Homeದಿಟನಾಗರ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌ ಎಂದು ಟ್ರೆಂಡ್ ಮಾಡಿದ್ದ ಬಿಜೆಪಿಯೆ ಇದೀಗ ಎಕ್ಸ್‌ಪೋಸ್ಡ್‌ ಆಗಿದೆ.

- Advertisement -
- Advertisement -

ಕೊರೊನಾವನ್ನು ಬಳಸಿಕೊಂಡು ಕೇಂದ್ರದ ಮೋದಿ ನೇತೃತ್ವದ ಮತ್ತು ದೇಶದ ಇತರ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರವನ್ನು ಹಣಿಯಲು ಕಾಂಗ್ರೆಸ್‌ ಪಕ್ಷವು ‘ಟೂಲ್‌ಕಿಟ್‌’ ಒಂದನ್ನು ರಚಿಸಿದೆ ಎಂದು ಹೇಳಿಕೊಂಡು, ಬಿಜೆಪಿಯ ಹಿರಿಯ ನಾಯಕರು ದಾಖಲೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಮೇ 18 ರಂದು ವ್ಯಾಪಕವಾಗಿ ಹಂಚಿಕೊಂಡಿದ್ದರು. ಈ ಬಿಜೆಪಿ ನಾಯಕರು ಟ್ವಿಟರ್‌ನಲ್ಲಿ #CongressToolKitExposed ಎಂಬ ಹ್ಯಾಶ್‌ಟ್ಯಾಗ್‌ ಅನ್ನು ಕೂಡಾ ಟ್ರೆಂಡ್‌ ಮಾಡಿದ್ದರು. ಇದೀಗ ಆ ಟೂಲ್‌ಕಿಟ್‌ನ ಸತ್ಯಾಸತ್ಯತೆಯನ್ನು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ‘ಆಲ್ಟ್‌ನ್ಯೂಸ್‌’ ಬಯಲಿಗೆಳೆದಿದೆ.

ಆಪಾದಿತ ಡಾಕ್ಯುಮೆಂಟ್ ಅನ್ನು ಎರಡು ಭಾಗಗಳಾಗಿ ಹಂಚಿಕೊಳ್ಳಲಾಗಿದೆ. ಒಂದನೆಯದಾಗಿ ಕೊರೊನಾವನ್ನು ಬಳಸಿಕೊಂಡು ಆಡಳಿತವನ್ನು ಟೀಕಿಸಲು ಬೇಕಾದ ನಾಲ್ಕು ಪುಟದ ‘ಟೂಲ್‌ಕಿಟ್‌’. ಮತ್ತೊಂದು ಸೆಂಟ್ರಲ್ ವಿಸ್ಟಾ ಯೋಜನೆಯ ಸಮಸ್ಯೆಗಳ ಕುರಿತ ನಾಲ್ಕು ಪುಟಗಳ ವಿಶ್ಲೇಷಣೆ.

ಈ ಟೂಲ್‌ಕಿಟ್‌‌ ಕಾಂಗ್ರೆಸ್‌ ಕಾರ್ಯಕರ್ತರಿಗೆ, ‘ಸೂಪರ್ ಸ್ಪ್ರೆಡರ್ ಕುಂಭ’ ಎಂಬ ಪದವನ್ನು ಬಳಸಬೇಕೆಂದೂ, ‘ಈದ್ ಕೂಟಗಳ ಬಗ್ಗೆ ಪ್ರತಿಕ್ರಿಯಿಸಬೇಡಿ’ ಎಂದೂ ಕರೆನೀಡಿದೆ ಎಂಬಂತೆ ತಯಾರುಗೊಳಿಸಲಾಗಿತ್ತು.

ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಿಂಘು ಗಡಿಯ ಒಂದು ಭಾಗದಲ್ಲಿ ದಾಂಧಲೆ ಮಾಡಿದ್ದು ಸ್ಥಳೀಯರಲ್ಲ ಬಿಜೆಪಿ ಕಾರ್ಯಕರ್ತರು!

ಜೊತೆಗೆ, ರಾಷ್ಟ್ರೀಯ ಯೂತ್‌ ಕಾಂಗ್ರೆಸ್‌ನ ಟ್ವಿಟರ್‌ ಖಾತೆಗೆ ಟ್ಯಾಗ್‌ ಮಾಡಿರುವ ‘ಕೊರೊನಾ ತುರ್ತು’ ಸಂದೇಶಗಳಿಗೆ ಮಾತ್ರ ಪ್ರತಿಕ್ರಿಯಿಸಿ, ‘ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಅಂತ್ಯಕ್ರಿಯೆಯ ಮತ್ತು ಮೃತ ಶರೀರದ ನಾಟಕೀಯ ಪೋಟೋಗಳನ್ನು ಬಳಸಿ’ ಹೀಗೆ ಮುಂತಾದ ಕರೆಯನ್ನು ಕಾಂಗ್ರೆಸ್ ನೀಡಿದೆ ಎಂಬಂತೆ ಡಾಕ್ಯುಮೆಂಟ್‌ ಅನ್ನು ತಯಾರುಗೊಳಿಸಲಾಗಿತ್ತು.

ಅಷ್ಟೇ ಅಲ್ಲದೆ ಭಾರತದಲ್ಲಿ ಹುಟ್ಟಿಕೊಂಡಿರುವ ಕೊರೊನಾದ ಹೊಸ ರೂಪಾಂತರಿ ವೈರಸ್‌ಗೆ ‘ಮೋದಿ ಸ್ಟ್ರೈನ್’(ಮೋದಿ ರೂಪಾಂತರಿ) ಎಂಬ ಪದವನ್ನು ಬಳಸಿ ಎಂದು ಕಾಂಗ್ರಸ್ ತನ್ನ ಸಾಮಾಜಿಕ ಜಾಲತಾಣದ ಸ್ವಯಂಸೇವಕರಿಗೆ ಹೇಳಿಕೊಂಡಿದೆ ಎಂಬಂತೆ ತಯಾರಿಸಲಾಗಿದೆ.

