Homeಕರ್ನಾಟಕಜಾತಿಗಣತಿ: ಬಂಡವಾಳಶಾಹಿ ಜಾತಿಗಳು ವರ್ಸಸ್ ಕಾಯಕಜೀವಿ ಜಾತಿಗಳು

ಜಾತಿಗಣತಿ: ಬಂಡವಾಳಶಾಹಿ ಜಾತಿಗಳು ವರ್ಸಸ್ ಕಾಯಕಜೀವಿ ಜಾತಿಗಳು

- Advertisement -
- Advertisement -

ನಮ್ಮದು ಮೂಲತಃ ಜಾತಿಗಳ ಸಮಾಜ. ಇದರ ಮೂಲ ಚಾತುರ್ವರ್ಣ ಸಿದ್ಧಾಂತದಲ್ಲಿದೆ. ಅದು ಸಮಾಜವನ್ನು ಮೂರು ಪವಿತ್ರ-ಶ್ರೇಷ್ಠ-ಉನ್ನತ-ದ್ವಿಜ ವರ್ಣಗಳನ್ನಾಗಿ (ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ), ಒಂದನ್ನು ಅಪವಿತ್ರ-ಕನಿಷ್ಟ-ಕೀಳು-ಅದ್ವಿಜ ವರ್ಣವನ್ನಾಗಿ (ಶೂದ್ರ) ವಿಭಜಿಸಿ ಒಡೆದುದಲ್ಲದೆ ಚಾತುರ್ವರ್ಣಕ್ಕೆ ಹೊರತಾದ (ಎಕ್ಸ್‌ಕ್ಲೂಡೆಡ್) ಒಂದು ಪಂಚಮ ಅವರ್ಣವನ್ನು (ಪ.ಜಾ. ಮತ್ತು ಪ.ಪಂ) ಸೃಷ್ಟಿಸಿತ್ತು. ಈ ಅಸಮಾನತೆಯ, ಛಿದ್ರೀಕರಿಸುವ, ವಿಭಜೀಕರಣದ ಪ್ರಣಾಳಿಕೆಯನ್ನು ಅಂತರ್ಗತ ಮಾಡಿಕೊಂಡಿರುವ ಚಾತುರ್ವರ್ಣವಾದಿಗಳು ಇಂದು ’ಜಾತಿ ಗಣತಿಯಿಂದ ಸಮಾಜ ಒಡೆಯುತ್ತದೆ’ ಎಂದು ಅಬ್ಬರಿಸುತ್ತಿರುವುದು ಹಾಸ್ಯಾಸ್ಪದವಾಗಿ-ಅಸಂಗತವಾಗಿ ಕಾಣುತ್ತದೆ. ಈ ಬ್ರಾಹ್ಮಣ್ಯವ್ಯಾಧಿಗೆ ತುತ್ತಾಗಿರುವ ಎಚ್.ಡಿ. ಕುಮಾರಸ್ವಾಮಿಯವರು ಕೂಡ ಸಮಾಜವನ್ನು ಇದು ಒಡೆಯುತ್ತದೆ ಎಂದು ’ತಕ್ಷಣದ ರಾಜಕೀಯ ಲಾಭಕ್ಕಾಗಿ’ ಹೇಳುತ್ತಿದ್ದಾರೆ. ಬ್ರಾಹ್ಮಣ್ಯದ ಪ್ರತೀಕವಾಗಿರುವ ಬಿಜೆಪಿಯನ್ನು ಸಂಪ್ರೀತಗೊಳಿಸುವ ಉದ್ದೇಶ ಇದರ ಹಿಂದಿದೆ ಎಂಬುದನ್ನು ಗುರುತಿಸುವುದು ನಮಗೆ ಕಷ್ಟವಾಗಬೇಕಾಗಿಲ್ಲ. ವರ್ಣಗಳು-ಜಾತಿಗಳು ಇಂದು 21ನೆಯ ಶತಮಾನದಲ್ಲಿ ಇಲ್ಲ ಎಂದು ವಾದಿಸುವವರೂ ಅದೇ ಚಾತುರ್ವರ್ಣವಾದಿಗಳಾಗಿದ್ದಾರೆ. ಈ ಚಾತುರ್ವರ್ಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ, ಅದರ ಪರಮೋಚ್ಛ ನಾಯಕರೂ ಆಗಿರುವ ನಮ್ಮ ಪ್ರಧಾನ ಮಂತ್ರಿ ಅವರು ’ನಾನು ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ’ ಎಂದು ಹೇಳುತ್ತಾ ಜಾತಿಯನ್ನು ಮುನ್ನಲೆಗೆ ತರುತ್ತಿದ್ದಾರೆ; ಆದರೆ ಜಾತಿಗಣತಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಅವರು ತಳೆಯುತ್ತಿಲ್ಲ.

ಬಿಹಾರ ರಾಜ್ಯದಲ್ಲಿನ ಜಾತಿಸಮೀಕ್ಷೆಗೆ ಅನೇಕ ತೊಡರುಗಳನ್ನು ಸೃಷ್ಟಿಸಲು ಒಕ್ಕೂಟ ಸರ್ಕಾರ ಪ್ರಯತ್ನಿಸಿತು. ಮೊದಲನೆಯದಾಗಿ ಜನಗಣತಿ ನಡೆಸುವ ಅಧಿಕಾರ ಒಕ್ಕೂಟಕ್ಕೆ ಮಾತ್ರವಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತು. ಎರಡನೆಯದಾಗಿ ಜನಗಣತಿಯ ಜೊತೆಯಲ್ಲಿ ಜಾತಿಗಣತಿಯನ್ನು ನಡೆಸುವುದು ಸೂಕ್ತವಲ್ಲ ಎಂದು, ಇದು ಆಡಳಿತಾತ್ಮಕವಾಗಿ ಕಷ್ಟದ ಕೆಲಸವೆಂದು ಮತ್ತು ಇದು ಅತ್ಯಂತ ಜಟಿಲ ಕೆಲಸವೆಂದೂ ಮತ್ತೊಂದು ಅಫಿಡವಿಟ್‌ನಲ್ಲಿ ಹೇಳಿತ್ತು. ಜನಗಣತಿಯ ಜೊತೆಯಲ್ಲಿ ಜಾತಿಗಣತಿಯನ್ನು 1931ರಲ್ಲಿ ನಡೆಸುವುದು ಸಾಧ್ಯವಾಗಿದ್ದರೆ, ಮಾಹಿತಿ ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಇಂದಿನ ಭಾರತಕ್ಕೆ 2021ರಲ್ಲಿ ಅದು ಏಕೆ ಸಾಧ್ಯವಿಲ್ಲ? ಇದರಿಂದ ಒಂದು ಸ್ಪಷ್ಟವಾಗುತ್ತಿದೆ. ಇಂದಿನ ಆಡಳಿತ ಪಕ್ಷ ಬಿಜೆಪಿಗೆ ಜನಗಣತಿಯ ಬಗ್ಗೆ ಭಯವಿದೆ ಮತ್ತು ಸೈದ್ಧಾಂತಿಕವಾಗಿ ಅದಕ್ಕೆ ಮತ್ತು ಅದರ ಗುರುಪೀಠ ಆರ್‌ಎಸ್‌ಎಸ್‌ಗೆ ಜಾತಿಗಣತಿಗೆ ಒಪ್ಪಿಗೆಯಿಲ್ಲ. ಅದರ ಅಖಂಡ ಕಲ್ಪನೆಗೆ ಇದು ವಿರುದ್ಧವಾದುದಾಗುತ್ತದೆ.

