Homeಕರ್ನಾಟಕಬೆಂಗಳೂರು ಬಂದ್​ಗೆ ನೀರಸ ಪ್ರತಿಕ್ರಿಯೆ: ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ, ಕೆಲವೆಡೆ ರಸ್ತೆಗಿಳಿದ ಖಾಸಗಿ ವಾಹನ

ಬೆಂಗಳೂರು ಬಂದ್​ಗೆ ನೀರಸ ಪ್ರತಿಕ್ರಿಯೆ: ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ, ಕೆಲವೆಡೆ ರಸ್ತೆಗಿಳಿದ ಖಾಸಗಿ ವಾಹನ

- Advertisement -
- Advertisement -

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 40ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದು, ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರಕಾರ ಜಾರಿಗೊಳಿಸಿರುವ ‘ಶಕ್ತಿ ಯೋಜನೆ’ಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಅಥವಾ ರಸ್ತೆ ತೆರಿಗೆ ರದ್ದು ಮಾಡಬೇಕು. ರ್ಯಾಪಿಡೋ ಬೈಕ್‌ ಟ್ಯಾಕ್ಸಿ ನಿಷೇಧಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಇಂದು ಬೆಂಗಳೂರು ಬಂದ್‍ಗೆ ಕರೆ ನೀಡಿದೆ.

ಕಳೆದ ರಾತ್ರಿ 12ರಿಂದ ಇಂದು ರಾತ್ರಿ 12ರ ವರೆಗೂ ನಗರದಲ್ಲಿ ಆಟೋ, ಕ್ಯಾಬ್, ವ್ಯಾನ್, ಗೂಡ್ಸ್ ವಾಹನ ಸೇರಿದಂತೆ ಯಾವ ಖಾಸಗಿ ಸಾರಿಗೆ ವಾಹನವೂ ರಸ್ತೆಗೆ ಇಳಿಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಕೆಲವೆಡೆ ಖಾಸಗಿ ವಾಹನಗಳು ರಸ್ತೆಗೆ ಇಳಿದಿದೆ. ಕೆಆರ್ ಮಾರುಕಟ್ಟೆ, ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿದಿವೆ. ಆಟೋಗಳು ಕೆಲವೆಡೆ ಎಂದಿನಂತೆ ಸಂಚಾರ ನಡೆಸುತ್ತಿವೆ.

ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಆಟೋ ನಿಲ್ದಾಣದಲ್ಲಿ ಆಟೋ ರಸ್ತೆಗಿಳಿದಿಲ್ಲ. ಇದರಿಂದ ಮೆಜೆಸ್ಟಿಕ್​ಗೆ ಆಗಮಿಸುತ್ತಿರುವ ಜನರು ಆಟೋಗಳು ಸಿಗದೆ ಬಿಎಂಟಿಸಿ ಬಸ್ ಗಳನ್ನು ಆಶ್ರಯಿಸಿದ್ದಾರೆ. ಬೆಂಗಳೂರು-ತುಮಕೂರು ಹೆದ್ದಾರಿ, ಹಾಸನ ಹೆದ್ದಾರಿ, ಹೆಸರಘಟ್ಟ ರಸ್ತೆಯಲ್ಲಿ ಖಾಸಗಿ ಬಸ್​​ಗಳು ಎಂದಿನಂತೆ ಸಂಚಾರ ಆರಂಭಿಸಿವೆ. ನೆಲಮಂಗಲ ಸುತ್ತ ಮುತ್ತ ಕೂಡ  ದಿನನಿತ್ಯದಂತೆ ಖಾಸಗಿ ವಾಹನಗಳು ರಸ್ತೆಗೆ ಇಳಿದಿದೆ.

ಇನ್ನು ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ‌ ಬಳಿ ಕೆಲವೊಂದು ಟ್ಯಾಕ್ಸಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದಿರಂದಾಗಿ ಪೊಲೀಸರು ಬಿಗಿ ಭದ್ರತೆ ವ್ಯವಸ್ಥೆ ಕೈಗೊಂಡಿದ್ದಾರೆ. ಒಲಾ ಉಬರ್ ಸೇರಿದಂತೆ ಬಸ್ ನಿಲ್ದಾಣಗಳಲ್ಲೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಹೆಬ್ಬಳಾದಲ್ಲಿ ಎಂದಿನಂತೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಆದರೂ ಹೆಚ್ಚಿನ ಜನರು ಆಟೋ, ಒಲಾ ಬಿಟ್ಟು ಸರ್ಕಾರಿ ಬಸ್ಸುಗಳಲ್ಲಿ ಹೆಚ್ಚು ಸಂಚರಿಸಿರುವುದು ಕಂಡು ಬಂದಿದೆ.  ಅತ್ತಿಬೆಲೆಯಲ್ಲಿ ಟಿಟಿ ವಾಹನದಲ್ಲಿ ಜನರು ಸಂಚಾರ ಮಾಡುವಾಗ ಕೆಲವು ಸಂಘಟನೆಗಳು, ವಾಹನ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ.