 

ದಾಖಲೆಯ ಎರಡನೆ ಭಾಗದಲ್ಲಿ, ಸೆಂಟ್ರಲ್ ವಿಸ್ಟಾದ ವಿಶ್ಲೇಷಣೆಯನ್ನು ಮಾಡಲಾಗಿತ್ತು. ಈ ಯೋಜನೆಯು ಪ್ರಧಾನಿ ಮೋದಿಯ ಕನಸಿನ ಯೋಜನೆಯಾಗಿದ್ದು, ಕೊರೊನಾ ಸಮಯದಲ್ಲಿ ಜನರು ಸಾಯುತ್ತಿರುವಾಗ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸುರಿದು ಇದರ ನಿರ್ಮಾಣ ಬೇಕೇ ಎಂದು ದೇಶದ ಹಲವಾರು ಗಣ್ಯರು ಪ್ರಶ್ನಿಸಿದ್ದರು.

ದಾಖಲೆಯ ಈ ವಿಭಾಗವು ಕೊರೊನಾ ಲಸಿಕೆಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಂತ್ರಸ್ತರಿಗೆ ವಿತ್ತೀಯ ಪರಿಹಾರ ಸೇರಿದಂತೆ ಯೋಜನೆಯ ವೆಚ್ಚವನ್ನು ತಿಳಿಸುತ್ತದೆ. ಜೊತೆಗೆ ಇದರ ನಿರ್ಮಾಣದಿಂದಾಗಿ ಪರಿಸರ ಮತ್ತು ವಾಸ್ತುಶಿಲ್ಪದ ಮೇಲಿನ ದುಷ್ಪರಿಣಾಮವನ್ನು ಸಹ ಪಟ್ಟಿ ಮಾಡಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಏರ್‌ಪೋರ್ಟ್-ಸಿಲ್ಕ್‌ಬೋರ್ಡ್ ಮೆಟ್ರೋ ಕಾಮಗಾರಿಗೆ 15,000 ಕೋಟಿ ಮಂಜೂರು?: ವಾಸ್ತವವೇನು?

ಈ ದಾಖಲೆಗಳನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌, “ಈ ಜಾಗತಿಕ ದುರಂತದ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸುವುದು ಶೋಚನೀಯ” ಎಂದು ಬರೆದಿದ್ದಾರೆ.

 

ಅವರಷ್ಟೇ ಅಲ್ಲದೆ ಈ ದಾಖಲೆಯನ್ನು ಉಲ್ಲೇಖಿಸಿ #CongressToolKitExposed ಹ್ಯಾಶ್‌ಟ್ಯಾಗ್‌ ಬಳಸಿ ಬಿಜೆಪಿಯ ಉನ್ನತ ಬಿಜೆಪಿ ನಾಯಕರಾದ ಸ್ಮೃತಿ ಇರಾನಿ, ತಿರಥ್ ​​ಸಿಂಗ್ ರಾವತ್, ಪಿಯೂಷ್ ಗೋಯಲ್, ರಾಜ್ಯವರ್ಧನ್ ರಾಥೋಡ್, ತೇಜಸ್ವಿ ಸೂರ್ಯ, ಕಿರೆನ್ ರಿಜಿಜು, ಅನುರಾಗ್ ಠಾಕೂರ್, ಪಿಸಿ ಮೋಹನ್, ಹರ್ದೀಪ್ ಸಿಂಗ್ ಪುರಿ, ಶೋಭಾ ಕರಂದ್ಲಾಜೆ, ಬಿರೆನ್ ಸಿಂಗ್, ಪ್ರಹ್ಲಾದ್ ಜೋಶಿ, ರಾಹುಲ್ ಕಸ್ವಾನ್, ಮನೋಜ್ ಕೊಟಕ್ ಮತ್ತು ಡಾ.ವಿನಯ್ ಸಹಸ್ರಬುದ್ಧೆ ಹಲವಾರು ಮಂದಿ ಹಂಚಿಕೊಂಡಿದ್ದರು.

ಆರೆಸ್ಸೆಸ್‌ ಅಂಗಸಂಸ್ಥೆ ಎಬಿವಿಪಿಯ ಅಧಿಕೃತ ಟ್ವಿಟರ್ ಖಾತೆಯು ಆಪಾದಿತ ದಾಖಲೆಯನ್ನು ಹಂಚಿಕೊಂಡಿದೆ. ಜೊತೆಗೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಲ್ವಿಯಾ, ಸಂಬಿತ್ ಪಾತ್ರ, ಬಿ.ಎಲ್.ಸಂತೋಷ್, ತಾಜಿಂದರ್ ಪಾಲ್ ಸಿಂಗ್ ಬಗ್ಗ, ಸುನಿಲ್ ದಿಯೋಧರ್, ಪ್ರೀತಿ ಗಾಂಧಿ, ಸುರೇಶ್ ನಖುವಾ, ಸಂಜು ವರ್ಮಾ, ಓಂ ಪ್ರಕಾಶ್ ಧಂಕರ್, ಚಾರು ಪ್ರಜ್ಞಾ, ವೈ ಸತ್ಯ ಕುಮಾರ್, ಸಿ.ಟಿ.ರವಿ, ಸಿಟಿಆರ್ ನಿರ್ಮಲ್ ಕುಮಾರ್, ಆಶಿಶ್ ಚೌಹಾನ್ ಮತ್ತು ಅನೂಪ್ ಎಜೆ ಸೇರಿದಂತೆ ಬಿಜೆಪಿಯ ಉನ್ನತ ಸ್ಥಾನದಲ್ಲಿರುವವರು ಹೆಚ್ಚಿನ ಪ್ರತಿನಿಧಿಗಳು ಇದನ್ನು ಹಂಚಿಕೊಂಡಿದ್ದರು.

ಬಿಜೆಪಿ ಬೆಂಬಲಿಗರಾದ – ಆನಂದ್ ರಂಗನಾಥನ್, ಪ್ರಶಾಂತ್ ಪಟೇಲ್ ಉಮರಾವ್, ಅಂಕಿತ್ ಜೈನ್, ಪ್ರದೀಪ್ ಭಂಡಾರಿ, ಶೆಫಾಲಿ ವೈದ್ಯ, ಶೆಹಜಾದ್, ವಿವೇಕ್ ಅಗ್ನಿಹೋತ್ರಿ ಮತ್ತು ಅಖಿಲೇಶ್ ಮಿಶ್ರಾ ಇದನ್ನು ಹಂಚಿಕೊಂಡಿದ್ದರು. ಜೊತೆಗೆ ಬಲಪಂಥೀಯ ವೆಬ್‌ಪೋರ್ಟಾಲ್‌ ಒಪಿಇಂಡಿಯಾ ಮತ್ತು ಅದರ ಸಂಪಾದಕ ನೂಪುರ್ ಶರ್ಮಾ ಮತ್ತು ಸ್ವರಾಜ್ಯ ಕೂಡಾ ಈ ಬಗ್ಗೆ ವರದಿ ಮಾಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಊಟದ ವೇಳೆ ರಾಹುಲ್ ಗಾಂಧಿ ಮಾಸ್ಕ್ ಧರಿಸಿರಲಿಲ್ಲ

ಟೂಲ್‌ಕಿಟ್‌ ಅನ್ನು ಕಾಂಗ್ರೆಸ್ ರಚಿಸಿದೆ ಎಂದು ಆಪಾದಿತ ‘ಟೂಲ್‌ಕಿಟ್’ ಕುರಿತು ಹೆಚ್ಚಿನ ಮಾಧ್ಯಮಗಳು ವರದಿ ಮಾಡಿವೆ.

