Homeಕರ್ನಾಟಕವಿಧಾನಸಭಾ ಚುನಾವಣೆ ಅಪ್‌ಡೇಟ್ಸ್‌: ಎಲ್ಲೆಲ್ಲಿ ಏನಾಯ್ತು?

ವಿಧಾನಸಭಾ ಚುನಾವಣೆ ಅಪ್‌ಡೇಟ್ಸ್‌: ಎಲ್ಲೆಲ್ಲಿ ಏನಾಯ್ತು?

ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 52.18ರಷ್ಟು ಮತದಾನ ನಡೆದಿದ್ದು, ಕೆಲವೆಡೆ ಅಹಿತಕರ ವರದಿಗಳಾಗಿವೆ.

- Advertisement -
- Advertisement -

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 52.18ರಷ್ಟು ಮತದಾನ ನಡೆದಿದ್ದು, ಕೆಲವೆಡೆ ಅಹಿತಕರ ವರದಿಗಳಾಗಿವೆ.

ಮತಯಂತ್ರ, ವಿವಿ ಪ್ಯಾಡ್ ಧ್ವಂಸ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಅಧಿಕಾರಿಗಳು ಇವಿಎಂ ಬದಲಾಯಿಸುತ್ತಿದ್ದಾರೆ ಮತ್ತು ಮತದಾನ ಮುಗಿದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲೆಕ್ಟ್ರಾನಿಕ್ ಮತಯಂತ್ರ, ವಿವಿಪ್ಯಾಟ್ (ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳನ್ನು ಧ್ವಂಸಗೊಳಿಸಿದ್ದು, ಮತಗಟ್ಟೆ ಅಧಿಕಾರಿಗಳ ವಾಹನಗಳಿಗೆ ಹಾನಿ ಮಾಡಿದ್ದಾರೆ.

ಹೆಚ್ಚುವರಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಕಾರಿನಲ್ಲಿ ಸಾಗಿಸಲಾಗುತ್ತಿದ್ದಾಗ ಗ್ರಾಮಸ್ಥರು ಕಾರನ್ನು ತಡೆದಿದ್ದಾರೆ. ಆಕ್ರೋಶಗೊಂಡು ಇವಿಎಂಗಳನ್ನು ಒಡೆದು ಹಾಕಿದ್ದಾರೆ ಎಂಬ ವರದಿಯಾಗಿದೆ. ಈ ಸಂಬಂಧ 20-25 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ಕೈ’ ಕಾರ್ಯಕರ್ತರಿಗೆ ಸಿಕ್ಕಿಬಿದ್ದ ನಕಲಿ ಮತದಾರರು

ನಕಲಿ ಮತದಾನ ಮಾಡಲು ವಿಜಯಪುರಕ್ಕೆ ಬಂದಿದ್ದ ಚಿಂಚೋಳಿ ಗ್ರಾಮದ ಅಪಾರ ಸಂಖ್ಯೆಯ ಜನರು ವಿಜಯಪುರದ ಕಾಂಗ್ರೆಸ್ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಇವರನ್ನು ಕರೆತಂದಿದ್ದರು ಎಂಬ ಆರೋಪ ಬಂದಿದೆ.

ಮತದಾನ ಮಾಡಲು ಚಿಂಚೋಳಿಯಿಂದ ವಿಜಯಪುರಕ್ಕೆ ಬಸ್‌ಗಳಲ್ಲಿ ಬಂದಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲಾ ನಕಲಿ ಮತದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕೋಳಿ, ಸೀರೆ ಹಿಂತಿರುಗಿಸಿದ ಮತದಾರರು

ಸೀರೆ, ಕೋಳಿ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಮತದಾರರಿಗೆ ಆಮಿಷವೊಡ್ಡಲು ಬಿಜೆಪಿ ಅಭ್ಯರ್ಥಿ, ಸಚಿವ ನಾರಾಯಣ ಗೌಡ ಅವರು ಯತ್ನಿಸಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಎಲ್ಲ ವಸ್ತುಗಳನ್ನು ಹಿಂತಿರುಗಿಸಿ, ಬಿಜೆಪಿಗೆ ಮತದಾರರು ಧಿಕ್ಕಾರ ಕೂಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದೆ. “ನಮಗೆ ನಿಮ್ಮ ಭಿಕ್ಷೆ ಬೇಡ ನಾವು ಬಿಜೆಪಿಗೆ ಓಟು ಹಾಕುವುದಿಲ್ಲ” ಎಂದು ಮತದಾರರು ಹೇಳಿದ್ದಾರೆ.

