Homeಅಂಕಣಗಳುಎಚ್.ಐ.ವಿ-ಏಡ್ಸ್ ಪೀಡಿತರ ಮಹಾತಾಯಿ ಮಂಗಳೂರಿನ ತಬಸ್ಸುಂ

ಎಚ್.ಐ.ವಿ-ಏಡ್ಸ್ ಪೀಡಿತರ ಮಹಾತಾಯಿ ಮಂಗಳೂರಿನ ತಬಸ್ಸುಂ

ಎಚ್.ಐ.ವಿ-ಏಡ್ಸ್ ಪೀಡಿತ ಮಕ್ಕಳನ್ನು ತಬಸ್ಸುಂ ತಮ್ಮ ಮಡಿಲೇರಿಸಿಕೊಂಡು ಸ್ನೇಹದೀಪವೆಂಬ ಆಸರೆಯ ಮನೆಯನ್ನು ತೆರೆದು ಅವರೂ ಸಾವಿನವರೆಗೆ ನೆಮ್ಮದಿಯಿಂದ ಬದುಕಬೇಕೆಂದು ದುಡಿಯುತ್ತಿದ್ದಾರೆ.

- Advertisement -
- Advertisement -

ನಿರ್ಗತಿಕರಿಗೆ- ಬೀದಿಯಲ್ಲಿ ಬಿದ್ದು ನರಳುತ್ತಿದ್ದ ರೋಗಿಗಳಿಗೆ ಆಸರೆಯಾದ ಮದರ್ ಥೆರೇಸಾ, ಮಕ್ಕಳಿಲ್ಲವೆಂಬ ಕೊರಗನ್ನು ನೀಗಿಸಲು ಸಾಲು ಮರಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಪೋಷಿಸಿದ ಸಾಲುಮರದ ತಿಮ್ಮಕ್ಕರ ಬಗ್ಗೆ ನಾವು ಬಹಳಷ್ಟು ಓದಿದ್ದೇವೆ, ತಿಳಿದಿದ್ದೇವೆ. ನಮ್ಮ ಮಂಗಳೂರಿನಲ್ಲಿ ಇವೆಲ್ಲರಿಗಿಂತ ವಿಭಿನ್ನ ಮತ್ತು ಸವಾಲಿನ ಸೇವೆಯನ್ನು ಒಪ್ಪಿಕೊಂಡು ಅದನ್ನೇ ಬದುಕಾಗಿಸಿಕೊಂಡ ತಾಯಿಯೊಬ್ಬರಿದ್ದಾರೆ.

ಎಚ್.ಐ.ವಿ-ಏಡ್ಸ್ ಎಂದರೆ ನಮ್ಮ ವಿದ್ಯಾವಂತ ಜನರಲ್ಲೂ ಅದೊಂದು ಮುಟ್ಟಿಸಿಕೊಳ್ಳಬಾರದ ಕಾಯಿಲೆಯೆಂಬ ಭಾವವಿದೆ. ಪಾಪದ ಫಲವೆಂದು ತಿಳಿದುಕೊಂಡ ಜನರೂ ಇದ್ದಾರೆ. ಅವರಿಗೂ ಭಾವನೆಗಳಿವೆ, ಸಾವಿನವರೆಗೆ ಒಂದು ಬದುಕಿದೆ ಎಂದು ಅರ್ಥೈಸಿಕೊಳ್ಳುವವರು ಬಹಳ ಕಡಿಮೆ. ಅನಿಶ್ಚಿತವಾಗಿರುವ ಅಥವಾ ಸದಾ ಸಾವನ್ನೇ ಕಾಯುತ್ತಿರುವಂತಿರುವ ಅವರ ಬದುಕಲ್ಲಿ ನಗು ಚಿಮ್ಮಿಸಿ ಅವರೂ ಸಹಜವಾಗಿ ಬದುಕಬೇಕೆಂಬ ಮಹದುದ್ದೇಶ ಇಟ್ಟುಕೊಂಡು ಸೇವಾನಿರತರಾಗಿರುವ ಆ ಮಹಾತಾಯಿ ತಬಸ್ಸುಂ.

