Homeಅಂಕಣಗಳುಬೇಕಿದೆ ನ್ಯಾಯಾಂಗದ ಸ್ವಚ್ಛೀಕರಣ

ಬೇಕಿದೆ ನ್ಯಾಯಾಂಗದ ಸ್ವಚ್ಛೀಕರಣ

- Advertisement -
- Advertisement -

| ಗೌರಿ ಲಂಕೇಶ್ |
30 ಸೆಪ್ಟೆಂಬರ್, 2009 (ಸಂಪಾದಕೀಯದಿಂದ) |

ಸುಪ್ರೀಂಕೋರ್ಟ್ ಮತ್ತು ಇತರೆ ಹೈಕೋರ್ಟುಗಳ ನ್ಯಾಯಾಧೀಶರೆಲ್ಲರೂ ಇನ್ನು ಮುಂದೆ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಲು ಒಪ್ಪಿಕೊಂಡ ಬೆನ್ನ ಹಿಂದೆಯೇ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಪಿ.ವಿ.ದಿನಕರನ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ಈ ಆರೋಪಗಳು ನಿಜವೋ, ಸುಳ್ಳೋ ಎಂಬುದು ಸಾಬೀತಾಗಬೇಕಿದೆಯಾದರೂ ಅದರ ಸುತ್ತ ಈಗ ಹಲವಾರು ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅದು ನ್ಯಾಯಾಧೀಶರ ನೇಮಕಾತಿ ಪದ್ಧತಿಯಿಂದ ಹಿಡಿದು ಭ್ರಷ್ಟ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಜರುಗಿಸುವ ರೀತಿಯ ತನಕ ಹಬ್ಬಿದೆ.

ನಮ್ಮ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಮತ್ತು ಆಡಳಿತಾಂಗ ಇವತ್ತು ಜನದ್ರೋಹಿಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಜನರೆಲ್ಲ ಭರವಸೆ ಇಟ್ಟಿರುವುದು ನ್ಯಾಯಾಂಗದ ಮೇಲೆ. ಆದರೆ ಇತ್ತೀಚೆಗೆ ಟ್ರಾನ್ಸ್‍ಪರೆನ್ಸಿ ಇಂಟರ್‍ನ್ಯಾಷನಲ್ ಎಂಬ ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ ಶೇ.77ರಷ್ಟು ಭಾರತೀಯರು ನ್ಯಾಯಾಂಗ ಕೂಡ ಈಗ ಭ್ರಷ್ಟಗೊಂಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸುಪ್ರೀಕೋರ್ಟಿನ ಮಾಜಿ ಮುಖ್ಯನ್ಯಾಯಮೂರ್ತಿಗಳಾದ ಎಸ್.ಪಿ.ಬರೂಚ ಅವರು 2002ರಲ್ಲೇ ‘ಭಾರತದ ನ್ಯಾಯಾಂಗದ ಉನ್ನತ ವಲಯದಲ್ಲೂ ಪ್ರತಿ ಐವರು ನ್ಯಾಯಾಧೀಶರಲ್ಲಿ ಓರ್ವ ಭ್ರಷ್ಟಗೊಂಡಿದ್ದಾನೆ.’ ಎಂದೇ ಘೋಷಿಸಿದ್ದರು.

ಪರಿಸ್ಥಿತಿ ಆತಂಕ ಹುಟ್ಟಿಸುವಂತಿದ್ದರೂ ನಮ್ಮ ನ್ಯಾಯಮೂರ್ತಿಗಳು ಅದನ್ನೆಲ್ಲ ಸರಿಪಡಿಸಲು ಸ್ವಯಂಪ್ರೇರಿತರಾಗಿ ಮುಂದೆ ಬರಲಿಲ್ಲ. ನ್ಯಾಯಾಂಗದಲ್ಲಿ ಭ್ರಷ್ಟಚಾರ, ದುರಾಡಳಿತ ತಾಂಡವವಾಡುತ್ತಿದ್ದರೂ ಅದರ ಬಗ್ಗೆ ಜಾಣ ಕುರುಡು ಪ್ರದರ್ಶಿಸಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ನರ್ಮದಾ ಡ್ಯಾಂಅನ್ನು ನಿರ್ಮಿಸಲು ಸುಪ್ರೀಂಕೋರ್ಟ್ ನೀಡಿದ ಅನುಮತಿಯನ್ನು ವಿರೋಧಿಸಿ ಅದರ ಗೇಟ್ ಮುಂದೆ ಪ್ರತಿಭಟಿಸಿದ ಖ್ಯಾತ ಲೇಖಕಿ ಅರುಂಧತಿ ರಾಯ್ ಅವರಿಗೆ ಒಂದು ದಿನದ ಜೈಲು ಶಿಕ್ಷೆಯನ್ನು, ಎರಡು ಸಾವಿರ ರೂಪಾಯಿಗಲ ದಂಡವನ್ನೂ ವಿಧಿಸಿದರು. ಅವರ ಪ್ರಕಾರ ಆಕೆ ಮಾಡಿದ ಘೋರ ತಪ್ಪು. ‘ನ್ಯಾಯಾಂಗದ ಘನತೆಯನ್ನು ಕುಂದಿಸಿದ್ದು!.’
ವಿಪರ್ಯಾಸ ಯಾವುದೆಂದರೆ ಸುಪ್ರೀಕೋರ್ಟಿನ ಘನತೆಗೆ ಸ್ವತಃ ಸುಪ್ರೀಂಕೋರ್ಟೆ ಇತ್ತೀಚೆಗೆ ಧಕ್ಕೆ ತಂದಿತು. ಅದಾದದ್ದು ನ್ಯಾಯಮೂರ್ತಿಗಳ ಆಸ್ತಿ ಘೋಷಣೆಗೆ ಸಂಬಂಧಿಸಿದ ವಾದ-ವಿವಾದದಲ್ಲಿ, ದೆಹಲಿ ನ್ಯಾಯಾಲಯವು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳೂ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆಂದು ತೀರ್ಪು ನೀಡಿದಾಗ ಅದಕ್ಕೆ ಸುಪ್ರೀಕೋರ್ಟ್ ತಡೆಯಾಜ್ಞೆ ತಂದಿತು. ಅದನ್ನು ಕಂಡ ದೇಶದ ಬಹಳಷ್ಟು ಜನ ‘ನ್ಯಾಯಾಧೀಶರಿಗೆ ತಮ್ಮ ಆಸ್ತಿ ಘೋಷಿಸಲು ಯಾಕಿಷ್ಟು ಹಿಂಜರಿಕೆ’ ಎಂದು ಯೋಚಿಸುವಂತಾಯಿತ್ತಲ್ಲದೆ, ಸುಪ್ರೀಂ ಕೋರ್ಟಿನ ಬಗ್ಗೆಯೇ ಸಂಶಯ ಮೂಡುವಂತೆ ಮಾಡಿತ್ತು.