ಜಾತಿಗಣತಿ ಪ್ರಶ್ನೆಯು ನಮ್ಮಲ್ಲಿನ ದೊಡ್ಡ ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉದಾ: ಬಿಹಾರದಲ್ಲಿ ಬಿಜೆಪಿಯು ಜಾತಿಗಣತಿಗೆ ಬೆಂಬಲ ನೀಡುತ್ತದೆ; ಆದರೆ ಒಕ್ಕೂಟದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಜಾತಿಗಣತಿ ಸಾಧ್ಯವಿಲ್ಲ ಎಂದು ಅಫಿಡವಿಟ್ ಸಲ್ಲಿಸುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ 2015ರಲ್ಲಿ ತಾನೇ ನಡೆಸಿದ ಆರ್ಥಿಕ-ಸಾಮಾಜಿಕ ಜಾತಿ ಸಮೀಕ್ಷೆ ವರದಿಯ ಬಿಡುಗಡೆಗೆ, ಪಕ್ಷದೊಳಗಿನ ಲಿಂಗಾಯತ ಮತ್ತು ಒಕ್ಕಲಿಗ ಮಂತ್ರಿಗಳು ಇಂದು 2023ರಲ್ಲಿ ವಿರೋಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ಒಕ್ಕಲಿಗ ಸ್ವಾಮಿಗಳು ಮತ್ತು ಒಕ್ಕಲಿಗರ ಸಂಘವು ಜಾತಿಗಣತಿ ವರದಿಯ ಬಿಡುಗಡೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಏಕೆ ಜಾತಿಗಣತಿಯ ಬಗ್ಗೆ ಇಷ್ಟೊಂದು ದ್ವಂದ್ವ? ರಾಜಕೀಯ ಪಕ್ಷಗಳು ಏಕೆ ಇದರ ಬಗ್ಗೆ ದೃಢವಾಗಿ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ? ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಸೌತ್ ಏಷಿಯಾ ಆಲ್ಟರ್‌ನೆಟಿವ್ ಪೋರಮ್ (ಸೆಂಟ್ ಆಂಥೊನಿ ಕಾಲೇಜು), ’ಕೌಟಿಂಗ್ ಕಾಸ್ಟ್: ಬ್ರೇಕಿಂಗ್ ದಿ ಕಾಸ್ಟ್ ಸೆನ್ಸಸ್ ಡೆಡ್‌ಲಾಕ್’ ವಿಷಯದ ಬಗ್ಗೆ ಫೆಬ್ರವರಿ 5-6, 2022ರಲ್ಲಿ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ವಾಂಸರು ಮತ್ತು ತಜ್ಞರು ಜಾತಿಗಣತಿಯ ಅಗತ್ಯವನ್ನು ಒತ್ತಿಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ(!), ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮುಂತಾದವರು ಜಾತಿಗಣತಿಯನ್ನು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳೊಳಗಿನ ಬಲಾಢ್ಯ ಉಪಜಾತಿಗಳಿಗೆ ಸೇರಿರುವ ನಾಯಕರು ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಜಾತಿಗಣತಿಯಿಂದ ತಮ್ಮ ಅಧಿಕಾರ, ಆಸ್ತಿ, ಸಾಮಾಜಿಕ-ರಾಜಕೀಯ ಸ್ಥಾನಮಾನಕ್ಕೆ ಎಲ್ಲಿ ಹೊಡೆತ ನೀಡುತ್ತದೆಯೋ ಎನ್ನುವ ಭಯದಿಂದ ಇವರೆಲ್ಲ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಉದಾ: ಲಿಂಗಾಯತದೊಳಗೆ ಬಲಾಢ್ಯ ಒಳಪಂಗಡಕ್ಕೆ ಸೇರಿದ ಆರ್ಥಿಕವಾಗಿ ಸಂಪತ್ತಿನಿಂದ ಸಬಲರಾಗಿರುವ ಶ್ಯಾಮನೂರು ಶಿವಶರಣಪ್ಪ, ಈಶ್ವರ ಖಂಡ್ರೆ ಮುಂತಾದವರು ಮತ್ತು ಒಕ್ಕಲಿಗರಲ್ಲಿ ಬಲಾಢ್ಯರಾಗಿರುವ ಡಿ.ಕೆ. ಶಿವಕುಮಾರ್ ಮತ್ತು ಒಕ್ಕಲಿಗರ ಮಠಾಧೀಶರು ಇದನ್ನು ವಿರೋಧಿಸುತ್ತಿದ್ದಾರೆ.

ಸ್ಕ್ರೋಲ್.ಇನ್‌ನಲ್ಲಿ (ಅಕ್ಟೋಬರ್ 17, 2023) ಜಾತಿಗಣತಿಯ ಬಗ್ಗೆ ಮಂಡಿಸಿದ ಒಂದು ವಿಶ್ಲೇಷಣಾತ್ಮಕ ಪ್ರಬಂಧದಲ್ಲಿ, ಜಾತಿಗಣತಿಯಿಂದ ಜಾತಿ ಮ್ಯಾಟ್ರಿಕ್ಸ್‌ನಲ್ಲಿ ಬದಲಾವಣೆಯಾಗಿ ಬಲಾಢ್ಯ ಜಾತಿಗಳ ಜನಸಂಖ್ಯೆಯಲ್ಲಿ ಉಂಟಾಗುವ ಸಂಭವನೀಯ ಏರುಪೇರಿನಿಂದ, ಎಲ್ಲಿ ಆಳುವ ಪಕ್ಷದ ಅಧಿಕಾರಕ್ಕೆ ಕುತ್ತು ಬರುತ್ತದೋ ಎಂದು ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಸರ್ಕಾರಗಳು ಜಾತಿಗಣತಿ ಬಗ್ಗೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಕರ್ನಾಟಕದಲ್ಲಿ 2015ರ ಆರ್ಥಿಕ-ಸಾಮಾಜಿಕ ಜಾತಿಸಮೀಕ್ಷೆಯ ವರದಿ ಬಿಡುಗಡೆಯಾಗದಿದ್ದರೂ ಒಟ್ಟು ಜನಸಂಖ್ಯೆಯಲ್ಲಿ ಲಿಂಗಾಯತದ ಜನಸಂಖ್ಯೆಯ ಪ್ರಮಾಣ 1931ರಲ್ಲಿ ಶೇ.17ರಷ್ಟಿದ್ದುದು 2015ರಲ್ಲಿ ಶೇ.14ಕ್ಕೆ ಮತ್ತು ಒಕ್ಕಲಿಗರ ಜನಸಂಖ್ಯೆಯ ಪ್ರಮಾಣ 1931ರ ಶೇ.14ರಿಂದ ಶೇ.11ಕ್ಕಿಳಿದಿದೆಯೆಂದು ಹೇಳಿಲಾಗಿದೆಯೆಂದು, ಸಮೀಕ್ಷೆಯ ವೈಧಾನಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತದೆ. ಪ.ಜಾ. ಜನಸಂಖ್ಯೆಯ ಪ್ರಮಾಣ ಅತಿಹೆಚ್ಚು ಅಂದರೆ ಶೇ.19.5 ಮತ್ತು ಮುಸ್ಲಿಮರ ಪ್ರಮಾಣ ಶೇ.16 ಎಂದು ಹೇಳಲಾಗುತ್ತಿದೆ. ಉಳಿದದ್ದು ಶೇ.33.5 ಹಿಂದುಳಿದ ವರ್ಗವಾಗುತ್ತದೆ. ಆದರೆ ಸಮೀಕ್ಷಾ ವರದಿ ಬಿಡುಗಡೆಯಾಗಿಲ್ಲ. ಇವೆಲ್ಲ ಗಾಳಿಸುದ್ದಿ. ಕರ್ನಾಟಕ, ಕೇರಳ ಮತ್ತು ಪ.ಬಂ. ರಾಜ್ಯಗಳಲ್ಲಿನ ಜಾತಿಸಮೀಕ್ಷೆ ಬಗೆಗಿನ ಸರ್ಕಾರಗಳ ಮೀನಮೇಷಕ್ಕೆ ಸಂಬಂಧಿಸಿದಂತೆ ಈ ವಿಶ್ಲೇಷಣೆಯಲ್ಲಿ ಅರ್ಥವಿದೆ. ಆದರೆ ಅತಿಹಿಂದುಳಿದ- ಹಿಂದುಳಿದ (ತೀವ್ರ ದುಸ್ಥಿತಿಯಲ್ಲಿರುವ) ಜಾತಿಗಳ ಪ್ರಾತಿನಿಧ್ಯ, ಆರ್ಥಿಕ-ಸಾಮಾಜಿಕ ಬೆಳವಣಿಗೆಯ ದೃಷ್ಟಿಯಿಂದ ಜಾತಿಸಮೀಕ್ಷೆಯ ಬಿಡುಗಡೆ ಮತ್ತು ಚರ್ಚೆ ಅಗತ್ಯವಾಗಿದೆ. ಈ ದೃಷ್ಟಿಯಿಂದ ಜಾತಿಗಣತಿಯನ್ನು ಬಡತನ ನಿವಾರಣಾ ಕಾರ್ಯನೀತಿ ಮತ್ತು ಸಾಮಾಜಿಕ ನ್ಯಾಯದ ಪ್ರಣಾಳಿಕೆ ಎಂದು ಭಾವಿಸುವ ಅಗತ್ಯವಿದೆ.

ಕರ್ನಾಟಕದಲ್ಲಿನ ಹಿಂದುಳಿದ, ಅತಿಹಿಂದುಳಿದ ಮತ್ತು ಪ.ಜಾ. ಹಾಗೂ ಪ.ಪಂ. ಸಮುದಾಯಗಳು ಜಾತಿಗಣತಿಯನ್ನು ಒತ್ತಾಯಿಸುತ್ತಿವೆ ಮತ್ತು 2015ರಲ್ಲಿ ನಡೆಸಲಾಗಿರುವ ಆರ್ಥಿಕ-ಸಾಮಾಜಿಕ ಜಾತಿ ಸಮೀಕ್ಷೆ ವರದಿಯನ್ನು ಬಿಡುಗಡೆಗೊಳಿಸಲು ಆಗ್ರಹಿಸುತ್ತಿವೆ. ಲಿಂಗಾಯತವಾಗಲಿ ಅಥವಾ ಒಕ್ಕಲಿಗ ಜಾತಿಯಾಗಲಿ ಅವು ಅಖಂಡ ಏಕಶಿಲಾ ಸಮುದಾಯಗಳಲ್ಲ. ಅವುಗಳೊಳಗೆ ಆರ್ಥಿಕವಾಗಿ-ಸಾಮಾಜಿಕವಾಗಿ ಬಲಾಢ್ಯವಾದ ಪಂಗಡಗಳಿವೆ ಮತ್ತು ಅತಿಹಿಂದುಳಿದ ಹಾಗೂ ಹಿಂದುಳಿದ ಪಂಗಡಗಳಿವೆ. ಈ ಶ್ಯಾಮನೂರು ಶಿವಶಂಕರಪ್ಪ ಎನ್ನುವ ಲಿಂಗಾಯತ ಶಾಸಕರು-ಲೀಡರು (ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರು) ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಆದರೆ ಅವರು ತಮ್ಮ ಜಾತಿಯೊಳಗಿನ ಅತಿಹಿಂದುಳಿದ-ಹಿಂದುಳಿದ, ಕೂಲಿಕಾರ ಪಂಗಡಗಳ ಬಗ್ಗೆ ಯಾವತ್ತೂ ಧ್ವನಿಯೆತ್ತಿಲ್ಲ. ತಮ್ಮ ಸಂಸ್ಥೆಯ ಆಡಳಿತ ಮಂಡಳಿಗಳಲ್ಲಿ ಅಂತಹ ಸಣ್ಣ – ಪುಟ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ನಾಮಕಾವಸ್ಥೆಗೂ ಸ್ಥಾನಮಾನ ನೀಡಿಲ್ಲ. ’ಲಿಂಗಾಯತರಿಗೆ ಅಧಿಕಾರದ ಸ್ಥಾನಗಳು ದೊರೆಯುತ್ತಿಲ್ಲ’ ಎಂದು ಅಬ್ಬರಿಸುತ್ತಾರೆ; ಆದರೆ ಲಿಂಗಾಯತದಲ್ಲಿ ಯಾವ ಪಂಗಡಗಳಿಗೆ ಅಧಿಕಾರ-ಸ್ಥಾನಮಾನ ದೊರೆತಿಲ್ಲ ಎಂಬುದರ ಬಗ್ಗೆ ಬಾಯಿಬಿಡುವುದಿಲ್ಲ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆ ಮತ್ತು ಸ್ಥಿತಿಗತಿ ಬಗೆಗಿನ ಅನಕ್ಷರತೆಯ ಪರಿಣಾಮವಾಗಿದೆ. ಇವರು ಬಂಡವಾಳಶಾಹಿ ಜಾತಿಯ ಪ್ರತಿನಿಧಿಯಾಗಿದ್ದಾರೆ. ತಮ್ಮ ಸಮುದಾಯದೊಳಗಿನ ಕಾಯಕಜೀವಿ ಜಾತಿಗಳ ಬಗ್ಗೆ ಇವರು ಮಾತನಾಡುವುದಿಲ್ಲ.

ಮಹಿಳೆ ಮತ್ತು ಜಾತಿಗಣತಿ

ಜಾತಿಗಣತಿಯನ್ನು ಕುರಿತ ವಾದ-ವಿವಾದಗಳಲ್ಲಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾಗದಿರುವ ಸಂಗತಿಯೆಂದರೆ ಅತಿಹಿಂದುಳಿದ, ಹಿಂದುಳಿದ, ಪ.ಜಾ. ಹಾಗೂ ಪ.ಪಂ.ಗಳಲ್ಲಿನ ಮಹಿಳೆಯರ ಪ್ರಶ್ನೆಗಳು. ಜಾತಿಗಣತಿಯನ್ನು ಮಹಿಳೆಯರ ಸಾಮಾಜಿಕ-ಶೈಕ್ಷಣಿಕ ನೆಲೆಯಿಂದ ನೋಡಬೇಕಾದುದು ಅತ್ಯಂತ ಅವಶ್ಯಕ. ಏಕೆಂದರೆ ಅತಿಹಿಂದುಳಿದ, ಹಿಂದುಳಿದ, ಪ.ಜಾ. ಹಾಗೂ ಪ.ಪಂ. ಸಮುದಾಯಗಳನ್ನು ಕುರಿತ ಅಧ್ಯಯನಗಳಲ್ಲಿ ಕಂಡುಬರುತ್ತಿರುವಂತೆ ಅಲ್ಲಿ ಅತ್ಯಂತ ದುಸ್ಥಿತಿಗೆ ಒಳಗಾಗಿರುವ ವರ್ಗವೆಂದರೆ ಮಹಿಳೆಯರು. ಆ ಸಮುದಾಯಗಳೊಳಗಿನ ಮಹಿಳೆಯರಿಗೆ ಜಾತಿಯ ಶ್ರೇಷ್ಠತೆಯನ್ನು ಮತ್ತು ಮರ್ಯಾದೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಚಾತುರ್ವರ್ಣ ವ್ಯವಸ್ಥೆಯು ವಿಧಿಸಿದೆ. ಲೈಂಗಿಕತೆ, ಕಾರ್ಯಕ್ಷೇತ್ರ (ಗಂಡ, ಮಕ್ಕಳು, ಕುಟುಂಬ), ಮಡಿ-ಮೈಲಿಗೆ ಜವಾಬ್ದಾರಿ, ರಾಜಕೀಯ ಪ್ರಾತಿನಿಧ್ಯ, ದೇವಾಲಯ ಪ್ರವೇಶ ಮುಂತಾದ ವಿಷಯಗಳಲ್ಲಿ ಅವರನ್ನು ತೀವ್ರತರ ರೀತಿಯಲ್ಲಿ ನಿಯಂತ್ರಿಸಲಾಗುತ್ತದೆ. ಈ ಎಲ್ಲ ಮಾತುಗಳು ಒಂದು ವರ್ಗವಾಗಿ ಎಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂಬುದು ನಿಜವಾದರೂ ಅತಿಹಿಂದುಳಿದ, ಹಿಂದುಳಿದ, ಪ.ಜಾ. ಮತ್ತು ಪ.ಪಂ. ಸಮುದಾಯಗಳಲ್ಲಿನ ಮಹಿಳೆಯರ ಸ್ಥಿತಿಗತಿ-ಸ್ಥಾನಮಾನ ಅತ್ಯಂತ ಕೆಳಮಟ್ಟದಲ್ಲಿದೆ. ಇದಕ್ಕೆ ಒಂದು ಸರಳವಾದ ಸೂಚಿಯೆಂದರೆ ಸಾಕ್ಷರತಾ ಪ್ರಮಾಣ.

ಮೂಲ: ಭಾರತ ಸರ್ಕಾರ. ಮಿನಿಸ್ಟ್ರಿ ಆಫ್ ಸ್ಟಾಟಿಟಕ್ಸ್ ಆಂಡ್ ಪ್ರೋಗ್ರಾಮ್ ಇಪ್ಲಿಮೆಂಟೇಶನ್

ನಮ್ಮ ಸಾಮಾನ್ಯ ಜನಗಣತಿಯಲ್ಲಿ ಒಟ್ಟು ಜನಸಂಖ್ಯೆ ಹಾಗೂ ಪ.ಜಾ. ಮತ್ತು ಪ.ಪಂ.ಗಳ ಸಾಕ್ಷರತೆಯ ವಿವರಗಳು ದೊರೆಯುತ್ತವೆ. ಈ ಮೂರು ಜನಸಂಖ್ಯಾ ಗುಂಪುಗಳಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರ ನಡುವಿನ ಅಂತರ ದೊಡ್ಡದಾಗಿದೆ. ಈ ಮಾಹಿತಿಯು 2011ರ ಜನಗಣತಿಯದ್ದಾಗಿದೆ. ನಂತರ ಏನಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಏಕೆಂದರೆ 2011ರ ನಂತರ 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯು ನಡೆದಿಲ್ಲ. ಒಟ್ಟು ಜನಸಂಖ್ಯೆಯಲ್ಲಿ, ಪ.ಜಾ. ಮತ್ತು ಪ.ಪಂ.ಗಳ ಮಹಿಳಾ ಸಾಕ್ಷರತೆಯ ಪ್ರಮಾಣ ಇಷ್ಟು ಕೆಳಮಟ್ಟದಲ್ಲಿದ್ದರೆ ಅವುಗಳೊಳಗಿನ ಸಣ್ಣ, ಪುಟ್ಟ, ವಂಚಿತ, ಅಂಚಿನ ಒಳಪಂಗಡಗಳಲ್ಲಿನ ಮಹಿಳೆಯರ ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಯು ಎಷ್ಟು ಕೆಳಮಟ್ಟದಲ್ಲಿರಬಹುದು ಎಂಬುದನ್ನು ಉಹಿಸಿಕೊಳ್ಳಬಹುದು. ಒಟ್ಟು ಜನಸಂಖ್ಯೆಯಲ್ಲಿ ಹಾಗೂ ಪ.ಜಾ. ಮತ್ತು ಪ.ಪಂ.ಗಳಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣವು ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ಅತ್ಯಂತ ಕೆಳಮಟ್ಟದಲ್ಲಿರುವುದು ಕಂಡುಬರುತ್ತದೆ. ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಹೇಳಿರುವಂತೆ ನಮ್ಮದು ಕೇವಲ ಅಸಮಾನತೆಯಲ್ಲ. ಇದು ಶ್ರೇಣೀಕೃತ ಅಸಮಾನತೆ (ಗ್ರೇಡೆಡ್ ಇನ್‌ಈಕ್ವಾಲಿಟಿ). ಅಂದಮೇಲೆ ಜಾತಿಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಕಾಯಕ-ಕೂಲಿಕಾರ ಜಾತಿ ಸಮುದಾಯಗಳ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಯು ಉನ್ನತ ಸ್ತರದಲ್ಲಿರುವ ಬಲಾಢ್ಯ ಜಾತಿ ಜನರ ಸ್ಥಿತಿಗತಿಗಳಿಗಿಂತ ಅತ್ಯಂತ ಕೆಳಮಟ್ಟದಲ್ಲಿರುವುದರ ಬಗ್ಗೆ ನಮಗೆ ತಿಳವಳಿಕೆಯಿದೆ. ಆದರೆ ಇದರ ಬಗ್ಗೆ ಸಾಂಖ್ಯಿಕ ಮಾಹಿತಿಯಿಲ್ಲ. ಈ ಮಾಹಿತಿಯು ಅತಿಹಿಂದುಳಿದ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ದೊರೆಯುವುದಿಲ್ಲ. ಸ್ವಾತಂತ್ರ್ಯಾನಂತರ ಪ.ಜಾ. ಮತ್ತು ಪ.ಪಂ.ಗಳಲ್ಲಿದ್ದಂತೆ ಅತಿಹಿಂದುಳಿದ ಮತ್ತು ಹಿಂದುಳಿದ ಜಾತಿ-ಸಮುದಾಯಗಳ ಮಹಿಳೆಯರ ಸ್ಥಿತಿಗತಿಗಳು ಅತ್ಯಂತ ಕೆಳಮಟ್ಟದಲ್ಲಿರುವುದರ ಬಗ್ಗೆ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ. ಇದರ ಬಗ್ಗೆ ನಾವು ಗಮನ ನೀಡುತ್ತಿಲ್ಲ. ಅತಿಹಿಂದುಳಿದ ಮತ್ತು ಹಿಂದುಳಿದ ಜಾತಿಗಳಲ್ಲಿನ ಮಹಿಳೆಯರ ದೃಷ್ಟಿಯಿಂದ ಜಾತಿಗಣತಿಯ ಜರೂರಾಗಿ ನಡೆಯಬೇಕಾಗಿದೆ.

ಇದನ್ನೂ ಓದಿ: ಸರ್ವಪಕ್ಷಗಳ ಸಭೆ: ರಾಷ್ಟ್ರವ್ಯಾಪಿ ಜಾತಿಗಣತಿಗೆ ಬಿಎಸ್ಪಿ ಆಗ್ರಹ

ಈ ಬಗ್ಗೆ ಜಾತಿಗಣತಿ ಬಿಟ್ಟರೆ ನಮಗೆ ಮತ್ತೆಲ್ಲಿ ಮಾಹಿತಿ ದೊರೆಯಲು ಸಾಧ್ಯ? ಅತಿಹಿಂದುಳಿದ ಮತ್ತು ಹಿಂದುಳಿದ ಜಾತಿ-ಸಮುದಾಯಗಳಲ್ಲಿನ ಜನರ, ಮುಖ್ಯವಾಗಿ ಮಹಿಳೆಯರ ಆರ್ಥಿಕ-ಸಾಮಾಜಿಕ ಸ್ಥಿತಿಗತಿಯು 1950ರ ನಂತರ ಎಷ್ಟು ಬದಲಾಗಿದೆ, ಎಷ್ಟು ಉತ್ತಮವಾಗಿದೆ ಅಥವಾ ಎಷ್ಟು ಕೆಳಮಟ್ಟದಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಈ ಜಾತಿ-ಸಮುದಾಯಗಳಲ್ಲಿನ ಜನರ-ಮಹಿಳೆಯರ ಸ್ಥಿತಿಗತಿಯು ಉತ್ತಮವಾಗಿಲ್ಲದಿದ್ದರೆ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಗಳು ಅವರಿಗೆ ದೊರೆಯುತ್ತಿಲ್ಲದಿದ್ದರೆ ಇದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಜಾತಿಗಣತಿ ಮಾಹಿತಿ ನೀಡುತ್ತದೆ. ಜಾತಿಗಣತಿಯು ಮೂಲತಃ ಅಭಿವೃದ್ಧಿಗೆ ಸಂಬಂಧಿಸಿದ ಒಂದು ಕಾರ್ಯ. ಇದು ಬಡತನ ನಿವಾರಣ ಕಾರ್ಯನೀತಿಯೂ ಆಗಿದೆ. ಜಾತಿಗಣತಿಯನ್ನು ವಿರೋಧಿಸುತ್ತಿರುವವರ ’ಜಾತಿ ಪ್ರಜ್ಞೆ ಸ್ಫೋಟಗೊಳ್ಳುತ್ತದೆ’, ’ಸಮಾಜದಲ್ಲಿ ಒಡಕುಗಳು ಉಂಟಾಗುತ್ತದೆ’ ಎಂಬಿತ್ಯಾದಿ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಜಾತಿಗಣತಿ ನಡೆದು ಅದರ ಅಂಕಿಅಂಶಗಳು ಬಹಿರಂಗವಾದರೆ ಏನೆಲ್ಲ ಅನುಕೂಲಗಳಾಗಬಹುದು ಎಂಬದರ ಬಗ್ಗೆ ಪ್ರಸಿದ್ಧ ರಾಜಕೀಯ ವಿದ್ವಾಂಸರಾದ ಸುಧಾ ಪೈ ಅವರು ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ: “ಜಾತಿಗಣತಿಯಿಂದ ದೊರೆಯಬಹುದಾದ ದತ್ತಾಂಶದ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಂಪನ್ಮೂಲಗಳು ಮತ್ತು ಅವಕಾಶಗಳು ಯಾರಿಗೆ ದೊರೆಯಬೇಕಾಗಿದೆಯೋ ಅವರಿಗೆ ಹಂಚಿಕೆಯಾಗಬೇಕು ಎಂಬ ಒತ್ತಡ ಉಂಟುಮಾಡುವ ಸಾಧ್ಯತೆಯಿದೆ.”

ಶ್ರೇಣೀಕೃತ ಅಸಮಾನತೆ

ಡಾ. ಬಿ.ಆರ್. ಅಂಬೇಡ್ಕರ್ ಅವರು 1930ರ ದಶಕದಲ್ಲಿ ಹೇಳಿದ್ದ, ನಮ್ಮಲ್ಲಿರುವುದು ’ಶ್ರೇಣೀಕೃತ ಅಸಮಾನತೆ’ ಎಂಬ ಮಾತಿಗೆ ಇಂದಿಗೂ ನಮಗೆ ಸಾಕ್ಷಿಗಳು ದೊರೆಯುತ್ತಿವೆ. ಇದರ ಬಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವ ಮಾತುಗಳು ಅರ್ಥಗರ್ಭಿತವಾಗಿವೆ: “ಶ್ರೇಣೀಕೃತ ಅಸಮಾನತೆಯು ಭಾರತದ ಉಪಖಂಡದಲ್ಲಿ ಮಾತ್ರ ಕಂಡುಬರುತ್ತದೆ. ಇದು ಜಾತಿವ್ಯವಸ್ಥೆಯ ಉತ್ಪನ್ನ. ಈ ಅಸಮಾನತೆಯು ಸಾಮಾನ್ಯ ಅಸಮಾನತೆಗಿಂತ ಭಿನ್ನ. ಶ್ರೇಣೀಕೃತ ಅಸಮಾನತೆಯು ಅದರಿಂದ ಶೋಷಣೆಯನ್ನು ಅನುಭವಿಸುತ್ತಿರುವವರಿಗೆ ಒಂದು ಕಡೆ ಹೊರೆಯನ್ನು ಹೇರುತ್ತದೆ ಮತ್ತೊಂದು ಕಡೆ ಅನುಕೂಲಗಳನ್ನು ಒದಗಿಸುತ್ತದೆ. ಈ ಅನುಕೂಲಗಳು ಮತ್ತು ಹೊರೆಗಳು ಜಾತಿಯಿಂದ ಜಾತಿಗೆ ಭಿನ್ನವಾಗಿರುತ್ತವೆ. ಕೆಳಜಾತಿ-ವರ್ಗಗಳಲ್ಲಿ ಹೊರೆಗಳು ಅಧಿಕ; ಅನುಕೂಲಗಳು ಕಡಿಮೆ. ಉನ್ನತ ಜಾತಿಗಳಲ್ಲಿ ಹೊರೆಗಳು ಕಡಿಮೆ; ಅನುಕೂಲಗಳು ಅಧಿಕ. ಆದರೆ ಈ ಜಾತಿಮೂಲ ಶ್ರೇಣೀಕೃತ ಅಸಮಾನತೆಯಲ್ಲಿ ಬ್ರಾಹ್ಮಣರು ಮಾತ್ರ ಬರಿ ಲಾಭಗಳನ್ನು ಅನುಭವಿಸುವವರಾಗಿರುತ್ತಾರೆ. ಅವರಿಗೆ ಇದರಲ್ಲಿ ಹೊರೆ ಯಾವುದೂ ಇರುವುದಿಲ್ಲ.”

ಕೋಷ್ಟಕ 2. ಭಾರತದಲ್ಲಿ ಸಂಪತ್ತಿನ ಶ್ರೇಣೀಕರಣ: ಆಕ್ಸ್‌ಫಾಮ್ ವರದಿ 2020

ದಿ ವೈರ್, 05, ಸೆಪ್ಟೆಂಬರ್ 2021. “ವೈ ಎ ಕಾಸ್ಟ್ ಸೆನ್ಸ್‌ಸ್ ಇಸ್ ದಿ ನೀಡ್ ಆಫ್ ದಿ ಅವರ್.”

ಜಾತಿಗಣತಿಯ ಪರ-ವಿರೋಧವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದನ್ನು ವಿರೋಧಿಸುತ್ತಿರುವವರಲ್ಲಿ ಅತಿಹಿಂದುಳಿದ ಮತ್ತು ಹಿಂದುಳಿದ ಜಾತಿಗಳ ಮುಂದಾಳುಗಳೂ ಇದ್ದಾರೆ ಎಂಬುದು ಗೊತ್ತಾಗುತ್ತದೆ. ಇಂದಿನ ಆಳುವ ಪಕ್ಷವು ಅತಿಹಿಂದುಳಿದ ಮತ್ತು ಹಿಂದುಳಿದ ವರ್ಗ-ಜಾತಿಗಳಲ್ಲಿ ಈ ಶ್ರೇಣೀಕೃತ ಅಸಮಾನತೆಯನ್ನು ತನ್ನ ರಾಜಕೀಯ ಮಹತ್ವಾಕಾಂಕ್ಷೆಗೆ ಬಳಸಿಕೊಳ್ಳುತ್ತಿದೆ.

ಜಾತಿಗಣತಿಯು ಅತಿಹಿಂದುಳಿದ ಮತ್ತು ಹಿಂದುಳಿದ ಜಾತಿ-ವರ್ಗಗಳಲ್ಲಿ ಜಾತಿಪ್ರಜ್ಞೆಯ ಜಾಗೃತಿಯನ್ನುಂಟುಮಾಡುತ್ತದೆ. ಆದರೆ ಅದು ಸಂಕುಚಿತ ಮನೋಭಾವದ್ದಾಗಿರದೆ, ಅರಿವನ್ನುಂಟುಮಾಡುವ ರೀತಿಯದ್ದಾಗಿದೆ. ಇದನ್ನು ಹಿಂದುತ್ವವಾದಿಗಳಿಗೆ ಸಹಿಸುವುದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಜಾತಿಪ್ರಜ್ಞೆಯ ಜಾಗೃತಿಯ ಇಂದಿನ ಆಳುವ ಪಕ್ಷದ ಮತ್ತು ಅದರ ಸೈದ್ಧಾಂತಿಕ ಸಂಘಟನೆಯ ’ಒಳಗೊಳ್ಳುವ ಹಿಂದುತ್ವ’ಕ್ಕೆ ಧಕ್ಕೆಯನ್ನುಂಟುಮಾಡುತ್ತದೆ. ಜಾತಿಯು ಇಂದು ರಾಜಕಾರಣದ ಕೇಂದ್ರಕ್ಕೆ ಬಂದರೆ ಹಿಂದುತ್ವವು ಮೂಲೆಗುಂಪಾಗುತ್ತದೆ. ಆಡಳಿತ ಪಕ್ಷದ ಅಧಿಕಾರಕ್ಕೆ ಕುತ್ತು ಬರಬಹುದು. ಜಾತಿಗಣತಿಯು ಮೀಸಲಾತಿ ವ್ಯವಸ್ಥೆ ಮತ್ತು ಅದರ ವಿನ್ಯಾಸದಲ್ಲಿ ಬದಲಾವಣೆಯ ಅಗತ್ಯತೆಯ ಒತ್ತಡವನ್ನು ಉಂಟುಮಾಡುತ್ತದೆ.

ಇಂದಿನ ಆಳುವ ಪಕ್ಷ ಮತ್ತು ಆರ್‌ಎಸ್‌ಎಸ್ ಪ್ರತಿಪಾದಿಸುತ್ತಿರುವ ’ಒಂದುತನದ’ ರಾಜಕಾರಣಕ್ಕೆ ಜಾತಿಗಣತಿಯು ಅಡ್ಡಿಯಾಗುತ್ತದೆ. ಇಂದಿನ ಆಳುವ ಪಕ್ಷಕ್ಕೆ ನಮ್ಮ ಸಮಾಜದ ಬಹುತ್ವ ಸಂಸ್ಕೃತಿಯನ್ನು ನಿರ್ವಹಿಸುವುದು ಬೇಕಾಗಿಲ್ಲ. ಜಾತಿಸಮುದಾಯಗಳಿಗೆ ಸಮ ಪ್ರಾತಿನಿಧ್ಯ ನೀಡುವುದೂ ಬೇಕಾಗಿಲ್ಲ. ಆದರೆ, ಜಾತಿಗಣತಿಗೆ ಒತ್ತಾಯ ಹೆಚ್ಚಾಗಬಹುದು. ಜಾತಿಗಣತಿ ಬಗ್ಗೆ ನಡೆಯುತ್ತಿರುವ ಚರ್ಚೆಗಳಲ್ಲಿ ಮುಸ್ಲಿಮರನ್ನು ಹೊರಗಿಡಲಾಗಿದೆ. ಇದೂ ಕೂಡ ಹಿಂದುತ್ವದ ರಾಜಕಾರಣದ ಭಾಗವೇ ಆಗಿದೆ. ಮುಸ್ಲಿಮರನ್ನು ’ಒಂದು ಅಖಂಡ ಧರ್ಮ’ವಾಗಿ ನೋಡುವ ಕ್ರಮವನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ಅದರಲ್ಲಿ ಅನೇಕ ಪಂಗಡಗಳು ಅತಿಹಿಂದುಳಿದ ಮತ್ತು ಹಿಂದುಳಿದ ಸ್ಥಿತಿಯಲ್ಲಿವೆ. ಮುಸ್ಲಿಮರಿಗೆ ಮೀಸಲಾತಿ ನೀಡುವುದು ಅಸಂವಿಧಾನಕ ಕ್ರಮ ಎಂದು ಬಿಜೆಪಿ ಹೇಳುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಏಕೆಂದರೆ ಮುಸ್ಲಿಮರಲ್ಲಿನ ಒಳಪಂಗಡಗಳಿಗೆ ಅವುಗಳ ಹಿಂದುಳಿದಿರುವಿಕೆಯನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡುವ ನೀತಿಯನ್ನು ನಾವು ರೂಪಿಸಬೇಕಾಗಿದೆ. ಇದು ಅಸಂವಿಧಾನಾತ್ಮಕವಾಗುವುದಿಲ್ಲ. ಇಂತಹ ನೀತಿಗೆ ಅಗತ್ಯವಾದ ಮಾಹಿತಿ-ಅಂಕಿಅಂಶಗಳು ಜಾತಿಗಣತಿಯಿಂದ ದೊರೆಯುತ್ತವೆ. ಜಾತಿಗಣತಿಯಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ಮುಂತಾದ ಅಲ್ಪಸಂಖ್ಯಾತ ಧರ್ಮಗಳನ್ನು ಅಗತ್ಯವಾಗಿ ಲೆಕ್ಕಕ್ಕೆ ತೆಗೆದುಕೊ ಬೇಕಾಗುತ್ತದೆ.

