Homeಮುಖಪುಟಪ.ಬಂಗಾಳ: ಎನ್‌ಐಎ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಪ.ಬಂಗಾಳ: ಎನ್‌ಐಎ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪ.ಬಂಗಾಳದಲ್ಲಿ ಎನ್‌ಐಎ ಅಧಿಕಾರಿಗಳ ಮೇಲೆ ದಾಳಿ ಪ್ರಕರಣ ವಿಭಿನ್ನವಾದಂತಹ ತಿರುವನ್ನು ಪಡೆದುಕೊಂಡಿದೆ. ಇದೀಗ ಎನ್‌ಐಎ ಅಧಿಕಾರಿಗಳ ವಿರುದ್ಧ ಟಿಎಂಸಿ ನಾಯಕ ಮೊನೊಬ್ರತಾ ಜಾನಾ ಅವರ ಪತ್ನಿ ಎಫ್‌ಐಆರ್‌ ದಾಖಲಿಸಿದ್ದಾರೆ.

ತನಿಖೆ ನಡೆಸುವ ನೆಪದಲ್ಲಿ ಭೂಪತಿನಗರದಲ್ಲಿರುವ ತಮ್ಮ ನಿವಾಸಕ್ಕೆ ಬಲವಂತವಾಗಿ ಪ್ರವೇಶಿಸಿದ ಎನ್‌ಐಎ ಅಧಿಕಾರಿಗಳು ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಂಧಿತ ಟಿಎಂಸಿ ನಾಯಕನ ಪತ್ನಿ ಆರೋಪಿಸಿದ್ದಾರೆ.

2022ರಲ್ಲಿ ಪಶ್ಚಿಮ ಬಂಗಾಳದ ಪುರ್ಬಾ ಮೇದಿನ್‌ಪುರ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ ಸ್ಫೋಟ ಪ್ರಕರಣದಲ್ಲಿ ಇಬ್ಬರು ಪ್ರಮುಖ ಸಂಚುಕೋರರಾದ ಬಲಾಯಿ ಚರಣ್ ಮೈತಿ ಮತ್ತು ಮನೋಬ್ರತ ಜನಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ಬಂಧಿಸಿದೆ. ಶನಿವಾರ ಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದಾಗ ತಮ್ಮ ನಿವಾಸದಲ್ಲಿನ ಆಸ್ತಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಜಾನ ಪತ್ನಿ ಮೋನಿ ಜಾನಾ ಭೂಪತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎನ್‌ಐಎ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರನ್ನು ಸ್ವೀಕರಿಸಿದ ನಂತರ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ನಾವು ದೂರಿನ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.

ಎನ್‌ಐಎ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ:

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೊಂದರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿತ್ತು, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2022ರಲ್ಲಿ ‘ಪಟಾಕಿ ಸಿಡಿದ” ಘಟನೆಯನ್ನು ಮುಂದಿಟ್ಟು ಎನ್ಐಎ ತಂಡವು ಮುಂಜಾನೆ ಹಲವಾರು ಮನೆಗಳಿಗೆ ನುಗ್ಗಿದೆ, ಈ ವೇಳೆ ಆತ್ಮ ರಕ್ಷಣೆಗೆ ಗ್ರಾಮಸ್ಥರು ಪ್ರತಿರೋಧ ತೋರಿದ್ದಾರೆ ಎಂದು ಹೇಳಿದ್ದರು.

ಸ್ಥಳೀಯರ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ಆರೋಪಿಸಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ದಾಳಿಯ ನೇತೃತ್ವ ವಹಿಸಿದವರು ಯಾರು? ಮಹಿಳೆಯರು ದಾಳಿ ಮಾಡಲಿಲ್ಲ, ಎನ್‌ಐಎ ದಾಳಿ ನಡೆಸಿತ್ತು. ಮಧ್ಯರಾತ್ರಿಯ ನಂತರ ಯಾರಾದರೂ ಮಹಿಳೆಯರಿರುವ ಮನೆಗೆ ನುಗ್ಗಿ ಅವರಿಗೆ ಹಿಂಸಿಸಿದರೆ, ಮಹಿಳೆಯರು ಏನು ಮಾಡಬೇಕು? ಅವರು ಕುಳಿತುಕೊಂಡು ನೋಡಬೇಕೆ? ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಲ್ಲವೇ ಮತ್ತು ತಮ್ಮ ಘನತೆಯನ್ನು ಕಾಪಾಡಬೇಕಲ್ಲವೇ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು.