ಈ ಟೂಲ್‌ಕಿಟ್ ತನ್ನದಲ್ಲ ಅದು ಫೇಕ್‌ ಎಂದು ಕಾಂಗ್ರೆಸ್‌ ಹೇಳಿದೆ

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಸಂಶೋಧನಾ ವಿಭಾಗದ ಅಧ್ಯಕ್ಷ ರಾಜೀವ್ ಗೌಡ ಅವರು, ‘‘ಸಾಮಾಜಿಕ ಜಾಲತಾಣದ ಮತ್ತು ಆನ್-ಗ್ರೌಂಡ್ ಸ್ಟ್ರಾಟಜಿಗಳನ್ನು ಶಿಫಾರಸು ಮಾಡುವ ಡಾಕ್ಯುಮೆಂಟ್‌ನ ಮೊದಲ ಭಾಗವನ್ನು ತಮ್ಮ ಪಕ್ಷ ಸಿದ್ದಪಡಿಸಿಲ್ಲ” ಎಂದು ಆಲ್ಟ್‌ ನ್ಯೂಸ್‌ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಸೆಂಟ್ರಲ್ ವಿಸ್ಟಾ ಯೋಜನೆಯ ಸಮಸ್ಯೆಗಳ ಎರಡನೆ ಭಾಗವನ್ನು (‘ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ: ಸಾಂಕ್ರಾಮಿಕ ಮಧ್ಯೆ ವ್ಯಾನಿಟಿ ಪ್ರಾಜೆಕ್ಟ್’) ಎಐಸಿಸಿಯ ಸಂಶೋಧನಾ ವಿಭಾಗವು ಮಾಡಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!

“ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ‘ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್‌’ ಒಟ್ಟು 6 ಪುಟಗಳ ಒಂದು ದೊಡ್ಡ ದಾಖಲೆಯಾಗಿದೆ. ಇದು ರಾಷ್ಟ್ರ ಎದುರಿಸುತ್ತಿರುವ ನೀತಿ ಮತ್ತು ಸಮಸ್ಯೆಗಳ ಹಿನ್ನೆಲೆಯ ಟಿಪ್ಪಣಿಯಾಗಿದೆ. ಅವರು ಅದನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆಂದು ತೋರುತ್ತದೆ. ಜೊತೆಗೆ ನಕಲಿ ಲೆಟರ್‌ಹೆಡ್‌ನೊಂದಿಗೆ ನಕಲಿ ಡಾಕ್ಯುಮೆಂಟ್ ರಚಿಸಲು ಅದನ್ನು ಮಾದರಿಯಾಗಿ ಬಳಸಿದ್ದಾರೆ” ಎಂದು ರಾಜೀವ್‌ ಗೌಡ ಹೇಳಿದ್ದಾರೆ.

ಈ ದಾಖಲೆ ನಕಲಿ ಎಂದು ರಾಜೀವ್ ಗೌಡ ಟ್ವೀಟ್ ಕೂಡಾ ಮಾಡಿದ್ದರು.

ನಕಲಿ ಲೆಟರ್ ಹೆಡ್

(ಗಮನಿಸಿ: ಲೇಖನದಲ್ಲಿ ಕೊರೊನಾ ದುರುಪಯೋಗದ ಕುರಿತ ದಾಖಲೆಯ ನಾಲ್ಕು ಪುಟಗಳನ್ನು ‘ಕೊರೊನಾ ಟೂಲ್‌ಕಿಟ್’ ಎಂದು ಉಲ್ಲೇಖಿಸಲಾಗಿದೆ. ಸೆಂಟ್ರಲ್ ವಿಸ್ಟಾದ ದಾಖಲೆಯನ್ನು ಹೆಸರೇ ಸೂಚಿಸುವಂತೆ ಉಲ್ಲೇಖಿಸಲಾಗಿದೆ.)

ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್‌ನಲ್ಲಿನ ಲೆಟರ್‌ಹೆಡ್‌ಗೂ ಕೊರೊನಾ ಟೂಲ್‌ಕಿಟ್‌ನಲ್ಲಿನ ಲೆಟರ್‌ಹೆಡ್‌ಗೂ ಹೊಂದಿಕೆಯಾಗುವುದಿಲ್ಲ. ರಾಜೀವ್‌ ಗೌಡ ಅವರ ಪ್ರಕಾರ ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್ ಅನ್ನು ಮೊದಲು ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ತಯಾರಿಸಲಾಯಿತು ಮತ್ತು ನಂತರ ಪಿಡಿಎಫ್ ಆವೃತ್ತಿಯನ್ನು ಆಂತರಿಕವಾಗಿ ಪ್ರಸಾರ ಮಾಡಲಾಯಿತು.

ಲೇಖಕರ ಆಧಾರದ ಮೇಲೆ ಡಾಕ್ಯುಮೆಂಟ್‌ನ ಶೈಲಿ ಮತ್ತು ಸ್ವರೂಪದಲ್ಲಿ ವ್ಯತ್ಯಾಸಗಳಿರಬಹುದಾದರೂ, ವರ್ಡ್‌ನಲ್ಲಿನ ಹೆಡರ್ ಮತ್ತು ಅಡಿಟಿಪ್ಪಣಿ ಹಾಗೇ ಇರುತ್ತದೆ.

ಇದನ್ನೂ ಓದಿ: ಜಯ್ ಶಾ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಕ್ಷಮೆ ಕೇಳಿತೆ? ಅಸಲಿ ಸಮಾಚಾರ ಇಲ್ಲಿದೆ!

