Homeಮುಖಪುಟಕಳೆದ 15 ವರ್ಷಗಳಲ್ಲಿ ಪುನರಾಯ್ಕೆಗೊಂಡಿರುವ 23 ಸಂಸದರ ಆಸ್ತಿ ಮೌಲ್ಯ ಸರಾಸರಿ ಶೇ.1,045ರಷ್ಟು ಏರಿಕೆ: ವರದಿ

ಕಳೆದ 15 ವರ್ಷಗಳಲ್ಲಿ ಪುನರಾಯ್ಕೆಗೊಂಡಿರುವ 23 ಸಂಸದರ ಆಸ್ತಿ ಮೌಲ್ಯ ಸರಾಸರಿ ಶೇ.1,045ರಷ್ಟು ಏರಿಕೆ: ವರದಿ

- Advertisement -
- Advertisement -

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ 2004ರಿಂದ ಪುನರಾಯ್ಕೆಗೊಳ್ಳುತ್ತಿರುವ 23 ಸಂಸದರ ಒಟ್ಟಾರೆ ಆಸ್ತಿ ಮೌಲ್ಯವು ರೂ. 35.18 ಕೋಟಿಯಿಂದ ರೂ. 402.79 ಕೋಟಿಗೆ ಏರಿಕೆಯಾಗಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ತಿಳಿಸಿದೆ.

ಎಡಿಆರ್ ಪ್ರಕಾರ, ಕರ್ನಾಟಕದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (ವಿಜಯಪುರ) ಯವರ ಆಸ್ತಿ ಮೌಲ್ಯ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ. 9,098ರಷ್ಟು ಏರಿಕೆಯಾಗಿದೆ. 2004ರಲ್ಲಿ ರೂ. 54.8 ಲಕ್ಷದಷ್ಟಿದ್ದ ಇವರ ಆಸ್ತಿ ಮೌಲ್ಯವು 2019ರ ವೇಳೆಗೆ ರೂ. 50.41 ಕೋಟಿಯಷ್ಟಾಗಿದ್ದು, ಆ ಮೂಲಕ ರೂ. 49.86 ಕೋಟಿ ಏರಿಕೆಯಾದಂತಾಗಿದೆ.

ವರದಿಯಲ್ಲಿ ಕರ್ನಾಟಕದ ಇನ್ನೂ ಐವರು ಸಂಸದರ ಹೆಸರಿದೆ. ಇವರೆಲ್ಲರೂ ಬಿಜೆಪಿಯವರಾಗಿದ್ದು, 2004ರಿಂದ ಆಯ್ಕೆಯಾಗುತ್ತಿದ್ದಾರೆ. ಈ ಸಂಸದರ ಆಸ್ತಿ ಮೌಲ್ಯವು ವರದಿಯಲ್ಲಿ ಉಲ್ಲೇಖಿಸಿರುವ ಇತರ ಎಲ್ಲಾ ರಾಜ್ಯಗಳ ಸಂಸದರಿಗಿಂತ ಹೆಚ್ಚಿದೆ.

ಸಂಸದ ಜಿ.ಎಂ.ಸಿದ್ದೇಶ್ವರ್ (ದಾವಣಗೆರೆ) ಆಸ್ತಿ ಮೌಲ್ಯವು ರೂ. 5.02 ಕೋಟಿಯಿಂದ ರೂ. 38.01 ಕೋಟಿಗೆ (ಶೇ. 656), ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ) ಆಸ್ತಿ ಮೌಲ್ಯವು ರೂ. 46.39 ಲಕ್ಷದಿಂದ ರೂ. 20.93 ಕೋಟಿಗೆ (ಶೇ. 4,413), ಕೇಂದ್ರ ಸಚಿವ ಪಹ್ಲಾದ್ ಜೋಶಿ (ಧಾರವಾಡ) ಆಸ್ತಿ ಮೌಲ್ಯ ರೂ. 77.60 ಲಕ್ಷದಿಂದ ರೂ. 11.13 ಕೋಟಿಗೆ (ಶೇ. 1,33), ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ) ಆಸ್ತಿ ಮೌಲ್ಯವು ರೂ. 12.06 ಲಕ್ಷದಿಂದ ರೂ. 8.47 ಕೋಟಿಗೆ (ಶೇ. 6,928) ಹಾಗೂ ಪಿ.ಸಿ.ಗದ್ದಿಗೌಡರ್ (ಬಾಗಲಕೋಟೆ) ಆಸ್ತಿ ಮೌಲ್ಯವು ರೂ. 53.75 ಲಕ್ಷದಿಂದ ರೂ. 4.39 ಕೋಟಿಗೆ (ಶೇ. 718) ಏರಿಕೆ ಕಂಡಿದೆ.

