Homeಕರ್ನಾಟಕಕಟೀಲು “ಅಸ್ರಣ್ಣ”ರು ಭಾಗವತ ಪಟ್ಲರನ್ನೇಕೆ ರಂಗದಿಂದ ಕೆಳಗಿಳಿಸಿದರು?

ಕಟೀಲು “ಅಸ್ರಣ್ಣ”ರು ಭಾಗವತ ಪಟ್ಲರನ್ನೇಕೆ ರಂಗದಿಂದ ಕೆಳಗಿಳಿಸಿದರು?

ಕಟೀಲು ಮೇಳದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದ ಕಲಾವಿದರ ಬೆನ್ನಿಗೆ ಪಟ್ಲ ನಿಂತಿದ್ದು ನಿಜ. ಅದವರ ಸ್ವಭಾವ. ಆತ ಸದಾ ನೊಂದ ಕಲಾವಿದರ ಪಕ್ಷಪಾತಿ.

- Advertisement -
- Advertisement -

ಯಕ್ಷಗಾನ ಒಂಥರಾ ಜಡವಾಗಿದ್ದ ಕಾಲದಲ್ಲಿ ಅದಕ್ಕೊಂದು ಲವಲವಿಕೆ ತಂದುಕೊಟ್ಟಿದ್ದು ಪಟ್ಲ ಸತೀಶ್ ಶೆಟ್ಟಿಯ ಅಪ್ರತಿಮ ಹಾಡುಗಾರಿಕೆ! ಪಟ್ಲರ ಅಸಾಮಾನ್ಯ ಪ್ರತಿಭೆಯಿಂದ ತೆಂಕುತೆಟ್ಟಿನ ಭಾಗವತಿಕೆಗೆ ವಿಶಿಷ್ಟ ಆಯಾಮ ಬಂದುಬಿಟ್ಟಿತು. ಈಗಾತ ಯಕ್ಷಲೋಕದ ಅಷ್ಟೂ ತೆಟ್ಟಿನಲ್ಲಿ ಸೂಪರ್ ಸ್ಟಾರ್ ಭಾಗವತ!! ಅಪಾರ ಸಿದ್ಧಿ ಪ್ರಸಿದ್ಧಿಯನ್ನು ಎಂದೂ ತಲೆಗೇರಿಸಿಕೊಳ್ಳದೆ ಸಮಚಿತ್ತದಿಂದ ನಿಭಾಯಿಸುತ್ತ ಬಂದಿರುವ ಪಟ್ಲ ತನ್ನ ಕೀರ್ತಿಯ ವರ್ಚಸ್ಸನ್ನು ಯಕ್ಷಗಾನ ಕಲಾವಿದರ ನೆರವಿಗೆ ಬಳಸುತ್ತಿರುವ ಅಪರೂಪದ ಹೃದಯವಂತ.