ಮತದಾನ ಮಾಡಿ ವಾಪಸ್ ಬರುವಾಗ ಕಾಡಾನೆ ದಾಳಿ

ಮತದಾನ ಮಾಡಿ ವಾಪಸ್ ಬರುವಾಗ ಹನೂರು ತಾಲ್ಲೂಕಿನ ಮಲೆ‌ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿಸಿದ್ದಾರೆ. ಇಲ್ಲಿನ ತೋಕೆರೆ ಗ್ರಾಮದ ಪುಟ್ಟಸ್ವಾಮಿ (50) ಮೃತರು.

ಮತಗಟ್ಟೆ ಬಳಿ ವೃದ್ಧೆ ಸಾವು

ಬೆಳಗಾವಿ ಜಿಲ್ಲೆಯ ಕೋ.ಶಿವಾಪುರ ಸಮೀಪದಲ್ಲಿ ಯರಝರ್ವಿಯಲ್ಲಿ ಬುಧವಾರ ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪಾರವ್ವ ಈಶ್ವರ ಸಿದ್ನಾಳ(ಪನದಿ) (68) ಸಾವಿಗೀಡಾದವರು.

ತಡವಾಗಿ ಆರಂಭವಾದ ಮತದಾನ

ಹನೂರು ವಿಧಾನಸಭಾ ಕ್ಷೇತ್ರದ ನೆಲ್ಲಿಕತ್ರಿ ಗಿರಿಜನ ಹಾಡಿಯಲ್ಲಿ ನಾಲ್ಕು ಗಂಟೆ ತಡವಾಗಿ ಮತದಾನ ಆರಂಭವಾಗಿರುವ ಘಟನೆ ನಡೆದಿದೆ. “ನಮಗೆ ಕನಿಷ್ಠ ಮೂಲಸೌಕರ್ಯವಿಲ್ಲ. ನಮ್ಮ ಮನವಿಗೆ ಯಾರೂ ಸ್ಪಂಧಿಸಿಲ್ಲ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ” ಎಂದು ಇಲ್ಲಿನ ಮತದಾರರು ದೂರ ಉಳಿದಿದ್ದರು. ಅರಣ್ಯ ಇಲಾಖೆ ಹಾಗೂ ಗಿರಿಜನ ಕಲ್ಯಾಣ ಇಲಾಖೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಬೆಳಿಗ್ಗೆ 10:45ರವರ ಬಳಿಕ ಮತದಾನ ಆರಂಭವಾಯಿತು.

ಪ್ರತಿಸ್ಪರ್ಧಿಗಳ ಮೇಲೆ ಹಲ್ಲೆ

ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್‌ನಲ್ಲಿರುವ ಮತಗಟ್ಟೆಯೊಂದರಲ್ಲಿ ಕೆಲ ಯುವಕರು ಕೋಲು ಹಿಡಿದು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮತಗಟ್ಟೆಯಲ್ಲೇ ಮಹಿಳೆಗೆ ಸಹಜ ಹೆರಿಗೆ

ಮತದಾನ ಮಾಡಲು ಬಂದಿದ್ದ ಗರ್ಭಿಣಿಗೆ ಮತಗಟ್ಟೆ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾದ ಘಟನೆ ನಡೆದಿದೆ. ಕುರುಗೋಡು ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ಈ ಘಟನೆ ಜರುಗಿದೆ.

