Homeಮುಖಪುಟಆಂಧ್ರ ಫೈಬರ್ ನೆಟ್ ಹಗರಣ| ಚಂದ್ರಬಾಬು ನಾಯ್ಡು ಪ್ರಮುಖ ಆರೋಪಿ: ಸಿಐಡಿ

ಆಂಧ್ರ ಫೈಬರ್ ನೆಟ್ ಹಗರಣ| ಚಂದ್ರಬಾಬು ನಾಯ್ಡು ಪ್ರಮುಖ ಆರೋಪಿ: ಸಿಐಡಿ

- Advertisement -
- Advertisement -

‘ಫೈಬರ್ ನೆಟ್ ಯೋಜನೆ ಹಂತ-1’ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಮರಾವತಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯಕ್ಕೆ ಶುಕ್ರವಾರ (ಫೆ.16) ಚಾರ್ಜ್ ಶೀಟ್‌ ಸಲ್ಲಿಸಿದೆ. ಮಾಜಿ ಸಿಎಂ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಪ್ರಕರಣದ ಪ್ರಮುಖ ಆರೋಪಿ (ಎ 1) ಎಂದು ಉಲ್ಲೇಖಿಸಿದೆ.

ಹೈದರಾಬಾದ್‌ನ ನೆಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿ ಹರಿ ಕೃಷ್ಣ ಪ್ರಸಾದ್ ಮತ್ತು ಐಆರ್‌ಟಿಎಸ್ ಅಧಿಕಾರಿ ಕೆ ಸಾಂಬಶಿವ ರಾವ್ ಅವರನ್ನು ಪ್ರಕರಣದ ಇತರ ಆರೋಪಿಗಳೆಂದು ಹೆಸರಿಸಿರುವುದಾಗಿ ಸಿಐಡಿ ಹೇಳಿಕೆಯಲ್ಲಿ ತಿಳಿಸಿದೆ.

ಚಂದ್ರಬಾಬು ನಾಯ್ಡು 2014-2019ರ ನಡುವೆ ಅಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ನಡೆದಿರುವ ಫೈಬರ್ ನೆಟ್‌ ಟೆಂಡರ್ ಮ್ಯಾನಿಪ್ಯುಲೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು. ಸಿಎಂ ಹುದ್ದೆಯ ಜೊತೆಗೆ ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಖಾತೆಯನ್ನು ನಿಭಾಯಿಸುತ್ತಿದ್ದ ನಾಯ್ಡು ಅವರು, ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಫೈಬರ್ ನೆಟ್ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ವೈಯಕ್ತಿಕವಾಗಿ ಶಿಫಾರಸು ಮಾಡಿದ್ದರು ಎಂದು ಆರೋಪಿಸಲಾಗಿದೆ.

ಬರೋಬ್ಬರಿ 330 ಕೋಟಿ ರೂ.ಗಳ ಅಂಧ್ರ ಪ್ರದೇಶ ಫೈಬರ್‌ನೆಟ್ ಯೋಜನೆ ಹಂತ – 1ರ ಕೆಲಸದ ಆದೇಶವನ್ನು ತನಗೆ ಒಲವು ಹೊಂದಿರುವ ಕಂಪನಿಗೆ ಹಂಚಲು ಟೆಂಡರ್ ಪ್ರಕ್ರಿಯೆಯಲ್ಲಿ ಮ್ಯಾನಿಪ್ಯುಲೇಷನ್ ಮಾಡಲಾಗಿದೆ ಎಂದು ಸಿಐಡಿ ಹೇಳಿದೆ. ಸಿಐಡಿ ಪ್ರಕಾರ, ಟೆಂಡರ್ ಹಂಚಿಕೆಯಿಂದ ಹಿಡಿದು ಯೋಜನೆ ಪೂರ್ಣಗೊಳ್ಳುವವರೆಗೆ ಹಲವಾರು ಅಕ್ರಮಗಳು ನಡೆದಿವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ.

ಸಿಐಡಿ ಚಾರ್ಜ್‌ಶೀಟ್‌ನಲ್ಲಿ, ಫೈಬರ್ ನೆಟ್ ಯೋಜನೆಗೆ ಸಂಬಂಧಿಸಿದ ವಸ್ತುಗಳ ಬೆಲೆ ಅಥವಾ ಅನುಸರಿಸಬೇಕಾದ ಮಾನದಂಡಗಳಿಗೆ ಯಾವುದೇ ಮಾರುಕಟ್ಟೆ ಸಮೀಕ್ಷೆ ಮಾಡಿಲ್ಲ. ಸರ್ಕಾರಕ್ಕೆ ಲಾಭವಾಗುವ ಅಂಶಗಳನ್ನು ಪರಿಗಣಿಸದೆ ಯೋಜನೆಗೆ ನಾಯ್ಡು ಅನುಮೋದನೆ ಕೊಟ್ಟಿದ್ದಾರೆ ಎಂದು ಹೇಳಿದೆ.

ಇದಲ್ಲದೆ, ಪ್ರಕರಣದ ಆರೋಪಿ ಹರಿಕೃಷ್ಣ ಪ್ರಸಾದ್ ಅವರನ್ನು ವಿವಿಧ ಟೆಂಡರ್ ಮೌಲ್ಯಮಾಪನ ಸಮಿತಿಗಳಲ್ಲಿ ಸೇರಿಸಲು, ಟೆರಾಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್‌ನ ಕಪ್ಪು ಪಟ್ಟಿಯನ್ನು ಹಿಂಪಡೆಯಲು ಮತ್ತು ಅಂತಿಮವಾಗಿ ಅದೇ ಕಂಪನಿಗೆ ಟೆಂಡರ್ ನೀಡುವಂತೆ ಮಾಜಿ ಸಿಎಂ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ಸಿಐಡಿ ತಿಳಿಸಿದೆ.

ಆರೋಪಿಗಳು ತಮ್ಮ ಆಪ್ತರಿಗೆ ಸೇರಿದ ಕಂಪನಿಗಳ ವೆಬ್‌ಸೈಟ್‌ಗಳ ಮೂಲಕ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 166, 167, 418, 465, 468, 471, 409 ಮತ್ತು 506 ರೀಡ್ ವಿಥ್ 120-ಬಿ ಮತ್ತು ಇತರ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಐಡಿ ಮಾಹಿತಿ ನೀಡಿದೆ.

ಇದನ್ನೂ ಓದಿ : ಭಾಷೆಯ ಮೇಲೆ ಹಿಡಿತವಿರಲಿ: ಈಶ್ವರಪ್ಪ, ಅನಂತ್ ಕುಮಾರ್ ಹೆಗ್ಡೆ‌ಗೆ ಹೈಕೋರ್ಟ್‌ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read