ಅನೇಕ ಶಿಷ್ಯರನ್ನು ಪಟ್ಲ ತಯಾರು ಮಾಡಿದ್ದಾರೆ. “ಯಕ್ಷದ್ರುವ ಪಟ್ಲ ಫೌಂಡೇಷನ್” ಸ್ಥಾಪಿಸಿ ನೂರಾರು ಬಡಕಲಾವಿದರಿಗೆ ಕಷ್ಟಕಾಲದಲ್ಲಿ ಆರ್ಥಿಕ ಸಹಾಯ ಮಾಡುತ್ತಿದ್ದಾರೆ; ಮನೆಗಳನ್ನು ಕಟ್ಟಿಸಿ ಕೊಡುತ್ತಿದ್ದಾರೆ. ಇದಕ್ಕೆಲ್ಲ ಹಣ ಭೂಗತ ಲೋಕದಲ್ಲಿ “ಡಾನ್” ಆಗಿರುವ ಅಣ್ಣ ವಿಕ್ಕಿಶೆಟ್ಟಿಯಿಂದ ತಮ್ಮ ಪಟ್ಲನಿಗೆ ಬರುತ್ತಿದೆಯೆಂದು ಕೊಂಕು ಮಾತಾಡೋರೂ ಇದ್ದಾರೆ. ಆದರೆ ಪಟ್ಲರ “ಪುಣ್ಯ”ಕಾರ್ಯ ಕಂಡ ಕೂಲಿಯೂ ತನ್ನ ಸಂಪಾದನೆಯ ಕೆಲವೇ ಕಾಸು ಫೌಂಡೇಷನ್‍ಗೆ ಕೊಡುತ್ತಿದ್ದಾನೆ. ಯಕ್ಷ ರಸಿಕರಿಂದಂತೂ ಹೇರಳ ಹಣ ಹರಿದುಬರುತ್ತಿದೆ. ಯಕ್ಷಗಾನ ಕಲಾವಿದರಿಗೆ ಅನ್ಯಾಯ ಶೋಷಣೆಯಾದಾಗ ಧ್ವನಿ ಎತ್ತುವ ಕಳಕಳಿಯ ಪಟ್ಲರ ಕಂಡರಾಗದ ಕಟೀಲು ಯಕ್ಷಗಾನ ಮೇಳದ ಯಜಮಾನಿಕೆಯ ವೈದಿಕಶಾಹಿ ಅಸ್ರಣ್ಣ ಪರಿವಾರ ಶೂದ್ರನೊಬ್ಬನ ಛೂಬಿಟ್ಟು ರಂಗದಲ್ಲೇ ಅವಮಾನಿಸಿರುವುದು ಯಕ್ಷಾಭಿಮಾನಿಗಳಲ್ಲಿ ಅಲ್ಲೋಲಕಲ್ಲೋಲವೇ ಮಾಡಿಬಿಟ್ಟಿದೆ……

ಅದು ಶುಕ್ರವಾರ 22-11-2019ನೇ ತಾರೀಖಿನ ರಾತ್ರಿ ಆಗರ್ಭ ಶ್ರೀಮಂತ ಕಟೀಲು ದುರ್ಗಾಪರಮೇಶ್ವರಿ ದೇವಳದ ಅಂಗಳದಲ್ಲಿ ಆಟ ನಡೆದಿತ್ತು. ಈ ವರ್ಷದ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳ ತಿರುಗಾಟದ ಆರಂಭದ ಮೊದಲ ಆಟ. ಆ ಪ್ರಸಂಗದ ದ್ವಿತಿಯಾರ್ಧದ ಸುಮಾರು 12:30ರ ಹೊತ್ತಿಗೆ ಪಟ್ಲ ಮೊದಲಿದ್ದ ಭಾಗವತರಿಂದ ಜಾಗಟೆ ಪಡೆದು ಪೀಠದಲ್ಲಿ ಕುಳಿತುಕೊಳ್ಳುತ್ತಾರೆ. ಅಷ್ಟರಲ್ಲಾಗಲೇ ಆತನ ಸಾವಿರಾರು ಅಭಿಮಾನಿಗಳು ಶಿಳ್ಳೆ-ಚಪ್ಪಾಳೆ ಹೊಡೆದು ರೋಮಾಂಚಿತರಾಗಿದ್ದಾರೆ. ಇನ್ನೇನು ಚಕ್ಕಳಬಕ್ಕಳ ಹಾಕಿ ಹಾಡಬೇಕು ಎನ್ನುವಷ್ಟರಲ್ಲಿ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ತೆರೆಯ ಹಿಂದಿನಿಂದ ಬಂದು- “ನೀನು ಹಾಡೋದು ಬೇಡ… ನಿನ್ನನ್ನು ಮೇಳದಿಂದ ಹೊರಹಾಕಲಾಗಿದೆ…” ಅಂತಾನೆ.

