Homeಕರ್ನಾಟಕಕಾರು ಬೈಕ್ ಢಿಕ್ಕಿ: ಭವಾನಿ ರೇವಣ್ಣ ಅವರ ದರ್ಪಕ್ಕೆ ಸಾರ್ವಜನಿಕರ ಆಕ್ರೋಶ

ಕಾರು ಬೈಕ್ ಢಿಕ್ಕಿ: ಭವಾನಿ ರೇವಣ್ಣ ಅವರ ದರ್ಪಕ್ಕೆ ಸಾರ್ವಜನಿಕರ ಆಕ್ರೋಶ

- Advertisement -
- Advertisement -

ಶಾಸಕ ಹೆಚ್‌ಡಿ ರೇವಣ್ಣ ಅವರ ಪತ್ನಿ, ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರಿಗೆ ಸಾಲಿಗ್ರಾಮದ ಬಳಿ ಬೈಕೊಂದು ಢಿಕ್ಕಿ ಹೊಡೆದಿದೆ. ಘಟನೆ ಸ್ಥಳದಲ್ಲಿ ಭವಾನಿ ರೇವಣ್ಣ ದರ್ಪ ಮೆರೆದಿದ್ದು, ಅವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ KA-03-NK-5 ನಂಬರಿನ ಕಾರಿಗೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಬಳಿ ಶಿವಣ್ಣ ಎಂಬಾತನ ಬೈಕ್‌ ಢಿಕ್ಕಿ ಹೊಡೆದಿದೆ. ಘಟನೆ ಆಕಸ್ಮಿಕವಾಗಿದೆ ಆದರೆ ಬೈಕ್ ಸವಾರನ ವಿರುದ್ಧ ಭವಾನಿ ರೇವಣ್ಣ ಅವಾಚ್ಯವಾಗಿ ನಿಂದಿಸಿದ್ದಾರೆ.

ಬೋರ್ಡ್‌ ಎಲ್ಲಾ ಸಖತ್ ಡ್ಯಾಮೇಜ್‌ ಆಗಿದೆ, ಎಲ್ಲಿಗೆ ನುಗ್ಗಿಸ್ತೀಯಾ ಸುಟ್ಟ ಹಾಕ್ರೋ…. ಈ ಗಾಡಿ ಎಷ್ಟು ಡ್ಯಾಮೇಜ್‌ ಆಗಿದೆ, ಹೆಂಗೆ ರೆಡಿ ಮಾಡ್ಸೋದು? ಎಲ್ಲಾ ಹೋಗಿದೆ, ನೀನ್ ಫೋನ್ ತಗೋಬೇಡ, ನಡಿ ಆಚೆಗೆ ಯಾವನು ಸೀಝ್ ಮಾಡಿ ಗಾಡಿ. ಅವನಿಗೆ ಬೈಕ್ ಮುಟ್ಟಬೇಡ ಅಂತ ಹೇಳು. ಸಾಲಿಗ್ರಾಮ ಎಸ್‌ಐ ಬರಲು ಹೇಳು. ಒಂದುವರೆ ಕೋಟಿ ರೂಪಾಯಿ ಗಾಡಿ ಅದು, ಅದನ್ನು ಡ್ಯಾಮೇಜ್ ಮಾಡಿ ಬಿಟ್ಟಿದ್ದಾನೆ. ಏನ್ ಅರ್ಜೆಂಟ್ ಇತ್ತು? ಏನ್ ದೇಶ ಮುಳುಗಿ ಹೋಗಿತ್ತಾ ಎಂದೆಲ್ಲಾ ಹಿಗ್ಗಾ ಮುಗ್ಗ ನಿಂದಿಸಿದ್ದಾರೆ.

ಈ ವೇಳೆ ಅಕ್ಕ ಗಾಡಿ ತೆಗೀರಿ, ಹೋಗೋಣ ಎಂದು ಸ್ಥಳದಲ್ಲಿ ಇದ್ದವರು ಹೇಳಿದ್ದು, ಅದಕ್ಕೆ ಗಾಡಿ ತಗಂಡು ಏನ್ ಮಾಡೋಣ? ಕೊಡ್ತಿಯಾ 50 ಲಕ್ಷ ರಿಪೇರಿ ಮಾಡ್ಲಿಕೆ ಎಂದು ಅವರನ್ನೇ ಪ್ರಶ್ನಿಸಿದ್ದಾರೆ. ನಿಂತಿದ್ದವರು ದುಡ್ಡು ಕೊಡುವ ಹಾಗಿದ್ದರೆ ನ್ಯಾಯ ಮಾತನಾಡಲು ಬನ್ನಿ ಎಂದು ಬೈದಾಡಿದ್ದಾರೆ.

