Homeಕರ್ನಾಟಕಜಗದೀಶ್ ಶೆಟ್ಟರ್ ದಿಢೀರ್ ಬಿಜೆಪಿ ಸೇರ್ಪಡೆ: ಸಿಎಂ, ಡಿಸಿಎಂ ಏನಂದ್ರು?

ಜಗದೀಶ್ ಶೆಟ್ಟರ್ ದಿಢೀರ್ ಬಿಜೆಪಿ ಸೇರ್ಪಡೆ: ಸಿಎಂ, ಡಿಸಿಎಂ ಏನಂದ್ರು?

- Advertisement -
- Advertisement -

ಮಾಜಿ ಮುಖ್ಯಮಂತ್ರಿ, ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇಂದು (ಜ.25) ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಶೆಟ್ಟರ್ ಕೇಸರಿ ಪಕ್ಷಕ್ಕೆ ಮರಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಯಾವುದೇ ಅನ್ಯಾಯ, ಅವಮಾನ ಆಗಿಲ್ಲ. ಅವರು ಬಿಜೆಪಿಯವರು ಟಿಕೆಟ್ ಕೊಡದೇ ಅವಮಾನ ಮಾಡಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಸೇರಿದ್ದರು. ನಾವು ಅವರಿಗೆ ಟಿಕೆಟ್ ಕೊಟ್ಟರೂ ವಿಧಾನಸಭಾ ಚುನಾವಣೆಯಲ್ಲಿ ಸೋತರು. ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಗೌರವಯುತವಾಗಿ ನಡೆಸಿಕೊಂಡಿದ್ದೇವೆ. ಯಾವ ಕಾರಣಕ್ಕೆ ಅವರು ಪುನ: ಬಿಜೆಪಿಗೆ ಸೇರ್ಪಡೆಯಾಗಿದ್ದಾರೆಂದು ನನಗೆ ಗೊತ್ತಿಲ್ಲ. ನನ್ನ ಬಳಿ ಬಿಜೆಪಿಯಲ್ಲಿ ಅವಮಾನವಾಗಿದ್ದು ಮತ್ತೆ ವಾಪಸ್ಸು ಹೋಗುವುದಿಲ್ಲ ಎಂದಿದ್ದರು. ನನ್ನನ್ನು ಅವರು 10 ದಿನಗಳ ಹಿಂದೆ ಸಭೆಯೊಂದರಲ್ಲಿ ಭೇಟಿ ಮಾಡಿದ್ದರು, ಆ ನಂತರ ಸಿಕ್ಕಿರಲಿಲ್ಲ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಕೆಲ ದಿನಗಳ ಹಿಂದೆ ಜಗದೀಶ್ ಶೆಟ್ಟರ್ ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಿಜೆಪಿಯವರು ನಮ್ಮ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಈ ಬಗ್ಗೆ ಎಚ್ಚರವಾಗಿರಬೇಕು ಎಂದಿದ್ದರು. ನಿನ್ನೆ ಬೆಳಿಗ್ಗೆ ಅವರೊಂದಿಗೆ ಮಾತನಾಡಿದ್ದೆ. ಕಾಂಗ್ರೆಸ್‌ ನನಗೆ ರಾಜಕೀಯ ಮರುಜೀವ ಕೊಟ್ಟಿದೆ. ಯಾವುದೇ ಕಾರಣಕ್ಕೆ ಬಿಜೆಪಿಗೆ ಹೋಗಲ್ಲ ಎಂದಿದ್ದರು. ಈ ಮಾತನ್ನು ನಂಬಿ ನಾನು ಮೈಸೂರಿನಲ್ಲಿ ಅವರ ಬಗ್ಗೆ ಮಾತನಾಡಿದ್ದೆ. ಈಗ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿಯಿತು. ಅವರು ಹಿರಿಯರು ಎಂದು ನಮ್ಮ ಪಕ್ಷ ಗೌರವ ಕೊಟ್ಟಿತ್ತು ಎಂದಿದ್ದಾರೆ.

ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ಮೊದಲು ಹೇಳಿಕೆ ಕೊಡಲಿ, ಆಮೇಲೆ ನಾನು ಮಾತನಾಡುತ್ತೇನೆ. ನನಗೆ ಇದುವರೆಗೆ ಅವರ ರಾಜೀನಾಮೆ ಪತ್ರ ದೊರೆತಿಲ್ಲ ಎಂದರು. ದೇಶದ ಹಿತಕ್ಕಾಗಿ ಬಿಜೆಪಿಗೆ ಮರಳಿರುವುದಾಗಿ ಶೆಟ್ಟರ್ ಹೇಳಿದ್ದಾರೆ ಎಂದು ಮಾಧ್ಯಮದವರು ಡಿಕೆಶಿಗೆ ತಿಳಿಸಿದರು. ಇದಕ್ಕೆ ಕೋಪಗೊಂಡ ಡಿಕೆಶಿ, ಬಿಜೆಪಿಯವರು ಅವರಿಗೆ ಸೀಟ್ ತಪ್ಪಿಸುವಾಗ ಅವರಿಗೆ ದೇಶದ ಹಿತ ಗೊತ್ತಿರಲಿಲ್ವಾ? ಎಂದು ಪ್ರಶ್ನಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ : ಬಸವರಾಜ ಹೊರಟ್ಟಿ

ಜಗದೀಶ್ ಶೆಟ್ಟರ್ ಧಿಡೀರ್ ಬಿಜೆಪಿ ಸೇರ್ಪಡೆಯ ಕುರಿತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು (ಜ.25) ಮಧ್ಯಾಹ್ನ 12:45ಕ್ಕೆ ಜಗದೀಶ್ ಶೆಟ್ಟರ್ ಕರೆ ಮಾಡಿ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ರಾಜೀನಾಮೆ ಪತ್ರವನ್ನು ಈ-ಮೇಲ್ ಮಾಡುವುದಾಗಿ ಹೇಳಿದ್ದಾರೆ. ಆದರೆ, ನನಗೆ ಇದುವರೆಗೆ ಈ-ಮೇಲ್ ಬಂದಿಲ್ಲ. ನಿಯಮಗಳ ಪ್ರಕಾರ, ಸದಸ್ಯರು ನೇರವಾಗಿ ಬಂದು ರಾಜೀನಾಮೆ ನೀಡ್ಬೇಕು. ಇಲ್ಲದಿದ್ದರೆ ಪಕ್ಷಾಂತರ ಕಾಯ್ದೆ ಅನ್ವಯ ಆಗಲಿದೆ. ಯಾರಾದರು ದೂರು ಕೊಟ್ಟರೆ ಪಕ್ಷಾಂತರ ಕಾಯ್ದೆ ಪ್ರಕಾರ ಶೆಟ್ಟರ್‌ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ಪಕ್ಷಾಂತರ ನಿಷೇಧ ಕಾಯ್ದೆ? 

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ, ಅಂದರೆ 1985ರ ಜನವರಿ 30ರಂದು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು. 2003ರಲ್ಲಿ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಕಾಯ್ದೆಗೆ ಮತ್ತಷ್ಟು ಬಲ ತುಂಬಲಾಯಿತು.

ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ, ರಾಜಕೀಯ ಪಕ್ಷದಿಂದ ಆಯ್ಕೆಯಾಗುವ ಯಾವುದೇ ಶಾಸಕ/ಸಂಸದರು, ತಾನು ಆಯ್ಕೆಯಾದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ, ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರಿದರೆ ಅದು ಪಕ್ಷಾಂತರವಾಗಲಿದೆ. ಅಂಥವರನ್ನು ಅನರ್ಹಗೊಳಿಸಬಹುದು.

ಮತದಾನದ ಸಮಯದಲ್ಲಿ ಹಾಜರಿರಲೇಬೇಕು ಎಂದು ರಾಜಕೀಯ ಪಕ್ಷವೊಂದು ತನ್ನ ಶಾಸಕ/ಸಂಸದರಿಗೆ ಲಿಖಿತ ಸೂಚನೆ (ವಿಪ್‌) ಜಾರಿಗೊಳಿಸಿದ ಬಳಿಕವೂ, ಅದನ್ನು ಉಲ್ಲಂಘನೆ ಮಾಡುವವರು ಹಾಗೂ ಮತದಾನದಿಂದ ದೂರ ಉಳಿಯುವವರನ್ನು ಪಕ್ಷಾಂತರಿಗಳು ಎಂದು ಅನರ್ಹಗೊಳಿಸಬಹುದು.

ಒಬ್ಬ ಸದಸ್ಯ ಪಕ್ಷಾಂತರ ಮಾಡಿದ್ದಾನೋ ಇಲ್ಲವೇ ಎಂಬ ನಿರ್ಣಯವನ್ನು ಸಭಾಧ್ಯಕ್ಷ, ಸ್ಪೀಕರ್‌ ಪಕ್ಷಾಂತರ ನಿಷೇಧ ಕಾಯ್ದೆಯೆ ಅನ್ವಯ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್‌ ತೊರೆದು ಮತ್ತೆ ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...