Homeಮುಖಪುಟ‘ಕಾಂಗ್ರೆಸ್ ಆಟ’ ಆಡುತ್ತಾ ಸೋಲುತ್ತಿರುವ ಬಿಜೆಪಿ...

‘ಕಾಂಗ್ರೆಸ್ ಆಟ’ ಆಡುತ್ತಾ ಸೋಲುತ್ತಿರುವ ಬಿಜೆಪಿ…

- Advertisement -
- Advertisement -

ಕಳೆದ ವಾರ ಮೋದಿಯವರು ಆಡಿದರೆನ್ನಲಾದ ಒಂದು ಮಾತು ಗಮನ ಸೆಳೆದಿತ್ತು. ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಕಡಿಮೆ ಸೀಟುಗಳನ್ನು ಪಡೆದರೂ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯು ಸರ್ಕಾರ ರಚಿಸಿರಲಿಲ್ಲ. ಏಕೆಂದರೆ ಶಿವಸೇನಾದ ಜೊತೆಗೆ ಡೀಲ್ ಕುದುರಲಿಲ್ಲ. ರಾಜ್ಯಪಾಲರ ಬಳಿ ಹೋದ ಬಿಜೆಪಿಯು ಅಧಿಕೃತವಾಗಿ ತಾನು ಸರ್ಕಾರ ರಚಿಸುವುದಿಲ್ಲ ಎಂದು ಹೇಳಿತ್ತು. ಸಂಸತ್ತಿನ ಅಧಿವೇಶನ ಆ ನಂತರ ಆರಂಭವಾಗುವುದರಲ್ಲಿತ್ತು. ಅದಕ್ಕೆ ಮುಂಚೆ ನಡೆದ ಬಿಜೆಪಿ ಸಂಸತ್‌ ಸದಸ್ಯರ ಸಭೆಯಲ್ಲಿ ಪ್ರಧಾನಿ ಮೋದಿಯವರು ಆ ಮಾತನ್ನು ಹೇಳಿದರು. ‘ಮಹಾರಾಷ್ಟ್ರದಲ್ಲಿ ನೋಡಿ, ಸರ್ಕಾರ ರಚಿಸದಿದ್ದರೂ ಪರವಾಗಿಲ್ಲ. ನಾವಾಗಲೇ ಗೆದ್ದಿದ್ದೇವೆ. ಏಕೆಂದರೆ ನಮ್ಮವರು ಯಾರೂ ಬೇಕಾದ್ದನ್ನು ಮಾತಾಡಲಿಲ್ಲ’.

ಅಂದರೆ, ಕಾಂಗ್ರೆಸ್ ಮತ್ತಿತರ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕಾಗಿ ಅನೈತಿಕ ಮೈತ್ರಿಯನ್ನು ಮಾಡಿಕೊಳ್ಳಲು ಹವಣಿಸಿವೆಯೆಂದೂ, ಬಿಜೆಪಿಯು ಶಿವಸೇನೆಯು ‘ನೀತಿಬದ್ಧವಾಗಿ ತನ್ನೊಂದಿಗೆ ಬರದೇ ಇದ್ದರೆ’ ತಾನು ಅಧಿಕಾರದಿಂದ ದೂರವುಳಿಯುವುದಾಗಿಯೂ ತೋರ್ಪಡಿಸಿದ್ದರ ಕುರಿತಾಗಿ ಪ್ರಧಾನಿ ಮಾತಾಡಿದ್ದು ಸ್ಪಷ್ಟವಾಗಿತ್ತು. ವಾಸ್ತವದಲ್ಲಿ ಅಂತಹ ಯಾವ ನೀತಿಗಳೂ ಇಲ್ಲದೇ ವಿರೋಧಪಕ್ಷಗಳನ್ನು ಬೆದರಿಸಿ, ಆಮಿಷವೊಡ್ಡಿ ಅಥವಾ ಯಾವುದಾದರೂ ಒಂದು ಮಾರ್ಗದ ಮೂಲಕ ಬಿಜೆಪಿಯು ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತಿರುವುದು ಸ್ಪಷ್ಟ. ಸೈದ್ಧಾಂತಿಕ ವಿರೋಧಿಗಳ ಜೊತೆಗೂ ಅದು ಕೈ ಜೋಡಿಸಿದೆ. ಕರ್ನಾಟಕದಿಂದ ಕಾಶ್ಮೀರದವರೆಗೆ, ಬಿಹಾರದಿಂದ ಈಶಾನ್ಯ ಭಾರತದ ರಾಜ್ಯಗಳವರೆಗೆ ಅದು ನಡೆದಿದೆ.