ಇದನ್ನು ಸ್ಪಷ್ಟವಾಗಿ ಚಿತ್ರಗಳಲ್ಲಿ ನೋಡಬಹುದಾಗಿದೆ. ‘ಕೊರೊನಾ ಟೂಲ್‌ಕಿಟ್‌’ನಲ್ಲಿ ತೆಳುವಾದ ಫಾಂಟ್‌ ಅನ್ನು ಬಳಸಲಾಗಿದೆ. ಅಲ್ಲದೆ ಪುಟ ಸಂಖ್ಯೆ ಕೂಡಾ ಹೊಂದಿಕೆಯಾಗುವುದಿಲ್ಲ. ಸೆಂಟ್ರಲ್ ವಿಸ್ಟಾ ಡಾಕ್ಯುಮೆಂಟ್‌ನಲ್ಲಿ ‘ಒಂದು’ ಸಂಖ್ಯೆಯನ್ನು ‘I’ ಎಂದು ಬರೆಯಲಾಗಿದ್ದು, ಟೂಲ್‌ಕಿಟ್‌ನಲ್ಲಿ ‘1’ ಎಂದು ಬರೆಯಲಾಗಿದೆ.

ಎಐಸಿಸಿ ಸಂಶೋಧನಾ ವಿಭಾಗವು ಸಿದ್ಧಪಡಿಸಿದ ಹಳೆಯ ದಾಖೆಲೆಯನ್ನು ಆಲ್ಟ್ ನ್ಯೂಸ್‌ನೊಂದಿಗೆ ರಾಜೀವ್‌ ಗೌಡ ಹಳೆಯ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಇವುಗಳ ಫಾಂಟ್‌ಗಳು ಮತ್ತು ಶೈಲಿಯು ‘ಸೆಂಟ್ರಲ್ ವಿಸ್ಟಾ’ ದಾಖಲೆಗೆ ಹೊಂದಿಕೆಯಾಗುತ್ತದೆ ಆದರೆ ‘ಕೊರೊನಾ ಟೂಲ್‌ಕಿಟ್’ನ ದಾಖಲೆಯು ಭಿನ್ನವಾಗಿದೆ. ಇದು ಟೂಲ್ಕಿಟ್ ನಕಲಿಯಾಗಿ ತಯಾರಿಸಲಾಗಿದೆ ಎಂಬುದಕ್ಕೆ ಮತ್ತಷ್ಟು ದಾಖಲೆಯನ್ನು ಒದಗಿಸುತ್ತದೆ.

“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ಡಾಕ್ಯುಮೆಂಟ್ ಅನ್ನು ಸಲ್ಲಿಸಲು ಅವರಿಗೆ ನಾನು ಸವಾಲು ಹಾಕುತ್ತೇನೆ. ಅವರ ಸುಳ್ಳನ್ನು ಬಹಿರಂಗಪಡಿಸಲು ನಾವು ಅದನ್ನು ವಿಧಿವಿಜ್ಞಾನ ತನಿಖೆಗೆ ಒಳಪಡಿಸುತ್ತೇವೆ” ಎಂದು ರಾಜೀವ್‌ ಗೌಡ ಹೇಳಿದ್ದಾರೆ.

ಈ ದಾಖಲೆಗಳ ನಡುವೆ ಬಳಸಿದ ಫಾಂಟ್‌ನಲ್ಲಿನ ವ್ಯತ್ಯಾಸವನ್ನು ಹೆಡರ್‌ನಲ್ಲಿ ಸಹ ಗುರುತಿಸಬಹುದು. ಎಲ್ಲಾ ಪುಟಗಳ ಮೇಲಿನ ಎಡ ಮೂಲೆಯಲ್ಲಿ ‘ಮೇ 2021’ ಎಂದು ಹೇಳಲಾಗುತ್ತದೆ ಆದರೆ ಎರಡೂ ದಾಖಲೆಗಳಲ್ಲಿನ ‘M’ ಗಮನಾರ್ಹವಾಗಿ ಭಿನ್ನವಾಗಿದೆ.

ಜೊತೆಗೆ ಅಡಿಟಿಪ್ಪಣಿಯಲ್ಲಿನ ಜೋಡಣೆಯಯಲ್ಲಿ ಕೂಡಾ ‘ಕೊರೊನಾ ಟೂಲ್‌ಕಿಟ್‌’ನಲ್ಲಿ ತಪ್ಪಿರುವುದು ಕಾಣಬಹುದು. ಲೆಟರ್‌ಹೆಡ್ ಮತ್ತು ಲಿಂಕ್‌ಗಳನ್ನು ಗಮನಿಸಿದಾಗ ಅದು ಸೆಟ್ರಲ್ ವಿಸ್ಟಾಕ್ಕಿಂತ ವ್ಯತ್ಯಾಸ ಇರುವುದು ಗಮನಿಸಬಹುದು.

ಮಾರ್ಫಡ್ ಡಾಕ್ಯುಮೆಂಟ್ 

ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ‘ಕೊರೊನಾ ಟೂಲ್ಕಿಟ್’ ಅನ್ನು ‘ನಕಲಿ’ ಎಂದು ಪ್ರತಿಪಾದಿಸಿ ನಂತರ, ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಟೂಲ್ಕಿಟ್‌ ಬರೆದವರು ಎಂದು ಸೌಮ್ಯಾ ವರ್ಮಾ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮಮತಾ ದರ್ಗಾಕ್ಕೆ ರಹಸ್ಯ ಭೇಟಿ ನೀಡಿಲ್ಲ, ಮಾಧ್ಯಮದ ಸಮ್ಮುಖದಲ್ಲೇ ಭೇಟಿ

ರಾಜೀವ್ ಗೌಡ ಅವರೊಂದಿಗೆ ಕೆಲಸ ಮಾಡುವ, ಡಾಕ್ಯುಮೆಂಟ್‌ನ ಲೇಖಕಿ ಸೌಮ್ಯಾ ವರ್ಮಾ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಅನ್ನು ಬಿಜೆಪಿ ವಕ್ತಾರ ಸಂಬಿತ್‌ ಪತ್ರಾ ಹಂಚಿಕೊಂಡಿದ್ದು, ಅದರಲ್ಲಿ ಸೆಂಟ್ರಲ್‌ ವಿಸ್ಟಾದ ದಾಖಲೆಯನ್ನು ಸೌಮ್ಯಾ ವರ್ಮಾ ಸಿದ್ದಪಡಿಸಿದ್ದು ಎಂದು ಇದೆ.