ಸಾಮಾನ್ಯವಾಗಿ ಏಡ್ಸ್ ರೋಗಿಗಳನ್ನು ಸಮಾಜವು ಅಸ್ಪೃಶ್ಯರೆಂಬ ದೃಷ್ಟಿಯಿಂದಲೇ ನೋಡುತ್ತದೆ. ಕುಟುಂಬದೊಳಗೂ ಅವರನ್ನು ಹತ್ತಿರ ಸೇರಿಸಲು ಹಿಂಜರಿಯುತ್ತಾರೆ. ಇದು ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸುತ್ತದೆ. ಹೀಗೆ ಸಮಾಜದಿಂದ, ಕುಟುಂಬಿಕರಿಂದ ತಿರಸ್ಕಾರಕ್ಕೊಳಪಟ್ಟ ಎಚ್.ಐ.ವಿ-ಏಡ್ಸ್ ಪೀಡಿತ ಮಕ್ಕಳನ್ನು ತಬಸ್ಸುಂ ತಮ್ಮ ಮಡಿಲೇರಿಸಿಕೊಂಡು ಸ್ನೇಹದೀಪವೆಂಬ ಆಸರೆಯ ಮನೆಯನ್ನು ತೆರೆದು ಅವರೂ ಸಾವಿನವರೆಗೆ ನೆಮ್ಮದಿಯಿಂದ ಬದುಕಬೇಕೆಂದು ದುಡಿಯುತ್ತಿದ್ದಾರೆ.

ತಬಸ್ಸುಂ ಸ್ನೇಹದೀಪ ತೆರೆಯುವ ಮುನ್ನ ಎನ್‌ಜಿಒ ಒಂದರಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವ ಜನರಿಗೆ, ಎಚ್.ಐ.ವಿ.ಸೋಂಕಿತ ಗರ್ಬಿಣಿ ಸ್ತ್ರೀಯರಿಗೆ ಆಪ್ತಸಮಾಲೋಚಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಗಂಭೀರ ಸ್ಥಿತಿ ತಲುಪಿದ ಕೆಲ ತಾಯಂದಿರು ’ತಾವಿನ್ನು ಬದುಕಿರುತ್ತೇವೆಂಬ ಭರವಸೆಯಿಲ್ಲ, ನಮ್ಮ ನಂತರ ನಮ್ಮ ಮಕ್ಕಳ ಗತಿಯೇನು’ ಎಂದು ಗೋಳಾಡುತ್ತಿದ್ದಾಗ ತಬಸ್ಸುಂರ ಹೃದಯ ಸಂಕಟದಿಂದ ಮಿಡಿಯುತ್ತಿತ್ತು. ಅಂತಹ ಮಕ್ಕಳಿಗಾಗಿ ತಾನೇನು ಮಾಡಲು ಸಾಧ್ಯ ಎಂದು ಯೋಚನಾಮಗ್ನರಾಗುತ್ತಿದ್ದರು. ಆಗೆಲ್ಲಾ ಅವರ ಒಳಮನಸ್ಸು ಎಷ್ಟಾದರೂ ತಾನೊಬ್ಬಳು ಬಡ ಕುಟುಂಬದ ಹೆಣ್ಮಗಳು, ತನ್ನಿಂದೇನು ಸಾಧ್ಯ ಎಂದು ಪ್ರಶ್ನಿಸುತ್ತಿತ್ತು. ಆತ್ಮೀಯ ಸ್ನೇಹಿತೆಯೊಬ್ಬರು ಏಡ್ಸ್‌ನಿಂದ ಮೃತಪಟ್ಟಾಗ ಆಕೆಯ ಅಂತ್ಯಸಂಸ್ಕಾರವನ್ನು ನೆರವೇರಿಸಲು ಕುಟುಂಬಸ್ಥರು ಹಿಂಜರಿದ ಘಟನೆ ಅವರನ್ನು ತೀವ್ರವಾಗಿ ಘಾಸಿಗೊಳಿಸಿತು. ಹಾಗಾಗಿ ಸಮಾಜದಿಂದ ತಿರಸ್ಕೃತಗೊಂಡ ಇಂತಹ ಮಕ್ಕಳಿಗೆ ಆಸರೆಯಾಗುವ ಪಣತೊಟ್ಟಿದ್ದರ ಫಲವಾಗಿ ಮಂಗಳೂರಿನಲ್ಲಿ 2011ರಲ್ಲಿ ’ಸ್ನೇಹದೀಪ’ ಹುಟ್ಟಿಕೊಂಡಿತು.