ಪಟ್ಲ ಮರುಮಾತಾಡದೆ ವೇದಿಕೆಯಿಂದಿಳಿದು ನೇರ ಭ್ರಮರಾಂಭೆಯ ಗುಡಿಬಳಿ ಹೋಗಿ ಭಾಗವತಿಕೆಯ ಪೇಟ ಬಾಗಿಲಲ್ಲಿಟ್ಟು ಮನೆಗೆ ಬೇಸರದಿಂದ ಹೆಜ್ಜೆ ಹಾಕುತ್ತಾರೆ. ಪಟ್ಲ ಸಂಯಮ ಕಳೆದುಕೊಂಡಿದ್ದರೆ, ಆ ರಾತ್ರಿ ದುರ್ಗಾಪರಮೇಶ್ವರಿಯ ಸನಿಹ ರಣರಂಗವಾಗುತ್ತಿತ್ತು. ಆತ ಒಂದು ಕಣ್ಣು ಸನ್ನೆ ಮಾಡಿದರೂ ಸಾಕಿತ್ತು ಅಲ್ಲಿ ನೆರೆದಿದ್ದ ಅಭಿಮಾನಿಗಳು ಕೆರಳಿ ದೊಡ್ಡ ದೊಂಬಿಯೇ ಆಗಿಹೋಗುತ್ತಿತ್ತು. ಆದರೆ ಪಟ್ಲ ಅಂಥ ಅನಾಹುತಕ್ಕೆ ಆಸ್ಪದ ಕೊಡದೆ ತನಗಾದ ಅಪಮಾನವನ್ನು ಆಪ್ತರಲ್ಲಿ ಹೇಳಿಕೊಂಡು ಹಗುರಾದರು.

ಆದರೆ ರಾತ್ರಿ ಬೆಳಗಾಗುವುದಲ್ಲಿ ಸ್ವರವಾರಿಧಿ ಪಟ್ಲರಿಗೆ ಕಟೀಲು ದೇವಳವನ್ನು ಅಕ್ರಮವಾಗಿ ಕಬ್ಜಾ ಮಾಡಿಕೊಂಡು ಕೋಟಿ ಲೂಟಿ ಮಾಡುತ್ತಿರುವ ಅರ್ಚಕ ಕುಟುಂಬದ ಅಸ್ರಣ್ಣಗಳು ಮತ್ತವರ ಗುಲಾಮನಂತಿರುವ ಯಕ್ಷಗಾನ ಮೇಳದ ಗುತ್ತಿಗೆದಾರ ದೇವಿಪ್ರಸಾದ್ ಶೆಟ್ಟಿ ಬುದ್ಧಿಪೂರ್ವಕವಾಗೇ ಪ್ರೇಕ್ಷಕರೆದುರು ಅವಮಾನಿಸಿ ಸೇಡೊಂದು ತೀರಿಸಿಕೊಂಡಿದ್ದಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಬಿಟ್ಟಿತು. ಆ ಕ್ಷಣ ಶುರುವಾದ ದೇವಸ್ಥಾನಕ್ಕೆ ಗಂಟುಬಿದ್ದಿರುವ ಧೂರ್ತರ ವಿರುದ್ಧ ಶುರುವಾದ ಪ್ರತಿಭಟನೆ, ಸಾಮಾಜಿಕ ಜಾಲತಾಣದ ಅಭಿಯಾನ ಇನ್ನೂ ನಿಂತಿಲ್ಲ. ಯಕ್ಷ ರಸಿಕರ ಹಾಗೂ ಪಟ್ಲರ ಲಕ್ಷಾಂತರ ಅಭಿಮಾನಿಗಳ ಆಕ್ರೋಶ ಆಸ್ಫೋಟಕ ಹಂತ ತಲುಪುತ್ತಿದೆ!!

