Homeಮುಖಪುಟವಿದೇಶಿ ವಿವಿಗಳ ಆಗಮನ: ತಜ್ಞರ ವಿರೋಧ ಏಕೆ?

ವಿದೇಶಿ ವಿವಿಗಳ ಆಗಮನ: ತಜ್ಞರ ವಿರೋಧ ಏಕೆ?

- Advertisement -
- Advertisement -

ದೇಶದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಮಾನದಂಡಗಳನ್ನು ರೂಪಿಸಿದೆ. ಇತ್ತ ತಮಿಳುನಾಡಿನ ಶಿಕ್ಷಣ ತಜ್ಞರು, ಇತರ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ವಿದೇಶಿ ಘಟಕಗಳಿಗೆ ಹೋಲಿಸಿದರೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ವ್ಯಕ್ತಪಡಿಸಿದ್ದಾರೆ.

ಯುಜಿಸಿ ನಿಗದಿಪಡಿಸಿರುವ ಮಾನದಂಡಗಳಿಗೆ ಈ ವಿದೇಶಿ ವಿಶ್ವವಿದ್ಯಾನಿಲಯಗಳು ಶುಲ್ಕ ರಚನೆ, ಪರೀಕ್ಷೆಯ ನಮೂನೆಗಳು ಮತ್ತು ಕೋರ್ಸ್ ರಚನೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಬದ್ಧವಾಗಿವೆಯೇ ಎಂಬುದು ಶಿಕ್ಷಣತಜ್ಞರು ಎತ್ತಿದ ಪ್ರಮುಖ ಕಾಳಜಿಯಾಗಿದೆ. ಇನ್ನು ಶುಲ್ಕ ರಚನೆ, ಪ್ರವೇಶ ಪ್ರಕ್ರಿಯೆಗಳು ಮತ್ತು ಕೋರ್ಸ್ ರಚನೆಯನ್ನು ನಿರ್ಧರಿಸಲು ವಿದೇಶಿ ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆಯನ್ನು ನೀಡಲಾಗುವುದು ಎಂದು ಯುಜಿಸಿ ಕರಡು ಹೇಳುತ್ತದೆ.

ವಿದೇಶಿ ವಿಶ್ವವಿದ್ಯಾಲಯಗಳು ಮೂಲಸೌಕರ್ಯಗಳನ್ನು ಸುಧಾರಿಸುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಬದಲು ಹಣ ಗಳಿಸುವ ಅಜೆಂಡಾದೊಂದಿಗೆ ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸುತ್ತವೆ. ಆ ಲಾಭವನ್ನು ತಮ್ಮ ದೇಶಗಳಿಗೆ ಹಿಂದಿರುಗಿಸುತ್ತವೆ. ಇದು ಭಾರತದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಒಳ್ಳೆಯದಲ್ಲ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

ಇನ್ನು ಈ ಬಗ್ಗೆ ಅಣ್ಣಾ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ.ಇ.ಬಾಲಗುರುಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, “ಯುಜಿಸಿಯ ಈ ಕ್ರಮವು ಇನ್ನು ಕೆಲವು ವರ್ಷಗಳ ನಂತರ ದೇಶದ ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ಭಾರತದ ಗಣ್ಯ ವಿಶ್ವವಿದ್ಯಾನಿಲಯಗಳು ಸಹ ಜಾಗತಿಕವಾಗಿ ಟಾಪ್ 200 ರಲ್ಲಿವೆ. ಹಾಗಾಗಿ ವಿದೇಶಿ ವಿವಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುವ ಬದಲಿಗೆ ಭಾರತೀಯ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಸುಧಾರಿಸುವತ್ತ ಗಮಣಹರಿಸುವುದು ಓಳ್ಳೆಯದು ಎಂದು ಅವರು ಹೇಳಿದರು.

ಈ ವಿದೇಶಿ ವಿಶ್ವವಿದ್ಯಾನಿಲಯಗಳ ಮೇಲೆ ನಿಯಂತ್ರಣದ ಕೊರತೆ ಉಂಟಾಗುತ್ತದೆ. ಅದೇ ರೀತಿ ಅವರು ಹೇಗೆ ಕೋರ್ಸ್ ರಚನೆ ಮಾಡುತ್ತಾರೆ ಎನ್ನುವ ಗೊಂದಲ ಹಾಗೂ ವಿದೇಶಿ ಪದವಿ ನೀಡುವ ನೆಪದಲ್ಲಿ ಅವರು ಅತಿಯಾದ ಶುಲ್ಕವನ್ನು ವಿಧಿಸುತ್ತಾರೆ ಎನ್ನುವುದು ಇಲ್ಲಿಯ ಶಿಕ್ಷಣತಜ್ಞರ ಪ್ರಮುಖ ಆತಂಕವಾಗಿದೆ.

