ಬಿಹಾರದ ಜಮುಯಿ ಜಿಲ್ಲೆಯಲ್ಲಿ ಯುವಕ ಮತ್ತು ಯುವತಿಗೆ ಗುಂಪೊಂದು ಸಾರ್ವಜನಿಕವಾಗಿ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವ ಭರದಲ್ಲಿ, ‘ಅನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯುತ ರೀತಿಯಲ್ಲಿ ಮಾಡಬಹುದು’ ಎಂದು ಬಿಹಾರದ ಬಿಜೆಪಿ ಸಚಿವೆ ಹಾಗೂ ಜಮುಯಿ ಕ್ಷೇತ್ರದ ಶಾಸಕಿ ಶ್ರೇಯಸಿ ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಶೂಟಿಂಗ್ ಕ್ರೀಡಾಪಟುವೂ ಆಗಿರುವ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಅನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯುತ ರೀತಿಯಲ್ಲಿ ಮಾಡಬಹುದು; ಆದರೆ ಆ ಯುವಕ ಮತ್ತು ಯುವತಿಯನ್ನು ನಡೆಸಿಕೊಂಡ ರೀತಿ ಹಾಗೂ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಬಗೆಯನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಿಲ್ಲ” ಎಂದು ವ್ಯಾಖ್ಯಾನಿಸಿದ್ದಾರೆ.
ಕಳೆದೆರಡು ದಿನಗಳಿಂದ ಜಮುಯಿ ಜಿಲ್ಲೆಯ ರಸ್ತೆಬದಿಯಲ್ಲಿ ಆ ಯುವಕ ಮತ್ತು ಯುವತಿಯನ್ನು ಗುಂಪೊಂದು ಸುತ್ತುವರಿದು ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿ ದೇಶಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಕುರಿತು ಸ್ಪಷ್ಟನೆ ನೀಡುವ ನೆಪದಲ್ಲಿ ಮಾತನಾಡಿದ ಸಚಿವೆ, “ಇತರರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದರ ಕುರಿತು ಜನರಿಗೆ ಅಭಿಪ್ರಾಯವಿರಬಹುದು. ಆದರೆ ಅಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ತಮ ಮಾರ್ಗಗಳಿವೆ, ನಮ್ಮ ಸಮಾಜದ ಯುವಜನತೆಯನ್ನು ಸ್ಥಳೀಯರು ಇಷ್ಟು ಕೆಟ್ಟದಾಗಿ ನಡೆಸಿಕೊಂಡಿದ್ದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ” ಎನ್ನುವ ಮೂಲಕ ಅನೈತಿಕ ಪೊಲೀಸ್‌ಗಿರಿಯನ್ನೇ ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ನೀಡಿರುವ ಹೇಳಿಕೆ ವೈಚಾರಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಅನೈತಿಕ ಪೊಲೀಸ್‌ಗಿರಿಯನ್ನೇ ಸಭ್ಯತೆಯ ಚೌಕಟ್ಟಿನಲ್ಲಿ ತರಲು ಹೊರಟ ಅವರ ಹೇಳಿಕೆಯ ನಡುವೆಯೂ, ಘಟನೆಗೆ ಕಾರಣರಾದ ಕಿಡಿಗೇಡಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಚಿವೆ ಭರವಸೆ ನೀಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಘಟನೆಯು ಭವಿಷ್ಯಕ್ಕೆ ಒಂದು ಮಾದರಿಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದಾಗ್ಯೂ, ಸಂವಿಧಾನಬಾಹಿರವಾಗಿ ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವ ‘ಅನೈತಿಕ ಪೊಲೀಸ್‌ಗಿರಿ’ಯಂತಹ ಕೃತ್ಯಕ್ಕೆ ಶಾಸಕಿಯೊಬ್ಬರು ‘ಸಭ್ಯತೆಯ’ ಲೇಪನ ಹಚ್ಚಲು ಯತ್ನಿಸಿರುವುದು ತೀವ್ರ ವಿಮರ್ಶೆಗೆ ಗುರಿಯಾಗಿದೆ.


