Homeಮುಖಪುಟಪ್ರತಿಪಕ್ಷಗಳ ಒಗ್ಗಟ್ಟನ್ನು ಬಲಪಡಿಸಿದ 'ಲೋಕತಂತ್ರ ಬಚಾವೋ' ರ್‍ಯಾಲಿ: ಯಾವ್ಯಾವ ನಾಯಕರು ಏನೇನು ಹೇಳಿದ್ರು?

ಪ್ರತಿಪಕ್ಷಗಳ ಒಗ್ಗಟ್ಟನ್ನು ಬಲಪಡಿಸಿದ ‘ಲೋಕತಂತ್ರ ಬಚಾವೋ’ ರ್‍ಯಾಲಿ: ಯಾವ್ಯಾವ ನಾಯಕರು ಏನೇನು ಹೇಳಿದ್ರು?

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ, ಜಾರಿ ನಿರ್ದೇಶನಾಲಯ, ಐಟಿ ಇಲಾಖೆಗಳ ದುರ್ಬಳಕೆ ವಿರೋಧಿಸಿ ಪ್ರತಿಪಕ್ಷಗಳು ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ‘ಲೋಕತಂತ್ರ ಬಚಾವೋ’ ಅಥವಾ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿಯು ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ  ಸಾಕ್ಷಿಯಾಗಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರಚಾರಕ್ಕೆ ಹೊಸ ಹಾದಿಯನ್ನು ತೋರಿಸಿದೆ.

ಇಂಡಿಯಾ ಮೈತ್ರಿಕೂಟದ ಪ್ರತಿಯೊಬ್ಬ ನಾಯಕರು ಪರಸ್ಪರ ಭಿನ್ನಾಭಿಪ್ರಾಯಗಳ ನಡುವೆಯೂ ಒಗ್ಗೂಡುವ ಅಗತ್ಯವನ್ನು ಒತ್ತಿಹೇಳಿದರು, ಅವರು ಭಾರತದಲ್ಲಿ ಪ್ರಜಾಪ್ರಭುತ್ವದ ಹಿನ್ನೆಡೆ ಮತ್ತು ಭಾರತದ ಬಹುಕಾಲದ ಸ್ವಾಯತ್ತ ಸಂಸ್ಥೆಗಳ ಬಲಪಂಥೀಯ ಸ್ವಾಧೀನದ ಬಗ್ಗೆ ಮಾತನಾಡಲು ರಾಜಕೀಯ ಒಗ್ಗಟ್ಟಿನ ಅಗತ್ಯತೆ ಬಗ್ಗೆ ಹೇಳಿದ್ದಾರೆ.