ಮಧುರೈ ಮೂಲದ ಚಿಂತಕರ ಚಾವಡಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕ ಡಾ.ಜಿ.ಪದ್ಮನಾಭನ್ ಈ ವಿಚಾರವಾಗಿ ಮಾತನಾಡಿ, “ಈ ವಿದೇಶಿ ಶಿಕ್ಷಣ  ಸಂಸ್ಥೆಗಳಿಗೆ ಅವರ ಇಚ್ಛೆಯಂತೆ ವಿಶ್ವವಿದ್ಯಾಲಯ ತೆರೆಯಲು ಅವಕಾಶ ನೀಡಬಾರದು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಣ ಮತ್ತು ಗುಣಮಟ್ಟದಿಂದ ತೊಂದರೆ ಅನುಭವಿಸಬಾರದು. ವಿದೇಶಿ ವಿಶ್ವವಿದ್ಯಾನಿಲಯಗಳು ಅತಿಯಾದ ಶುಲ್ಕ ವಿಧಿಸಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿ ಶಶಾಂಕ ಅವರು ನಾನುಗೌರಿ.ಕಾಂ ಪ್ರತಿನಿಧಿಯೊಂದಿಗೆ ಆಭಿಪ್ರಾಯ ಹಂಚಿಕೊಂಡಿದ್ದು, “ವಿದೇಶಿ ವಿಶ್ವವಿದ್ಯಾಲಯಗಳು ದೇಶದಲ್ಲಿ ಸ್ಥಾಪನೆಯಾದರೆ, ಬಡ ಹಾಗೂ ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅಲ್ಲಿ ಅವಕಾಶವೇ ಸಿಗಲ್ಲ. ಏಕೆಂದರೆ ವೆಚ್ಚ ಭರಿಸುವ ಶಕ್ತಿ ಇರದ ಕಾರಣ ಅಲ್ಲಿಯೂ ಕೂಡ ಹಣವಂತರ ಮಕ್ಕಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಇನ್ನು ನಮ್ಮ ದೇಶದಲ್ಲಿ ಶೈಕ್ಷಣಿಕೆ ಕ್ಷೇತ್ರದಿಂದ ಬರುವಂತಹ ಹಣವನ್ನು ಮರಳಿ ಶಿಕ್ಷಣಕ್ಕೆ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಆದರೆ ಇದೀಗ ವಿದೇಶಿ ವಿವಿ ಗಳು ಇಲ್ಲಿ ಕೇವಲ ಲಾಭಕ್ಕೊಸ್ಕರ ಬಂದು ವಿಪರೀತ ಶುಲ್ಕ ಪಡೆದು ವಿದೇಶದಲ್ಲಿರುವ ತಮ್ಮ ಮಾತೃ ಸಂಸ್ಥೆಗೆ ನೀಡುತ್ತವೆ. ಇದರಿಂದ ನಮ್ಮ ದೇಶಕ್ಕೆ ಯಾವುದೇ ಲಾಭವಿಲ್ಲ. ಇಲ್ಲಿಯ ಉನ್ನತ ಶಿಕ್ಷಣಕ್ಕೆ ಸರ್ಕಾರ ಅನುದಾನ ನೀಡುವಲ್ಲಿ ಹಿಂದೆ ಬಿದ್ದಿದೆ. ಸ್ವದೇಶಿಯ ಸಂಸ್ಥೆಗಳಿಗೆ ಹೆಚ್ಚಿನ ಅವಕಾಶ ನೀಡುವ ಬದಲಿಗೆ ವಿದೇಶಿಗರಿಗೆ ಅವಕಾಶ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸಮಾನ ಶಿಕ್ಷಣದ ಹೋರಾಟಗಾರರು ಹಾಗೂ ಚಿಂತಕರಾದ ಶ್ರೀಪಾದ ಭಟ್ ಈ ವಿಚಾರವಾಗಿ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, “ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಆದರೆ ಈಗಿನ ನೂತನ ಶಿಕ್ಷಣ ನೀತಿ ಸಂವಿಧಾನದ ಆಶಯಗಳಿಗೆ ವಿರುದ್ಧವಿದೆ. ಇನ್ನು ಈ ವಿದೇಶಿ ವಿವಿಗಳನ್ನು ದೇಶಕ್ಕೆ ತರುತ್ತೇವೆ ಎಂದು ಹೇಳುವುದು ಸರಿಯಲ್ಲ. ವಿದೇಶಿ ವಿವಿಗಳು ಬೇರೆ ದೇಶಗಳನ್ನು ಬಿಟ್ಟು, ನಮ್ಮ ದೇಶಕ್ಕೆ ಬರಲು ಒಪ್ಪಿರೊದಕ್ಕೆ ಕಾರಣ ಏನು? ಇವರು ನೀಡುವ ರಿಯಾಯತಿಗಳು ಅಲ್ಲವೇ? ಅದೇ ರಿಯಾಯತಿ ಮತ್ತು ಸವಲತ್ತುಗಳನ್ನು ದೇಶದಲ್ಲಿರುವ ಸರ್ಕಾರಿ ವಿವಿಗಳಿಗೆ ನೀಡಬಹುದಲ್ಲವೇ? ಇನ್ನು ಈ ವಿದೇಶಿ ಶಿಕ್ಷಣ ಸಂಸ್ಥೆಗಳಿಂದ ಯಾರಿಗೆ ಲಾಭ ಇದೆ? ಅವರ ಶಿಕ್ಷಣದ ಶೈಲಿ ಭಾರತೀಯ ವಿದ್ಯಾರ್ಥಿಗಳಿಗೆ ಎಷ್ಟು ಅನಕೂಲ ಆಗಲಿದೆ? ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸಿಗುತ್ತದೆಯೇ? ಆ ವಿವಿ ಗಳಲ್ಲಿ ಇಲ್ಲಿಯ ಪ್ರಾಧ್ಯಾಪಕರಿಗೆ ಅವಕಾಶ ನೀಡಲಾಗುತ್ತದೆ? ಒಂದು ವೇಳೆ ಅವಕಾಶವಿದ್ದು, ಇಲ್ಲಿಯ ಪ್ರಧ್ಯಾಪಕರು ಹೆಚ್ಚಿನ ಸಂಬಳದ ಕಾರಣಕ್ಕೆ ಆ ವಿವಿ ಗೆ ಹೋದರೆ ಇಲ್ಲಿಯ ಸರ್ಕಾರಿ ವಿವಿಗಳ ಗತಿ ಏನು?” ಎಂದು ಪ್ರಶ್ನೆಗಳ ಸುರಿಮಳೆಗೈದು ವಿದೇಶಿ ವಿವಿಗಳ ಆಗಮನವನ್ನು ವಿರೋಧಿಸಿದರು.