ಈ ಅಪಮಾನ ಪ್ರಸಂಗದ ಹಿಂದೆ ಎರಡು ವರ್ಷದ ದ್ವೇಷಾಸೂಯೆಯ ಕರೆ ಅಡಗಿದೆ. ಪಟ್ಲ ಕಳೆದ ಇಪ್ಪತ್ತು ವರ್ಷದಿಂದ ಕಟೀಲು ಮೇಳದಲ್ಲಿ ಭಾಗವತಿಕೆ ಮಾಡುತ್ತಿದ್ದಾರೆ. ಬೇರೆ ಮೇಳಗಳಿಂದ ದೊಡ್ಡ ಮೊತ್ತದ ಸಂಬಳದ ಆಫರ್ ಬಂದರೂ ಭಾವನಾತ್ಮಕ ಸಂಬಂಧದ ಕಟೀಲು ಮೇಳ ಬಿಡಲು ಆತ ಸಿದ್ಧರಿಲ್ಲ. ಕಳೆದೆರಡು ವರ್ಷದಿಂದ ದೇವಳದ ಆಡಳಿತಗಾರರು ಮತ್ತು ಪಟ್ಲರ ಸಂಬಂಧ ಕೆಟ್ಟಿತ್ತು. ದೇವಸ್ಥಾನ ಮತ್ತು ಮೇಳ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಾರಾಡುವ ಅರ್ಚಕ ಫ್ಯಾಮಿಲಿ ಹರಿನಾರಾಯಣದಾಸ ಅಸ್ರಣ್ಣ ಮತ್ತು ಆಟದ ಮೇಳದ ದೇವಿಪ್ರಸಾದ್ ಶೆಟ್ಟಿಯ ಅಳಿಯ ಸುಪ್ರಿತ್ ಸೇರಿಕೊಂಡು ಪಟ್ಲರ ವಿರುದ್ಧ ಕಿತಾಪತಿ ಶುರುಹಚ್ಚಿಕೊಂಡಿದ್ದರು. ಇದಕ್ಕವರ ಬಳಿ ಎರಡು ಕಾರಣವಿತ್ತು. ಒಂದು, ಮೇಳದಲ್ಲಿ ಶೋಷಣೆಗೆ ಸಿಲುಕಿರುವ ಕಲಾವಿದರನ್ನು ಪಟ್ಲ ಎತ್ತಿಕಟ್ಟಿ ಆಡಳಿತಗಾರರ ವಿರುದ್ಧ ನಿಲ್ಲಿಸಿದ್ದಾರೆಂಬುದು. ಮತ್ತೊಂದು ತಮ್ಮ ಮೇಳಕ್ಕೆ ಬರುತ್ತಿದ್ದ ದಾನ-ದೇಣಿಗೆ ಪಟ್ಲರ ಫೌಂಡೇಷನ್‍ನಿಂದಾಗಿ ಕಮ್ಮಿಯಾಗುತ್ತಿದೆಯೆಂಬ ಆತಂಕ.

ಕಟೀಲು ಮೇಳದಲ್ಲಿ ಅನ್ಯಾಯಕ್ಕೆ ಒಳಗಾಗಿದ್ದ ಕಲಾವಿದರ ಬೆನ್ನಿಗೆ ಪಟ್ಲ ನಿಂತಿದ್ದು ನಿಜ. ಅದವರ ಸ್ವಭಾವ. ಆತ ಸದಾ ನೊಂದ ಕಲಾವಿದರ ಪಕ್ಷಪಾತಿ. ಕಟೀಲು ಮೇಳದ ಕಲಾವಿದ ಕರ್ಮಚಾರಿಗಳಿಗೆ ಸಿಗುವ ಸಂಬಳ ದಿನಕ್ಕೆ 150-200ರೂ! ಉಳಿದ ಮೇಳದಲ್ಲಿ ಸಾವಿರಗಟ್ಟಲೆ ಸಂಬಳವಿದೆ. ತಮ್ಮ ಬದುಕಿನ ಹಕ್ಕಿಗಾಗಿ ಪ್ರಶ್ನಿಸಿದ ಎಂಟು ಕಲಾವಿದರನ್ನು ಆಡಳಿತಗಾರರು ಯಾವ ಮುಲಾಜೂ ಇಲ್ಲದೆ ಮೇಳದಿಂದ ಹೊರಹಾಕುತ್ತಾರೆ. ಹರಿನಾರಾಯಣದಾಸ ಮತ್ತು ಸುಪ್ರಿತ್‍ನ ಪಾರುಪತ್ಯದ ವಿರುದ್ಧ ಯಾವ ಕಲಾವಿದನೂ ಸೊಲ್ಲೆತ್ತುವಂತೆಯೇ ಇಲ್ಲ. ಹಲವು ವರ್ಷ ಮೇಳದಲ್ಲಿ ದುಡಿದು ರಂಗಸ್ಥಳದಲ್ಲೇ ಬಿದ್ದು ಅಸುನೀಗಿದ ಕಲಾವಿದ ಗೇರುಕಟ್ಟೆ ಗಂಗಯ್ಯರಿಗೆ ಹತ್ತು ವರ್ಷದ ಸಂಬಳವೇ ಕೊಟ್ಟಿರಲಿಲ್ಲ. ಅರವತ್ತು ವರ್ಷಗಳ ಕಾಲ ಮೇಳದಲ್ಲಿದ್ದ ಐತಪ್ಪರಿಗಾದ ಅನ್ಯಾಯ ಘೋರ. ಗಂಗಯ್ಯರ ಕುಟುಂಬಕ್ಕೆ ಹರಿ-ಸುಪ್ರಿತ್ ಪೈಸೆ ಪರಿಹಾರ ಕೊಡಲಿಲ್ಲ. ಆದರೆ ಪಟ್ಲ ಫೌಂಡೇಷನ್ 2 ಲಕ್ಷ ಕೊಡುತ್ತದೆ.

