರಾದರೂ ವಿದ್ಯಾರ್ಥಿಗಳಿಗೆ ಕಿರುಕುಳ ಏನಾದರೂ ಕೊಟ್ಟಿದ್ದೀನಾ’ ಎಂದು ಪ್ರಶ್ನಿಸಿದರು.

ನ್ಯಾಷನಲ್ ಕಾಲೇಜು ಆಡಳಿತ ಮಂಡಳಿಯ ದಲಿತ ವಿರೋಧಿ ನಡೆ ಖಂಡಿಸಲು ಆಗಮಿಸಿದ್ದ ವಿವಿಧ ಸಂಘಟನೆಗಳ ಮುಖಂಡರು.

‘ಪದವಿ ಮತ್ತು ಸ್ನಾತಕೋತ್ತರ ಪದವಿ ಪಾಠ ಮಾಡಲು ನನ್ನನ್ನು ನೇಮಕ ಮಾಡಿಕೊಂಡು, ಈಗ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ ಹಿಂಬಡ್ತಿ ನೀಡಿದ್ದಾರೆ. ನಾನು ಪಿಜಿ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡಿದ್ದೇನೆ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಬೆಂಗಳೂರು ಯೂನಿವರ್ಸಿಟಿ ನನ್ನನ್ನು ಆಯ್ಕೆ ಮಾಡಿದೆ. ಅದಕ್ಕೆ ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಬೇಕು. ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರು ವಿವಿಯಿಂದ ಅದಕ್ಕೆ ಸಂಬಂಧಿಸಿದಂತೆ ಪತ್ರ ಕಳುಹಿಸಿದ್ದಾರೆ. ಈವರೆಗೂ ನನಗೆ ಅನುಮತಿ ಪತ್ರ ಕೊಟ್ಟಿಲ್ಲ ಯಾಕೆ? ಅದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂತಿಮವಾಗಿ, ನಾನು ಈ ಹಿಂದೆ ಯಾವ ಹುದ್ದೆಯಲ್ಲಿ ಇದ್ದೆನೋ ಅಲ್ಲೇ ಮುಂದುವರಿಸಬೇಕು. ನನಗೆ ಸಂಶೋಧನಾ ಮಾರ್ಗದರ್ಶಿಯಾಗಿ ಅನುಮತಿ ನೀಡಿ ಪತ್ರ ನೀಡಬೇಕು ಎಂಬುದು ನನ್ನ ಬೇಡಿಕೆಯಾಗಿದೆ. ಅವರು ನನಗೆ ಜಯನಗರ ಪದವಿ ಕಾಲೇಜಿಗೆ ತೆರಳವಂತೆ ಹೇಳುತ್ತಿದ್ದಾರೆ. ಇಷ್ಟೆಲ್ಲಾ ಅವಮಾನ ಮಾಡಿ, ಹಿಂಬಡ್ತಿ ನೀಡಿರುವುದೆ ನಾನು ಇಲ್ಲಿಂದ ತೆರಳಲಿ ಎಂಬ ಕಾರಣಕ್ಕೆ. ಆದರೆ, ನಾನು ಬೇರೆ ಕಡೆ ಹೋಗುವುದಕ್ಕೆ ತಯಾರಿಲ್ಲ; ಇತರೆ ಜಾತಿ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದೆ. ಆದರೆ, ದಲಿತ ಎಂಬ ಕಾರಣಕ್ಕೆ ಮಾತ್ರ ನನ್ನೊಬ್ಬನನ್ನು ವರ್ಗ ಮಾಡಿದರೆ ನಾನು ಒಪ್ಪುವುದಿಲ್ಲ’ ಎಂದು ಹೇಳಿದರು.

‘ಆಡಳಿತ ಮಂಡಳಿ ಸೋಮವಾರ ಸಭೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ನನ್ನ ಪರವಾಗಿ ತೀರ್ಮಾನ ಬಂದಿಲ್ಲವಾದರೆ ಮಂಗಳವಾರದಿಂದ ಧರಣಿ ಕೂರುವುದಾಗಿ ಅವರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದರು.

‘ಕಾಲೇಜಿನಲ್ಲಿ ಈ ಹಿಂದೆ ಜಾರಿಯಲ್ಲಿದ್ದ ವೈಜ್ಞಾನಿಕ ಶುಲ್ಕವನ್ನು ಹೊಸ ಆಡಳಿತ ಮಂಡಳಿ ರದ್ದು ಮಾಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕೂಡ ಸಾಮಾನ್ಯ ಜಾತಿಯ ವಿದ್ಯಾರ್ಥಿಗಳು ಪಾವತಿ ಮಾಡುವಷ್ಟೇ ಶುಲ್ಕ ಪಾವತಿಸಬೇಕಿದೆ; ಇದು ಅವೈಜ್ಞಾನಿಕ. ಸಿಬ್ಬಂದಿಗಳನ್ನು ಮಾತ್ರವಲ್ಲದೆ, ದಲಿತ ವಿದ್ಯಾರ್ಥಿಗಳಿಗೂ ಕಿರುಕುಳ ನೀಡುತ್ತಿದ್ದಾರೆ; ವಿದ್ಯಾರ್ಥಿಗಳು ಈ ವಿಚಾರದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ; ಕೇಂದ್ರದ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...