ಒಂದುವರೆ ಕೋಟಿ ರೂಪಾಯಿ ಗಾಡಿ, ಬೋರ್ಡ್ ಎಲ್ಲಾ ಏನು ಇಲ್ಲ. ಸಾಯಂಗಿದ್ರೆ ನೀನು ಸಾಯಬೇಕಿತ್ತು ಬಸ್‌ಗೆ ಸಿಗಾಕಂಡು, ನನ್ನ ಕಾರು ಡ್ಯಾಮೇಜ್ ಮಾಡಕೆ ನೀನ್ ಯಾವನು? ಒಂದುವರೆ ಕೋಟಿ ರೂಪಾಯಿ ಡ್ಯಾಮೇಜ್ ಯಾವನ್ ಕಟ್ಟೋನು? ಎಂದು ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ನಿಂದಿಸಿದ್ದಾರೆ.

ಬೈಕ್ ಸವಾರನ ವಿರುದ್ಧ ದೂರು

ಭವಾನಿ ರೇವಣ್ಣ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿರುದ್ಧ ದೂರು ದಾಖಲಾಗಿದೆ. ಬೈಕ್ ಸವಾರ ಶಿವಣ್ಣ ಎಂಬಾತನ ಮೇಲೆ ಭವಾನಿ ಕಾರು ಚಾಲಕ ಮಂಜುನಾಥ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಬೈಕ್ ಸವಾರನ ಮೇಲೆ ಸಿಆರ್‌ಪಿಸಿ ಸೆಕ್ಷನ್ 157 ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಭವಾನಿ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಭವಾನಿ ರೇವಣ್ಣ ಬೈಕ್‌ ಚಾಲಕನಿಗೆ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಬಳಕೆದಾರರು ಭವಾನಿ ರೇವಣ್ಣ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಪಘಾತದ ಬಳಿಕ ಬೈಕ್‌ ಸವಾರನ ಆರೋಗ್ಯ ವಿಚಾರಿಸದೆ ಭವಾನಿ ತಮ್ಮ ಕಾರಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದು ದುರಹಂಕಾರ ಎಂದು  ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ ಮಾಡಿದ್ದು, ಆಕಸ್ಮಿಕವಾಗಿ ನಡೆಯುವ ಘಟನೆಗೆ ಈ ರೀತಿಯ ವರ್ತನೆ ಸರಿಯಲ್ಲ. ನಿಮ್ಮ ವಾಹನಕ್ಕೆ ವಿಮೆ ಕ್ಲೈಮ್‌ ಮಾಡಬಹುದು. ಬೈಕ್‌ ಸವಾರನ ಪ್ರಾಣಕ್ಕೆ ಏನಾದರೂ ಆದರೆ ಯಾರು ಹೊಣೆ? ಅಹಂಕಾರದ ಮಾತುಗಳನ್ನು ಸ್ವಲ್ಲ ಕಡಿಮೆ ಮಾಡಿ ಎಂದು ಬರೆದುಕೊಂಡಿದ್ದಾರೆ.

ಅವ್ಯಾಚ ಪದಗಳನ್ನು ಬಳಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಬಡವ ಸತ್ರೂ ಇವರಿಗೆ ಚಿಂತೆ ಇಲ್ಲ. ಆದರೆ ಇವರ ಒಂದೂವರೆ ಕೋಟಿ ಕಾರಿಗೆ ಏನು ಆಗಬಾರದು, ದೊಡ್ಡ ಗೌಡರ ಮನೆಗೆ ದೊಡ್ಡತನ ನೋಡಿ,  ಅಕ್ಕೋ ಸಮಾಧಾನ ಮಾಡ್ಕೊಳಿ ಎಂದೆಲ್ಲಾ ನೆಟ್ಟಿಗರು ಬರೆದುಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ರಾ.ಚಿಂತನ್‌, ಸಾಲಿಗ್ರಾಮದ ಬಳಿ ಬಡ ಬೈಕ್ ಸವಾರ ತಮ್ಮ ಕಾರಿಗೆ ಆಕಸ್ಮಿಕವಾಗಿ ಗುದ್ದಿದ್ದಕ್ಕೆ ಭವಾನಿ ರೇವಣ್ಣ ಅವರ ಪ್ರತಿಕ್ರಿಯೆ ಇದು. ಬಡವ ನೀನು ಬೇಕಾದ್ರೆ ಸಾಯಿ, ನನ್ನ ಕಾರು ಡ್ಯಾಮೇಜ್ ಆಗಿದ್ದು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿದ ಇವರು ರೈತ ನಾಯಕ, ಮಣ್ಣಿನ ಮಗ ದೇವೇಗೌಡರ ಸೊಸೆ. ಶಾಸಕ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ಅವರ ತಾಯಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅತ್ತಿಗೆ!