ಶಿವಸೇನಾ ಬಣದ ನಾಯಕ ಉದ್ಧವ್ ಠಾಕ್ರೆ ಮಾತನಾಡಿ, ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಅಗತ್ಯದ ಬಗ್ಗೆ ಮಾತನಾಡಿದರು ಮತ್ತು ದೇಶದಲ್ಲಿ ಒಂದು ಪಕ್ಷ, ಒಬ್ಬ ವ್ಯಕ್ತಿ ಆಡಳಿತವನ್ನು ನಡೆಸಿದ್ದು ಭಾರತ ದುರ್ಬಲಗೊಳ್ಳಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ನಾಯಕಿ ಮೆಹಬೂಬಾ ಮುಫ್ತಿ ಮಾತನಾಡಿ, ವಿರೋಧ ಪಕ್ಷದ ನಾಯಕರನ್ನು ಹೇಗೆ ಲೀಗಲ್‌ ಸ್ಕ್ಯಾನರ್ ಅಡಿಯಲ್ಲಿ ಇರಿಸಲಾಗುತ್ತಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಬಿಜೆಪಿ ಭ್ರಷ್ಟರೆಂದು ಕರೆದಿದ್ದವರು ಈಗ ಬಿಜೆಪಿಯಲ್ಲಿದ್ದಾರೆ. ನಾವು ಎಲ್ಲವನ್ನೂ ನೋಡಿದ್ದೇವೆ. ನಾವೂ ಸಹ ಎಲ್ಲವನ್ನೂ ಅನುಭವಿಸಿದ್ದೇವೆ. ಈ ಸರ್ಕಾರವನ್ನು ಟೀಕಿಸುವುದರಲ್ಲಿ ಎಷ್ಟು ದಿನ ಕಳೆಯುತ್ತೇವೆ? ಅದಕ್ಕಾಗಿಯೇ ನನ್ನ ಕರೆ ಅಬ್ಕಿ ಬಾರ್, ಬಿಜೆಪಿ ತಡಿಪಾರ್ ಎಂದು ಠಾಕ್ರೆ ಹರ್ಷೋದ್ಗಾರದ ನಡುವೆ ಹೇಳಿದರು.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಮಾತನಾಡಿ, ನಾವು ನಿಜವಾಗಿಯೂ ರಾಮನ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಅವರು ನೀತಿ, ನಿಯಮ, ತಾಳ್ಮೆಯನ್ನು ಗೌರವಿಸಿದರು. ‘ಜಾರ್ಖಂಡ್ ತಲೆಬಾಗುವುದಿಲ್ಲ, ಇಂಡಿಯಾ ತಲೆಬಾಗುವುದಿಲ್ಲ, ಇಂಡಿಯಾ ಮೈತ್ರಿಕೂಟವನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಸಮಾರಂಭದಲ್ಲಿ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಮಾತನಾಡಿ, ಕೇಜ್ರಿವಾಲ್ ಭ್ರಷ್ಟ ಎಂದು ಅವರು ನಿಜವಾಗಿಯೂ ನಂಬುತ್ತೀರಾ ಎಂದು ಸಭೆಯನ್ನು ಕೇಳಿದರು. ನಾನೂ ಕೇಜ್ರಿವಾಲ್ ಎಂದು ಪ್ರೇಕ್ಷಕರು ಈ ವೇಳೆ ಪ್ರತಿಕ್ರಿಯಿಸಿದರು. ಅವರು ಜೈಲಿನಿಂದ ಕೇಜ್ರಿವಾಲ್ ಕಳುಹಿಸಿದ ಸಂದೇಶವನ್ನು ಓದಿದ್ದಾರೆ. ನಾನು ಭಾರತದ ಜನರಿಗಾಗಿ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ ಮತ್ತು ಬಡವರು ಮತ್ತು ಶ್ರೀಮಂತರು ಎಲ್ಲರೂ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯವನ್ನು ಪಡೆಯುವ ಭಾರತದ ಬಗ್ಗೆ ಕನಸು ಕಾಣುತ್ತೇನೆ ಎಂದು ಸುನೀತಾ ಓದಿದರು.

ಇಂಡಿಯಾ ಮೈತ್ರಿಕೂಟದ ಗುಂಪಿನ ಯುವ ನಾಯಕರಾದ ಅಖಿಲೇಶ್ ಯಾದವ್ ಮತ್ತು ತೇಜಸ್ವಿ ಯಾದವ್ ಪ್ರೇಕ್ಷಕರಿಂದ ದೊಡ್ಡ ಚಪ್ಪಾಳೆ ಗಿಟ್ಟಿಸಿದರು. ಮೋದಿ ಜಿ ಅವರಿಗೆ ಪ್ರಿಯಾಂಕಾ ಚೋಪ್ರಾ ಅವರನ್ನು ಭೇಟಿ ಮಾಡಲು ಸಮಯವಿದೆ ಆದರೆ ರೈತರನ್ನು, ಬಡವರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ತೇಜಸ್ವಿ ಹೇಳಿದರು. ಮೋದಿಯವರ ಭರವಸೆಗಳು ಆ ಅಗ್ಗದ ಚೀನೀ ಸರಕುಗಳಂತಿವೆ, ವಾರಂಟಿ ಅವಧಿಗಳು ಕೇವಲ ಎರಡು ಅಥವಾ ಮೂರು ತಿಂಗಳುಗಳವರೆಗೆ ಇರುತ್ತದೆ. ಕೇವಲ 17 ತಿಂಗಳಲ್ಲಿ ಬಿಹಾರದಲ್ಲಿ ಯುವಕರಿಗೆ ಐದು ಲಕ್ಷ ಉದ್ಯೋಗ ನೀಡಿದ್ದೇವೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳ ಮೋದಿಯವರ ಭರವಸೆ ಏನಾಯಿತು? ಎಂದು ಅವರು ಕೇಳಿದ್ದು, ಭಾರತೀಯರು ಅಘೋಷಿತ ತುರ್ತುಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಾತನಾಡಿ, ಭಾರತದಲ್ಲಿ ಚುನಾಯಿತ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಲಾಗುತ್ತದೆ. ಸರ್ಕಾರ ಮತ್ತು ಬಿಜೆಪಿ ಎಷ್ಟು ಸುಳ್ಳು ಹೇಳುತ್ತದೆ ಎಂದರೆ ನಾವು ಅವರನ್ನು ಬ್ರಹ್ಮಾಂಡದ ದೊಡ್ಡ ಸುಳ್ಳುಗಾರರು ಎಂದು ಕರೆಯಬಹುದು. ಬಿಜೆಪಿ ಮತ್ತು ಅದರ ಸರ್ಕಾರವು ಭಾರತದ ಬಹುಕಾಲದ ಜಾಗತಿಕ ಪ್ರತಿಷ್ಠೆಯನ್ನು ಹಾಳು ಮಾಡಿದೆ. ಹಿಂದುಳಿದ, ದಲಿತರು ಮತ್ತು ಆದಿವಾಸಿಗಳು ಈ ಬಾರಿ ಅವರನ್ನು ಸೋಲಿಸುತ್ತಾರೆ. ನಾವೆಲ್ಲರೂ ಪೂರ್ಣ ಬಲದಿಂದ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಎಂದು ಹೇಳಿದ್ದಾರೆ.

