Homeಕರ್ನಾಟಕಬೀದರ್‌: ಕೇಂದ್ರ ಸಚಿವ ಖೂಬಾರನ್ನು ಪ್ರಶ್ನಿಸಿದ ಶಿಕ್ಷಕ ಅಮಾನತು

ಬೀದರ್‌: ಕೇಂದ್ರ ಸಚಿವ ಖೂಬಾರನ್ನು ಪ್ರಶ್ನಿಸಿದ ಶಿಕ್ಷಕ ಅಮಾನತು

- Advertisement -
- Advertisement -

ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಪ್ರಶ್ನಿಸಿದ್ದ ಕರ್ನಾಟಕದ ಶಿಕ್ಷಕರೊಬ್ಬರನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿದ್ದು, ಸಚಿವರೊಂದಿಗೆ ಶಿಕ್ಷಕ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.

ಬೀದರ್ ಜಿಲ್ಲೆಯ ಹೇಡಗಾಪುರ ಗ್ರಾಮದ ನಿವಾಸಿ, ಶಿಕ್ಷಕ ಕುಶಾಲ್ ಪಾಟೀಲ್ ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

‘ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ದೂರವಾಣಿ ಕರೆ ಮಾಡಿ ವಾಗ್ವಾದ ನಡೆಸಿದ ಆರೋಪದ ಮೇಲೆ ಬೀದರ್‌ನ ಜೀರ್ಗಾ (ಕೆ) ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಕುಶಾಲ್ ಪಾಟೀಲ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ ತಿಳಿಸಿದ್ದಾರೆ.

‘ಸಚಿವರ ಜೊತೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೇ, ಅವರೊಂದಿಗಿನ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾರಣ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಹೆಡಗಾಪುರ ಗ್ರಾಮದ ಕುಶಾಲ ಪಾಟೀಲ, ಭಗವಂತ ಖೂಬಾ ಅವರಿಗೆ ಕರೆ ಮಾಡಿ, ‘ಊರಿನಲ್ಲಿ ಗೊಬ್ಬರ ಸಿಗುತ್ತಿಲ್ಲ. ರೈತರು ತೊಂದರೆಯಲ್ಲಿದ್ದಾರೆ. ಇದರಿಂದ ನಿಮ್ಮ ಹೆಸರು ಕೆಡುತ್ತಿದೆ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಸಮಸ್ಯೆಯಾಗಲಿದೆ’ ಎಂದು ಹೇಳಿದ್ದರು.

ಇದಕ್ಕೆ ಸಚಿವರು ಖಾರವಾಗಿ ಪ್ರತಿಕ್ರಿಯಿಸಿ, ‘ನಾನು ಕೇಂದ್ರ ಸಚಿವ, ಮನೆ ಮನೆಗೆ ಗೊಬ್ಬರ ಪೂರೈಸಲು ಆಗುವುದೇ’ ಎಂದು ಪ್ರಶ್ನಿಸಿದ್ದರು. ನಂತರ ರೈತ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಪಾಟೀಲ್‌ ಅವರ ಕರೆ ಸ್ವೀಕರಿಸಿ ಮಾತನಾಡಿದ್ದ ಖೂಬಾ, “ಇದಕ್ಕೆ ಏನು ಮಾಡಲಾಗದು. ಈಗಾಗಲೇ ರಾಜ್ಯಗಳಿಗೆ ರಸಗೊಬ್ಬರ ಕಳುಹಿಸಿದ್ದು, ಸ್ಥಳೀಯ ಶಾಸಕರನ್ನು ಸಂಪರ್ಕಿಸಿ” ಎಂದು ಸೂಚಿಸಿದ್ದರು.

ಪಾಟೀಲ್ ಅವರು, “ನಮ್ಮ ಗ್ರಾಮದಲ್ಲಿ ನೀವು ಮತ ಕೇಳಲು ಸಾಧ್ಯವಾಗುವುದಿಲ್ಲ. ಬೀದರ್ ಲೋಕಸಭಾ ಕ್ಷೇತ್ರದಿಂದ ಮತ್ತೆ ಆಯ್ಕೆಯಾಗುವುದಿಲ್ಲ” ಎಂದು ಹೇಳುತ್ತಿದ್ದಂತೆ ಸಚಿವರು ಸಿಟ್ಟಿಗೆದ್ದರು.

“ನಾನು ಭಾರತ ಸರ್ಕಾರದ ಮಂತ್ರಿಯಾಗಿದ್ದೇನೆ. ಹಲವು ರಾಜ್ಯಗಳನ್ನು ನೋಡಿಕೊಳ್ಳುತ್ತಿದ್ದೇನೆ. ನೀವು ನಿಮ್ಮ ಶಾಸಕರು ಮತ್ತು ಅಧಿಕಾರಿಗಳ ಬಳಿಗೆ ಹೋಗಬೇಕು” ಎಂದು ಸಚಿವರು ಹೇಳಿರುವುದಾಗಿ ವರದಿಯಾಗಿದೆ.

ಆಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಬ್ಲಾಕ್ ಶಿಕ್ಷಣಾಧಿಕಾರಿಯಿಂದ ತನಿಖೆ ಆರಂಭಿಸಿ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಕರ್ತವ್ಯಲೋಪ, ಬೇಜವಾಬ್ದಾರಿತನ ಮತ್ತು ದುರ್ನಡತೆಯ ಆರೋಪದ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತು ಆದೇಶ ಹೊರಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಶಾಲ ಪಾಟೀಲ್, “ನಾನು ಕೃಷಿಕ ಕುಟುಂಬದಿಂದ ಬಂದವನು. ಕಳೆದ ಕೆಲವು ಹಂಗಾಮಿನಿಂದ ರಸಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ. ಜನರು ಭಗವಂತ ಖೂಬಾ ಅವರನ್ನು ಅಧಿಕಾರಕ್ಕೆ ತಂದಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಅವರನ್ನು ಸಂಪರ್ಕಿಸುವ ಮತ್ತು ಪ್ರಶ್ನಿಸುವ ಹಕ್ಕು ಜನರಿಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...