ಮೇಳದಲ್ಲಿರುವ 300-350 ಕಲಾವಿದರನ್ನು ದೇವರ ಭಯದಿಂದ ಜೀತದಾಳುಗಳಾಗಿಸಿಕೊಳ್ಳಲಾಗಿದೆ. ಕಟೀಲು ಮೇಳದವರಿಗೆ ಯಾವ ಭದ್ರತೆಯೂ ಇಲ್ಲ. ತಮಗಾಗುತ್ತಿರುವ ಶೋಷಣೆಯ ಬಗ್ಗೆ ವಜಾ ಆಗಿದ್ದ ಎಂಟು ಕಲಾವಿದರು ಹೈಕೋರ್ಟ್‍ನಲ್ಲಿ ವ್ಯಾಜ್ಯ ಹೂಡಿದ್ದರು. ಮುಜರಾಯಿ ಇಲಾಖೆಗೆ ಸೇರಿದ ಎ-ದರ್ಜೆಯ ಕಟೀಲು ದೇವಸ್ಥಾನದ ಆಟದ ಮೇಳವನ್ನು ಖಾಸಗಿ ಮಂದಿ ಬೇಕಾಬಿಟ್ಟಿಯಾಗಿ ನಡೆಸಿ ದುಡ್ಡು ಮಾಡುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈಚೆಗಷ್ಟೇ ಹೈಕೋರ್ಟ್, ಆಟದ ಮೇಳಗಳನ್ನು ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ನಡೆಸಬೇಕೆಂಬ ಆದೇಶ ನೀಡಿತ್ತು. ಇದರಿಂದ ಹತಾಶರಾಗಿದ್ದ ಹರಿ ಅಸ್ರಣ್ಣ – ಸುಪ್ರಿತ್ ಶೆಟ್ಟಿ ಗ್ಯಾಂಗ್ ಭಾಗವತ ಪಟ್ಲರನ್ನು ಮೇಳದಿಂದ ಓಡಿಸುವ ನಿರ್ಧಾರಕ್ಕೆ ಬಂದಿತ್ತು.

