Homeಎಕಾನಮಿಭಾರತದ ಆರ್ಥಿಕ ಬೆನ್ನೆಲುಬಿಗೆ ಭಾರವಾಗುವ ಪೌರತ್ವಕಾಯ್ದೆ... : ಎಚ್‌.ಎಸ್‌ ದೊರೆಸ್ವಾಮಿ

ಭಾರತದ ಆರ್ಥಿಕ ಬೆನ್ನೆಲುಬಿಗೆ ಭಾರವಾಗುವ ಪೌರತ್ವಕಾಯ್ದೆ… : ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ದೇಶದ ಪರಿಸ್ಥಿತಿ ಬಹಳ ಗಂಭೀರವಾಗಿದೆ. 2014ರವರೆಗೆ ಪಾಕಿಸ್ತಾನ, ಬಾಂಗ್ಲಾ ಮತ್ತು ಅಪ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದು, ಕ್ರಿಶ್ಚಿಯನ್, ಜೈನ, ಪಾರ್ಸಿ, ಸಿಖ್, ಬೌದ್ಧ ಧರ್ಮೀಯರಿಗೆ ಮಾತ್ರ ಪೌರತ್ವ ನೀಡಲು ಹೊಸ ತಿದ್ದುಪಡಿಯ ಮೂಲಕ ಒಪ್ಪಿಗೆ ನೀಡಲಾಗಿದೆ. ಇಲ್ಲಿ ದುರುದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಮತ್ತು ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ದೇಶಗಳನ್ನು (ಉದಾ: ಮ್ಯಾನ್ಮಾರ್, ಶ್ರೀಲಂಕಾ) ಕಾಯ್ದೆಯಿಂದ ಹೊರಗಿಡಲಾಗಿದೆ.

ಸರಿ, ಈ ಕಾಯ್ದೆಯಿಂದ ದೇಶಕ್ಕೆ ಒಳ್ಳೆಯದಾಗುತ್ತೆ ಅಂತಲೇ ನಂಬೋಣ. ಅದು ಯಾವ ರೀತಿ ಅನ್ನೋ ತರ್ಕವಾದರು ಇರಬೇಕಲ್ಲವೇ? ಕಾಯ್ದೆಯನ್ನು ಸಮರ್ಥಿಸುವವರ ಪ್ರಕಾರ ಅಕ್ರಮ ನುಸುಳುಕೋರರನ್ನು ಇದರಿಂದ ಅವರವರ ದೇಶಗಳಿಗೆ ವಾಪಾಸು ಕಳಿಸಬಹುದು ಎನ್ನಲಾಗುತ್ತಿದೆ. ಇದು ಎಷ್ಟು ವಾಸ್ತವಿಕ ಅನ್ನೋದನ್ನು ನೋಡೋಣ.

ಮುಖ್ಯವಾಗಿ ಹೀಗೆ ವಲಸೆ ಬಂದಿರುವವರಲ್ಲಿ ಕೆಲಸ ಹುಡುಕಿಕೊಂಡು ಬಂದವರಿರಬಹುದು, ನುಸುಳುಕೋರರು ಇರಬಹುದು ಅಥವಾ ದೇಶ, ಗಡಿ, ಪೌರತ್ವಗಳ ಕಲ್ಪನೆಯೇ ಇಲ್ಲದ ಗುಡ್ಡಗಾಡು ಆದಿವಾಸಿಗಳಿರಬಹುದು. ಈ ಜನ ಹಿಂದೆ ಭಾರತೀಯ ಪೌರತ್ವ ಪಡೆದವರ ವಂಶದವರೇ, ಇಲ್ಲವೇ ಅನ್ಯದೇಶಗಳ ಪೌರತ್ವ ಪಡೆದವರೇ ಎಂಬುದನ್ನು ಸರ್ಕಾರ ಮೊದಲು ಪತ್ತೆಹಚ್ಚಬೇಕಾಗುತ್ತದೆ. ಇದನ್ನು ಎನ್‍ಆರ್‍ಸಿ ಮೂಲಕ ಮಾಡಲು ಹೊರಟಿದೆ ಸರ್ಕಾರ.

