Homeಮುಖಪುಟಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರ ಮಹೇಶ್ ರಾವುತ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರ ಮಹೇಶ್ ರಾವುತ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

- Advertisement -
- Advertisement -

ಎಲ್ಗಾರ್ ಪರಿಷದ್ ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರ್ಯಕರ್ತ ಮಹೇಶ್ ರಾವುತ್‌ಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು ಅರ್ಹತೆಯ ಆಧಾರದ ಮೇಲೆ ಜಾಮೀನು ಕೋರಿ ರಾವುತ್ ಮಾಡಿದ ಮನವಿಯನ್ನು ಅಂಗೀಕರಿಸಿತು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಎರಡು ವಾರಗಳ ಕಾಲ ತನ್ನ ಆದೇಶಕ್ಕೆ ತಡೆ ನೀಡುವಂತೆ ನ್ಯಾಯಾಲಯವನ್ನು ಕೋರಿದೆ. ನಂತರ ಪೀಠವು ತನ್ನ ಆದೇಶಕ್ಕೆ ಒಂದು ವಾರ ತಡೆ ನೀಡಿತು.

ರಾವತ್ ಅವರನ್ನು ಜೂನ್ 2018ರಲ್ಲಿ ಬಂಧಿಸಲಾಯಿತು ಮತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ವಿಶೇಷ ಎನ್‌ಐಎ ನ್ಯಾಯಾಲಯವು ಜಾಮೀನು ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ, ಜಾಮೀನು ಕೋರಿ 2022ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರಾವುತ್ ತನ್ನ ಮನವಿಯಲ್ಲಿ ತನ್ನ ಕಸ್ಟಡಿಯು ಅನಗತ್ಯವಾಗಿದೆ ಮತ್ತು ಇದು ಸಂವಿಧಾನದ 14 ಮತ್ತು 21 ನೇ ವಿಧಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸಾಂವಿಧಾನಿಕ ಆಧಾರದ ಮೇಲೆ ಜಾಮೀನು ಪಡೆಯಲು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾದ ಆರೋಪಿಗೆ ಮಂಜೂರು ಮಾಡುವುದು ಸಮರ್ಥನೀಯವಲ್ಲ ಎಂದು ಎನ್ಐಎ ಮನವಿಯನ್ನು ವಿರೋಧಿಸಿದೆ.

ಈ ಪ್ರಕರಣದಲ್ಲಿ 16 ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಐವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ವಿದ್ವಾಂಸ-ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ, ವಕೀಲೆ ಸುಧಾ ಭಾರದ್ವಾಜ್, ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಅವರಿಗೆ ನಿಯಮಿತ ಜಾಮೀನು ನೀಡಲಾಗಿದ್ದು, ಕವಿ ವರವರ ರಾವ್ ಅವರು ಆರೋಗ್ಯದ ಆಧಾರದ ಮೇಲೆ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

ಮತ್ತೊಬ್ಬ ಆರೋಪಿ, ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಪ್ರಕರಣವು ಪುಣೆಯಲ್ಲಿ ಡಿಸೆಂಬರ್ 31, 2017 ರಂದು ನಡೆದ ಎಲ್ಗಾರ್ ಪರಿಷತ್ ಸಮಾವೇಶಕ್ಕೆ ಸಂಬಂಧಿಸಿದೆ, ಪುಣೆ ಪೊಲೀಸರ ಪ್ರಕಾರ ಮಾವೋವಾದಿಗಳಿಂದ ಹಣ ಪಡೆದಿದೆ. ಅಲ್ಲಿ ಮಾಡಿದ ಉದ್ರೇಕಕಾರಿ ಭಾಷಣಗಳು ಮರುದಿನ ಪುಣೆಯ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಿಗೆ ಸುಪ್ರೀಂ ಜಾಮೀನು

ಮಹೇಶ್ ರಾವುತ್‌ ಕುರಿತು ಮಾಹಿತಿ:

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯವರಾದ ಮಹೇಶ್ ರಾವುತ್ ತಮ್ಮ ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಮುಖ ಯುವ ಕಾರ್ಯಕರ್ತ. ಮಹಾರಾಷ್ಟ್ರದ ಸಣ್ಣ ಹಳ್ಳಿಯಾಗಿರುವ ಲಾಖಾಪುರದಲ್ಲಿ ಹುಟ್ಟಿದ ಮಹೇಶ್, ಗಡ್ಚಿರೋಲಿಯಲ್ಲಿ ಶಾಲಾ ಶಿಕ್ಷಣ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ನಾಗಪುರಕ್ಕೆ ತೆರಳಿದರು. ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ಗೆ ಸೇರಿದರು.