ಅದಾಗಲೇ ಎನ್‌ಜಿಒ ಒಂದರಲ್ಲಿ ಕಾರ್ಯನಿರ್ವಹಿಸಿದ್ದರಿಂದ ಈ ರೀತಿಯ ಸಂಸ್ಥೆಯನ್ನು ಸ್ಥಾಪಿಸಿ ಹೇಗೆ ಮುನ್ನಡೆಸಬಹುದೆಂಬ ಐಡಿಯಾ ಅವರಿಗಿತ್ತು. ನೋಂದಣಿಗಾಗಿ ವಕೀಲರೊಬ್ಬರ ಸಹಾಯವನ್ನು ಪಡೆದರೆಂಬುದನ್ನು ಬಿಟ್ಟರೆ ಮೊದಲ ಹೆಜ್ಜೆಯನ್ನು ಏಕಾಂಗಿಯಾಗೇ ಮುಂದಿಟ್ಟರು. ಬಾಡಿಗೆ ಕಟ್ಟಡವೊಂದರಲ್ಲಿ ಸ್ನೇಹದೀಪವನ್ನು ಪ್ರಾರಂಭಿಸುವಾಗ ತನ್ನ ಒಡವೆಗಳನ್ನು ಮಾರಿದರು. ನಂತರದಲ್ಲಿ ದಾನಿಗಳು, ಪರಿಚಯಸ್ಥರು ಕೈ ಜೋಡಿಸಲು ಮುಂದೆ ಬಂದರು. ಅದಾಗಲೇ ಎಚ್.ಐ.ವಿ ಸೋಂಕಿತ ತಾಯಂದಿರ ಪರಿಚಯವಿದ್ದುದರಿಂದ ಆಸರೆಯ ಅಗತ್ಯವಿರುವ ಮಕ್ಕಳನ್ನು ಹುಡುಕುವುದು ಕಷ್ಟವಾಗಲಿಲ್ಲ. ನಂತರ ಮಕ್ಕಳ ಕಲ್ಯಾಣ ಸಮಿತಿಯು ಕೆಲವು ಮಕ್ಕಳನ್ನು ಈ ಆಶ್ರಮಕ್ಕೆ ಕಳುಹಿಸಿಕೊಟ್ಟಿತು.

ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಹೆಣ್ಮಗಳೊಬ್ಬಳು ಈ ರೀತಿಯ ಸಾಹಸಕ್ಕೆ ಕೈ ಹಾಕಲು ಸಾಧ್ಯವಾದುದಾದರೂ ಹೇಗೆ ಎಂಬುದೇ ಅಚ್ಚರಿಯ ವಿಷಯ. ಈ ಪ್ರಶ್ನೆಯನ್ನು ನಾನು ಅವರ ಮುಂದಿಟ್ಟಾಗ, “ತಂದೆಯವರ ಸಂಪೂರ್ಣ ಬೆಂಬಲವು ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯಿಡಲು ಅನುವು ಮಾಡಿಕೊಟ್ಟಿತು. ಜೊತೆಗೆ ಅವಿದ್ಯಾವಂತೆಯಾದ ತಾಯಿಯೂ ಕೂಡಾ ಇಂತಹ ವಿಶಿಷ್ಟ ಮಾನವೀಯ ಸೇವೆಗೆ ಬೆನ್ನು ತಟ್ಟಿ ಹುರಿದುಂಬಿಸಿದರು. ಇನ್ನು ಸಮಾಜವೇನು ಹೇಳುತ್ತದೆ ಎಂಬುದನ್ನು ಕೇಳಿ ಕೂತರಾಗುವುದಿಲ್ಲ, ಸದುದ್ದೇಶದಿಂದ ಮಾಡುವ ಕೆಲಸದ ಜೊತೆಗೆ ಅಲ್ಲಾಹನಿರುತ್ತಾನೆ” ಎಂದು ನಿರಾಳವಾಗಿ ಉತ್ತರಿಸಿದರು.

