Homeಮುಖಪುಟಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷನಾದ ಬಗೆ ಇಲ್ಲಿದೆ...

ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷನಾದ ಬಗೆ ಇಲ್ಲಿದೆ…

ತಮಕುಹಿ ರಾಜ್ ಕ್ಷೇತ್ರದಿಂದ 2 ಬಾರಿ ಶಾಸಕರಾದ ’ಅಜಯ್ ಕುಮಾರ್ ಲಲ್ಲು’ ಅವರನ್ನು ಈಗ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷಕ್ಕೆ ಹೊಸ ಸಾಂಸ್ಥಿಕ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ಸಜ್ಜಾಗಿದ್ದಾರೆ.

- Advertisement -
- Advertisement -

ಸುಮಾರು ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷವು ಸುಮಾರು ಆರು ನಾಯಕರ ಸಣ್ಣ ಗುಂಪನ್ನು ಉತ್ತರಪ್ರದೇಶದಲ್ಲಿ ಸಂಘಟನೆಯನ್ನು ಪುನರುಜ್ಜೀವನಗೊಳಿಸಲು ಮತ್ತು ತನ್ನ ಚುನಾವಣಾ ಭವಿಷ್ಯವನ್ನು ಸುಧಾರಿಸಲು ಅವಲಂಬಿಸಿತ್ತು. ಆದರೆ ಹಿರಿಯ ನಾಯಕರಾದ ಜಿತೇನ್ ಪ್ರಸಾದ್, ಸಂಜಯ್ ಸಿಂಗ್, ಶ್ರೀಪ್ರಕಾಶ್ ಜೈಸ್ವಾಲ್, ನಿರ್ಮಲ್ ಖತ್ರಿ, ಸಲ್ಮಾನ್ ಖುರ್ಷಿದ್ ಮತ್ತು ರಾಜ್ ಬಬ್ಬರ್ ಅದರಲ್ಲಿ ವಿಫಲರಾಗಿದ್ದಾರೆ. ಏಪ್ರಿಲ್‌ ಮೇ ನಲ್ಲಿ ನಡೆದ  ಲೋಕಸಭಾ ಚುನಾವಣೆಯಲ್ಲಿ, ಪಕ್ಷವು ರಾಜ್ಯದಲ್ಲಿ ಸಂಪೂರ್ಣ ಸೋಲನ್ನು ಅನುಭವಿಸಿತು. ಅಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಬ್ಬರು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ತಮ್ಮ ಈ ವಿನಾಶಕಾರಿ ಪ್ರದರ್ಶನದ ನಂತರ ಈಗ ಕಾಂಗ್ರೆಸ್ ಪಕ್ಷವು ಈ ‘ಗಣ್ಯ’ ಗುಂಪನ್ನು ಮೀರಿ ಹೆಚ್ಚು ಬೇರೂರಿರುವ, ಬಡವರ ಪರವಾದ ನಾಯಕನನ್ನು ಹುಡುಕುತ್ತಿತ್ತು. ತಮಕುಹಿ ರಾಜ್ ಕ್ಷೇತ್ರದ ಶಾಸಕರಾದ ’ಅಜಯ್ ಕುಮಾರ್ ಲಲ್ಲು’ ಅವರನ್ನು ಈಗ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತನ್ನ ಹುಡುಕಾಟಕ್ಕೆ ತೆರೆಎಳೆದಿದೆ.

ಪ್ರಧಾನ ಕಾರ್ಯದರ್ಶಿ (ಉತ್ತರಪ್ರದೇಶದ ಪೂರ್ವ ಉಸ್ತುವಾರಿ) ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹಯೋಗದೊಂದಿಗೆ ಲಲ್ಲು ಈಗ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಹೊಸ ಸಾಂಸ್ಥಿಕ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಲಲ್ಲು ಅವರ ನೇಮಕದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ತನ್ನ ಪಾಠಗಳನ್ನು ಕಲಿತುಕೊಂಡಿದೆ ಮತ್ತು ಸಂಘಟನೆಯನ್ನು ಪುನರ್ನಿರ್ಮಾಣ ಮಾಡುವ ಜವಾಬ್ದಾರಿಯನ್ನು ತಳಮಟ್ಟದ ಹಿಡಿತ ಹೊಂದಿರುವ ನಾಯಕನಿಗೆ ನೀಡಿದೆ ಎಂದು ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರು ಸಂತೋಷಪಟ್ಟಿದ್ದಾರೆ. ಈ ನಿರ್ಧಾರವು ರಾಜ್ಯ ಘಟಕವನ್ನು ಪುನರುಜ್ಜೀವನಗೊಳಿಸಲು ಅಪಾರ ಸಹಾಯ ಮಾಡುತ್ತದೆ ಎಂದು ಹಲವಾರು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಲಲ್ಲು ಅವರ ಆರಂಭಿಕ ಹೋರಾಟ
ಕುಶಿನಗರ ಜಿಲ್ಲೆಯ ತಮ್ಕುಹಿ ರಾಜ್‌ನ 40 ವರ್ಷದ ಶಾಸಕ ಲಲ್ಲು ಅವರು 2001 ರಲ್ಲಿ ಕುಶಿನಗರದ ಕಿಶನ್ ಪಿಜಿ ಕಾಲೇಜಿನಿಂದ ಪೊಲಿಟಿಕಲ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಸಕ್ರಿಯ ರಾಜಕೀಯದಲ್ಲಿದ್ದಾರೆ.

