Homeಮುಖಪುಟಬಿಜೆಪಿಗೆ ಸಹಾಯ ಮಾಡಲು ಕಾಂಗ್ರೆಸ್ -ಸಿಪಿಐ(ಎಂ) ಮೈತ್ರಿ ಮಾಡಿಕೊಂಡಿವೆ: ಮಮತಾ ಬ್ಯಾನರ್ಜಿ ಆರೋಪ

ಬಿಜೆಪಿಗೆ ಸಹಾಯ ಮಾಡಲು ಕಾಂಗ್ರೆಸ್ -ಸಿಪಿಐ(ಎಂ) ಮೈತ್ರಿ ಮಾಡಿಕೊಂಡಿವೆ: ಮಮತಾ ಬ್ಯಾನರ್ಜಿ ಆರೋಪ

- Advertisement -
- Advertisement -

‘ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೆಹಲಿಯನ್ನು ಗೆಲ್ಲುತ್ತದೆ; ಮುಂಬರುವ ಲೋಕಸಭೆ ಚುನಾವಣೆ ನಂತರ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದೇ ಛತ್ರಿ ಅಡಿಯಲ್ಲಿ ತರುತ್ತದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಂಗಾಳದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಮಾ, ಮತಿ, ಮಾನುಷ್ (ತಾಯಿ, ಭೂಮಿ, ಜನರು) ನ ಮೂಲ ಮೌಲ್ಯಗಳಿಗೆ ನಮ್ಮ ಪಕ್ಷ ಬದ್ಧವಾಗಿದೆ. ಟಿಎಂಸಿ ಬಂಗಾಳವನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಜೊತೆಗೆ, ರಾಷ್ಟ್ರದ ರಾಜಧಾನಿಗೆ ತನ್ನ ಪ್ರಭಾವವನ್ನು ವಿಸ್ತರಿಸುತ್ತದೆ’ ಎಂದರು.

ಲೋಕಸಭೆ ಚುನಾವಣೆ ನಂತರದ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ತಮ್ಮ ಆಲೋಚನೆ ಕುರಿತು ಒತ್ತಿಹೇಳಿದರು. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿದಂತೆ ಇಂಡಿಯಾ ಬ್ಲಾಕ್ ಮೈತ್ರಿಯಲ್ಲಿನ ಸಂಭಾವ್ಯ ಬದಲಾವಣೆಯ ಬಗ್ಗೆ ಸುಳಿವು ನೀಡಿದರು.

‘ಜನರು ನಮ್ಮೊಂದಿಗಿದ್ದಾರೆ; ನಾವು ಅವರಿಗೆ ಭರವಸೆ ನೀಡುತ್ತೇವೆ… ನಾವು ದೆಹಲಿಯನ್ನು ಗೆಲ್ಲುತ್ತೇವೆ. ಚುನಾವಣೆಯ ನಂತರ ನಾವು ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಗುರಿ ಸಾಧಿಸುತ್ತೇವೆ’ ಎಂದು ಮುಖ್ಯಮಂತ್ರಿ ಬ್ಯಾನರ್ಜಿ ಹೇಳಿದರು.

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕಳವಳ ವ್ಯಕ್ತಪಡಿಸಿದ ಬ್ಯಾನರ್ಜಿ ಅವರು, ‘ಈ ನಿರ್ಧಾರಗಳು ಮತದಾರರನ್ನು ಪ್ರತ್ಯೇಕಿಸುವ ಗುರಿಯನ್ನು ಹೊಂದಿವೆ. ಈ ರಾಜಕೀಯ ಯೋಜನೆಗಳನ್ನು ನಂಬಬೇಡಿ’ ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ‘ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಇಂತಹ ಕ್ರಮಗಳನ್ನು ಬಳಸುತ್ತಿದೆ’ ಎಂದು ಅವರು ಆರೋಪಿಸಿದರು.