ಬಡ ಕುಟುಂಬದ ತಬಸ್ಸಂ‌ಗೆ ಎಸ್ಸೆಸ್ಸೆಲ್ಸಿ ಬಳಿಕ ಆರ್ಥಿಕ ಅಡಚಣೆಯಿಂದಾಗಿ ಮುಂದಿನ ಓದು ಕಷ್ಟವಾದರೂ ಹೇಗೋ ಹಣ ಹೊಂದಿಸಿ ಪಿಯುಸಿ ಮುಗಿಸಿದರು. ಶಿಕ್ಷಣವನ್ನು ಅಲ್ಲಿಗೇ ಮೊಟಕುಗೊಳಿಸದೆ ಮದುವೆಯ ಬಳಿಕ ಪದವಿಯನ್ನೂ ಪೂರ್ಣಗೊಳಿಸಿದರು. ತದನಂತರ ಕೇವಲ ತನ್ನ ಹೊಟ್ಟೆ ತುಂಬಿಸುವ ಸಂಪಾದನೆಯತ್ತ ಮುಖಮಾಡದೇ ಸೇವೆಯ ಭಿನ್ನ ಹಾದಿಯನ್ನು ಆಯ್ಕೆಮಾಡಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಮೊದಲಿಗೆ ಆರು ಮಕ್ಕಳಿಗೆ ಆಸರೆಯಾದ ಈ ಸಂಸ್ಥೆಯಲ್ಲಿ ಇದೀಗ 28 ಮಕ್ಕಳಿದ್ದಾರೆ. ಜಾತಿ, ಧರ್ಮಗಳಾಚೆಗೆ ಮಾನವೀಯ ತಳಹದಿಯಲ್ಲಿ ನಿಂತಿರುವ ಈ ಆಶ್ರಮದಲ್ಲಿ 3ರಿಂದ 18 ವರ್ಷ ವಯಸ್ಸಿನ ಎಲ್ಲಾ ಧರ್ಮದ ಮಕ್ಕಳಿದ್ದಾರೆ. ರೋಗವು ಮನುಷ್ಯನ ಜಾತಿ ಧರ್ಮವನ್ನು ನೋಡಿ ಬರುವುದಿಲ್ಲ ಎನ್ನುತ್ತಾರೆ ತಬಸ್ಸುಂ. ಇಲ್ಲಿನ ಮಕ್ಕಳು ಮಂಗಳೂರು ನಗರದ ಬೇರೆಬೇರೆ ಕಡೆಗಳಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ವಯಸ್ಸಿಗೆ ಬಂದ ಹೆಣ್ಮಕ್ಕಳನ್ನು ಅವರ ಪಾಡಿಗೆ ಸ್ವತಂತ್ರವಾಗಿ ಬಿಡುವಂತೆಯೂ ಇಲ್ಲ, ಕುಟುಂಬಿಕರು ಸೇರಿಸಿಕೊಳ್ಳುವುದೂ ಇಲ್ಲ. ಅಲ್ಲದೇ ಇಂತಹ ನಿರ್ಗತಿಕ ಹೆಣ್ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಒಂದು ಕಡೆಯಾದರೆ, ಇದರಿಂದಾಗಿ ಸಮಾಜದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿಯೂ ಇರುವುದರಿಂದ ಆಶ್ರಮದಲ್ಲಿಯೇ ಆಶ್ರಯ ಒದಗಿಸುತ್ತಾ ಟೈಲರಿಂಗ್, ಬ್ಯೂಟಿಶಿಯನ್ ಮುಂತಾದ ವೃತ್ತಿ ಕೌಶಲ ತರಬೇತಿಗಳನ್ನು ನೀಡಲಾಗುತ್ತಿದೆ.