ಕೊನೆಯದಾಗಿ ಒಕ್ಕೂಟ ಸರ್ಕಾರವು ಮಾತುಮಾತಿಗೆ ಜಗತ್ತಿನಲ್ಲಿಯೇ ಅತಿ ವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ(ಜಿಡಿಪಿ) ದೇಶ ಭಾರತ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಆದರೆ ಅನಕ್ಷರತೆ, ಬಡತನ, ನಿರುದ್ಯೋಗ, ಹಸಿವು ಮುಂತಾದ ವಿಷಯಗಳಲ್ಲಿ ಜಗತ್ತಿನಲ್ಲಿ ಅತಿ ದುಸ್ಥಿತಿಯಲ್ಲಿರುವ ದೇಶವೂ ಭಾರತವಾಗಿದೆ. ಇದೇ ರೀತಿಯಲ್ಲಿ ಆಕ್ಸ್‌ಫಾಮ್ ವರದಿಯು ದಾಖಲಿಸಿರುವಂತೆ ಜಗತ್ತಿನಲ್ಲಿ ಅಸಮಾನತೆ ಅತ್ಯಂತ ಅತಿಯಾಗಿರುವ ದೇಶ ಭಾರತ (ನೋಡಿ: ಕೋಷ್ಟಕ 2). ನಮ್ಮ ಒಕ್ಕೂಟ ಸರ್ಕಾರವು ಸಾರ್ವಜನಿಕರಿಗೆ ಮಾಹಿತಿ ವಿವರವನ್ನು ನೀಡಲು ಸಿದ್ಧವಿಲ್ಲ. ಅದಕ್ಕೆ ಡೇಟಾ ಫೋಬಿಯಾ ಅಂಟಿಕೊಂಡಂತೆ ಕಾಣುತ್ತದೆ. ಒಕ್ಕೂಟ ಸರ್ಕಾರವು 2019ರಲ್ಲಿ ನಿರುದ್ಯೋಗದ ಬಗೆಗಿನ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ವರದಿಯನ್ನು ಹತ್ತಿಕ್ಕಿದ್ದರಿಂದ ಅದರ ತಜ್ಞ ಸದಸ್ಯರು ರಾಜೀನಾಮೆ ನೀಡಬೇಕಾಯಿತು. ಜಿಡಿಪಿ ಲೆಕ್ಕಾಚಾರದ ಅಂಕಿಸಂಖ್ಯೆಗಳ ಬಗ್ಗೆಯೂ ಅನುಮಾನಗಳಿವೆ. ಮನಮೋಹನ್‌ಸಿಂಗ್ ಆಡಳಿತದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರ ಉತ್ತಮವಾಗಿತ್ತು ಎಂಬ ಆಯೋಗದ ವರದಿಯನ್ನು ಬಿಜೆಪಿ ಸರ್ಕಾರ ಒಪ್ಪಿಕೊಳ್ಳಲಿಲ್ಲ. ನ್ಯಾಷನಲ್ ಕ್ರೈಮ್ ರಿಕಾರ್ಡ್ ಬ್ಯೂರೋ 2017ರಲ್ಲಿ ಅಪರಾಧಗಳ ವರದಿಯನ್ನು ಬಿಡುಗಡೆಗೊಳಿಸಲಿಲ್ಲ. ಡಿಮಾನಿಟೈಸೇಶನ್‌ನ ವೈಫಲ್ಯದ ಎರಡು ವರ್ಷಗಳ ನಂತರ ನಗದು ಹಣದ ವಿವರವನ್ನು ಪ್ರಕಟಿಸಲಾಯಿತು. ಈ ಪಟ್ಟಿಯನ್ನು ಹೀಗೆ ಬೆಳೆಸಬಹುದು. ಒಟ್ಟಾರೆ ಜಾತಿಗಣತಿಯು ಬಹಿರಂಗಪಡಿಸಬಹುದಾದ ಅಂಕಿಸಂಖ್ಯೆಗಳ ಬಗ್ಗೆ ಸರ್ಕಾರಕ್ಕೆ ಭಯವಿದೆ. ಆದರೆ ಎಲ್ಲ ಬಗೆಯ ಹಿಂದುಳಿದ ಜಾತಿ-ವರ್ಗಗಳಿಗೆ ಇದರಿಂದ ಅನುಕೂಲವಾಗುತ್ತದೆ. ಕಳೆದ 73 ವರ್ಷಗಳಲ್ಲಿ ಯಾವ ಜಾತಿಗಳು-ಜಾತಿಗಳೊಳಗಿನ ಬಲಾಢ್ಯ ಒಳಪಂಗಡಗಳು ಆರ್ಥಿಕ ಬೆಳವಣಿಗೆಯ ಲಾಭವನ್ನು ಗುತ್ತಿಗೆ ಹಿಡಿದುಕೊಂಡಿವೆ ಎಂಬುದು ಬಹಿರಂಗವಾಗುತ್ತದೆ. ಯಾವಯಾವ ಸಮುದಾಯಗಳಿಗೆ ಹೆಚ್ಚು ಕಲ್ಯಾಣ ಸೌಲಭ್ಯಗಳನ್ನು ನೀಡಬೇಕು ಎಂಬುದು ಖಚಿತವಾಗುತ್ತದೆ. ಅದ್ದರಿಂದ ತಕ್ಷಣದ ರಾಜಕೀಯ ಲಾಭ-ನಷ್ಟಗಳನ್ನು ಪರಿಗಣಿಸದೆ ಸರ್ಕಾರ 2015ರ ಕರ್ನಾಟಕ ಆರ್ಥಿಕ-ಸಾಮಾಜಿಕ ಜಾತಿಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು. ಅದರ ಅನುಷ್ಠಾನದ ಬಗ್ಗೆ ನಂತರ ಯೋಚನೆ ಮಾಡಬಹುದು. ವರದಿಯ ಮುಖ್ಯ ಸಂಗತಿಗಳ ಬಗ್ಗೆ ಚರ್ಚೆ ನಡೆಯಲಿ. ಅದರಲ್ಲಿ ನ್ಯೂನತೆಗಳಿದ್ದರೆ, ಓರೆಕೋರೆಗಳಿದ್ದರೆ ಅವುಗಳನ್ನು ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬಹುದು. ರಾಷ್ಟ್ರಮಟ್ಟದಲ್ಲಿಯೂ ಜಾತಿಗಣತಿಯು ನಡೆಯಬೇಕು. ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಅವರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಇದೊಂದು ಸ್ವಾಗತಾರ್ಹ ಕ್ರಮ. ಜಾತಿವ್ಯವಸ್ಥೆಯ ನಾಶಕ್ಕಾಗಿಯೂ ಜಾತಿ ಗಣತಿಯು ಅತ್ಯವಶ್ಯಕ.

ಡಾ. ಟಿ. ಆರ್. ಚಂದ್ರಶೇಖರ

ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...