ನ್ಯಾಶನಲ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿರುವ ಪ್ರಕಾರ ಮೂರು ಕೋಟಿ ಜನಸಂಖ್ಯೆಯಿರುವ ಅಸ್ಸಾಂ ರಾಜ್ಯವೊಂದರಲ್ಲೆ ಎನ್‍ಆರ್‍ಸಿ ದಾಖಲಾತಿಗೆ ಖರ್ಚಾಗಿರುವ ಒಟ್ಟು ಮೊತ್ತ 1,600 ಕೋಟಿ ರೂಪಾಯಿ. ಇನ್ನು 130 ಕೋಟಿ ಜನಸಂಖ್ಯೆಯಿರುವ ಇಡೀ ದೇಶದ ಜನರ ದಾಖಲಾತಿಗಳನ್ನು ಪರಿಶೀಲಿಸಲು ಎಷ್ಟು ಹಣ ಬೇಕಾಗಬಹುದು ಲೆಕ್ಕ ಹಾಕಿ! ಅಂದಾಜಿನ ಪ್ರಕಾರ ಆಡಳಿತಾತ್ಮಕ ಖರ್ಚಿಗೆಂದೇ 50,000 ಕೋಟಿ ರೂಪಾಯಿಯನ್ನು ಸರ್ಕಾರ ವ್ಯಯಿಸಬೇಕಾಗುತ್ತದೆ. ಇನ್ನು ಅನುಷ್ಠಾನದ ಖರ್ಚು ಇನ್ನೆಷ್ಟಿರಬಹುದು. ಅದೆಲ್ಲವೂ ಜನರ ತೆರಿಗೆ ಹಣ.

ಜಿಡಿಪಿಯ ನಿರಂತರ ಕುಸಿತ, ನಿರುದ್ಯೋಗದ ಐತಿಹಾಸಿಕ ಹೆಚ್ಚಳ, ಉಲ್ಬಣಿಸುತ್ತಿರುವ ಹಸಿವು, ಹೆಚ್ಚಾಗುತ್ತಿರುವ ಬ್ಯಾಂಕ್ ವಂಚನೆ ಪ್ರಕರಣಗಳು, ನೋಟು ಅಮಾನ್ಯೀಕರಣದಿಂದ ತತ್ತರಿಸಿಹೋದ ಆರ್ಥಿಕತೆಯಿಂದ ಕಂಗೆಟ್ಟಿರುವ ನಮ್ಮ ದೇಶ ಈ ಹೊರೆಯನ್ನು ಹೊರುವ ಸ್ಥಿತಿಯಲ್ಲಿದೆಯೇ? ಅಷ್ಟೆಲ್ಲ ಖರ್ಚು ಮಾಡಿದ ಅಸ್ಸಾಂನಲ್ಲೆ ಎನ್‍ಆರ್‍ಸಿ ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳು ಕಾಣಿಸಿಕೊಂಡು 19 ಲಕ್ಷ ಜನ ಪಟ್ಟಿಯಿಂದ ಹೊರಗುಳಿದಿದ್ದಾರೆ. ಸರ್ಕಾರಗಳೇ ಈ ಪಟ್ಟಿಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಹೇಳುತ್ತಿವೆ. ಇನ್ನು ದೇಶದಲ್ಲಿ ಕೋಟ್ಯಂತರ ಖರ್ಚು ಮಾಡಿದ ಪಟ್ಟಿಯೂ ಇಂತಹ ದೋಷಗಳಿಂದ ಕೂಡಿರುವುದಿಲ್ಲ, ಕೊನೆಗೊಮ್ಮೆ ತಿರಸ್ಕಾರಗೊಂಡು ನೀರಿನಿಲ್ಲಿ ಹೋಮ ಮಾಡಿದಂತಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತ್ರಿ?

