Homeಮುಖಪುಟರಾಹುಲ್‌ ಗಾಂಧಿಯ 'ಭಾರತ ನ್ಯಾಯ ಯಾತ್ರೆ’ಗೆ ಮರು ನಾಮಕರಣ

ರಾಹುಲ್‌ ಗಾಂಧಿಯ ‘ಭಾರತ ನ್ಯಾಯ ಯಾತ್ರೆ’ಗೆ ಮರು ನಾಮಕರಣ

- Advertisement -
- Advertisement -

ಕಾಂಗ್ರೆಸ್‌ ಪಕ್ಷವು ಮಣಿಪುರದಿಂದ ಮಹರಾಷ್ಟ್ರದವರೆಗೆ ಜ.14ರಿಂದ ತೆರಳಲು ಉದ್ದೇಶಿಸಿರುವ ‘ಭಾರತ ನ್ಯಾಯ ಯಾತ್ರೆ’ಯನ್ನು ‘ಭಾರತ ಜೋಡೋ ನ್ಯಾಯ ಯಾತ್ರೆ’ ಎಂದು  ಕಾಂಗ್ರೆಸ್‌ ಮರುನಾಮಕರಣ ಮಾಡಿದ್ದು, ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿಯನ್ನು ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಯವನ್ನು ಬರೆದಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಾಗಿದ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಯಾತ್ರೆಯು ಹಿಮಾಚಲ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವಲ್ಲಿ ಪಾತ್ರವನ್ನು ವಹಿಸಿತ್ತು. ಯಾತ್ರೆ ಮೂಲಕ ದೇಶದಲ್ಲಿ ಮಕ್ಕಳು, ಯುವಜನರು, ವಿದ್ಯಾರ್ಥಿಗಳು, ಹಿರಿಯರು, ಚಿಂತಕರು ಸೇರಿದಂತೆ ಎಲ್ಲ ವರ್ಗಗಳ ಜನರು ಒಟ್ಟುಗೂಡಿಸಲು ಪ್ರಯತ್ನಿಸಲಾಗಿತ್ತು. ಒಡೆದಿರುವ ಜನರ ಮನಸ್ಸುಗಳನ್ನು ಜೋಡಿಸುವ ಈ ಯಾತ್ರೆ ಇತಿಹಾಸವನ್ನು ನಿರ್ಮಿಸಿತ್ತು. ಆದ್ದರಿಂದ ಆ ಯಾತ್ರೆಯನ್ನು ಮತ್ತೆ ಜನರ ನೆನಪಿನಲ್ಲಿರಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ.

ಕಾಂಗ್ರೆಸ್‌ ಪಕ್ಷದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಸಿಎಲ್‌ಪಿ ನಾಯಕರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತ್ ಜೋಡೋ ಯಾತ್ರೆ ಜನರ ಮನಸ್ಸಿನಲ್ಲಿರುವ ಬ್ರ್ಯಾಂಡ್ ಆಗಿದೆ. ನಾವು ಅದನ್ನು ಕಳೆದುಕೊಳ್ಳಬಾರದು ಎಂದು ರಾಹುಲ್ ಗಾಂಧಿಯವರು ಸೆಪ್ಟೆಂಬರ್‌ 2022ರಿಂದ 2023ರ ಜನವರಿವರೆಗೆ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಹಮ್ಮಿಕೊಂಡಿದ್ದ ಭಾರತ್‌ ಜೋಡೋ ಯಾತ್ರೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.

‘ಭಾರತ ಜೋಡೋ ನ್ಯಾಯ’ ಯಾತ್ರೆ ಜನವರಿ 14ರಂದು ಹಿಂಸಾಚಾರ ಪೀಡಿತ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ರಾಹುಲ್ ಗಾಂಧಿ 66 ದಿನಗಳ ಅವಧಿಯಲ್ಲಿ ಪ್ರತಿದಿನ ಎರಡು ಬಾರಿ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ನಾವು ಯಾತ್ರೆಯ ಮಾರ್ಗಗಳನ್ನು ಅಂತಿಮಗೊಳಿಸಿದ್ದೇವೆ. ನಾವು ಯಾವಾಗಲೂ ಅರುಣಾಚಲ ಪ್ರದೇಶವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆವು. ‘ಭಾರತ ಜೋಡೋ ನ್ಯಾಯ’ ಯಾತ್ರೆ ಅರುಣಾಚಲ ಸೇರಿದಂತೆ 15 ರಾಜ್ಯಗಳ ಮೂಲಕ ಸಾಗಲಿದೆ ಎಂದು ಜೈರಾಮ್ ರಮೇಶ್‌ ಹೇಳಿದ್ದಾರೆ.