ಬಂದ್ ಮಧ್ಯೆಯೂ ರಸ್ತೆಗಿಳಿದ ಆಟೋಗಳ ಪೈಕಿ ಕೆಲವು ಆಟೋ ಚಾಲಕರು ಹೆಚ್ಚಿನ ಹಣ ಜನರಿಂದ ವಸೂಲಿ ಮಾಡುವುದು ಕೂಡ ಕಂಡು ಬಂಡಿದೆ. ಬಂದ್‍ನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಎಂಟಿಸಿ ಮುನ್ನೆಚರಿಕೆ ಕ್ರಮ ಕೈಕೊಂಡಿದೆ. ಕೆಂಪೇಗೌಡ ಏರ್ಪೋರ್ಟ್ ನಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಟ್ರಿಪ್ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. 4 ಸಾವಿರ ಹೆಚ್ಚುವರಿ ಬಸ್​ ಟ್ರಿಪ್​ಗೆ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್​ನಿಂದ ನಗರದ ವಿವಿಧೆಡೆ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರ ಮಾಡಲಿವೆ. ಮೆಜೆಸ್ಟಿಕ್​​​ನಿಂದ ವಿಮಾನ ನಿಲ್ದಾಣ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧೆಡೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು​ ಜನದಟ್ಟಣೆಗೆ ಅನುಸಾರವಾಗಿ ಮೆಟ್ರೋ ಓಡಾಟ ಹೆಚ್ಚಿಸಲು ತೀರ್ಮಾನಿಸಲಾಗಿದೆ. ನಾನ್ ಪೀಕ್ ಅವರ್ಸ್​​ನಲ್ಲೂ ಐದು ನಿಮಿಷಕ್ಕೊಂದು ಟ್ರೈನ್ ಓಡಿಸಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

ಬಂದ್ ಅಂಗವಾಗಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಆಟೋ, ಖಾಸಗಿ ವಾಹನಗಳ ರ್ಯಾಲಿ ನಡೆಯಲಿದ್ದು,ವಿವಿಧೆಡೆ ರಸ್ತೆ ಸಂಚಾರಗಳಲ್ಲಿ ಕೂಡ ಬದಲಾವಣೆಯನ್ನು ಮಾಡಲಾಗಿದೆ.

ಕರ್ನಾಟಕ ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಈ ಕುರಿತು ಮಾತನಾಡಿದ್ದು, ಸತ್ತಿರುವ ಸಂಘಟನೆಗಳ ಜೊತೆ ಸಿಎಂ ಸಭೆ ಮಾಡಿದ್ದಾರೆ. ಒಂದು ಸಂಘಟನೆಯಿಂದ 5 ಜನ ಬಂದಿದ್ದಾರೆ. ಬಂದ್ ಮಾಡುತ್ತಿರುವುದು ಸಾರ್ವಜನಿಕರಿಗೆ ತೊಂದರೆ ಆಗಬೇಕು ಎಂದು ಅಲ್ಲ, ಇದಕ್ಕೆ ಸರ್ಕಾರವೇ ಹೊಣೆಯಾಗುತ್ತೆ ಎಂದು ನಟರಾಜ್ ಶರ್ಮಾ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಟೋ ಚಾಲಕರಾದ ಸುನಿಲ್ ಕುಮಾರ್, ನಾನು ಜಾಲಹಳ್ಳಿ ಕ್ರಾಸ್ ಬಳಿ ಆಟೋ ಓಡಿಸುತ್ತಿದ್ದೇನೆ. ಸರಕಾರದ ರೂಲ್ಸ್‌ಗಳಿಂದ ನಮಗೆ ಭಾರೀ ತೊಂದರೆಯಾಗುತ್ತಿದೆ. ನಾವು ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಬಸ್‌ಗಳು ಫ್ರೀಯಾಗಿ ಓಡಾಡುತ್ತಿದೆ. ಇದರಿಂದ ಆಟೋದವರಿಗೆ ವ್ಯವಹಾರಕ್ಕೆ ಸಮಸ್ಯೆಯಾಗುತ್ತಿದೆ. ಆಟೋ ಚಾಲಕರು ನೊಂದುಕೊಂಡಿದ್ದಾರೆ. ಇದಲ್ಲದೆ ಅನದೀಕೃತವಾಗಿ ಓಡಾಡುವ ರ್ಯಾಪಿಡೋ, ಉಬರ್‌ನಿಂದ ತೊಂದರೆಯಾಗುತ್ತಿದೆ ಅದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಆಟೋ ಡ್ರೈವರ್‌ಗಳ ಸಂಘದ ಶ್ರೀನಿವಾಸ್‌ ಅವರು ಮಾತನಾಡಿದ್ದು, ರ್ಯಾಪಿಡ್‌ ಆಫ್‌ಗಳನ್ನು ನಿಷೇಧ ಮಾಡಬೇಕು, ಆಟೋ ರಿಕ್ಷಾ ಚಾಲಕರಿಗೆ ಕಲ್ಯಾಣ ಮಂಡಳಿ ಜಾರಿ ಮಾಡಬೇಕು, ಆಟೋ ಚಾಲಕರ ಮಕ್ಕಳ ವಿಧ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್‌, ಪಿಂಚಣಿ, ಪಿಎಫ್‌, ಮನೆಗಳು ಸಿಗಬೇಕೆಂದು ಆಗ್ರಹಿಸಿದ್ದೇವೆ. ಈ ಬಗ್ಗೆ ಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಶಕ್ತಿ ಯೋಜನೆಯಿಂದ ಸಮಸ್ಯೆಯಾಗುತ್ತಿದೆ.  ಖಾಸಗಿ ಬಸ್‌ನವರು 10,000 ಪರಿಹಾರ ಕೇಳುತ್ತಿದ್ದಾರೆ. ರ್ಯಾಪಿಡೋ ಬಂದ್ ಮಾಡಿ, ಆಟೊ ಚಾಲಕರಿಗೆ ಸರಕಾರದಿಂದ ಪ್ರತ್ಯೇಕ ಆಫ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...