ಈಗ ಇನ್ನೊಂದು ಆಯಾಮ. ಹೀಗೆ ಪಟ್ಟಿಯಿಂದ ಹೊರಗುಳಿಯುವವರಲ್ಲಿ ಬಹುಜನ ಅನಕ್ಷರಸ್ಥರಿರಬಹುದು, ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದವರಿರಬಹುದು. ಕೆಲಸ ಹುಡುಕಿಕೊಂಡು ಅಲೆದಾಡುವ ಅಲೆಮಾರಿಗಳು ಇವರಾದ್ದರಿಂದ ಇವರಲ್ಲಿ ಭಾರತೀಯ ಪೌರತ್ವ ಸಾಬೀತುಪಡಿಸುವ ದಾಖಲೆಗಳಾಗಲಿ, ಅನ್ಯ ದೇಶಗಳ ಪೌರತ್ವ ನಿರೂಪಿಸುವ ದಾಖಲೆಗಳಾಗಲಿ ಇರುವ ಸಂಭವ ತೀರಾ ಕಡಿಮೆ. ನಮ್ಮ ದೇಶಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲವೆಂದ ಮಾತ್ರಕ್ಕೆ ಅವರನ್ನು ಅಕ್ರಮ ವಲಸಿಗರು ಎಂದು (ಅವರು ಭಾರತೀಯರೇ ಆಗಿದ್ದರೂ ಸಹ) ಈ ಕಾಯ್ದೆ ಸುಲಭವಾಗಿ ವಿಂಗಡಿಸುತ್ತದೆ. ಆದರೆ, ಅನ್ಯ ದೇಶಕ್ಕೆ ಸಂಬಂಧಿಸಿದ ದಾಖಲೆಯೂ ಇಲ್ಲದಿದ್ದ ಮೇಲೆ ಅವರನ್ನು ಯಾವ ದೇಶಕ್ಕೆಂದು ವಾಪಾಸು ಕಳುಹಿಸುವುದು? ಅದು ಸಾಧ್ಯವಾಗದ ಮಾತು.

ಆಗ ಅಂತವರನ್ನೆಲ್ಲ Detention centre ಗಳಲ್ಲಿ ಬಂಧಿಸಿಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಇಂತಹ ಅಕ್ರಮ ವಲಸಿಗರ ಸಂಖ್ಯೆ 2 ಕೋಟಿ ಮುಟ್ಟಬಹುದೆಂದು ಕೇಂದ್ರ ಸರ್ಕಾರವೇ ಅಂದಾಜು ಮಾಡಿದೆ. ಅಸ್ಸಾಂನ 19 ಲಕ್ಷ ಅಂಕಿಅಂಶ ನೋಡಿದರೆ ಇದು ಇನ್ನೂ ಹೆಚ್ಚಾಗುವ ಸಂಭವ ಇದೆ. ಇವರಿಗಾಗಿ ದೇಶಾದ್ಯಂತ 500 ಕ್ಯಾಂಪುಗಳನ್ನು ನಿರ್ಮಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. 2019ರ ಸೆಪ್ಟೆಂಬರ್‌ನಲ್ಲಿ ಅಸ್ಸಾಂ ರಾಜ್ಯ ಸರ್ಕಾರ ಎನ್‍ಆರ್‍ಸಿಯಿಂದ ಹೊರಗುಳಿದ ಅಕ್ರಮ ವಲಸಿಗರ ಬಂಧನಕ್ಕಾಗಿ ಗೋಪಾಲಪುರ ಜಿಲ್ಲೆಯಲ್ಲಿ ಒಂದು Detention centre ಕಟ್ಟಲು ಶುರು ಮಾಡಿತು. ಇದಕ್ಕಾಗಿ 45 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ನ್ಯಾಶನಲ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಈ ಸೆಂಟರ್‌ನಲ್ಲಿ 3000 ಅಕ್ರಮ ವಲಸಿಗರನ್ನು ಬಂಧಿಸಿಡಲು ಯೋಜಿಸಲಾಗಿದೆ. ಹಾಗಾದರೆ ಇಡೀ ಅಸ್ಸಾಂ ರಾಜ್ಯದಲ್ಲಿ ಹೊರಗುಳಿದಿರುವ 19 ಲಕ್ಷ ಜನರನ್ನು ಬಂಧಿಸಿಡಲು ಕಟ್ಟಲಾಗುವ ಬಂಧನ ಕೇಂದ್ರಗಳಿಗೆಂದೇ ಬರೋಬ್ಬರಿ 28,500 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ. ಇದು ಕೇವಲ ಕಟ್ಟಡ ನಿರ್ಮಿಸುವುದಕ್ಕೆ ಆಗುವ ಖರ್ಚಷ್ಟೆ. ಆದರೆ ಈ ಅಂಕಿಅಂಶವೂ ಅವಾಸ್ತವಿಕವಾದುದು. 2 ಕೋಟಿ ಜನರಿಗೆ 500 ಕೇಂದ್ರಗಳು ಎಂದರೆ, ಪ್ರತಿ ಕೇಂದ್ರದಲ್ಲಿ 40,000 ಅಕ್ರಮ ವಲಸಿಗರನ್ನು ಬಂಧಿಸಿಡಬೇಕಾಗುತ್ತದೆ. ಒಂದೇ ಕಟ್ಟಡದಲ್ಲಿ 40,000 ಜನರನ್ನು ಕಿಕ್ಕಿರಿದು ತುಂಬುವುದೆಂದರೆ ನಾಜಿಗಳ ಕ್ರೂರ concentration campಗಳಿಗಿಂತ ಈ ಸೆಂಟರ್‌ಗಳು ಅದೇಗೆ ಭಿನ್ನವಾದಾವು.