 

ಇದಕ್ಕೆ ಪ್ರತಿಕ್ರಿಯಿಸಿದ ರಾಜೀವ್‌ ಗೌಡಾ ಮತ್ತೊಂದು ಟ್ವೀಟ್ ಮಾಡಿದ್ದು, “ಎಐಸಿಸಿ ನಿಜಕ್ಕೂ ಸೆಂಟ್ರಲ್ ವಿಸ್ಟಾದ ಡಾಕ್ಯುಮೆಂಟ್ ಅನ್ನು ಸಿದ್ಧಪಡಿಸಿದೆ ಆದರೆ ಕೊರೊನಾ ಟೂಲ್ಕಿಟ್ ನಕಲಿಯಾಗಿದ್ದು, ಅದನ್ನು ಬಿಜೆಪಿ ಮತ್ತು ತಯಾರಿಸಿದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

 

ಜೊತೆಗೆ ಸಂಬಿತ್‌ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ ಶಾರ್ಟ್ ಪ್ರಕಾರ ದಾಖಲೆಯು ಕೇವಲ 6 ಪುಟಗಳನ್ನು ಹೊಂದಿದೆ ಎಂದು ಹೇಳುತ್ತದೆ. ಆದರೆ ಸ್ವತಃ ಸಂಬಿತ್‌ ಪಾತ್ರ ಅವರು ಒಟ್ಟು 8 ಪುಟವನ್ನು ಹಂಚಿಕೊಂಡಿದ್ದಾರೆ.

ರಾಜೀವ್ ಗೌಡ ಅವರು ಸೆಂಟ್ರಲ್ ವಿಸ್ಟಾದ ಸಂಪೂರ್ಣ ದಾಖಲೆಯನ್ನು ಆಲ್ಟ್‌ ನ್ಯೂಸ್‌ಗೆ ನೀಡಿದ್ದು, ಅದರಲ್ಲಿರುವ ಲೇಖಕರ ಹೆಸರು, ಫೈಲ್‌ ಹೆಸರು ಮತ್ತು ಆರು ಪುಟಗಳು, ಬಿಜೆಪಿ ಸದಸ್ಯರು ಹಂಚಿಕೊಂಡಿವುದಕ್ಕೆ ಹೋಲುತ್ತದೆ.

ಎರಡರಲ್ಲೂ ಸೆಂಟ್ರಲ್ ವಿಸ್ಟಾ ದಾಖಲೆ ಒಟ್ಟು ಆರು ಪುಟಗಳನ್ನು ಹೊಂದಿದೆ ಎಂದು ಹೇಳುತ್ತದೆ. ಆದರೆ ಬಿಜೆಪಿಗರು ಎಂಟು ಪುಟಗಳನ್ನು ಹಂಚಿಕೊಂಡಿದ್ದಾರೆ.

‘ಟೂಲ್‌ಕಿಟ್‌ನಲ್ಲಿ’ ಉಲ್ಲೇಖಿಸಲಾದ ಸಾಮಾಜಿಕ ಜಾಲತಾಣದ ತಂತ್ರಗಳನ್ನು ಅನುಸರಿಸಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ

ಟೂಲ್ಕಿಟ್ ಎಂದರೆ, ಮುಂಬರುವ ಕಾರ್ಯಕ್ರಮಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುವ ದಾಖಲೆಯಾಗಿದೆ. ಅದರಲ್ಲಿ ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇರುವತ್ತವೆ.

ಆಪಾದಿತ ‘ಕೊರೊನಾ ಟೂಲ್ಕಿಟ್’ ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿಯ ಸಂದೇಶಗಳನ್ನು ಕಳುಹಿಸಬೇಕು ಮತ್ತು ಹೊರಗಡೆ ಯಾವ ರೀತಿಯ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳುತ್ತದೆ.

ಇದನ್ನೂ ಓದಿ: ಆದಿತ್ಯನಾಥ್ ಕುರಿತ ಪೋಸ್ಟ್ ಕಾರ್ಡ್‌ ಸುಳ್ಳು ಬಯಲು; ವಾಸ್ತವದಲ್ಲಿ ಇದು ಉಲ್ಟಾ ಕೇಸು

ಆದರೆ ‘ಕೊರೊನಾ ಟೂಲ್‌ಕಿಟ್‌’ನಲ್ಲಿನ ಮಾಹಿತಿಯಂತೆ ಅದನ್ನು ಮೇ ತಿಂಗಳಲ್ಲಿ ತಯಾರಿಸಲಾಗಿದೆ. ಅದರಂತೆ, ಅದರಲ್ಲಿ ಹೇಳುವ ಹೆಚ್ಚಿನ ನಿರ್ದೇಶನಗಳಲ್ಲಿ ಹಲವು ಮೇ ತಿಂಗಳಿಗಿಂತ ಮೊದಲೆ ಭಾರತದಲ್ಲಿ ಘಟಿಸಿದೆ.

ಉದಾಹರಣಗೆ, “ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗಾರರು ಮೋದಿ ಮತ್ತು ಅವರ ಆಡಳಿತದ ವೈಫಲ್ಯವನ್ನು ಕೇಂದ್ರೀಕರಿಸುವಂತೆ ಅನುವು ಮಾಡಿಕೊಡುವುದು” ಎಂದು ಮೇ ತಿಂಗಳಲ್ಲಿ ಸಿದ್ದಪಡಿಸಲಾಗಿದೆ ಎನ್ನಲಾಗಿರುವ ಕೊರೊನಾ ಟೂಲ್‌ಕಿಟ್‌ ದಾಖಲೆ ಹೇಳುತ್ತದೆ. ಆದರೆ ವಾಸ್ತವದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳು ಏಪ್ರಿಲ್‌ನಿಂದಲೆ ಮೋದಿ ಸರ್ಕಾರವನ್ನು ಟೀಕಿಸುತ್ತಿವೆ.

ಮತ್ತೊಂದು ಉದಾಹರಣೆ, ‘MyGov India’ದ ಮಾಜಿ ನಿರ್ದೇಶಕ ಅಖಿಲೇಶ್ ಮಿಶ್ರಾ, ಕೊರೊನಾ ಸಂತ್ರಸ್ತರ ಸಾಮೂಹಿಕ ಅಂತ್ಯಕ್ರಿಯೆಗಳನ್ನು ಚಿತ್ರಿಸುವ ರಾಹುಲ್ ಗಾಂಧಿಯವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ‘ದಿ ನ್ಯೂಯಾರ್ಕ್ ಟೈಮ್ಸ್’ನ ಲೇಖನದೊಂದಿಗೆ ಹೊಂದಿಸಿ ಇದು “ಕೊರೊನಾ ಟೂಲ್‌ಕಿಟ್‌ನ” ಭಾಗ ಎಂದು ಹೇಳಿದ್ದಾರೆ.