ಬಹುಕಾಲ ನಡೆಯುತ್ತಾ ಬರುತ್ತಿದ್ದ ಈ ‘ಕಾಂಗ್ರೆಸ್ ಆಟ’ದಲ್ಲಿ ಬಿಜೆಪಿ ಎಲ್ಲ ಸೀಮಾರೇಖೆಗಳನ್ನು ದಾಟಿರುವುದು ಸ್ಪಷ್ಟ. ಹೀಗಿರುವಾಗ ಮಹಾರಾಷ್ಟ್ರದಲ್ಲಿ ಮಾತ್ರ ಅಧಿಕೃತವಾಗಿ ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚಿಸುವುದಿಲ್ಲವೆಂದು ಹೇಳಿದ್ದು ಮತ್ತು ಮೋದಿಯವರು ಅದನ್ನು ಉಲ್ಲೇಖಿಸಿ ಬಿಜೆಪಿಯ ಹಿರಿಮೆಯ ಕುರಿತಾಗಿ ಮಾತಾಡಿದ್ದು ವಿಶೇಷವಾಗಿತ್ತು. ‘ಬೇಕಾದಷ್ಟು ರಾಜ್ಯಗಳಲ್ಲಿ ಅಧಿಕಾರ ಹಿಡಿದಾಗಿದೆ. ಕೇಂದ್ರದಲ್ಲಂತೂ ನಮ್ಮನ್ನು ಸರಿಗಟ್ಟುವವರಾರೂ ಇಲ್ಲ. ಹಾಗಾಗಿ ಇನ್ನು ಸಾಕು’ ಎಂದೇನಾದರೂ ತೀರ್ಮಾನ ಮಾಡಿಕೊಂಡಿದ್ದರೆ ಅಷ್ಟರಮಟ್ಟಿಗಾದರೂ ಅದು ಒಳ್ಳೆಯದೇ ಆಗಿರುತ್ತಿತ್ತು.

ಹಾಗೆ ನೋಡಿದರೆ ಅಧಿಕಾರ ಹಂಚಿಕೊಳ್ಳಲು ಸಾಕಾಗಿದ್ದ ಮೈತ್ರಿಯನ್ನು ಇಟ್ಟುಕೊಂಡು ಸರ್ಕಾರ ರಚನೆಯ ಹಕ್ಕು ಮಂಡಿಸಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ರಾಜ್ಯಪಾಲರಲ್ಲಿ ಹೋಗಲು ಆತುರ ತೋರಿರಲಿಲ್ಲ. ಮೈತ್ರಿ ಮಾಡಿಕೊಳ್ಳಲೂ ಮೀನಮೇಷ ಎಣಿಸಿದ್ದಲ್ಲದೇ, ಅಧಿಕಾರ ಹಂಚಿಕೆಯ ಸೂತ್ರ ಮತ್ತು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಅಂದರೆ ಕೂಡಲೇ ಅಧಿಕಾರ ಹಿಡಿದುಬಿಡುವ ಆತುರ ತಮಗೇನೂ ಇಲ್ಲ ಎಂಬಂತೆ ನಡೆದುಕೊಂಡರು.

ಶಿವಸೇನೆ ಜೊತೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅಧಿಕಾರಕ್ಕಾಗಿಯೇ ಎನ್‌ಸಿಪಿ ಹಾಗೂ ಕಾಂಗ್ರೆಸ್‌ಗಳು ಮುಂದಾದವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಆರಂಭದ ತೋರ್ಪಡಿಕೆಯ ಹಿಂಜರಿಕೆಯ ನಂತರ ಅವೂ ಪವರ್ ಷೇರಿಂಗ್ ಮಾತುಕತೆಗಳಿಗೆ ಕೂತರು. ಯಾರೂ ಸರ್ಕಾರ ರಚನೆ ಮಾಡಲಾಗದ ಅನಿವಾರ್ಯ ಸ್ಥಿತಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಸೇರುತ್ತಿದ್ದೇವಷ್ಟೇ ಎಂದು ಹೇಳಿಕೊಳ್ಳಬಲ್ಲ ಒಂದು ವಾತಾವರಣ ನಿರ್ಮಿಸಿಕೊಳ್ಳುವಷ್ಟಾದರೂ ತಾಳ್ಮೆಯನ್ನು ತೋರಿದರು ಎಂದು ಹೇಳಬಹುದು.

