Homeಕರ್ನಾಟಕ'ಬೆಂಗಳೂರು ಬಂದ್‌ಗೆ ಅವಕಾಶವಿಲ್ಲ': ಪೊಲೀಸ್ ಕಮಿಷನರ್ ಬಿ.ದಯಾನಂದ್

‘ಬೆಂಗಳೂರು ಬಂದ್‌ಗೆ ಅವಕಾಶವಿಲ್ಲ’: ಪೊಲೀಸ್ ಕಮಿಷನರ್ ಬಿ.ದಯಾನಂದ್

- Advertisement -
- Advertisement -

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ, ಕನ್ನಡ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್​​ಗೆ ಕರೆ ನೀಡಿವೆ. ಆದರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ‘ಬೆಂಗಳೂರು ಬಂದ್‌ಗೆ ಅವಕಾಶವಿಲ್ಲʼ ಎಂದು ಹೇಳಿದ್ದಾರೆ.

ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ”ನಾಳೆ ಬಂದ್‌ಗೆ ಅವಕಾಶ ಇಲ್ಲ, ಅನುಮತಿ ಕೊಡಲ್ಲ ಎಂದು ಸಂಘಟಕರಿಗೆ ಸೂಚಿಸಿದ್ದೇವೆ. ನಾಳೆ ಒತ್ತಾಯ ಪೂರ್ವಕ ಬಂದ್ ಮಾಡಿಸಿದರೆ ಕ್ರಮ ಖಚಿತ” ಎಂದು ಎಚ್ಚರಿಕೆ ನೀಡಿದ್ದಾರೆ.

”ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸೆ.25ರ ಮಧ್ಯರಾತ್ರಿಯಿಂದ 26ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಇರಲಿದೆ” ಎಂದು ತಿಳಿಸಿದರು.

”2016 ರಲ್ಲಿ ನಡೆದ ಘಟನೆ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಬಸ್ ಗಳಿಗೆ ಭದ್ರತೆ ನೀಡೋದರ ಬಗ್ಗೆಯೂ ಚರ್ಚೆ ಮಾಡಲಾಗ್ತಾ ಇದೆ, ತಮಿಳುನಾಡು ಬಸ್ ಗಳಿಗೂ ಭದ್ರತೆ ಬೇಕು ಅಂದ್ರೆ ಕೊಡುತ್ತೇವೆ” ಎಂದು ಹೇಳಿದರು.

ಈ ಕುರಿತು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ (ಡಿಡಿಪಿಐ) ಸೂಚನೆ ನೀಡಿರುವ ಜಿಲ್ಲಾಧಿಕಾರಿ ದಯಾನಂದ್‌ ಅವರು, ನಾಳೆ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲು ಶಿಫಾರಸ್ಸು ಮಾಡಿದ್ದರಿಂದ ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಖಾಸಗಿ ಶಾಲೆಗಳ ಒಕ್ಕೂಟದಿಂದ ಬೆಂಗಳೂರಿನ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ಎಲ್​ಕೆಜಿ ಯಿಂದ 10ನೇ ತರಗತಿಯವರೆಗೆ ಈ ಕುರಿತಾಗಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಂದಿನಂತೆ ಶಾಲಾ-ಕಾಲೇಜು ಇರಲಿವೆ. ಜೊತೆಗೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ: ನಾಳೆ ಬೆಂಗಳೂರು, ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆ: ಯಾವ ಸೌಲಭ್ಯ ಇರಲಿದೆ, ಏನಿರಲ್ಲ- ಮಾಹಿತಿ ಇಲ್ಲಿದೆ…

ಇನ್ನು ಬೆಂಗಳೂರು ನಗರ ಬಂದ್​ಗೆ ಬೆಂಬಲಿಸುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ. ಒಕ್ಕೂಟದ 37 ಸಂಘಟನೆಗಳು ನಾಳೆಯ ಬಂದ್​ನಲ್ಲಿ ಭಾಗಿಯಾಗಲಿವೆ. ಬಿಎಂಟಿಸಿ ಕೂಡ ತಮ್ಮ ಬಂದ್​ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಹಾಗಾಗಿ ಸಂಚಾರ ವ್ಯವಸ್ಥೆ ಕೂಡ ಅಸ್ತವ್ಯಸ್ಥವಾಗಲಿದೆ.

ಬೆಂಗಳೂರು ಮತ್ತು ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ: ಕರ್ನಾಟಕ ರಕ್ಷಣಾ ವೇದಿಕೆ

ವಿವಿಧ ಸಂಘಟನೆಗಳು ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್ ಮತ್ತು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಎರಡೂ ಬಂದ್‌ಗಳಿಗೆ ನಾವು ಬೆಂಬಲ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಅಧಿಕೃತ ಪತ್ರ ಬರೆದಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಕಾವೇರಿ ನೀರು ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ, ಆದರೆ ಯಾವುದೇ ಬಂದ್‌ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಸಭೆ ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ಉನ್ನತಾಧಿಕಾರ ಸಮಿತಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಬಂದ್‌ಗೆ ಬೆಂಬಲ ನೀಡದೇ ಇರಲು ಕಾರಣಗಳನ್ನು ಕೂಡ ಕರವೇ ನೀಡಿದೆ.

ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ಮತ್ತು 29ರಂದು ಹಲವು ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್, ಕರ್ನಾಟಕ ಬಂದ್ ಇತ್ಯಾದಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ. ಆದರೆ ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟ ಪ್ರತಿದಿನವೂ ನಡೆಯಲಿದ್ದು, ಸೆಪ್ಟೆಂಬರ್ 26ರಂದು ಮಂಗಳವಾರ ವೇದಿಕೆಯ ಗಾಂಧಿನಗರ ಕಚೇರಿ ಆವರಣದಿಂದ ವೇದಿಕೆ ಕಾರ್ಯಕರ್ತರು ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಯಾವುದೇ ಚಳವಳಿ ಕೈಗೆತ್ತಿಕೊಂಡರೂ ಜನಜಾಗೃತಿ ಮೂಡಿಸುವುದನ್ನು ಮೊದಲನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತದೆ. ದಿಢೀರನೆ ಬಂದ್‌ಗೆ ಕರೆ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ಒಪ್ಪಲ್ಲ, ಬಂದ್ ಹೋರಾಟದ ಕೊನೆಯ ಅಸ್ತ್ರವಾಗಿರಬೇಕು ಎಂದು ಹೇಳಿದೆ.

ಎರಡೂ ದಿನಗಳ ಬಂದ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಪದಾಧಿಕಾರಿ, ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲ್ಲ. ಬಂದ್‌ಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಕಾವೇರಿಗಾಗಿ ನಮ್ಮ ಪ್ರಜಾಸತ್ತಾತ್ಮಕ ಮಾದರಿಯ ಹೋರಾಟಗಳು ಮುಂದುವರೆಯುತ್ತವೆ ಎಂದು ಕರವೇ ಹೇಳಿದೆ. ಸುಮಾರು ಏಳು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ನವ ಭಾರತದಲ್ಲಿ ಧರ್ಮವನ್ನು ಆಯುಧವನ್ನಾಗಿಸಲಾಗಿದೆ: ಪರಕಾಲ ಪ್ರಭಾಕರ್

0
ಬಿಜೆಪಿ ಆಡಳಿತದ ನವ ಭಾರತದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಆಯುಧವನ್ನಾಗಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪತಿ ಹಾಗೂ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪರಕಾಲ...