Homeಕರ್ನಾಟಕ'ಆತ್ಮಸಾಕ್ಷಿಗೂ ದರ ಇದೆಯೇ?' ಎಂದು ಪೋಸ್ಟ್‌ ಮಾಡಿ ಪೇಚೆಗೆ ಸಿಲುಕಿದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌

‘ಆತ್ಮಸಾಕ್ಷಿಗೂ ದರ ಇದೆಯೇ?’ ಎಂದು ಪೋಸ್ಟ್‌ ಮಾಡಿ ಪೇಚೆಗೆ ಸಿಲುಕಿದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌

- Advertisement -
- Advertisement -

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಅಡ್ಡಮತದಾನ ಮಾಡಿದ್ದರು. “ಆತ್ಮಸಾಕ್ಷಿಯಂತೆ ಮತ ಚಲಾಯಿಸಿ, ಮತ ಪತ್ರವನ್ನು ಚುನಾವಣಾ ಏಜೆಂಟ್‌ಗೆ ತೋರಿಸಿದ್ದೇನೆ” ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದರು. ಈ ಬಗ್ಗೆ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌  ‘ಆತ್ಮಸಾಕ್ಷಿಗೂ ದರ ಇದೆಯೇ?’ ಎಂದು  ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಸುರೇಶ್‌ ಕುಮಾರ್‌ಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮತ ಚಲಾಯಿಸಿದ ಬಳಿಕ‌ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಸ್‌ಟಿ ಸೋಮಶೇಖರ್‌, “ಆತ್ಮಸಾಕ್ಷಿಯಂತೆ ಮತ ಚಲಾಯಿಸಿ, ಮತ ಪತ್ರವನ್ನು ಚುನಾವಣಾ ಏಜೆಂಟ್‌ಗೆ ತೋರಿಸಿದ್ದೇನೆ. “ಯಾರು ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೋ, ಅವರಿಗೆ ಮತ ಹಾಕಿದ್ದೇನೆ. ಇದುವರೆಗೆ ಪಕ್ಷ ಹೇಳಿದ ಹಾಗೆ ಕೇಳಿದ್ದೇನೆ. ಆದರೆ, ಈ ಬಾರಿ ನನ್ನ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡುವುದಾಗಿ ಭರವಸೆ ನೀಡಿದವರ ಪರ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ‘ಆತ್ಮಸಾಕ್ಷಿಗೂ ದರ ಇದೆಯೇ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಎಕ್ಸ್‌ ಬಳಕೆದಾರರು ಸುರೇಶ್‌ ಕುಮಾರ್‌ಗೆ ಹಲವು ಘಟನೆಗಳನ್ನು ನೆನೆಪಿಸಿ ಮಂಗಳಾರತಿ ಮಾಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಸುರೇಶ್‌ ಕುಮಾರ್‌ ಅವರಿಗೆ ಪ್ರತಿಕ್ರಿಯಿಸಿರುವ ಚೆನ್ನ ಸೋಮೇಶ್ವರ ಎಂಬವರು, ಆತ್ಮಸಾಕ್ಷಿಗೆ ದರವಿಲ್ಲಾ… ದರ ಕಟ್ಟಲು ಪ್ರಯತ್ನಿಸಿದವರಿಗೆ ಆತ್ಮರಾಮನಿಂದ ತಪ್ಪಿಸಿಕೊಂಡರೂ ಕಾನೂನಿನ ಆಯಾಮದಿಂದ ತಪ್ಪಿಸಿಕೊಳ್ಳಲಾಗದು. ಸಂವಿಧಾನದ ಆತ್ಮವೇ ಪ್ರಜಾಪ್ರಭುತ್ವ, ಅದನ್ನು ತೆಲಂಗಾಣದಲ್ಲಿ, ಇತ್ತೀಚೆಗೆ ಚಂಡೀಗಡದಲ್ಲಿ ಮಾರಣಹೋಮ ಮಾಡಲೆತ್ನಿಸಿದ್ದಾಗಿದೆ ಎಂದು ಬಿಜೆಪಿಯ ಬಿಎಲ್‌ ಸಂತೋಷ್‌ಗೆ ಟಿಆರ್‌ಎಸ್‌ ಶಾಸಕರನ್ನು ಖರೀದಿಸಲು ಯತ್ನಿಸಿರುವ ಕುರಿತ ಸುದ್ದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ.