ಅವರಿಗೆ ಬೇಕಾದ ಲೈಫ್ ಲಾಂಗ್ ಚಿಕಿತ್ಸೆ, ಔಷಧಿಯನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ART ಸೆಂಟರ್‌ನಲ್ಲಿ ನೀಡಲಾಗುತ್ತದೆ. ಆಪ್ತ ಸಮಾಲೋಚನೆ, ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಲಾಗುವ ಆರೋಗ್ಯ ಸಂಬಂಧಿ ಪರೀಕ್ಷೆಗಳಿಗಾಗಿ ತಬಸ್ಸುಮ್ ಮಕ್ಕಳನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಮ್ಮನಿಂದ ಬೇರ್ಪಟ್ಟ ಪುಟ್ಟ ಮಕ್ಕಳು ಆಶ್ರಮ ಸೇರಿದಾಗ ಅವರನ್ನು ಸಂತೈಸುವುದು ಸುಲಭದ ಕೆಲಸವಲ್ಲ. ಅಳುವಾಗ, ಅಮ್ಮನಿಗಾಗಿ ಹಂಬಲಿಸುವಾಗ, ತಬಸ್ಸುಂ ಅವರತ್ತ ಮಮತೆಯ ಹೊನಲನ್ನೇ ಹರಿಸುತ್ತಾರೆ. ಸ್ವಂತ ಅಮ್ಮನಂತಾಗಲು ಸಾಧ್ಯವಿಲ್ಲವಲ್ಲ, ನನ್ನಿಂದ ಸಾಧ್ಯವಾದಷ್ಟರ ಮಟ್ಟಿಗೆ ಅವರಿಗೆ ನೆರವಾಗುತ್ತೇನೆ ಎನ್ನುತ್ತಾರೆ ತಬಸ್ಸುಂ. ಸ್ವಲ್ಪ ದೊಡ್ಡ ಮಕ್ಕಳಾದರೆ ಅವರು ಎಚ್‌ಐವಿ ಸೋಂಕಿತರು ಬದುಕುಳಿಯುವುದಿಲ್ಲ ಎಂದು ತಿಳಿದಿರುತ್ತಾರೆ. ಅವರ ಜೊತೆಗಿನ ಒಡನಾಡಿಗಳು ಮರಣ ಹೊಂದಿದಾಗ ಅವರೊಳಗಿನ ಆತಂಕ, ಭಯ ಇಮ್ಮಡಿಗೊಳ್ಳುತ್ತದೆ. ಹಾಗಾಗಿ ಅವರು ಖಿನ್ನರಾಗುವುದು, ಜೀವನೋತ್ಸಾಹವನ್ನು ಕಳೆದುಕೊಳ್ಳುವುದು ಸಾಮಾನ್ಯವಾದುದರಿಂದ ಅವರು ಅಂತಹ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಿರುತ್ತಾರೆ. ವಾಸ್ತವ ಗೊತ್ತಿದ್ದರೂ ಪ್ರತೀ ಮಗುವೂ ಪ್ರಾಣ ತ್ಯಜಿಸುವಾಗ “ಇದೇ ಸಾಯುವ ಕೊನೆಯ ಮಗುವಾಗಲಿ ಎಂದು ಹೃದಯ ಪ್ರಾರ್ಥಿಸುತ್ತದೆ” ಎನ್ನುತ್ತಾರೆ ತಬಸ್ಸುಂ.