ಕಟೀಲು ದೇವಸ್ಥಾನದ ಆರು ಯಕ್ಷಗಾನ ಮೇಳಗಳಿವೆ. ಇವೆಲ್ಲವೂ ಯಕ್ಷಗಾನ ಪ್ರಿಯೆ ದುರ್ಗಾಪರಮೇಶ್ವರಿ ಪ್ರಿತ್ಯರ್ಥ ಭಕ್ತಾದಿಗಳು ಹೊರುವ ಹರಕೆ ಸೇವೆಯಿಂದ ಆಟ ನಡೆಸುತ್ತವೆ. ಒಂದು ಸೇವೆ ಆಟಕ್ಕೆ ಕಲ್ಲಾಡಿ ಶೆಟ್ಟಿ ಮತ್ತವನ ಅಳಿಯ ಸುಪ್ರಿತ್ 60-70 ಸಾವಿರ ರೂ. ಪಡೆಯುತ್ತಿದ್ದಾರೆ. ಇದರಲ್ಲಿ ಕೇವಲ 5,000ರೂ ಮಾತ್ರ ದೇವಸ್ಥಾನಕ್ಕೆ ಕೊಡುತ್ತಾರೆ. ಪ್ರತಿ ವರ್ಷ ಆಟದ ಸೇವೆಯಿಂದ ಬರುವ ಆಮದಾನಿ ಕಮ್ಮಿ ಕಮ್ಮಿಯೆಂದರೂ 7-8 ಕೋಟಿ. ಇದರಲ್ಲಿ ಅಮ್ಮಮ್ಮಾ ಎಂದರೆ ದೇವಸ್ಥಾನಕ್ಕೆ 1 ಕೋಟಿಯಷ್ಟೇ ಸಿಗುತ್ತದೆ. ಹರಕೆ ಆಟದ ಹೊತ್ತಲ್ಲಿ ಯಕ್ಷಗಾನದ ವೇಷಕ್ಕಿಂತಲೂ ಹೆಚ್ಚು “ಕುಣಿಯುವುದು ಅಸ್ರಣ್ಣಗಳು. ಮೂರ್ನಾಲ್ಕು ಅಸ್ರಣ್ಣಗಳನ್ನು ಹರಕೆ ಹೊತ್ತವರು ರಂಗಸ್ಥಳಕ್ಕೆ ಕರೆತಂದು ಪಾದ ಪೂಜೆ ಮಾಡಬೇಕು; ಸಾವಿರಾರು ರೂ ಪಾದ ಕಾಣಿಕೆ ಅರ್ಪಿಸಬೇಕು.

ಮುಂಬೈ ಮುಂತಾದೆಡೆ ಉದ್ಯಮ ನಡೆಸುವ ಶ್ರೀಮಂತರು ಕಟೀಲು ದೇವಿ ಸನ್ನಿಧಿಯಲ್ಲಿ ಹರಕೆ ಆಟ ಆಡಿಸೋದು ಹೆಚ್ಚು. ಇವರೆಲ್ಲ ಬಾಟ್-ಬಾಟ್ ಕಾಣಿಕೆ ಅಸ್ರಣ್ಣಗಳ ಅಡಿಯಡಿ ಇಡುತ್ತಾರೆ. ಹೀಗೆ ದೇವರ ಹೆಸರಲ್ಲಿ ಅಸ್ರಣ್ಣಗಳು ಆಟದ ಹೊತ್ತಲ್ಲಿ ಪಡೆಯುವ ಕಾಣಿಕೆ ಕೋಟಿಗೂ ಮೀರುತ್ತದೆ!!