ಸಿಪಿಐಎಂ(ಎಲ್)ನ ದೀಪಂಕರ್ ಭಟ್ಟಾಚಾರ್ಯ ಅವರು ಮಾತನಾಡಿ, ಉನ್ನತ ನಾಯಕರು ಮಾತ್ರವಲ್ಲದೆ, ತಮ್ಮ ಪಕ್ಷದ ಶಾಸಕ ಮನೋಜ್ ಮಂಜಿಲ್ ಅವರಂತೆ ವಿರೋಧ ಪಕ್ಷದ ತಳಮಟ್ಟದ ನಾಯಕರನ್ನು ಕೂಡ ತಪ್ಪಾಗಿ ಶಿಕ್ಷೆಗೆ ಗುರಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಸಿಪಿಐ(ಎಂ)ನ ಸೀತಾರಾಂ ಯೆಚೂರಿ ಅವರು ಮಾತನಾಡಿ, ನಿರಂಕುಶ ಪ್ರಭುತ್ವವನ್ನು ಕಿತ್ತೊಗೆಯಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಸಮಾಜವಾದಿ ನಾಯಕ ‘ಸಂಪೂರ್ಣ ಕ್ರಾಂತಿ’ಗೆ ಕರೆ ನೀಡಿದ್ದ ಜಯಪ್ರಕಾಶ ನಾರಾಯಣ ಚಳವಳಿಯ ಬಗ್ಗೆ ಜನಸಮೂಹವನ್ನು ನೆನಪಿಸಿದರು. ಮಹಾರಾಷ್ಟ್ರದ ಹಿರಿಯ ನಾಯಕ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ಸರಕಾರಿ ಸಂಸ್ಥೆಗಳು ಮತ್ತು ವಿರೋಧ ಪಕ್ಷದ ನಾಯಕರು ಹೇಗೆ ದಾಳಿಗೆ ಒಳಗಾಗಿದ್ದಾರೆ ಎಂಬುದರ ಕುರಿತು ಮಾತನಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್ ಮಾತನಾಡಿ, ಟಿಎಂಸಿ ಇಂಡಿಯಾ ಮೈತ್ರಿಕೂಟದ ಭಾಗವಾಗಿತ್ತು, ಇದೆ ಮತ್ತು ಇರುತ್ತದೆ ಎಂದು ಹೇಳಲು ನಾನು ಇಲ್ಲಿದ್ದೇನೆ. ಇದು ಬಿಜೆಪಿ ಮತ್ತು ಪ್ರಜಾಪ್ರಭುತ್ವದ ನಡುವಿನ ಹೋರಾಟವಾಗಿದೆ ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಮ್ಯಾಚ್ ಫಿಕ್ಸಿಂಗ್” ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅವರು ಅಂಪೈರ್‌ಗಳನ್ನು ಆಯ್ಕೆ ಮಾಡಿದ್ದಾರೆ; ಅವರು ಈ ಬಾರಿ, ನಾವು 400 ದಾಟುತ್ತೇವೆ ಎಂದು ಕರೆಗಳನ್ನು ನೀಡುತ್ತಿದ್ದಾರೆ, ಇದು ಮ್ಯಾಚ್‌ಫಿಕ್ಸಿಂಗ್‌ ಮಾಡ್ತಾರ ಎಂಬ ಬಗ್ಗೆ ಆಶ್ಚರ್ಯ ಉಂಟು ಮಾಡಿದೆ. ಏಕೆಂದರೆ ನಾನು ಅರ್ಥಮಾಡಿಕೊಂಡಂತೆ ಈ ಬಾರಿ ಬಿಜೆಪಿ 180 ದಾಟುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಚುನಾವಣೆಗೆ ಕೇವಲ ಎರಡು ತಿಂಗಳ ಮೊದಲು  ಬಂಧಿಸಲಾಗಿದೆ, ಆರು ತಿಂಗಳ ಹಿಂದೆ ಬಂದಿಸಿಲ್ಲ, ಏಕೆಂದರೆ ಬಿಜೆಪಿ ನಮ್ಮನ್ನು ಪ್ರಚಾರ ಮಾಡದಂತೆ ತಡೆಯಲು ಬಯಸುತ್ತದೆ. ಇವೆಲ್ಲವೂ ನಮ್ಮ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುವ ತಂತ್ರವಾಗಿದೆ. ಸಂವಿಧಾನವು ಭಾರತೀಯ ಜನರ ಹೃದಯ ಬಡಿತವಾಗಿದೆ ಎಂದು ಹೇಳಿದ್ದಾರೆ.