ಆಶ್ರಮದಲ್ಲಿರುವ ಕೆಲವು ಮಕ್ಕಳು ಹೆತ್ತವರಿಬ್ಬರನ್ನೂ ಕಳಕೊಂಡವರಾದರೆ ಇನ್ನು ಕೆಲವರಿಗೆ ತಂದೆ/ ತಾಯಿ ಯಾರಾದರೊಬ್ಬರು ಬದುಕಿರುತ್ತಾರೆ. ಹೆತ್ತವರಲ್ಲಿ ಬದುಕಿರುವ ಕೆಲವರು ತಮ್ಮಿಂದ ಏನೂ ಸಹಾಯ ಮಾಡಲಾಗದಿದ್ದರೂ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ ಅಥವಾ ಕೆಲವೊಮ್ಮೆ ಭೇಟಿ ನೀಡುತ್ತಾರೆ. ಅನಾಥ ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಂಡ ತಬಸ್ಸುಂ ಕೆಲವೊಮ್ಮೆ ಆ ಮಕ್ಕಳನ್ನು ತನ್ನ ಮನೆಗೆ ಕರೆದೊಯ್ದು ಅವರ ನೋವನ್ನು ಮರೆಸಲು ಯತ್ನಿಸುತ್ತಾರೆ.

ಇಂದು ಭಾರತದಲ್ಲಿ ಏಡ್ಸ್ ಕಾಯಿಲೆಯ ಪ್ರಮಾಣ ಕಡಿಮೆಯಾಗುತ್ತಿರುವುದರ ಹಿಂದೆ ನಮ್ಮ ಮಂಗಳೂರಿನ ಈ ಮಹಾತಾಯಿಯ ಕೊಡುಗೆಯೂ ಇದೆ. ಮಂಗಳೂರಿನಂತಹ ಮಂಗಳೂರಿನಲ್ಲಿ ಮುಸ್ಲಿಂ ಆಗಿರುವ ಒಂದೇ ಕಾರಣಕ್ಕೆ ಸದಾ ಕಾಕ ದೃಷ್ಟಿಗೆ ಗುರಿಯಾಗುವ ಮತ್ತು ಇತರರಿಂದ ಅನ್ಯರಂತೆ ಪರಿಗಣಿಸಲ್ಪಡುವ ಸಮುದಾಯ ಮುಸ್ಲಿಂ ಸಮುದಾಯ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ನಿಷ್ಪಾಪಿ ಮಕ್ಕಳ ಬದುಕಿಗೆ ಆಸರೆಯಾಗುವ ಮೂಲಕ ತಬಸ್ಸುಂ ಎಂಬ ಹೆಸರು ಸಮುದಾಯಕ್ಕೆ ಅಭಿಮಾನ.

ಅವರನ್ನು ಹಲವಾರು ಪ್ರಶಸ್ತಿಗಳೂ ಅರಸಿಕೊಂಡು ಬಂದಿವೆ. ಅವೆಲ್ಲಕ್ಕಿಂತ ಮಿಗಿಲಾಗಿ ಇಂತಹ ವಿಶಿಷ್ಟ ಮಾನವೀಯ ಸೇವೆ ಸಾಂಗವಾಗಿ ಮುಂದುವರಿಯಲು ನಾಗರಿಕ ಸಮಾಜದ ಬೆಂಬಲ ಅಗತ್ಯವಾಗಿ ಬೇಕಿದೆ.

(ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವ ಸ್ನೇಹದೀಪ ಸಂಸ್ಥೆಗೆ ನೆರವು ನೀಡಬಯಸುವವರು 099640-24655 ಇಲ್ಲಿಗೆ ಕರೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ)


ಇದನ್ನೂ ಓದಿ: ದಲಿತ ಬಾಲಕರ ಬರಿಗೈಯಲ್ಲಿ ಮಲ ಎತ್ತಿಸಿದ ಮೇಲ್ಜಾತಿಯ ಗುಂಪು – ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

0
'ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ' ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್...