Homeಚಳವಳಿಬೆಳಗಾವಿ: ದುಷ್ಕರ್ಮಿಗಳಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ- 144 ಸೆಕ್ಷನ್ ಜಾರಿ

ಬೆಳಗಾವಿ: ದುಷ್ಕರ್ಮಿಗಳಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ- 144 ಸೆಕ್ಷನ್ ಜಾರಿ

ಈ ದುಷ್ಕೃತ್ಯ ಖಂಡಿಸಿ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

- Advertisement -
- Advertisement -

ಬೆಳಗಾವಿಯ ಅನಗೋಳದ ಕನಕದಾಸ ಕಾಲೋನಿಯಲ್ಲಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿ, ಖಡ್ಗ, ಗುರಾಣಿ ಕಿತ್ತುಹಾಕಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಬೆಳಗಾವಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಘಟನೆ ಸಂಬಂಧ ತಿಲಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವರನ್ನು ಬಂಧಿಸಿದ್ದು, ಸದ್ಯಕ್ಕೆ ಪುತ್ಥಳಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ರಾತ್ರಿ 8 ಗಂಟೆಯವರೆಗೂ 144 ಸೆಕ್ಷನ್ ಜಾರಿಯಲ್ಲಿದೆ ಜಿಲ್ಲಾಡಳಿತ ಹೇಳಿದೆ.

ಬೆಳಗಾವಿಯ ಅಧಿವೇಶನವನ್ನು ವಿರೋಧಿಸಿ ಎಂಇಎಸ್ ಸಂಘಟನೆಯ ಕಾರ್ಯಕರ್ತರು ಮಹಾಮೇಳವ್ ಎಂಬ ಉತ್ಸವ ಸಂಘಟಿಸಿದ್ದರು. ಇದನ್ನು ವಿರೋಧಿಸಿ ಕನ್ನಡಪರ ಕಾರ್ಯಕರ್ತರು ಉತ್ಸವ ವೇಳೆ ಎಂಇಎಸ್ ನಾಯಕರಿಗೆ ಮಸಿ ಬಳಿದಿದ್ದರು. ಈ ಸಂಬಂಧ ಸಂಪತ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಎಂಇಎಸ್ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ಉದ್ಧಟತನ ಮೆರೆದಿದ್ದರು. ಇದರಿಂದ ಕ್ರೋಧಗೊಂಡ ಕೆಲ ಕನ್ನಡ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಭಗ್ನಗೊಳಿಸಲಾಗಿದೆ ಮತ್ತು ಕಲ್ಲು ತೂರಾಟ ಮಾಡಿ ಗಲಭೆಗೆ ಪ್ರಚೋದಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, “ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ ಆಗಿದೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಕಾನೂನುಬಾಹಿರ. ಇಂತಹ ಘಟನೆ ನಡೆಯದಂತೆ ದೀರ್ಘಾವಧಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ರಾಷ್ಟ್ರಭಕ್ತರ ಪ್ರತಿಮೆಗೆ ಭಂಗ ತರುವುದು ಸರಿಯಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಬೇಕು. ನಾಡಿಗೆ ಹೋರಾಡಿದವರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ಸಮಾಜದಲ್ಲಿ ಕ್ಷೋಭೆ ಉಂಟುಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ದುಷ್ಕೃತ್ಯ ಮಾಡುತ್ತಿದ್ದು, ಅವರನ್ನು ಸದೆಬಡಿಯುತ್ತೇವೆ” ಎಂದಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, “ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ ಸಿಎಂ ಬಸವರಾಜ ಬೊಮ್ಮಾಯಿಯವರು ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ‌ ಆದೇಶ ನೀಡಬೇಕು. ಇದಕ್ಕೆಲ್ಲ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ. ಇದೇ ವೇಳೆ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ,‌‌‌ ಸಂಯಮದಿಂದ ಶಾಂತಿ-ಸೌಹಾರ್ದತೆ ಕಾಪಾಡಿಕೊಂಡು‌ ಬರಬೇಕೆಂದು‌ ಮನವಿ ಮಾಡುತ್ತೇನೆ” ಎಂದಿದ್ದಾರೆ.

ಪ್ರತಿಭಟನೆಗೆ ಕರೆ

ತುರ್ತು ಪ್ರತಿಭಟನೆ ಇಂದು ಬೆಳಿಗ್ಗೆ11 ಗಂಟೆಗೆ

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂದು ನಾವು ಸುಮ್ಮನೆ ಕೂರುವುದು ಬೇಡ.
ಕನ್ನಡಿಗರ ಹೆಮ್ಮೆಯ ಪ್ರತೀಕ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಬೆಳಗಾವಿಯಲ್ಲಿ ಭಗ್ನಗೊಳಿಸಿ ಕರ್ನಾಟಕ ಪೊಲೀಸ್ ಮೇಲೆ ಕಲ್ಲು ತೂರಾಟ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಹಾಗೂ ದೇಶದ್ರೋಹಿ ಎಂಇಎಸ್ ಸಂಘಟನೆಯನ್ನು ಈ ಕೂಡಲೇ ನಿಷೇಧಿಸಲು ಒತ್ತಾಯಿಸಿ ಇಂದು ಬಳಿಗ್ಗೆ 11ಕ್ಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ಹತ್ತಿರವಿರುವ ಎಲ್ಲಾ ಕನ್ನಡಪರ ಮನಸ್ಸುಗಳು ಜೊತೆಗೂಡಿ ಎಂದು ಕನ್ನಡಪರ ಸಂಘಟನೆಗಳು ಕರೆ ನೀಡಿವೆ.


ಇದನ್ನೂ ಓದಿ: ಬಾವುಟಕ್ಕೆ ಬೆಂಕಿ ಇಟ್ಟವರನ್ನು ಶಿಕ್ಷಿಸಿ, ನಮ್ಮ ಧ್ವಜ ಹಿಡಿದ ಭುಜಗಳನ್ನು ರಕ್ಷಿಸಿ: ಡಾ.ಹಂಸಲೇಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...