ನಾನು ಈ ಹಂತದಿಂದ ಹೇಳಲು ಬಯಸುತ್ತೇನೆ, ಅವರು ಮಾದ್ಯಮದ ಧ್ವನಿಯನ್ನು ಕಸಿದುಕೊಳ್ಳಬಹುದು ಆದರೆ ಭಾರತೀಯ ಜನರನ್ನು ಮಾತನಾಡದಂತೆ ತಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಮ್ಯಾಚ್ ಫಿಕ್ಸಿಂಗ್‌ನ್ನು ನಿಲ್ಲಿಸಬೇಕಾದರೆ, ನಾವು ಅವರ ವಿರುದ್ಧ ಪೂರ್ಣ ಶಕ್ತಿಯಿಂದ ಹೊರಬಂದು ಮತ ಚಲಾಯಿಸಬೇಕು. ಅವರ ತಂತ್ರಗಳಲ್ಲಿ ಅವರನ್ನು ಯಶಸ್ವಿಯಾಗಲು ಬಿಡಬೇಡಿ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸೋನಿಯಾ ಗಾಂಧಿ, ನಾಯಕರು ಮಾತನಾಡುತ್ತಿದ್ದಂತೆ ವೇದಿಕೆಯ ಮೇಲೆ ತೆರಳಿ ಕಲ್ಪನಾ ಸೊರೆನ್ ಮತ್ತು ಸುನೀತಾ ಕೇಜ್ರಿವಾಲ್ ನಡುವೆ ಒಗ್ಗಟ್ಟಿನ ಸಂಕೇತವಾಗಿ ಕುಳಿತುಕೊಂಡರು. ಹಿರಿಯ ನಾಯಕರುಗಳಾದ ಫಾರೂಕ್ ಅಬ್ದುಲ್ಲಾ, ಡಿ. ರಾಜಾ, ತಿರುಚಿ ಶಿವ, ತೋಲ್ ತಿರುಮಾವಲನ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಮತ್ತು ಇತರರು ಮೋದಿ ಆಡಳಿತವನ್ನು ಮೋದಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿ “ಭಾರತೀಯ ಪ್ರಜಾಪ್ರಭುತ್ವವನ್ನು ಉಳಿಸಿ” ಎಂದು ಜನರಿಗೆ ಕರೆ ನೀಡಿದ್ದಾರೆ. ನಮ್ಮ ದೇಶವು ಯಾರೊಬ್ಬರ ಸ್ವತ್ತಲ್ಲ ಎಂದು ನಾನು ಈ ನಿರಂಕುಶಾಧಿಕಾರಿಗಳಿಗೆ ಹೇಳಲು ಬಯಸುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ಭಗವಂತ್‌ ಮಾನ್ ಹೇಳಿದ್ದಾರೆ.