ಅಂದಹಾಗೆ ಹಿಂದೊಮ್ಮೆ ಇದೇ ಸುಪ್ರೀಕೋರ್ಟ್ ವಿಧಾನಸಭೆ ಮತ್ತು ಸಂಸತ್ತಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವವರೆಲ್ಲ ತಮ್ಮ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಆದೇಶಿಸಿತ್ತು. ಆ ಆದೇಶದ ಹಿಂದಿದ್ದ ಕಾಳಜಿ, ‘ಜನರಿಗೆ ತಮ್ಮನ್ನು ಪ್ರತಿನಿಧಿಸಲಿರುವ ವ್ಯಕ್ತಿಯ ಪೂರ್ಣ ವಿವರಗಳು ಲಭ್ಯವಿರಬೇಕು’ ಎಂಬುದಾಗಿತ್ತು. ಅದೇ ಮಾನದಂಡ ಇಟ್ಟುಕೊಂಡರೆ ಇವತ್ತು ಈ ದೇಶದ ಜನರ ಪ್ರತಿನಿತ್ಯದ ಬದುಕಿನ ಮೇಲೆ ಪ್ರಭಾವ ಬೀರುವಂತಹ ತೀರ್ಪುಗಳನ್ನು ನೀಡುವ ನ್ಯಾಯಾಧೀಶರ ಬಗೆಗೂ ಜನರಿಗೆ ಎಲ್ಲ ಮಾಹಿತಿ ಲಭ್ಯವಿರಬೇಕೆಂದು ಆಶಿಸುವುದು ಸರಿಯಲ್ಲವೇ?

ಅದೆಲ್ಲ ಬದಿಗಿರಲಿ, ಖ್ಯಾತ ವಕೀಲ ಫಾಲಿ ಎಸ್.ನಾರೀಮನ್ ಅವರು ಹೇಳುವಂತೆ ‘ದೇಶದ ಸಂವಿಧಾನಕ್ಕಿಂತ ನ್ಯಾಯಾಂಗ ಹಿರಿಯದಲ್ಲ’ ಆದರೆ ಇಲ್ಲಿಯ ಕಾನೂನುಗಳನ್ನು ಮೀರಿರುವವರು ಎಂಬಂತಹ ನಿಲುವುಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಆದರೆ ಇಂತಹ ನಿಲುವು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕ ಎಂದು ಪ್ರಶಾಂತ್ ಭೂಷಣ್‍ರಂತಹ ಹಿರಿಯ ವಕೀಲರು ವಾದಿಸುತ್ತಾ ಬಂದಿದ್ದಾರಲ್ಲದೆ ನ್ಯಾಯಾಂಗದಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕೆಂದು ಹಲವಾರು ವರ್ಷಗಳಿಂದ ಹೋರಾಡುತ್ತಿದ್ದಾರೆ.

ಪ್ರಶಾಂತ್ ಭೂಷಣ್ ಹೇಳುವಂತೆ ‘ಪ್ರಾಮಾಣಿಕ ನ್ಯಾಯಾಂಗಕ್ಕೆ ಆಶಿಸುವ ಸಾಮಾನ್ಯ ಜನರೆಲ್ಲ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಪಾರದರ್ಶಕರೆ ಮತ್ತು ಭ್ರಷ್ಟ ನ್ಯಾಯಾಧೀಶರ ವಿಚಾರಣೆ ನಡೆಸುವಂತೆ ನೋಡಿಕೊಳ್ಳಲು ಸೂಕ್ತವಾದ ಸ್ವತಂತ್ರ ಸಂಸ್ಥೆಗಳನ್ನು ರಚಿಸಬೇಕೆಂದು ಆಗ್ರಹಿಸುವ ಸಮಯ ಈಗ ಕೂಡಿಬಂದಿದೆ’.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...