2004ರಿಂದ ಪುನರಾಯ್ಕೆಗೊಂಡಿರುವ 23 ಸಂಸದರ ಪೈಕಿ 17 ಸಂಸದರು ಬಿಜೆಪಿಗೆ ಸೇರಿದ್ದರೆ, ಮೂವರು ಸಂಸದರು ಕಾಂಗ್ರೆಸ್ ಪಕ್ಷಕ್ಕೆ, ಎಐಎಂಐಎಂ, ಶಿವಸೇನೆ ಹಾಗೂ ಬಿಜೆಡಿಗೆ ಸೇರಿದ ತಲಾ ಓರ್ವ ಸಂಸದರಿದ್ದಾರೆ. ಈ ಎಲ್ಲಾ ಸಂಸದರ ಸರಾಸರಿ ಆಸ್ತಿ ಮೌಲ್ಯವು 2004ರಲ್ಲಿ 1.52 ಕೋಟಿಯಾಗಿದ್ದರೆ, 2009ರಲ್ಲಿ 3.46 ಕೋಟಿಗೆ, 2014ರಲ್ಲಿ 9.85 ಕೋಟಿಗೆ ಹಾಗೂ 2019ರಲ್ಲಿ ರೂ. 17.51 ಕೋಟಿಗೆ ಏರಿಕೆಯಾಗಿದೆ.

ಸಂಸದರ ಸರಾಸರಿ ಆಸ್ತಿ ಮೌಲ್ಯದ ಏರಿಕೆ ರೂ. 15.98 ಕೋಟಿ ಅಥವಾ ಶೇ. 1,045ರಷ್ಟಾಗಿದೆ ಎಂಬ ವಿಷಯವನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ.

ರಮೇಶ್ ಜಿಗಿಜಿಣಗಿ ಬಳಿಕ ಬಿಜೆಪಿ ಸಂದದೆ ಮೇನಕಾ ಗಾಂಧಿ (ಸುಲ್ತಾನ್‌ಪುರ್) ಅವರ ಆಸ್ತಿ ಮೌಲ್ಯದಲ್ಲಿ ಭಾರೀ ಹೆಚ್ಚಳದ ಕಂಡಿದೆ. ಮೇನಕಾ ಅವರ ಆಸ್ತಿ ಮೌಲ್ಯ ರೂ. 6.66 ಕೋಟಿಯಿಂದ ರೂ. 55.69 ಕೋಟಿಗೆ ಅಥವಾ ಶೇ. 735ರಷ್ಟು ಏರಿಕೆಯಾಗಿದೆ. ಬಿಜೆಪಿಯ ರಾವ್ ಇಂದರ್‌ಜಿತ್ ಸಿಂಗ್ (ಗುರ್‌ಗಾಂವ್) ನಂತರದ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ ರೂ. 5.51 ಕೋಟಿಯಿಂದ ರೂ 42.09 ಕೋಟಿಗೆ (ಶೇ. 664) ಹೆಚ್ಚಳವಾಗಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯ 2004 ರಲ್ಲಿ ರೂ. 55.38 ಲಕ್ಷದಿಂದ 2009 ರಲ್ಲಿ ರೂ. 2.32 ಕೋಟಿಗೆ, 2014 ರಲ್ಲಿ ರೂ. 9.4 ಕೋಟಿ ಮತ್ತು 2019ರಲ್ಲಿ ರೂ. 15.88 ಕೋಟಿಗೆ ಏರಿಕೆಯಾಗಿದೆ. ಕಳೆದ15 ವರ್ಷಗಳಲ್ಲಿ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯದಲ್ಲಿ ಶೇ. 2,769ರಷ್ಟು ಏರಿಕೆ ಕಂಡಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಸ್ತಿ ಮೌಲ್ಯ ರೂ. 85.68 ಲಕ್ಷದಿಂದ ರೂ.11.82 ಕೋಟಿಗೆ (ಶೇ.1,280ರಷ್ಟು) ಏರಿಕೆ ಕಂಡಿದೆ.

ಪಟ್ಟಿಯಲ್ಲಿ ಮೂರನೇ ಕಾಂಗ್ರೆಸ್ ಸಂಸದರಾಗಿ ಪಕ್ಷದ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ ಅವರ ಹೆಸರಿದೆ. ಚೌಧರಿಯವರ ಆಸ್ತಿ ಮೌಲ್ಯ1.93 ಕೋಟಿಯಿಂದ 10.13 ಕೋಟಿಗೆ ( ಶೇ.422) ಏರಿಕೆಯಾಗಿದೆ.

ವಿಶ್ಲೇಷಣೆಯ ಪ್ರಕಾರ, ಈ ಪಟ್ಟಿಯಲ್ಲಿರುವ ಒಂಬತ್ತು ಸಂಸದರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. ಅಲ್ಲದೆ, ಪಟ್ಟಿಯಲ್ಲಿ ಮೂವರು ಮಹಿಳಾ ಸಂಸದರು ಮಾತ್ರ ಇದ್ದು, ಈ ಪೈಕಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಬಿಜೆಪಿಯ ಮೇನಕಾ ಗಾಂಧಿ ಹಾಗೂ ಶಿವಸೇನೆಯ ಭವಾನ ಗೌಳಿ (ಯವತ್ಮಲ್ ವಾಶಿಂ) ಸೇರಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ನ ಬ್ಯಾಂಕ್ ಖಾತೆಯಿಂದ ಬಿಜೆಪಿ ಹಣ ಕಳ್ಳತನ ಮಾಡುತ್ತಿದೆ: ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...