“ವಿದೇಶಿ ವಿವಿಗಳಿಗೆ ಅವಕಾಶ ನೀಡುವ ಜವಾಬ್ಧಾರಿನ್ನು ಯುಜಿಸಿ ವಹಿಸುವುದು ಸರಿಯಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಿತ್ತು. ದೇಶಕ್ಕೆ ಅದರಿಂದ ಎಷ್ಟು ಅನುಕೂಲ ಹಾಗೂ ಅನಾನುಕೂಲತೆ ಬಗ್ಗೆ ಚರ್ಚೆಯಾಗಬೇಕಿತ್ತು. ದೇಶದ ಭದ್ರತೆಯೂ ಅಷ್ಟೇ ಮುಖ್ಯ. ಹಾಗೆಯೆ ಇಲ್ಲಿಯ ಶಿಕ್ಷಣ ವ್ಯವಸ್ಥೆಯ ಮೇಲೆ ಹೇರಿರುವ ನಿಯಮಗಳನ್ನೇ ಅವುಗಳ ಮೇಲೆ ಹೇರಲು ಸಾಧ್ಯವಿದೆಯೇ.. ಇಲ್ಲ. ಹಾಗಾಗಿ ಇದು ದೇಶಕ್ಕೂ, ಇಲ್ಲಿಯ ವಿದ್ಯಾಥಿಗಳಿಗೂ ಮಾರಕವಾಗುವಂತಹದ್ದು” ಎಂದು ಅವರು ಅಸಮಾಧಾನ ಹೊರಹಾಕಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...