ಜಾರ್ಖಂಡ್ ಜನಮುಕ್ತಿ ಮೋರ್ಚಾದ ಚಂಪೈ ಸೊರೆನ್ ಮಾತನಾಡಿ, ಆದಿವಾಸಿ ಸಮುದಾಯಗಳಲ್ಲಿ ಅವರ ಪೂರ್ವಜರು ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಡಿದ ಇತಿಹಾಸವನ್ನು ಹೊಂದಿದ್ದಾರೆ. ನಾವು ಮತ್ತೆ ಅದೇ ಹೊರಾಟವನ್ನು ಮಾಡುತ್ತೇವೆ ಆದರೆ ಇದು ನಮ್ಮ ಮತಗಳ ಮಾಧ್ಯಮದ ಮೂಲಕ ಆಗುತ್ತದೆ. ಇದು ನಮ್ಮ ನ್ಯಾಯಕ್ಕಾಗಿ ಹೋರಾಟವಾಗಿದೆ ಎಂದು ಸೋರೆನ್ ಹೇಳಿದ್ದಾರೆ.

ಹಿಂದೂ ದೇವರಾದ ರಾಮನು, ರಾವಣನ ವಿರುದ್ಧ ಹೋರಾಡಿದಾಗ ಅವನಿಗೆ ಶಕ್ತಿ ಇರಲಿಲ್ಲ, ಆದರೆ ರಾವಣನಿಗೆ ಚಿನ್ನದ ಲಂಕಾ ಇತ್ತು.  ರಾಮನು ಸತ್ಯ ಮತ್ತು ನ್ಯಾಯಕ್ಕಾಗಿ ನಿಂತಿದ್ದಾನೆ. ನಾವು ಅದೇ ಮಾದರಿಯನ್ನು ಅನುಸರಿಸುತ್ತೇವೆ, ಎಂದು  ಪ್ರಿಯಾಂಕಾ ಗಾಂಧಿ ಹೇಳಿದರು.

ಕೊನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,  ಭಗವಂತ್‌ ಮಾನ್ ಮತ್ತು ಓ’ಬ್ರೇನ್ ಅವರನ್ನು ನೋಡುತ್ತಾ, ಈ ಸರ್ವಾಧಿಕಾರಿ ಆಡಳಿತದ ವಿರುದ್ಧ ಇಂಡಿಯಾ ಮೈತ್ರಿ ಪಕ್ಷಗಳು ಮೊದಲು ಒಟ್ಟಾಗಿ ನಿಲ್ಲುವ ಅಗತ್ಯವಿದೆ. ನಮ್ಮ ಪರಸ್ಪರ ಭಿನ್ನಾಭಿಪ್ರಾಯಗಳು ನಮ್ಮ ಮೈತ್ರಿಯನ್ನು ಹಾಳುಗೆಡವಲು ನಾವು ಬಿಡುವುದಿಲ್ಲ ಏಕೆಂದರೆ ಈ ಹೋರಾಟವು ಕೇವಲ ಒಂದು ಚುನಾವಣೆಗೆ ಮಾತ್ರವಲ್ಲ, ದೊಡ್ಡ ಕಾರಣಕ್ಕಾಗಿದೆ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳು ಒಂದಾಗಬೇಕು. ಭಾರತದಲ್ಲಿ ಕಾಣುವ ವಿವಿಧತೆಯಲ್ಲಿ ಏಕತೆಯನ್ನು ನಮ್ಮ ಮೈತ್ರಿಯಲ್ಲೂ ಕಾಣಬೇಕಿದೆ. ಆರೆಸ್ಸೆಸ್-ಬಿಜೆಪಿ ವಿಷ ಎಂಬುವುದು ನೆನಪಿರಲಿ. ನೀವು ಅದನ್ನು ಒಮ್ಮೆಯೂ ನೆಕ್ಕಲು ಸಾಧ್ಯವಿಲ್ಲ. ಅದು ಕೂಡ ನಿನಗೆ ಸಾವನ್ನು ತರುತ್ತದೆ. ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಾವು ಮೊದಲು ಹೇಗೆ ಒಗ್ಗಟ್ಟಿನ ಶಕ್ತಿಯಾಗಬೇಕೆಂದು ಕಲಿಯಬೇಕು. ಒಬ್ಬರನ್ನೊಬ್ಬರು ಮೆಟ್ಟಿ ನಿಲ್ಲುವುದರಿಂದ ನಾವು ಏನನ್ನೂ ಪಡೆಯುವುದಿಲ್ಲ. ನಮ್ಮ ಹೋರಾಟ ಒಬ್ಬ ವ್ಯಕ್ತಿಯ ಬಗ್ಗೆ ಇರಬಾರದು. ಇದು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದನ್ನು ಓದಿ: ನೀರಿನ ಬಕೆಟ್‌ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...