ಆದರೆ ರಾಹುಲ್ ಗಾಂಧಿ ಈ ಪೋಸ್ಟ್ ಅನ್ನು ಏಪ್ರಿಲ್ 29 ರಂದು ಮಾಡಿದ್ದು, ನ್ಯೂಯಾರ್ಕ್ ಟೈಮ್ಸ್ ಲೇಖನವು ಏಪ್ರಿಲ್ 25 ರಂದು ವರದಿ ಮಾಡಿದೆ.

ಆದರೆ ಅಖಿಲೇಖ್‌ ಮಿಶ್ರ ಅವರು ಈ ವರದಿಗೆ ‘ಕೊರೊನಾ ಟೂಲ್‌ಕಿಟ್‌’ ಕಾರಣ ಎಂದು ಆರೋಪಿಸಿದ್ದಾರೆ.

ಅಖಿಲೇಶ್‌ ಮಿಶ್ರಾ ಅವರು ಹಲವಾರು ಬಿಜೆಪಿ ಪರ ಪ್ರೊಪಗಾಂಡ ಹರಡುವ ಪುಟಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಆಲ್ಟ್‌ನ್ಯೂಸ್ ಈ ಹಿಂದೆಯೆ ಅವರ ‘ಬಿಜೆಪಿ ಸಂಪರ್ಕ’ ಕುರಿತು ವಿಸ್ತಾರವಾದ ವರದಿಯನ್ನು ಮಾಡಿದ್ದು ಅದನ್ನು ಇಲ್ಲಿ ಓದಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮರಣ ಪ್ರಮಾಣಪತ್ರದಲ್ಲೂ ಮೋದಿ ಚಿತ್ರ?

ಆಪಾದಿತ ‘ಕೊರೊನಾ ಟೂಲ್ಕಿಟ್‌’ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಪದಗಳು ಮತ್ತು ಪದಗುಚ್ಛಗಳನ್ನು ಪದೇ ಪದೇ ಬಳಸುವಂತೆ ಸೂಚಿಸುತ್ತದೆ.

ಅದರ ಸತ್ಯಾಸತ್ಯತೆಯನ್ನು ತಿಳಿಯಲು ಕಾಂಗ್ರೆಸ್‌ನ ಸದಸ್ಯರು ಮತ್ತು ಸ್ವಯಂಸೇವಕರು ಇದನ್ನು ಸಂಘಟಿತ ರೀತಿಯಲ್ಲಿ ಬಳಿಸಿದ್ದಾರೆಯೆ ಎಂದು ಆಲ್ಟ್‌ನ್ಯೂಸ್‌ ಪರಿಶೀಲಿಸಿದೆ. ಆದರೆ ಅದು ನಿಜವಲ್ಲ ಎಂದು ಅದು ವರದಿ ಮಾಡಿದ್ದು, ಇಂತಹ ಪದಬಳಕೆ ಕಾಂಗ್ರೆಸ್‌ನೊಂದಿಗೆ ಸಂಬಂಧವಿಲ್ಲದವರೇ ಹೆಚ್ಚು ಬಳಸಿದ್ದಾರೆ.

ಸೆಂಟ್ರಲ್ ವಿಸ್ಟಾದ ದಾಖಲೆಯನ್ನು ಮೇ 7 ರಂದು ಆಂತರಿಕವಾಗಿ ಪ್ರಸಾರ ಮಾಡಲಾಗಿದೆ ಎಂದು ರಾಜೀವ್ ಗೌಡ ಹೇಳಿದ್ದಾರೆ. ಆದರೆ ಕೊರೊನಾ ಟೂಲ್ಕಿಟ್ ಪ್ರತಿ ಪುಟದ ಮೇಲಿನ ಎಡ ಮೂಲೆಯಲ್ಲಿ ‘ಮೇ 2021’ ಎಂದು ಬರೆಯಲಾಗಿದೆ. ಜೊತೆಗೆ ಈ ತಿಂಗಳ ಸುಮಾರು ಮೂರು ವಾರಗಳಲ್ಲಿ, ಟೂಲ್‌ಕಿ‌ಟ್‌ನಲ್ಲಿ ಹೇಳಲಾಗಿರುವ ಯಾವುದೆ ‘ತಂತ್ರ’ಗಳನ್ನು ಅನುಸರಿಲಾಗಿಲ್ಲ.

ಟ್ವಿಟರ್‌ನಲ್ಲಿ ‘ಸೂಪರ್ ಸ್ಪ್ರೆಡರ್ ಕುಂಭ’(super spreader kumbh) ಎಂದು ಹುಡುಕಿದರೆ, ಇತ್ತೀಚಿನ ಎಲ್ಲಾ ಪೋಸ್ಟ್‌ಗಳನ್ನು ‘ಕೊರೊನಾ ಟೂಲ್‌ಕಿಟ್‌’ಗೆ ಸಂಬಂಧಿಸಿದಂತೆ ಬಿಜೆಪಿ ಪರ ಅಥವಾ ಬಿಜೆಪಿ ಹ್ಯಾಂಡಲ್‌ಗಳು ಮಾಡುತ್ತಿವೆ. ಆಪಾದಿತ ಡಾಕ್ಯುಮೆಂಟ್ ಬೆಳಕಿಗೆ ಬರುವ ಮೊದಲು ಮೇ 17 ರವರೆಗೆ ಹುಡುಕಾಟ ನಡೆಸಿದರೂ ಕೆಲವೆ ಕೆಲವು ಕಾಂಗ್ರೆಸ್‌ ಅಲ್ಲದವರು ಪೋಸ್ಟ್‌ ಮಾಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಮತ್ತೊಂದು ಅಂಶವೇನೆಂದರೆ, ಹೊಸ ರೂಪಾಂತರಿತ ಕೊರೊನಾ ವೈರಸ್ ಬಗ್ಗೆ ಮಾತನಾಡುವಾಗಲೆಲ್ಲಾ ‘ಇಂಡಿಯನ್ ಸ್ಟ್ರೈನ್’ ಎಂಬ ಪದಗುಚ್ಛವನ್ನು ಬಳಸಲು ಆಪಾದಿತ ಕೊರೊನಾ ಟೂಲ್ಕಿಟ್‌‌‌ ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುತ್ತದೆ. ಸಾಮಾಜಿಕ ಜಾಲತಾಣದ ಸ್ವಯಂಸೇವಕರು ಇದನ್ನು ‘ಮೋದಿ ಸ್ಟ್ರೈನ್’ ಎಂದು ಕರೆಯಬಹುದು ಎಂದೂ ಅದು ಹೇಳಿದೆ.