ಇನ್ನು ಇವರನ್ನು ನೋಡಿಕೊಳ್ಳಲು ಅಧಿಕಾರಿಗಳು, ಸೆಂಟ್ರಿಗಳು, ಅಡುಗೆಯವರು, ಪೊಲೀಸರು ಬೇಕಾಗುತ್ತದೆ. ಈ ಸಿಬ್ಬಂದಿ ವ್ಯಯ, ಬಂಧಿತರ ಊಟ, ವೈದ್ಯಕೀಯ ಖರ್ಚು, ಸ್ವಚ್ಛತೆ ನಿರ್ವಹಣೆ ಮುಂತಾದ ಖರ್ಚುಗಳೂ ಸೇರಿಕೊಳ್ಳುತ್ತವೆ. ಈ detention centreಗಳ ನಿರ್ಮಾಣ ಮತ್ತು ನಿರ್ವಹಣೆಗೆಂದೆ ಸರ್ಕಾರ 2-3 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎಂದು ಪತ್ರಿಕೆ ಅಂದಾಜಿಸಿದೆ. ಅಲ್ಲದೆ, ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದರೂ ಪ್ರತಿ ಬಂಧಿತನಿಗೂ ಸರ್ಕಾರ ಮಾಸಿಕ ರೂ.1,500 ವ್ಯಯಿಸಬೇಕಾಗುತ್ತದೆ ಎಂದಿರುವ ಪತ್ರಿಕೆ ತಿಂಗಳಿಗೆ ಈ ಖರ್ಚಿಗೆಂದೆ 3,000 ಕೋಟಿ ರೂಪಾಯಿ ಅಥವಾ ವರ್ಷಕ್ಕೆ 36,000 ಕೋಟಿ ರೂಪಾಯಿಯನ್ನು ಜನರ ತೆರಿಗೆ ಹಣದಿಂದ ಖರ್ಚು ಮಾಡಬೇಕಾಗುತ್ತದೆ ಎಂದಿದೆ.