ಮಧ್ಯರಾತ್ರಿಯ ನಂತರ ಕೆಲವು ಅಪರಿಚಿತರು ಗ್ರಾಮಕ್ಕೆ ಪ್ರವೇಶಿಸುವುದನ್ನು ಗ್ರಾಮಸ್ಥರು ನೋಡಿದರೆ, ಅವರು ಹೇಗೆ ಗುರುತಿಸುತ್ತಾರೆ? ಚುನಾವಣೆಗೂ ಮುನ್ನವೇಕೆ ಜನರನ್ನು ಬಂಧಿಸಲಾಗುತ್ತಿದೆ? ಟಿಎಂಸಿಯ ಎಲ್ಲಾ ಬೂತ್ ಏಜೆಂಟ್‌ಗಳನ್ನು ಬಂಧಿಸಿ ನಂತರ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದೆಯಾ? ಬಿಜೆಪಿಯನ್ನು ಬೆಂಬಲಿಸಲು ಈ ಬಂಧನಗಳನ್ನು ಮಾಡಲಾಗಿದೆ ಎಂದು ಬ್ಯಾನರ್ಜಿ ಹೇಳಿದ್ದರು.

ಅಧಿಕಾರಿಗಳು ಗಾಯಗೊಂಡಿದ್ದಾರೆ: ಎನ್‌ಐಎ

ಭೂಪತಿನಗರದಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ತೆರಳಿದ್ದ ವೇಳೆ ಸ್ಥಳೀಯರು ಕಲ್ಲುಗಳು ಮತ್ತು ಇಟ್ಟಿಗೆಗಳಿಂದ ದಾಳಿ ನಡೆಸಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ ಮತ್ತು ಅಧಿಕಾರಿಯೋರ್ವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.

ಏನಿದು ಸ್ಪೋಟ ಪ್ರಕರಣ?

ಡಿಸೆಂಬರ್ 3, 2022ರಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಮನ್ನಾ ಅವರ ಮನೆಯಲ್ಲಿ ನಡೆದ ಸ್ಫೋಟದಲ್ಲಿ ಮನ್ನಾ ಮತ್ತು ಇಬ್ಬರು ಪಕ್ಷದ ಕಾರ್ಯಕರ್ತರಾದ ಬಿಸ್ವಜಿತ್ ಗಯೆನ್ ಮತ್ತು ಬುದ್ಧದೇಬ್ ಮನ್ನಾ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಮಾರ್ಚ್ 2023ರಲ್ಲಿ ಕಲ್ಕತ್ತಾ ಹೈಕೋರ್ಟ್ ಘಟನೆಯ ಬಗ್ಗೆ NIA ತನಿಖೆಗೆ ಆದೇಶಿಸಿದೆ. ತನಿಖಾ ಸಂಸ್ಥೆಯು ಕಳೆದ ವರ್ಷ ಜೂನ್‌ನಲ್ಲಿ ಈ ಕುರಿತು ತನಿಖೆಯನ್ನು ಪ್ರಾರಂಭಿಸಿದೆ ಮತ್ತು 8 ಟಿಎಂಸಿ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಗೆ ಸಮನ್ಸ್ ಕಳುಹಿಸಿತ್ತು.

ಇದನ್ನು ಓದಿ: ಬಿಜೆಪಿ ಸ್ವತಂತ್ರ ಭಾರತದ ಅತ್ಯಂತ ಭ್ರಷ್ಟ ಪಕ್ಷ: ಸಂಜಯ್ ಸಿಂಗ್ ವಾಗ್ಧಾಳಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read