ಇಂಡಿಯನ್ ಸ್ಟ್ರೈನ್’ ಎಂಬ ಪದವನ್ನು ಹೆಚ್ಚಾಗಿ ಮಾಧ್ಯಮಗಳು ಅಂತರರಾಷ್ಟ್ರೀಯ ಮತ್ತು ದೇಶೀಯವಾಗಿ ಬಳಸಿಕೊಂಡಿವೆ. ಆದರೆ ‘ಮೋದಿ ಸ್ಟ್ರೈನ್‌’ ಎಂಬ ಪದಗುಚ್ಛವನ್ನು ಮೇ 1 ರಿಂದ ಮೇ 17 ರವರೆಗೆ, ಕನಿಷ್ಠ ಒಂದು ರಿಟ್ವೀಟ್ ಹೊಂದಿರುವ ಐದು ಹ್ಯಾಂಡಲ್‌ಗಳು ಬಳಸಿದೆ. ಐದು ಟ್ವೀಟ್‌ಗಳಿಂದ ಅಭಿಯಾನ ನಡೆಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಬೇಕೆಂದರೆ ಒಂದೇ ನಿರೂಪಣೆಯ ನೂರಾರು ಟ್ವೀಟ್‌ಗಳನ್ನು ಮಾಡಬೇಕಾಗುತ್ತದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ದೇಶಾದ್ಯಂತ ಆಕ್ಸಿಜನ್ ಪ್ಲಾಂಟ್‌ ಸ್ಥಾಪನೆ ವಿಳಂಬಕ್ಕೆ ಮೋದಿ ಸರ್ಕಾರವೇ ಕಾರಣ ಹೊರತು ರಾಜ್ಯಗಳಲ್ಲ

ಆದರೆ ಬಿಜೆಪಿ ಸದಸ್ಯರು ತಮ್ಮ ಪ್ರತಿಪಾದನೆಗೆ ಲಂಡನ್ ಮೂಲದ ಲೇಖಕಿ ಸೋನಿಯಾ ಫಲೇರೊ ಅವರ ಟ್ವೀಟ್ ಅನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಅದರಲ್ಲೂ, ಫಲೇರೊ ಅವರು ‘ಸ್ಟ್ರೈನ್’ ಪದವನ್ನು ಬಳಸದೆ ‘ವೇರಿಯೆಂಟ್‌’ ಎಂಬ ಪದವನ್ನು ಬಳಸಿದ್ದಾರೆ. ಅಲ್ಲದೆ ಅವರು ಕಾಂಗ್ರೆಸ್ ಜೊತೆ ಸಂಬಂಧ ಹೊಂದಿಲ್ಲ.

‘ಮೋದಿ ವೇರಿಯಂಟ್’ ಎಂಬ ಪದವನ್ನು ಬಳಸಿರುವ ಕನಿಷ್ಠ ಒಂದು ರಿಟ್ವೀಟ್‌ನೊಂದಿಗೆ, ಕೆಲವು ಟ್ವೀಟ್‌ಗಳಿವೆ. ಇವುಗಳಲ್ಲಿ ಪ್ರಮುಖವಾದುದು ಅಪರ್ಣ ಜೈನ್ ಮತ್ತು ಸೀಮಾ ಚಿಶ್ತಿ. ಆದರೆ ಇವರು ಯಾರೂ ಕಾಂಗ್ರೆಸ್ ಕಾರ್ಯಕರ್ತರಲ್ಲ.

‘ಕೊರೊನಾ ಟೂಲ್‌ಕಿಟ್’ ಬಿಜೆಪಿಯ ಹಿರಿಯ ನಾಯಕರಿಗೆ ಕೆಲವು ನಿರ್ದಿಷ್ಟ ವಿಶೇಷಣಗಳನ್ನು ಬಳಸಲು ಸಲಹೆ ನೀಡುತ್ತದೆ. ಉದಾಹರಣೆಗೆ, ‘ಮಿಸ್ಸಿಂಗ್‌‌’ ಅಮಿತ್ ಶಾ, ‘ಕ್ವಾರೆಂಟೈನ್ಡ್‌‌’ ಜೈಶಂಕರ್, ‘ಸೈಡ್‌ಲೈನ್ಡ್‌‌’ ರಾಜನಾಥ್ ಸಿಂಗ್, ‘ಇನ್‌ಸೆನ್ಸಿಟಿವ್‌‌’ ನಿರ್ಮಲಾ ಸೀತಾರಾಮನ್ ಇತ್ಯಾದಿ.

ಎನ್‌ಎಸ್‌ಯುಐನ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಾರಿಯಪ್ಪ ಅವರು ದೇಶವು ಸಂಕಷ್ಟದಲ್ಲಿ ಇರುವಾಗ ಗೃಹ ಸಚಿವ ಅಮಿತ್‌ ಶಾ ಅವರು ಕಾಣೆಯಾಗಿದ್ದಾರೆ ಎಂಬ ಪೊಲೀಸ್‌ ದೂರು ನೀಡಿದ ನಂತರ, ಟ್ವಿಟರ್‌ನಲ್ಲಿ ಗೃಹ ಸಚಿವರು ‘ಮಿಸ್ಸಿಂಗ್‌‌’ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಅವರ ದೂರಿಗೆ ಸಂಬಂಧಿಸಿದಂತೆ ಹೆಚ್ಚಿನ ಟ್ವೀಟ್‌ಗಳು ಆಗಿವೆ.

‘ಕ್ಯಾರೆಂಟೈನ್ಡ್’ ಜೈಶಂಕರ್ ಎಂಬ ಪದವು ವಿದೇಶಾಂಗ ಸಚಿವರಿಗೆ ವಿಶೇಷಣವಾಗಿ ಬಳಸಿದ ಯಾವುದೇ ಟ್ವೀಟ್ ಕಾಣುವುದಿಲ್ಲ. ‘ಸೈಡ್‌ಲೈನ್ಡ್‌‌’ ರಾಜನಾಥ್ ಸಿಂಗ್ ಮತ್ತು ‘ಇನ್‌ಸೆನ್ಸಿಟಿವ್‌‌’ ನಿರ್ಮಲಾ ಸೀತಾರಾಮನ್ ಕೂಡಾ ಟ್ವೀಟ್ ಆಗಿಲ್ಲ.