ಆದರೆ, ಮತ್ತೆ ಪ್ರಜಾಪ್ರಭುತ್ವದ ಕನಿಷ್ಠ ನೀತಿ ಸಂಹಿತೆಯ ಎಲ್ಲೆಗಳನ್ನು ಬಿಜೆಪಿ ಮತ್ತೊಮ್ಮೆ ಮೀರಿತು. ಯಾವ ಕಾರಣ ಹೇಳಿದರೂ ‘ಅಧಿಕಾರದಾಹದ ನಿರ್ಲಜ್ಜ ನಡವಳಿಕೆ’ ಎಂದಷ್ಟೇ ವ್ಯಾಖ್ಯಾನಿಸಬಹುದಾದ ಕ್ರಮಗಳಿಗೆ ಮುಂದಾಯಿತು. ರಾಜ್ಯಪಾಲರ ಕಚೇರಿ ಮತ್ತು ರಾಷ್ಟ್ರಪತಿಗಳ ಕಚೇರಿಯನ್ನು ಹಿಂದೆ ಕಾಂಗ್ರೆಸ್ ಬಳಸಿದ ರೀತಿಯಲ್ಲೇ ಅಥವಾ ಇನ್ನೂ ಕೆಟ್ಟದಾಗಿ ಬಳಸಿಕೊಳ್ಳಲಾಯಿತು. ಈ ರೀತಿ ಅಧಿಕಾರ ಹಿಡಿದರೆ ಬಹುಮತ ಗಳಿಸಿಕೊಳ್ಳುವುದು ಕಷ್ಟವೇನಲ್ಲ ಎಂಬುದೇ ಅವರ ಲೆಕ್ಕಾಚಾರವೆಂದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿದೆ.

ಇದನ್ನೂ ಓದಿ: ನಾಳೆಯೇ ಬಹುಮತ ಸಾಬೀತುಮಾಡಿ: ಸುಪ್ರೀಂ ಕೋರ್ಟ್‌ ಆದೇಶ

ಹಾಗಿದ್ದ ಮೇಲೆ ಕೇವಲ ಒಂದು ವಾರದ ಕೆಳಗೆ ಆ ಪಕ್ಷದ ಅತ್ಯುನ್ನತ ನಾಯಕ ಸಾರ್ವಜನಿಕ ಮರ್ಯಾದೆಯ ರೀತಿ-ನೀತಿಗಳ ಕುರಿತು ಮಾತನಾಡಿದರೇಕೆ? ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯಲು ಕ್ಯಾಬಿನೆಟ್ ಸಭೆಯನ್ನು ಕರೆಯುವ ಅಗತ್ಯವೂ ಇಲ್ಲದ ವಿಶೇಷ ಅಧಿಕಾರವನ್ನು ಬಳಸಿದರೇಕೆ? ಇನ್ನೂ ಬೆಳಕು ಹರಿಯುವ ಮುನ್ನವೇ ಮಹಾರಾಷ್ಟ್ರದ ರಾಜಭವನದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಗೌಪ್ಯ ರೀತಿಯಲ್ಲಿ ಪ್ರಮಾಣ ವಚನ ಬೋಧಿಸಲಾಗಿದೆ ಎಂದು ಹೆಚ್ಚಿನವರಿಗೆ ಗೊತ್ತಾಗಿದ್ದೇ ಪ್ರಧಾನಮಂತ್ರಿಗಳ ಟ್ವೀಟ್ ಮೂಲಕ. 70,000 ಕೋಟಿ ರೂ.ಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಒಂದು ತಿಂಗಳ ಹಿಂದಿನವರೆಗೂ ತಾವೇ ಆರೋಪಿಸುತ್ತಿದ್ದ ಅಜಿತ್ ಪವಾರ್‌ಜೀಯವರಿಗೂ ಅವರು ಅಭಿನಂದಿಸಿದ್ದರು.

ಅಂದರೆ, ರಾಜಕೀಯ ನೀತಿ ಸಂಹಿತೆಯ ಪ್ರತಿಪಾದನೆ ಮತ್ತು ಪ್ರದರ್ಶನವು ಮುಖ್ಯ ಎಂದು ಮೋದಿಯವರು ಭಾವಿಸುವುದಾದಲ್ಲಿ (ಅವರೇ ಬಿಜೆಪಿ ಸಂಸತ್ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದಂತೆ), ಅದರಲ್ಲಿ ಅವರು ಸೋತಿದ್ದಾರೆ. ಆ ಭಾಷಣದಲ್ಲಿ ಅವರು ಸೂಚಿಸಿದಂತೆ ಜನರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ. ಹಾಗಾಗಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಗ್ಗೆ ಅವಿಶ್ವಾಸವು ವ್ಯಕ್ತವಾಗಲು ಆರಂಭವಾಗಿ ಬಹಳ ಕಾಲವಾಯಿತು. ರಾಜ್ಯಗಳಲ್ಲಾಗಲೀ, ಕೇಂದ್ರದಲ್ಲಾಗಲೀ ಜನರು ವಿಶ್ವಾಸವಿಡಬಲ್ಲ ಪರ್ಯಾಯ ಇಲ್ಲದಿರುವುದರಿಂದ ಅವರ ಕೆಲಸ ಸುಲಭವಾಗಿದೆ ಎಂಬುದೂ ಸ್ಪಷ್ಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...