ಗ್ರಾಮದ ಮಣಿಲಾ ಎನ್ನುವ ತುಂಬು ಗರ್ಭಿಣಿ ಬೆಳಿಗ್ಗೆ 10 ಗಂಟೆಯ ವೇಳೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದರು. ನಂತರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೇಂದ್ರದಲ್ಲಿಯೇ ಸಹಜ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ತಾಯಿ, ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಇಬ್ಬರೂ ಆರೋಗ್ಯವಾಗಿದ್ದಾರೆ.

ವಿಧಾನಸಭೆ ಚುನಾವಣೆ | ಮತದಾನಕ್ಕೆ ಬಂದ ಮಹಿಳೆಗೆ ಕೇಂದ್ರದಲ್ಲಿಯೇ ಸಹಜ ಹೆರಿಗೆ
ಚಿತ್ರ ಕೃಪೆ: ಪ್ರಜಾವಾಣಿ

ಮತದಾರರ ಮೇಲೆ ಕೈ ಮಾಡಿದ ಸಿ.ಎಸ್.ಪುಟ್ಟರಾಜು

ಮಂಡ್ಯ ಜಿಲ್ಲೆಯಲ್ಲಿ ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊಮ್ಮಿರುವ ಮೇಲುಕೋಟೆಯಲ್ಲಿ ರೈತ ಸಂಘ ಮತ್ತು ಜೆಡಿಎಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನಾರಾಯಣಪುರ ಮತಗಟ್ಟೆಯಲ್ಲಿ ರೈತಸಂಘದ ಸದಸ್ಯರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಹಿರಿಯ ನಾಗರಿಕರನ್ನು ಕರೆತಂದು ಮತ ಹಾಕಿಸುವ ವಿಚಾರಕ್ಕೆ ಗಲಾಟೆಯಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಸಮ್ಮುಖದಲ್ಲೇ ಘಟನೆ ನಡಿದಿದ್ದು, ವಿಡಿಯೊ ಮಾಡುತ್ತಿದ್ದ ಇಬ್ಬರು ಯುವಕರಿಗೆ ಸಿ.ಎಸ್.ಪುಟ್ಟರಾಜು ಕಪಾಳಕ್ಕೆ ಹೊಡೆದಿದ್ದಾರೆ. ಪುಟ್ಟರಾಜು ವಿರುದ್ಧ ರೈತಸಂಘದ ಸದಸ್ಯರು ಘೋಷಣೆ ಕೂಗಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಇತ್ತು. ಸ್ಥಳಕ್ಕೆ ಬಂದ ಪೊಲೀಸರು ಗುಂಪು‌ ಚದುರಿಸಿದ್ದಾರೆ.

ಬಿಜೆಪಿ ಬಟನ್ ಒತ್ತಿ ಸಿಕ್ಕಿಬಿದ್ದ ಅಧಿಕಾರಿ

ಮತ ಹಾಕಲು ಸಹಕರಿಸಲು ಹೋಗಿದ್ದ ಅಧಿಕಾರಿ ಬಿಜೆಪಿ ಬಟನ್‌ ಒತ್ತಿರುವ ಘಟನೆ ಕಲುಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿದೆ. ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಉಗ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಮಹಿಳೆಯು ಕಾಂಗ್ರೆಸ್‌ ಬಟನ್ ಒತ್ತುವಂತೆ ಹೇಳಿದರೂ, ಅಧಿಕಾರಿ ಬಿಜೆಪಿ ಬಟನ್ ಒತ್ತಿರುವುದು ಬಯಲಾಗಿದೆ. ಚಿತ್ತಾಪುರ ತಾಲ್ಲೂಕಿನ ಚಾಮನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಕ್ಷಣಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಬಿ.ಸಿ. ಚವ್ಹಾಣ ಎಂಬ ಚುನಾವಣಾ ಅಧಿಕಾರಿ ಮೇಲೆ ಆರೋಪ ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆಯವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಚಿತ್ತಾಪುರ ಚುನಾವಣಾಧಿಕಾರಿ ನವೀನ್ ಕುಮಾರ್ ಯು. ಅವರು ಅಧಿಕಾರಿಯನ್ನು ಬದಲಾಯಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...