Homeಕರ್ನಾಟಕಇಂದಿನಿಂದ ಬೆಳಗಾವಿ ಅಧಿವೇಶನ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಜೆಡಿಎಸ್-ಬಿಜೆಪಿ ಸಜ್ಜು

ಇಂದಿನಿಂದ ಬೆಳಗಾವಿ ಅಧಿವೇಶನ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಜೆಡಿಎಸ್-ಬಿಜೆಪಿ ಸಜ್ಜು

- Advertisement -
- Advertisement -

ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮುಂದಿನ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬರ, ವರ್ಗಾವಣೆ ಆರೋಪ ಮತ್ತು ಅನುದಾನ ಕೊರತೆ ಅಸ್ತ್ರಗಳನ್ನು ಪ್ರಯೋಗಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾದ್ದರಿಂದ ಎರಡೂ ಪಕ್ಷಗಳು ಜಂಟಿಯಾಗಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಿದ್ದತೆ ಮಾಡಿಕೊಂಡಿವೆ.

ಬಿಜೆಪಿ-ಜೆಡಿಎಸ್ ಮೈತ್ರಿ, ಆರ್. ಅಶೋಕ್ ಪ್ರತಿಪಕ್ಷ ನಾಯಕ, ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮತ್ತು ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಹಾಗಾಗಿ, ಈ ಬಾರಿಯ ಅಧಿವೇಶನ ಕುತೂಹಲಕ್ಕೆ ಕಾರಣವಾಗಿದೆ.

ವರ್ಗಾವಣೆ ದಂಧೆ ಆರೋಪ ಅಸ್ತ್ರ : ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪವನ್ನು ಪ್ರತಿಪಕ್ಷಗಳು ಮುಖ್ಯವಾಗಿ ಬಳಸುವ ಸಾಧ್ಯತೆ ಇದೆ. ಇತ್ತೀಚೆಗೆ ಸಿಎಂ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ವರ್ಗಾವಣೆ ದಂಧೆ ಆರೋಪವನ್ನು ಪ್ರತಿಪಕ್ಷಗಳು ಮಾಡಿದ್ದವು. ಇದೇ ಅಸ್ತ್ರವನ್ನು ಸದನದಲ್ಲಿ ಪ್ರಯೋಗಿಸುವ ಸಾಧ್ಯತೆ ಇದೆ.

ಡಿ.ಕೆ ಶಿವಕುಮಾರ್ ವಿರುದ್ಧದ ತನಿಖೆ ವಾಪಸ್ : ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಪಟ್ಟಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ಇತ್ತೀಚೆಗೆ ಸರ್ಕಾರ ವಾಪಸ್ ಪಡೆದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅಧಿಕಾರ ದುರುಪಯೋಗದ ಆರೋಪ ಮಾಡಿ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು.

ಜಮೀರ್ ಅಹ್ಮದ್ ಹೇಳಿಕೆ ವಿವಾದ : ತೆಲಂಗಾಣದ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ, ‘ಕರ್ನಾಟಕದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಸ್ಪೀಕರ್ ಯು.ಟಿ ಖಾದರ್ ಮುಂದೆ ಬಿಜೆಪಿ ನಾಯಕರು ಕೈ ಮುಗಿದು ನಿಲ್ಲಬೇಕಾದ ಪರಿಸ್ಥಿತಿ ಇದೆ’ ಎಂದು ಸಚಿವ ಝಮೀರ್ ಅಹ್ಮದ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದರು. ಸದನದಲ್ಲಿ ಮತ್ತೊಮ್ಮೆ ಈ ವಿಚಾರ ಪ್ರಸ್ತಾಪ ಆಗಬಹುದು.

ಗ್ಯಾರಂಟಿ ಜಾರಿ ವೈಫಲ್ಯ ಆರೋಪ : ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜಾರಿಯಾಗಿಲ್ಲ. ಸರ್ಕಾರ ಸುಳ್ಳು ಹೇಳಿ ಜನರನ್ನು ವಂಚಿಸಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಸದನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ಗ್ಯಾರಂಟಿ ಹೇಸರೇಳಿ ಸರ್ಕಾರ ಶಾಸಕರಿಗೆ ಅನುದಾನ ಕಡಿತ ಮಾಡಿದೆ ಎಂದು ಬಿಜೆಪಿ-ಜೆಡಿಎಸ್ ಆರೋಪಿಸಿದೆ. ಈ ವಿಚಾರ ಕೂಡ ಪ್ರತಿಪಕ್ಷಗಳಿಗೆ ಅಸ್ತ್ರವಾಗಬಹುದು.

ಪ್ರತಿಪಕ್ಷಗಳ ಅಸ್ತ್ರಕ್ಕೆ ಸರ್ಕಾರದ ಕೌಂಟರ್ ಏನು? ಪ್ರತಿಪಕ್ಷಗಳು ಹಲವು ಅಸ್ತ್ರಗಳಿಗೆ ಸಿದ್ದರಾಮಯ್ಯ ಸರ್ಕಾರ ಕೂಡ ಸರಿಯಾದ ಕೌಂಟರ್ ಕೊಡಲು ಸಿದ್ದತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಇದನ್ನೇ ಸಿಎಂ ಮತ್ತೊಮ್ಮೆ ಪ್ರಸ್ತಾಪಿಸಬಹುದು. ರಾಜ್ಯ ಸರ್ಕಾರ ಬರ ಪರಿಹಾರವಾಗಿ ರೈತರಿಗೆ ಬಿಡುಗಡೆ ಮಾಡಿರುವ ತಲಾ 2 ಸಾವಿರ ರೂಪಾಯಿ ವರವಾಗಬಹುದು. ರಾಜ್ಯದ ಬಿಜೆಪಿ ಸಂಸದರು ಕೇಂದ್ರದಿಂದ ಬರ ಪರಿಹಾರ ಮತ್ತು ಇತರ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಬಹುದು.

ಇದನ್ನೂ ಓದಿ : 3 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸೋಲು: ಪಕ್ಷ ಬಲವರ್ಧನೆಯ ಸಂಕಲ್ಪ ಮಾಡಿದ ಎಐಸಿಸಿ ಅಧ್ಯಕ್ಷ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...