ಇದಲ್ಲದೆ ಕಳೆದ ಅವಧಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರವನ್ನು ಉರುಳಿಸಿ 14 ಮಂದಿ ಕಾಂಗ್ರೆಸ್‌ ಶಾಸಕರು, ಮೂವರು ಜೆಡಿಎಸ್‌ ಶಾಸಕರು ಸೇರಿ ಒಟ್ಟು 17 ಮಂದಿ ಶಾಸಕರು ಆಪರೇಷನ್‌ ಕಮಲಕ್ಕೆ ಒಳಗಾಗಿ  ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಸರಕಾರವನ್ನು ರಚಿಸಿದ್ದರು. ಈ ವೇಳೆ ನಿಮ್ಮ ಆತ್ಮಸಾಕ್ಷಿ ಎಲ್ಲಿಗೆ ಹೋಗಿತ್ತು ಎಂದು ಹಲವರು ಸರೇಶ್‌ ಕುಮಾರ್‌ಗೆ ಪ್ರಶ್ನೆಯನ್ನು ಮಾಡಿದ್ದಾರೆ.

ರೋಹನ್‌ ಗೌಡ ಎಂಬವರು ಈ ಕುರಿತು ಪ್ರತಿಕ್ರಿಯಿಸಿದ್ದು, ನೀವು ಆತ್ಮಸಾಕ್ಷಿಯನ್ನು ನಿಮ್ಮ ಪಕ್ಷಕ್ಕೆ ಕರೆತಂದಾಗ ದರ ನಿಗದಿ ಆಗಿ ವಿಲೇವಾರಿ ಕೂಡ ಆಗಿತ್ತು ಎಂದು ಹೇಳಿದ್ದಾರೆ. ಸಾಗರ್‌ ಕಟೀಲ್‌ ಎಂಬವರು ಪ್ರತಿಕ್ರಿಯಿಸಿದ್ದು, ನಿಮ್ಮನ್ನೇ ಕೇಳಬೇಕು, ಹೋದ ಸರಕಾರದಲ್ಲಿ 18 ಶಾಸಕರನ್ನು ಖರೀದಿ ಮಾಡಿದ್ರಲ್ಲ, ಅವರ ಹತ್ತಿರ ಕೇಲ್ನೋಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಗುರು ಎಂಬವರು ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು,  ಬಿಎಲ್ ಸಂತೋಷ್‌ ಅವರನ್ನು ಕೇಳಿ, ಅವರಿಗೆ ಷರತ್ತು, ದರ ಎಲ್ಲಾ ಚೆನ್ನಾಗಿ ಗೊತ್ತು, ಸಿಕ್ಕರೆ ತಪ್ಪಿಸಿಕೊಳ್ಳುವ ದಾರಿಗಳು ಕೂಡ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಭಾಸ್ಕರ್‌ ಎಂಬವರು ಈ ಕುರಿತು ಪ್ರತಿಕ್ರಿಯಿಸಿದ್ದು, ದರದ ಮುಂದೆ ಆತ್ಮಸಾಕ್ಷಿ ಓಡಿ ಹೋಗುತ್ತದೆ, ನಿಮ್ಮ ಸಹೋದ್ಯೋಗಿಗಳಿಗೆ ಒಮ್ಮೆ ಕೇಳಿ ನೋಡಿ ಎಂದು ಸುರೇಶ್‌ ಕುಮಾರ್‌ಗೆ ಕಾಲೆಳೆದಿದ್ದಾರೆ. ಅರುಣ್‌ ಎಂಬವರು ಪ್ರತಿಕ್ರಿಯಿಸಿ, ನೀವೇ ಅಲ್ವ ರೇಟ್‌ ಫಿಕ್ಸ್‌ ಮಾಡುವವರು, ನಿಮಗೆ ಮರೆತು ಹೋಯ್ತಾ ಎಂದು ಪ್ರಶ್ನಿಸಿದ್ದಾರೆ. ಕೃಷ್ಣ ಎಂಬವರು ಪ್ರತಿಕ್ರಿಯಿಸಿದ್ದು, ಆಪರೇಷನ್‌ ಕಮಲದಲ್ಲಿ ಆತ್ಮಸಾಕ್ಷಿಗೆ ದರ ನಿಗದಿ ಮಾಡಿದಂತಿದೆ ಎಂದು ಪೋಸ್ಟ್‌ ಮಾಡಿದ್ದಾರೆ. ಹಾರಿಸ್‌ ಎಂಬವರು ಪ್ರತಿಕ್ರಿಯಿಸಿ, ಮೊದಲು ನಿಮ್ಮನ್ನು ನೀವೇ ಕೇಳ್ಕೊಳ್ಳಿ ಎಂದು ಹೇಳಿದ್ದಾರೆ.