ಶಿಕ್ಷಣ ಮುಗಿಸಿದ ಬಳಿಕ ಅವರು ಗಡ್ಚಿರೋಲಿಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣಾಭಿವೃದ್ಧಿ ಫೆಲೋ (ಪಿಎಂಆರ್‌ಡಿಎಫ್) ಆಗಿ ಕೆಲಸ ಮಾಡಿದರು. ದೊಡ್ಡ ಕಾರ್ಪೊರೇಟ್‌ಗಳ ಕಾನೂನುಬಾಹಿರ ಭೂಕಬಳಿಕೆ ವಿರುದ್ಧ ಮೂಲನಿವಾಸಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ರಕ್ಷಣೆ ನೀಡುವ ಪಂಚಾಯತ್ (ಅಧಿಸೂಚಿತ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ ಮತ್ತು ಅರಣ್ಯ ಹಕ್ಕುಗಳ ಕಾಯಿದೆಗಳ ಪರವಾಗಿ ಅವರು ದಣಿವರಿಯದೇ ಕೆಲಸ ಮಾಡಿದರು. ಮಹೇಶ್ ಅವರು ಸಂವಿಧಾನದ ಚೌಕಟ್ಟಿನಲ್ಲಿಯೇ ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಪ್ರೋತ್ಸಾಹಿಸಲು ನಿರಂತರವಾಗಿ ದುಡಿದರು. ತಮ್ಮ ಫೆಲೋಶಿಪ್ ಮುಗಿದ ಬಳಿಕವೂ ಅವರು ರಾಜ್ಯದ ಆದಿವಾಸಿ ಸಮುದಾಯಗಳ ಜೊತೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಿರ್ಧರಿಸಿದರು.

ಮಹೇಶ್ ರಾವುತ್ ಸಮಾಜಕಲ್ಯಾಣಕ್ಕೆ ಒತ್ತಾಸೆ ನೀಡಲು ಸಾಮೂಹಿಕ ಚಳವಳಿಗಳನ್ನು ಅಯೋಜಿಸಿದರಲ್ಲದೆ ಅಂತಹ ಹಲವು ಚಳವಳಿಗಳಲ್ಲಿ ಭಾಗವಹಿಸಿದರು. ಅವರು ಆದಿವಾಸಿಗಳು ಮತ್ತು ಇತರ ಶೋಷಿತ ವರ್ಗಗಳ ಜನರನ್ನು ಬಲವಂತದಿಂದ ಒಕ್ಕಲೆಬ್ಬಿಸುವ ವಿದ್ಯಮಾನದ ವಿರುದ್ಧ ಹೋರಾಡುವ ವಿಸ್ಥಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್ (ವಿವಿಜೆವಿಎ) ಸಂಘಟನೆಯ ಸಹಸಂಚಾಲಕರಾಗಿದ್ದರು. ವಿವಿಜೆವಿಎಯ ಸದಸ್ಯರಾಗಿ ಅವರು ಆ ಪ್ರದೇಶದ ಆದಿವಾಸಿ ಸಮುದಾಯಗಳ ತೆಂಡು ಎಲೆ ಸಂಗ್ರಹಿಸುವ ಕಾರ್ಮಿಕರನ್ನು ಸಂಘಟಿಸಿ, ಅವರು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆಯೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾದ ವ್ಯವಸ್ಥೆ ಮಾಡಿದರು.