ಜನರ ಮನಸ್ಸಿನಲ್ಲಿ ಒಂದು ಪದವನ್ನು ಮುದ್ರೆಯೊತ್ತಲು ಪದವನ್ನು ಮತ್ತೆ ಮತ್ತೆ ಬಳಸಬೇಕಾಗುತ್ತದೆ. ಪ್ರೊಪಗಾಂಡವನ್ನು ಹರಡಲು ಬೇರೆ ಬೇರೆ ಸಮಯದಲ್ಲಿ ಬಿಡಿಬಿಡಿಯಾಗಿ ಮಾಡಿದರೆ ಅದರಿಂದ ಯಾವುದೆ ಪ್ರಯೋಜನವಿಲ್ಲ.

ಇದನ್ನೂ ಓದಿ: ಅಂತ್ಯಕ್ರಿಯೆಗೆ ಸೇರಿದ್ದ ಕೂಟವನ್ನು ‘ರಂಝಾನ್‌‌’ ಆಚರಣೆ ಎಂದು ತಪ್ಪಾಗಿ ಪ್ರತಿಪಾದನೆ

ಮತ್ತೊಂದು ಆರೋಪದವೆಂದರೆ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅನ್ನು ಟ್ಯಾಗ್ ಮಾಡದ ಹೊರತು ‘ಕೊರೊನಾ ತುರ್ತು’ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ‘ಕೊರೊನಾ ಟೂಲ್‌ಕಿಟ್’ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡುತ್ತದೆ.

ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಪ್ರತಿಕ್ರಿಯಿಸಿದ, ಪತ್ರಕರ್ತ ಆದಿತ್ಯ ರಾಜ್ ಕೌಲ್ ಅವರ ಟ್ವೀಟ್‌ನಲ್ಲಿ ಅವರು ಐವೈಸಿಯನ್ನು ಟ್ಯಾಗ್‌ ಮಾಡಿಲ್ಲ. ಅದರ ಸ್ಕ್ರೀನ್‌ಶಾಟ್ ಕೆಳಗೆ ಇದೆ.

#SOS ಮತ್ತು #SOSDelhi ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ ಬಿಜೆಪಿ ಸಂಸದ ಹ್ಯಾನ್ಸ್ ರಾಜ್ ಹ್ಯಾನ್ಸ್‌ಗೆ ಶ್ರೀನಿವಾಸ್ ನೀಡಿದ ಪ್ರತಿಕ್ರಿಯೆ ಸೇರಿದಂತೆ ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.

ನಿರೂಪಕಿ ರುಬಿಕಾ ಲಿಯಾಕತ್‌‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಶ್ರೀನಿವಾಸ್ ಒಬ್ಬ ವ್ಯಕ್ತಿಗೆ ಸರಬರಾಜು ಮಾಡಿದ ಆಮ್ಲಜನಕ ಸಿಲಿಂಡರ್‌ಗಳ ಫೋಟೋಗಳನ್ನು ಸಹ ಟ್ವೀಟ್ ಮಾಡಿದ್ದಾರೆ. ಅವರು ಕೂಡಾ ಐವೈಸಿಯನ್ನು ಟ್ಯಾಗ್ ಮಾಡಿಲ್ಲ.

ರಾಜೀವ್ ಗೌಡ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷ ರೋಹನ್ ಗುಪ್ತಾ ಅವರು ಬಿಜೆಪಿ ಮುಖಂಡರಾದ ಜೆ.ಪಿ.ನಡ್ಡಾ, ಸಂಬಿತ್ ಪತ್ರಾ, ಸ್ಮೃತಿ ಇರಾನಿ, ಬಿ.ಎಲ್.ಸಂತೋಷ್ ಮತ್ತು ಇತರರ ವಿರುದ್ಧ “ಎಐಸಿಸಿ ರಿಸರ್ಚ್ ಡಿಪಾರ್ಟ್‌ಮೆಂಟ್‌‌ನ ಲೆಟರ್‌ಹೆಡ್‌ ಅನ್ನು ನಕಲಿಯಾಗಿ ಬಳಸಿದ್ದಕ್ಕೆ” ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ಕೂಡಾ ನೀಡಿದ್ದಾರೆ.

ಒಟ್ಟಿನಲ್ಲಿ, ಎಐಸಿಸಿ ರೀಸರ್ಚ್ ವಿಭಾಗದ ಲೆಟರ್‌ಹೆಡ್‌ ಅನ್ನು ‘ಕೊರೊನಾ ಟೂಲ್‌ಕಿಟ್‌’ ಡಾಕ್ಯುಮೆಂಟ್‌ ಅನ್ನು ನಕಲಿಯಾಗಿ ತಯಾರು ಮಾಡಲಾಗಿದೆ. ಬಿಜೆಪಿ ಇಲ್ಲಿಯವರೆಗೆ ಆಪಾದಿತ ಟೂಲ್‌ಕಿಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಮಾತ್ರ ಹಂಚಿಕೊಂಡಿದೆಯೆ ಹೊರತು, ಅದರ ಮೂಲ ಪಿಡಿಎಫ್‌  ಮತ್ತು ಮೈಕ್ರೋಸಾಫ್ಟ್‌ ವರ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ.

ಮೂಲ ದಾಖಲೆಯಿಲ್ಲದೆ, ಬಿಜೆಪಿಯ ಈ ಪ್ರತಿಪಾದನೆಗಳು ಅನಧಿಕೃತವೆಂದೆ ಹೇಳಬಹುದು. ಅದರಲ್ಲೂ ವಿಶೇಷವಾಗಿ ಎಐಸಿಸಿಯ ರಿಸರ್ಚ್‌ ವಿಭಾಗವು ಬಳಸುವ ಮೂಲ ಲೆಟರ್‌ಹೆಡ್‌ ಅನ್ನು ಕಳಪೆಯಾಗಿ ನಕಲಿ ಮಾಡಿ ‘ಟೂಲ್‌ಕಿಟ್’ ತಯಾರುಗೊಳಿಸಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: ಭಾರತೀಯ ವಿಜ್ಞಾನಿ ‘Ramesh EM Desigan’ ಗೌರವಾರ್ಥ ಆ್ಯಂಟಿ ವೈರಲ್‌ ಲಸಿಕೆಗೆ ‘Remdesivir’ ಎಂದು ನಾಮಕರಣ ಮಾಡಲಾಯಿತೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...