‘ದಯವಿಟ್ಟು ನೆನಪಿಡಿ, ಇಲ್ಲಿ ಎನ್ಆರ್‌ಸಿ ಜಾರಿಗೆ ತರಲು ನಾನು ಅವರಿಗೆ ಅವಕಾಶ ನೀಡುವುದಿಲ್ಲ. ಅವರು ಸಿಎಎ ಹೆಸರಿನಲ್ಲಿ ಸುಳ್ಳು ಹೇಳುತ್ತಿದ್ದಾರೆ. ಇದು ಅವರ ರಾಜಕೀಯ ಯೋಜನೆಗಳು, ಅವರನ್ನು ನಂಬಬೇಡಿ, ಅವರು ನಿಮ್ಮೆಲ್ಲರನ್ನು ಪ್ರತ್ಯೇಕಿಸಲು ಬಯಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿವೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆರೋಪಿಸಿದರು. ಎಡಪಕ್ಷಗಳ ಹಸ್ತಕ್ಷೇಪದಿಂದಾಗಿ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆಯ ಚರ್ಚೆ ವಿಫಲವಾಗಿದೆ ಎಂದು ದೂರಿದರು.

‘ನೀವು ಯಾರನ್ನು ಆರಿಸುತ್ತೀರಿ, 365 ದಿನಗಳು ನಿಮ್ಮೊಂದಿಗೆ ಇರುವವರನ್ನು ಅಥವಾ ಋತುಮಾನದ ಹಕ್ಕಿಯಂತೆ ಬರುವವರನ್ನು? ನೆನಪಿಡಿ ನಾವು ದೆಹಲಿಯನ್ನು ಗೆಲ್ಲುತ್ತೇವೆ. ಬಂಗಾಳವು ದೆಹಲಿಯನ್ನು ಗೆಲ್ಲುವ ಮಾರ್ಗವನ್ನು ತೋರಿಸುತ್ತದೆ. ನಾವು ಬಂಗಾಳದಲ್ಲಿ ಏಕಾಂಗಿಯಾಗಿ ಹೋರಾಡುತ್ತೇವೆ. ನಾವು ಮೈತ್ರಿ ಬಯಸಿದ್ದೇವೆ; ಆದರೆ ಕಾಂಗ್ರೆಸ್ ಅದನ್ನು ಮಾಡಲಿಲ್ಲ, ಬದಲಿಗೆ ಬಿಜೆಪಿಗೆ ಸಹಾಯ ಮಾಡಲು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮೈತ್ರಿ ಮಾಡಿಕೊಂಡಿವೆ’ ಎಂದು ಅವರು ಆರೋಪಿಸಿದ್ದಾರೆ.

ಭೂ ಹಗರಣದ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಬಗ್ಗೆ ಮಾತನಾಡಿ, ‘ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಬಂಧಿಸುತ್ತಿದೆ’ ಎಂದು ಕಿಡಿಕಾರಿದರು.

‘ಈ ದೇಶದಲ್ಲಿ ಪ್ರತಿಪಕ್ಷದ ನಾಯಕರೆಲ್ಲ ಜೈಲಿಗೆ ಹಾಕಲ್ಪಡುತ್ತಾರೆ. ನನ್ನನ್ನು ಜೈಲಿಗೆ ಹಾಕಿದರೆ ನಾನು ಹೊರಗೆ ಬರುತ್ತೇನೆ. ನೆನಪಿರಲಿ.. ಚುನಾವಣೆ ಗೆಲ್ಲವುದಕ್ಕಾಗಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದ್ದಾರೆ. ನಾವು ಕಳ್ಳರೇ, ಅವರು ಪುಣ್ಯಾತ್ಮರೇ? ಇಂದು ಅಧಿಕಾರದಲ್ಲಿದ್ದಾರೆ.. ಆದ್ದರಿಂದ ಅವರು ಏಜೆನ್ಸಿಗಳನ್ನು ಹೊಂದಿದ್ದಾರೆ, ನಾಳೆ ಅವರು ಅಧಿಕಾರದಲ್ಲಿ ಇರುವುದಿಲ್ಲ, ಎಲ್ಲಾ ಏಜೆನ್ಸಿಗಳು ಕಣ್ಮರೆಯಾಗುತ್ತವೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

2019ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 22 ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿತು ಮತ್ತು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗಳಿಸಿತು.

ಇದನ್ನೂ ಓದಿ; ಭಾರತ್‌ ಜೋಡೋ ನ್ಯಾಯ ಯಾತ್ರೆ: ಪ.ಬಂಗಾಳದಲ್ಲಿ ಕಾರ್ಮಿಕರ ಜೊತೆ ರಾಹುಲ್‌ ಸಂವಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read