ಆ ಪ್ರದೇಶದ ಆದಿವಾಸಿಗಳ ಪರವಾಗಿ ಪ್ರಚಾರ ಮಾಡುತ್ತಲೇ ಅವರು ದಿವಂಗತ ಬಿ.ಡಿ. ಶರ್ಮಾ ಅವರು ಸ್ಥಾಪಿಸಿದ್ದ ಭಾರತ್ ಜನ ಆಂದೋಲನ್ (ಬಿಜೆಎ) ಸಂಘಟನೆಗೂ ಸೇರಿದರು. ಬಿಜೆಎ ಜೊತೆ ತನ್ನ ಕೆಲಸದ ಮೂಲಕ ಅವರು ಸೂರಜ್‌ಗಢ್ ಮೈನಿಂಗ್ ಪ್ರೊಜೆಕ್ಟ್ ಸೇರಿದಂತೆ ಹಲವಾರು ಗಣಿಗಾರಿಕಾ ಯೋಜನೆಗಳಿಂದ ಬಾಧಿತವಾದ ಪ್ರದೇಶಗಳಲ್ಲಿ ’ಭಾಗವಹಿಸುವಿಕೆಯ ಮೂಲಕ ತಾವೇ ನಿರ್ಧಾರ ಕೈಗೊಳ್ಳುವುದರ ಪರವಾಗಿ ಜನರನ್ನು ಸಂಘಟಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಪೊಲೀಸ್ ಮತ್ತು ಪ್ರಭುತ್ವದ ಹಲವಾರು ಅಧಿಕಾರಿಗಳ ದೌರ್ಜನ್ಯ ಮತ್ತು ಅತಿರೇಕಗಳ ವಿರುದ್ಧ ಅವರ ಹೋರಾಟದ ಪರಿಣಾಮವಾಗಿ ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾದವು. ಅವರ ಪಿಎಂಆರ್‌ಡಿಎಫ್ ಸಂಗಾತಿಗಳು ಬರೆದಿರುವ ಪತ್ರವೊಂದರ ಪ್ರಕಾರ, ಮಹೇಶ್ ಅವರ ವಿರುದ್ಧ ಸರಕಾರದ ದಮನವು 2013ರಲ್ಲಿಯೇ ಆರಂಭವಾಗಿದ್ದು, ಅವರ ನಿರಂತರ ರಾಜಕೀಯ ಚಟುವಟಿಕೆಗಳು ಅವರಿಗೆ ಕಿರುಕುಳ ನೀಡುವುದಕ್ಕೆ ಕಾರಣಗಳಲ್ಲಿ ಒಂದು ಎಂದು ಹೇಳಲಾಗಿದೆ.

2018ರಲ್ಲಿ ಎಲ್ಗಾರ್ ಪರಿಷದ್‌ನ ಸಂಘಟನೆಯಲ್ಲಿ ಶಾಮೀಲಾತಿ ಮತ್ತು ತಥಾಕಥಿತ ಮಾವೋವಾದಿ ಸಂಪರ್ಕದ ಆರೋಪ ಹೊರಿಸಿ ಪುಣೆ ಪೊಲೀಸರು ಮಹೇಶ್ ಅವರನ್ನು ಬಂಧಿಸಿದರು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ)ಯ ಕೆಲವು ವಿಧಿಗಳ ಅಡಿಯಲ್ಲಿ ಅವರನ್ನು ಅವರ ನಾಗಪುರದ ಮನೆಯಿಂದ ಬಂಧಿಸಲಾಯಿತು. ವಾಸ್ತವವಾಗಿ ಅವರು ಎಲ್ಗಾರ್ ಪರಿಷದ್‌ನ ಆಯೋಜನೆಯಲ್ಲಿ ಭಾಗಿಯಾಗಿರಲೂ ಇಲ್ಲ, ಡಿಸೆಂಬರ್ 31ರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲೂ ಇಲ್ಲ. ಅವರ ಬಂಧನವು ಪ್ರಭುತ್ವ ಮತ್ತು ಕಾರ್ಪೊರೇಟ್‌ಗಳ ನಡುವಿನ ಕೂಟದ ಎದುರು ಹೋರಾಡುತ್ತಿರುವ ರಾಜ್ಯದ ಮಾನವ ಹಕ್ಕು ರಕ್ಷಕರ ವಿರುದ್ಧ ನಡೆಸಿದ ಸ್ಪಷ್ಟ ದಮನವಾಗಿದೆ. ಅಂಚಿಗೆ ಸರಿಸಲ್ಪಟ್ಟ ದಮನಿತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಅವರ ದೇಣಿಗೆಯೇ ಅವರಿಗೆ ಕಿರುಕುಳ ನೀಡುವುದಕ್ಕೆ ಮತ್ತು ನಂತರ ಅವರ ಬಂಧನಕ್ಕೆ ಕಾರಣವಾಗಿದೆ. ಅವರ ಕಾರಾಗೃಹವಾಸವು ಪ್ರಭುತ್ವವು ಕಾಲಡಿಯಲ್ಲಿ ಹೊಸಕಿಹಾಕುತ್ತಿರುವ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಅದೇ ಪ್ರಭುತ್ವ ನಡೆಸುತ್ತಿರುವ ದಬ್ಬಾಳಿಕೆಗೆ ಜೀವಂತ ಸಾಕ್ಷಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...