Homeಕರ್ನಾಟಕಆರ್ಥಿಕ ದೌರ್ಜನ್ಯ ಖಂಡಿಸಿ 'ಚಲೋ ದಿಲ್ಲಿ' ಚಳವಳಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

ಆರ್ಥಿಕ ದೌರ್ಜನ್ಯ ಖಂಡಿಸಿ ‘ಚಲೋ ದಿಲ್ಲಿ’ ಚಳವಳಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

- Advertisement -
- Advertisement -

ಕೇಂದ್ರ ಸರ್ಕಾರದ ಆರ್ಥಿಕ ದೌರ್ಜನ್ಯ ಖಂಡಿಸಿ ಕರ್ನಾಟಕ ಸರ್ಕಾರದಿಂದ ನಾಳೆ ‘ಚಲೋ ದಿಲ್ಲಿ’ ಚಳವಳಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸಚಿವರು ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಲಿದ್ದಾರೆ. ಈಗಾಗಲೇ ಪ್ರತಿಪಕ್ಷ ಬಿಜೆಪಿ ನಾಯಕರನ್ನು ಆಹ್ವಾನಿಸಿರುವ ಸಿಎಂ, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಆಹ್ವಾನ ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ, ‘ನಾಳೆ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕನ್ನಡಿಗರ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ವಿರುದ್ಧ ಧ್ವನಿಯೆತ್ತುತ್ತೇವೆ. ಈ ಚಳವಳಿ ಯಾರ ವಿರುದ್ಧವೂ ಅಲ್ಲ, ಇದು ಕರುನಾಡು ಹಾಗೂ ಕನ್ನಡಿಗರ ಹಿತಕ್ಕಾಗಿ. ಪಕ್ಷಾತೀತವಾಗಿ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ’ ಎಂದಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ‘ಒ೦ದು ವಿಶೇಷ ಸ೦ದರ್ಭದಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು
ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರವು ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿರುತ್ತದೆ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು ಮತ್ತು ಸ೦ಸದರು ಸೇರಿ ದೆಹಲಿಯ ಜ೦ತರ್‌ ಮಂತರ್‌ನಲ್ಲಿ ಫೆಬ್ರವರಿ, 07 ರಂದು ಒ೦ದು ದಿನದ ಧರಣಿ ಸತ್ಯಾಗಹವನ್ನು ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದ್ದಾರೆ.

‘ಕರ್ನಾಟಕಕ್ಕ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ, ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿ೦ದ, ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡಾ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ’ ಎಂದು ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ.

‘ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ, ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಡಿಸಿ ಸದಾನಂದಗೌಡ, ಅವರು ಸೇರಿದಂತೆ ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಎಲ್ಲ ಗೌರವಾನ್ವಿತರಿಗೆ ನಾಳೆ ನಡೆಯಲಿರುವ ಚಲೋ ದಿಲ್ಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಪತ್ರ ಬರೆದಿದ್ದೇನೆ’ ಎಂದು ಹೇಳಿದ್ದಾರೆ.

‘ಇದು ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ನಾಡಿಗೆ ಆಗುತ್ತಿರುವ ಅನ್ಯಾಯ, ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧದ ಹೋರಾಟ. ಕರ್ನಾಟಕದ ಭವಿಷ್ಯಕ್ಕಾಗಿ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ನಾಳೆ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ದೆಹಲಿ ಸರ್ಕಾರಕ್ಕೆ ತಲುಪಿಸಿ, ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ. ತಾವೆಲ್ಲರೂ ಪಕ್ಷಬೇಧ ಮರೆತು ಕರ್ನಾಟಕದ ಹಿತಕ್ಕಾಗಿ ನಮ್ಮ ಧ್ವನಿಗೆ ಧ್ವನಿಗೂಡಿಸುತ್ತೀರ ಎಂದು ನಂಬಿದ್ದೇನೆ’ ಎಂದು ಸಿಎಂ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ; ‘ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ, ನೀವೂ ಧ್ವನಿಯಾಗಿ’; ಕೇಂದ್ರದ ವಿರುದ್ಧದ ಪ್ರತಿಭಟನೆಗೆ ಬಿಜೆಪಿಯನ್ನು ಆಹ್ವಾನಿಸಿದ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...