ಮಣಿಪುರದಿಂದ ಆರಂಭವಾಗುವ ಈ ಯಾತ್ರೆಯು 14 ರಾಜ್ಯಗಳ ಒಟ್ಟು 85 ಜಿಲ್ಲೆಗಳಲ್ಲಿ 6,700 ಕಿ.ಮೀ. ಕ್ರಮಿಸಲಿದೆ. ಮಹಾರಾಷ್ಟ್ರ ತಲುಪುವ ಮುನ್ನ ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಸಾಗಲಿದೆ. ಯಾತ್ರೆಯ ಬಹುಭಾಗ ಬಸ್‌ನಲ್ಲೇ ಸಾಗಲಿದ್ದು, ಆಯ್ದ ಸ್ಥಳಗಳಲ್ಲಿ ಪಾದಯಾತ್ರೆ ನಡೆಯಲಿದೆ.

ಕಾಂಗ್ರೆಸ್ ಆರಂಭದಲ್ಲಿ ಅರುಣಾಚಲದ ಪಾಸಿಘಾಟ್‌ನಿಂದ ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಗುಜರಾತ್‌ನ ಪೋರಬಂದರ್‌ವರೆಗೆ ಯಾತ್ರೆ ನಡೆಸಲು ಚಿಂತಿಸಿತ್ತು. ಆದರೆ ಮೇ 3 ರಿಂದ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರವು ಕಾಂಗ್ರೆಸ್ ಯಾತ್ರೆಯ ದಿಕ್ಕನ್ನು ಬದಲಾಯಿಸುವಂತೆ ಮಾಡಿದೆ.

ಯಾತ್ರೆಯು ಉತ್ತರ ಪ್ರದೇಶದಲ್ಲಿ 1,000 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ, ಅಲ್ಲಿ ಪಕ್ಷವು ಕೇವಲ ಒಬ್ಬ ಲೋಕಸಭಾ ಸಂಸದರನ್ನು ಹೊಂದಿದೆ. ಪಶ್ಚಿಮ ಬಂಗಾಳದಲ್ಲಿ 7 ಜಿಲ್ಲೆಗಳಲ್ಲಿ ಅಂದರೆ 523 ಕಿ.ಮೀ ಗಳಷ್ಟು ದೂರ ಯಾತ್ರೆ ಸಾಗಲಿದೆ. ಮೆರವಣಿಗೆಯು ಒಟ್ಟು 110 ಜಿಲ್ಲೆಗಳನ್ನು ಒಳಗೊಂಡಿದೆ. ಎಲ್ಲಾ INDIA ಮೈತ್ರಿ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳನ್ನು ಆಹ್ವಾನಿಸಲಾಗುವುದು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್‌ ಜೋಡೊ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,500 ಕಿ.ಮೀ ಕ್ರಮಿಸಿತ್ತು. ರಾಹುಲ್‌ ಅವರು ಹಿಂದಿನ ಯಾತ್ರೆಯಿಂದ ಪಡೆದ ಅನುಭವದೊಂದಿಗೆ ಭಾರತ  ಜೋಡೋ ನ್ಯಾಯ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಯಾತ್ರೆಯ ವೇಳೆ ದೇಶದ ಮಹಿಳೆಯರು, ಯುವಕರು ಹಾಗೂ ಅತ್ಯಂತ ಹಿಂದುಳಿದ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್‌ ದೇಶದಲ್ಲಿ ಯಶಸ್ಸನ್ನು ಪಡೆದಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದರೂ, ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.  2023ರಲ್ಲಿ ಕರ್ನಾಟಕ ಮತ್ತು ತೆಲಂಗಾಣವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ: ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾದರೂ, ಪೆಟ್ರೋಲ್‌ ಬೆಲೆ ಕಡಿತಗೊಳಿಸಿಲ್ಲ: ಕೇಂದ್ರದ ವಿರುದ್ಧ ಖರ್ಗೆ ವಾಗ್ಧಾಳಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read