ಹರಕೆ ಆಟ ಆಡಿಸುವವರ ಮನೆಗೆ ಅರ್ಚಕರು ಬಂದು ಪೂಜಿಸುವ ಪದ್ಧತಿಯಿದೆ. ಆದರೆ ಶೂದ್ರರ ಮನೆಗೆ ಈ ದೇವರು ಹೋಗೋದಿಲ್ಲ. ಅರ್ಚಕರ ಮನೆಗೆ ಅಥವಾ ದೇವಸ್ಥಾನದ ಒಂದು ಕೋಣೆಯಲ್ಲಿ ಶೂದ್ರ ಭಕ್ತರಿಗಾಗಿ ದೇವರು ಬರುತ್ತಾರೆ. ಅಲ್ಲಿ ಅರ್ಚಕ ಅಸ್ರಣ್ಣಗಳ ಆದರಾತಿಥ್ಯ-ಊಟೋಪಚಾರ-ಕಾಣಿಕೆ-ಇವಕ್ಕೆ 25-30 ಸಾವಿರ ಸುಲಿಗೆ ನಡೆಯುತ್ತದೆ. ಇಂಥ ಲಾಭದಾಯಕ ಸೇವೆ ಆಟದ ಮೇಳಗಳ ಹರಾಜಿಗೆ ಅಸ್ರಣ್ಣಗಳು ಬಿಡುತ್ತಿಲ್ಲ. ಒಂದು ಆಟಕ್ಕೆ 20-25 ಸಾವಿರ ಕೊಟ್ಟು ವಲಮ್‍ನಲ್ಲಿ ಮೇಳ ಪಡೆಯಲು ಹಲವರು ರೆಡಿಯಿದ್ದಾರೆ. ಆದರೆ ತಮ್ಮ ಕರಾಳ ಆಮದನಿಗೆ ಹೊಡೆತಬೀಳುತ್ತದೆಂದು ಅಸ್ರಣ್ಣಗಳು ವಲಾಮ್ ಮಾಡಲು ಬಿಡುತ್ತಿಲ್ಲ. ಆಟದ ಬುಕ್ಕಿಂಗ್‍ನಲ್ಲೂ ಅವ್ಯವಹಾರ.

ಕಟೀಲು ದೇವಸ್ಥಾನವನ್ನು ಗೋಲ್‍ಮಾಲ್‍ನ ಅಡ್ಡೆಮಾಡಿಕೊಂಡಿರುವ ಅಸುರಣ್ಣಗಳ ಕೋಟಿ ಲೂಟಿ ಒಂದೆರಡು ನಮೂನೆಯಲ್ಲ! ಬ್ರಹ್ಮಕಲಶೋತ್ಸವ ಬಂದರಂತೂ ಈ ಭಟ್ಟರಿಗೆ ಸುಗಿಯೋ ಸುಗ್ಗಿ!! ಅರ್ಚಕರಿಂದ ಪ್ರತಿವರ್ಷ ಮೂರ್ನಾಲ್ಕು ಲಕ್ಷ ಕಮಿಷನ್ ದೇವಸ್ಥಾನದಿಂದ ಪಡೆಯುವ ಅಸ್ರಣ್ಣಗಳು ಚಂಡಿಕಾ ಹೋಮದಲ್ಲಿ ಹಗಲುದರೋಡೆ ಮಾಡುತ್ತಿದ್ದಾರೆ. ಒಂದು ದಿನಕ್ಕೆ ನಾಲ್ಕು ಹೋಮ ಮಾಡುತ್ತಾರೆ. ಪ್ರತಿ ಹೋಮಕ್ಕೆ 500-2000 ರೂನಂತೆ ದೇವಸ್ಥಾನಕ್ಕೆ ಕೊಟ್ಟರೆ ಉಳಿದದ್ದು ಅಸ್ರಣ್ಣಗಳ ಜೋಳಿಗೆಗೆ!!