ಇಷ್ಟೊಂದು ಖರ್ಚು ಮಾಡಿ Detention centre ನಡೆಸುವ ಬದಲು ಅವರನ್ನು ತಮ್ಮ ಪಾಡಿಗೆ ತಾವು ಭಾರತದಲ್ಲಿ ಇರಲು ಅವಕಾಶ ಮಾಡಿಕೊಟ್ಟರೆ ಅವರು ಕೂಲಿನಾಲಿ ಮಾಡಿ ಜೀವನ ನಡೆಸುತ್ತಾರೆ. ಈ ಕ್ಯಾಂಪ್‍ಗಳಿಗೆ ತಗುಲುವ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು. ಇಲ್ಲವಾದರೆ ಅಷ್ಟರಮಟ್ಟಿಗೆ ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತದೆ.

ಮೋದಿ ಸರ್ಕಾರ ಈ Detention Centreಗಳನ್ನು 2024ರ ಲೋಕಸಭಾ ಚುನಾವಣೆ ಮುಗಿಯುವವರೆಗೆ ನಡೆಸಿ ಹಿಂದೂಗಳ ಹೆಚ್ಚುವರಿ ಓಟನ್ನು ಬಳಸಿಕೊಂಡು ಜಯಗಳಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ಅವಕಾಶ ಕೊಡುವುದಿಲ್ಲವೆಂದು ಕಾಂಗ್ರೆಸ್ ಆಡಳಿತವಿರುವ ಐದು ರಾಜ್ಯಗಳು ಮತ್ತು ಪಶ್ಚಿಮಬಂಗಾಳ, ಕೇರಳ ರಾಜ್ಯಗಳು ತೀರ್ಮಾನ ಮಾಡಿವೆ. ಕೇರಳ ಒಂದುಹೆಜ್ಜೆ ಮುಂದೆಹೋಗಿ ಶಾಸನಸಭೆಯಲ್ಲಿ ಈ ನಿರ್ಣಯಕ್ಕೆ ಸರ್ವಾನುಮತವನ್ನು ಪಡೆದುಕೊಂಡಿದೆ.

ಕೇಂದ್ರ ಸರ್ಕಾರ ಚುನಾವಣೆ ಹತ್ತಿರಬಂದಂತೆ, ಈ ಏಳೂ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಿಸಬಹುದು. ಹೀಗೆ ವಜಾಗೊಂಡ ಎಲ್ಲಾ ಪಕ್ಷಗಳು ಒಂದುಗೂಡಿ ಮೋದಿ ಹಠಾವೋ ದೇಶ್ ಬಚಾವೋ ಆಂದೋಲನ ಆರಂಭಿಸಬಹುದು. ಪ್ರಚಲಿತ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿದರೆ ಕಾಂಗ್ರೆಸ್ ಬಹಳ ದುರ್ಬಲ ಸ್ಥಿತಿಯಲ್ಲಿದೆ. ಸ್ವಾತಂತ್ರ್ಯ ತಂದ ಬಲಾಢ್ಯ ಕಾಂಗ್ರೆಸ್ ಈಗ ದುರವಸ್ಥೆಗೆ ಬಂದಿರುವುದು ದೇಶದ ದೌರ್ಭಾಗ್ಯ. ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಪಕ್ಷಗಳಲ್ಲಿರುವಂತೆ ಬಾಡಿಗೆ ಬಂಟರಾಗಿದ್ದಾರೆ. ಬದ್ಧತೆ ಇಲ್ಲದ ಈ ಜನರಿಂದ ಜನಾಂದೋಲನ ಸಂಘಟಿಸುವುದು ಅಷ್ಟು ಸುಲಭವಲ್ಲ. ವಿರೋಧ ಪಕ್ಷಗಳ ದೌರ್ಬಲ್ಯವೇ ಮೋದಿ-ಶಾಗಳಿಗೆ ಇರುವ ಬಲ.

ಈ ಏಳೂ ರಾಜ್ಯಗಳ ಈಗಿನ ಪ್ರಮುಖ ನಾಯಕರು ಒಂದುಗೂಡಿ ಒಂದು ಜನತಾ ಚಳವಳಿಯನ್ನು ಸಂಘಟಿಸುವುದಾದರೆ ಅವರಿಗೆ ಗೆಲುವು ಖಂಡಿತ ಲಭಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...