ಮುರಳಿ ರಮೇಶ್‌ ಎಂಬವರು, ಕಾಂಗ್ರೆಸ್‌ನಿಂದ ಬಂದು ಬಿಜೆಪಿ ಸೇರಿದಾಗ ನಿನ್ನ ಆತ್ಮಸಾಕ್ಷಿ ಏನಾಯ್ತು ಎಂದ ಸುರೇಶ್‌ ಕುಮಾರ್‌ಗೆ ಪ್ರಶ್ನಿಸಿದ್ದಾರೆ. ಅಪ್ಪು ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೊದಲ ಬಾರಿ ಅಂದರೆ 2008ರಲ್ಲಿ ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಿದ್ರಲ್ಲ ಅವನನ್ನ ಕೇಳು ಎಂದು ಸುರೇಶ್‌ ಕುಮಾರ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ, ಕರ್ನಾಟಕ ಅಲ್ಲದೆ ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಆಪರೇಷನ್‌ ಕಮಲ ಮೂಲಕ ಈ ಮೊದಲು ಸರಕಾರವನ್ನು ರಚಿಸಿತ್ತು. ಇದರ ಇತ್ತೀಚಿನ ನಿದರ್ಶನ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿದೆ. ಬಿಜೆಪಿ ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಪ್ರತಿಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರುವಂತೆ ಒತ್ತಡ ಹಾಕುತ್ತಿದೆ ಎಂಬ ಆರೋಪಗಳು ಕೂಡ ಈ ಮೊದಲು ಕೇಳಿ ಬಂದಿತ್ತು. ತೆಲಂಗಾಣದಲ್ಲಿ ಬಿಎಲ್‌ ಸಂತೋಷ್‌ ಟಿಆರ್‌ಎಸ್‌ ಶಾಸಕರನ್ನು ಖರೀದಿಸಲು ಯತ್ನವನ್ನು ಮಾಡಿ ಸಿಕ್ಕಿಬಿದ್ದಿದ್ದರು. ಈ ಕುರಿತ ಪ್ರಕರಣವನ್ನು ಅವರು ಇದೀಗ ಎದುರಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ರಾಜ್ಯಸಭೆ ಚುನಾವಣೆಯಲ್ಲಿ ಎಸ್‌ಟಿ ಸೋಮಶೇಖರ್‌ ಅಡ್ಡ ಮತದಾನ ಮಾಡಿದ್ದಕ್ಕೆ ಕೇಳಿದ ‘ಆತ್ಮಸಾಕ್ಷಿಯ ಪ್ರಶ್ನೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ಸರಿಯಾಗಿ ಪಾಠ ಮಾಡಿದ್ದಾರೆ.

 ಇದನ್ನು ಓದಿ: ರಾಜ್ಯಸಭಾ ಚುನಾವಣೆ: ಅಡ್ಡ ಮತದಾನ ಮಾಡಿದ ಎಸ್‌.ಟಿ ಸೋಮಶೇಖರ್: ವರದಿ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...