ದೇವಸ್ಥಾನದ ಆವಾರವನ್ನು ಮಾಫಿಯಾ ಅಡ್ಡೆಯಾಗಿಸಿಕೊಂಡಿರುವ ಅಸ್ರಣ್ಣಗಳ ದುಡ್ಡಿನ ದಾಹಕ್ಕೆ ದುರ್ಬಲ ವ್ಯಾಪಾರಸ್ಥರೆಲ್ಲ ಕಂಗಾಲಾಗಿ ಹೋಗಿದ್ದಾರೆ. ಹಣ್ಣು-ಕಾಯಿ-ಹೂವಿನ ಅಂಗಡಿಯವರೂ ಹರಿ ಅಸ್ರಣ್ಣ ಗ್ಯಾಂಗಿಗೆ ಹಫ್ತಾ ಕೊಡಬೇಕು. ದೇವಸ್ಥಾನಕ್ಕೆ ಬರುವ ಲೋಡುಗಟ್ಟಲೇ ಕಾಯಿ ಮಾರಿ ತಿಂತಾರೆ. ಹಣವಂತರ ಮಕ್ಕಳ ಮದುವೆ ದೇವಸ್ಥಾನದಲ್ಲಿ ನಡೆಸುವ ಬಿಸ್ನೆಸ್ ಲಕ್ಷದ ಲೆಕ್ಕದ್ದು. ದೇವಿಗೆ ಬರುವ ಬೆಲೆ ಬಾಳುವ ಸೀರೆಗಳನ್ನು ಅಸ್ರಣ್ಣ ಕುಟುಂಬದ ಹೆಣ್ಣುಮಕ್ಕಳು ರಾಜಾರೋಷವಾಗಿ ಉಟ್ಟು ಮೆರೆಯತ್ತಾರೆ. ನವರಾತ್ರಿ ಹೊತ್ತಲ್ಲಿ ದೇವರ ಸೀರೆ ವಿತರಿಸುವಾಗಲೂ ಬ್ರಾಹ್ಮಣಿಕೆ ತಾರತಮ್ಯ ನಡೆಯುತ್ತಿದೆ. ವಿಪ್ರ ಸಮುದಾಯದ ಹೆಂಗಸರಿಗೆ ಜರತಾರಿ ಸೀರೆ ಕೊಟ್ಟರೆ ಕಡಿಮೆ ದರ್ಜೆಯ ಅರ್ಧ ಸೀರೆ ತುಂಡು ಶೂದ್ರ ಹೆಂಗಸರಿಗೆ ಕೊಡುತ್ತಾರೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಅಸ್ರಣ್ಣಗಳ ಅಕ್ರಮ ಸಂಪತ್ತು ಸವಾಲಿನಂತಿದೆ!!

ಮುಜರಾಯಿ ಇಲಾಖೆಗೆ ಕಾನೂನುನಿಷ್ಠ ಐಎಎಸ್ ರೋಹಿಣಿ ಸಿಂಧೂರಿ ಪ್ರಭಾರಿ ಕಮಿಷನರ್ ಆಗಿಬಂದಾಗ ಕಟೀಲು ದೇವಳದ ಅವ್ಯವಹಾರಕ್ಕೆ ಒಂದಿಷ್ಟು ಕಡಿವಾಣ ಹಾಕಿದ್ದರು. ಆದರೆ ಬಹಳ ವರ್ಷದಿಂದ ಮುಜರಾಯಿ ಕಮಿಷನರ್ ಕುರ್ಚಿಗೆ ಫೆವಿಕಾಲ್ ಹಾಕಿ ಕುಳಿತಿರುವ ಶೈಲಜಾ ಎಂಬ ಭ್ರಷ್ಟೆ ಅಸ್ರಣ್ಣಗಳ ದೋಖಾಬಾಜಿಗೆ ನೆರವು ನೀಡುತ್ತಿದ್ದಾರೆ. ಹಾಲಿ ಅಸ್ರಣ್ಣ ಪ್ರತಿ ತಿಂಗಳು ಶೈಲಜಾ ಮೇಡಂ ಚೇಂಬರ್‍ನಲ್ಲಿ ಠಳಾಯಿಸೋದು ಕಟೀಲು ದೇವಳದಲ್ಲಿನ ದಗಲುಬಾಜಿ ದಂಧೆಗೆಲ್ಲಾ ಸಾಕ್ಷಿಯಂತಿದೆ!! ಜನಪ್ರಿಯ ಭಾಗವತ ಪಟ್ಲ ಶೆಟ್ಟಿಗೆ ರಂಗಸ್ಥಳದಲ್ಲೇ ಅವಮಾನಿಸಲಾದ ಪ್ರಸಂಗ ಅಸುರಣ್ಣಗಳ ಅವಸಾನಕ್ಕೆ ನಾಂದಿಯಾದೀತಾ? ಹಾಗಾಗಲೆಂಬುದೇ ಕಟೀಲು ದೇವಿ ಭಕ್ತರ ಬೇಡಿಕೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...