ಅಂದಹಾಗೆ, ಈ ದುಬಾರಿ ಕಾರಿನ ಸ್ಕ್ರಾಚ್ ರಿಪೇರಿಗೆ ಒಂದೆರಡು ಲಕ್ಷ ಖರ್ಚುಗಬಹುದೇನೋ… ಆ ಹಣ ಗೌಡರ ಕುಟುಂಬಕ್ಕೆ ಒಂದು ದಿನದ ಟೀ ಖರ್ಚಿಗಿಂತ ಕಡಿಮೆ. ಆದರೆ ಆ ಬಡ ರೈತ ತನ್ನ ಬೈಕ್ ರಿಪೇರಿ ಮಾಡಿಸಲು ಸಾಲ ಮಾಡಬೇಕು. ಅವನು ಸತ್ತಿದ್ದರೆ ಕುಟುಂಬ ಬೀದಿಗೆ ಬೀಳಬೇಕಿತ್ತು!

“ಬಡವ ನೀನು ಸತ್ತರೆ ಸಾಯಿ, ನನ್ನ ಕಾರು ನನಗೆ ಮುಖ್ಯ…” ಎಂಬ ಅಮೂಲ್ಯವಾದ ಸಂದೇಶ ಸಾರಿದ… ಭವಾನಿ ರೇವಣ್ಣ ಅವ್ರೇ.. So beautiful, so elegant, just looking like a wow’

ಅದೆಲ್ಲಾ ಇರ್ಲಿ… ನಿಮ್ಮ ಕಾರಿಗೆ ನಂಬರ್ ಪ್ಲೇಟ್ ಯಾಕಿಲ್ಲ ಮೇಡಂ? tinted glass ಬೇರೆ Heavy Dark ಇದೆ! ಅಲ್ಲಿಗೆ ಬಂದ ಪೊಲೀಸರು ಕೇಸ್ ಏನಾದ್ರೂ ಹಾಕಿದ್ರಾ? ಇಲ್ವಾ? ಎಂದು ಪೋಸ್ಟ್‌ ಮಾಡಿದ್ದಾರೆ.

ಇನ್ನೋರ್ವ ಫೇಸ್ಬುಕ್‌ ಬಳಕೆದಾರರಾದ ಮಂಜುನಾಥ ಗೌಡ ಎಂಬವರು ಈ ಕುರಿತು ಪೋಸ್ಟ್‌ ಮಾಡಿದ್ದು, ಬಡವ ಬೇಕಿದ್ದರೆ ಸತ್ತರೆ ಸಾಯಬಹುದು ಆದರೆ ಭವಾನಿ ರೇವಣ್ಣ ಅವರ ಒಂದೂವರೆ ಕೋಟಿಯ ಕಾರಿಗೆ ಮಾತ್ರ ಯಾವುದೇ ಡ್ಯಾಮೇಜ್ ಆಗಬಾರದು ಅಷ್ಟೇ….

ಬಡವರ ಬಗ್ಗೆ ಉದ್ದುದ್ದ ಬೊಗಳೆ ಬಿಡುವ H D Kumaraswamy ಅವರು ತಮ್ಮ ಅತ್ತಿಗೆಯವರ ಈ ಮುತ್ತಿನಂಥ ಮಾತುಗಳ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ದಿನೇಶ್‌ ದೊಡ್ಡಮನೆ ಎಂಬವರು ಈ ಕುರಿತು ಪೋಸ್ಟ್‌ ಮಾಡಿದ್ದು, ಒಂದೂವರೆ ಕೋಟಿ ಕಾರು, ಮೈ ತುಂಬಾ ಬಂಗಾರ, ಹತ್ತು ತಲೆ ಮಾರು ಕೂತು ತಿಂದರೂ ಕರಗದ ಆಸ್ತಿ, ಮಾವ ಮಾಜಿ ಪ್ರಧಾನಿ, ಮೈದುನ ಮಾಜಿ ಸಿಎಂ, ಗಂಡ ಮಾಜಿ ಸಚಿವ, ನಾದಿನಿ ಮಾಜಿ ಶಾಸಕಿ, ಒಬ್ಬ ಮಗ ಎಂಪಿ, ಇನ್ನೊಬ್ಬ ಮಗ ಎಂಎಲ್ಸಿ, ಇನ್ನೂ ನೀವು ಜಿಪಂ ಮಾಜಿ ಅಧ್ಯಕ್ಷರು ಇಷ್ಟೆಲ್ಲಾ ಇರುವ ನಿಮಗೆ ಅಹಂಕಾರ, ದುರಹಂಕಾರ ಸರ್ವೇ ಸಾಮಾನ್ಯ ಬಿಡಿ…
ಒಬ್ಬ ವ್ಯಕ್ತಿಯ ಜೀವಕ್ಕಿಂತ ನಿನ್ನ ಒಂದೂವರೆ ಕೋಟಿ ಕಾರಿನ 150 ರೂಪಾಯಿ ನಂಬರ್ ಪ್ಲೇಟ್ ಹೆಚ್ಚಾಯಿತಲ್ಲ ತಾಯಿ. ಸಾಯಂಗಿದ್ರೆ ನೀನು ಸಾಯಬೇಕಿತ್ತು ಬಸ್ಸಿಗೆ ಏನಾದ್ರೂ ಸಿಕ್ಕಾಕೊಂಡು, ನನ್ನ ಕಾರ್ ಬೇಕಿತ್ತಾ, ನನ್ನ 1.5 ಕೋಟಿ ರೂಪಾಯಿ ಕಾರಿನ ನಂಬರ್ ಪ್ಲೇಟ್ ಹಾಳು ಮಾಡಿ ಬಿಟ್ಟಲ್ಲ,  ಇದು ದರ್ಪದ, ದುರಹಂಕಾರದ ಮಾತು ಮಾತ್ರವಲ್ಲ ಶ್ರೀಮಂತಿಕೆಯ ಮದ ಕೂಡ ತಲೆಗೆ ಹತ್ತಿದೆ ಎಂದರೆ ತಪ್ಪಾಗಲಾರದು, ಬಡವರನ್ನು ಜನ ಸಾಮಾನ್ಯರನ್ನು ನೀವುಗಳು ಕಾಣುವ ಪರಿ ಇದು. ನಿಮ್ಮಂತವರನ್ನು ನೋಡ್ತಾ ಇದ್ರೆ ಫ್ರಾನ್ಸಿನ ಲೂಯಿ ದೊರೆಗಳು ನೆನಪಾಗಗಾದೇ ಇರರು. ಬಹುಶಃ ಅಪಘಾತದಲ್ಲಿ ಭಾಗಿಯಾದ ವ್ಯಕ್ತಿ ಕೂಡ ಆಕೆಯ ಹಿಂಬಾಲಕ ಆಗಿದ್ದರು ಆಗಿರಬಹುದು ಮತ್ತೆ ಚುನಾವಣೆ ಬಂದಾಗ ಅದೇ ವ್ಯಕ್ತಿಗೆ ಇಂದಿನ ಅವಮಾನ ಮರೆತು ವೋಟ್ ಹಾಕುವುದರಲ್ಲಿ ಅನುಮಾನ ಕೂಡ ಇಲ್ಲ ಅಥವಾ ನಾಳೆ ಮಾದ್ಯಮದ ಮುಂದೆ ಅಮ್ಮವರು ಹಾಗೆ ಹೇಳಿಲ್ಲ ನನ್ನದೇ ತಪ್ಪು ಎನ್ನುವ ಹೇಳಿಕೆ ನೀಡಲೂಬಹುದು. ಆದ್ರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ..?
ಜನ ಸಾಮಾನ್ಯರಾದ ನಾವುಗಳು ವಿಚಾರ ಮಾಡುವುದು ಬಹಳಷ್ಟಿದೆ ನನ್ನದು ಆ ಪಕ್ಷ ನನ್ನದು ಈ ಪಕ್ಷ ಅಂತ ಕಿತ್ತಾಡ್ತಾ ಇರುತ್ತೇವೆ ಹೊರತು ಇಂಥ ವಿಚಾರಗಳನ್ನು ಧೈರ್ಯವಾಗಿ ಖಂಡಿಸುವುದು ಇಲ್ಲ, ಇಂಥವರ ವಿರುದ್ಧ ಯೋಗ್ಯರನ್ನು ಆಯ್ಕೆ ಮಾಡುವುದು ಇಲ್ಲ ಎಂದು ಬರೆದುಕೊಂಡಿದ್ದಾರೆ.

https://m.facebook.com/story.php?story_fbid=pfbid02rriCzFnZ2TUQAuPfb2SFTJTDp5eRCP1rWV5UkDqhT5ZGtdcAuFLjAgUKZUVuDq8vl&id=100011214451587&mibextid=RtaFA8

 

https://m.facebook.com/story.php?story_fbid=pfbid021eiv9wJDwgYiK5PwRB9p6J3UPsC5DNpE23wf3dW2Xmsh58yPgMVbU2nKpCL2vUF9l&id=100002096847608&mibextid=RtaFA8

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...