ಕಾಲೇಜು ಸಮಯದಲ್ಲಿ, ಅವರು ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಆದರೆ ಎರಡನೇ ಪ್ರಯತ್ನದಲ್ಲಿ ಮಾತ್ರ ಯಶಸ್ವಿಯಾದರು. ಇದನ್ನು ಅನುಸರಿಸಿ, ಅವರು ಸಾಮಾಜಿಕ ಚಳವಳಿಗಳೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಆಂದೋಲನಗಳು ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು.

2007 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ ಅವರು ಯಾವುದೇ ಪಕ್ಷವು ಟಿಕೆಟ್ ನೀಡಲು ಸಿದ್ಧರಿಲ್ಲದ ಕಾರಣ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಆಗ ಅವರು ಠೇವಣಿಯನ್ನು ಸಹ ಕಳೆದುಕೊಂಡಿದ್ದರು.

ಕೃಷಿ ಕುಟುಂಬಕ್ಕೆ ಸೇರಿದ ಲಲ್ಲು, ಆ ಸಮಯದಲ್ಲಿ ಅವರ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರದ ಕಾರಣ ದೆಹಲಿಗೆ ತೆರಳಿ ನೋಯ್ಡಾದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದರು. ತನ್ನ ಕೆಲಸದ ಭಾಗವಾಗಿ, ಕಬ್ಬಿಣದ ಸರಳುಗಳಂತಹ ಭಾರವಾದ ವಸ್ತುಗಳನ್ನು ಎತ್ತುವಲ್ಲಿ ಅವನು ಆಗಾಗ್ಗೆ ಕಾರ್ಮಿಕರಿಗೆ ಸಹಾಯ ಮಾಡಬೇಕಾಗಿತ್ತು ಎಂದು ತಮ್ಮ ಹಿಂದಿನ ಜೀವನವನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಎಂಟು ತಿಂಗಳು ಕೆಲಸದಲ್ಲಿ ಕಳೆದ ನಂತರ ಲಲ್ಲು ಮನೆಗೆ ಮರಳಿದರು. ಆದರೆ, ಈ ಬಾರಿ ಅವರ ತಮ್ಕುಹಿ ರಾಜ್ ಕ್ಷೇತ್ರದ ಗ್ರಾಮಸ್ಥರು ಅವರನ್ನು ಮತ್ತೆ ನೋಯ್ಡಾಕ್ಕೆ ಹೋಗದಂತೆ ತಡೆದು ಮತ್ತೆ ರಾಜಕೀಯ ಪ್ರವೇಶಿಸಲು ಒತ್ತಾಯಿಸಿದ್ದರಂತೆ.

ಆಗ ಲಲ್ಲು ಮತ್ತೆ ತಮಕುಹಿ ರಾಜ್‌ನ ಸಾಮಾನ್ಯ ಜನರಿಗೆ ಸಂಬಂಧಿಸಿದ ವಿಷಯಗಳನ್ನು ಮೇಲೆತ್ತಲು ಪ್ರಾರಂಭಿಸಿದರು. ಅವರು ಹಲವಾರು ಆಂದೋಲನಗಳು ಮತ್ತು ಪ್ರತಿಭಟನೆಗಳನ್ನು ನಡೆಸಿದರು ಮತ್ತು ಅದಕ್ಕಾಗಿ ಜೈಲುವಾಸ ಕೂಡ ಅನುಭವಿಸಿದ್ದಾರೆ.

2012 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತು. ಅಂತಿಮವಾಗಿ ಅವರು ಬಿಜೆಪಿ ಅಭ್ಯರ್ಥಿಯನ್ನು 5,000 ಮತಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು. ನಂತರ ಅವರು 2017 ರಲ್ಲಿ ಮತ್ತೆ ಚುನಾಯಿತರಾದರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಮುನ್ನಡೆಸಲು ಆಯ್ಕೆಯಾದರು.

ಗುಜರಾತ್ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸಮಿತಿಗಳಿಗೆ ನೇಮಕಾತಿಯೊಂದಿಗೆ ಅವರ ಪ್ರಾಮುಖ್ಯತೆ ಮುಂದುವರೆಯಿತು.

ಈ ವರ್ಷದ ಜೂನ್‌ನಲ್ಲಿ, ಸಾರ್ವತ್ರಿಕ ಚುನಾವಣೆಯ ಒಂದು ತಿಂಗಳ ನಂತರ, ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಅವರ ಖಾತೆಯನ್ನು ‘ಅನುಸರಿಸಿದಾಗ’ ಪಕ್ಷದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಅವರು ಗಮನಿಸಿದ್ದರು. ಮರುದಿನವೇ ಅವರಿಗೆ ಪಕ್ಷದ ಉತ್ತರ ಪ್ರದೇಶ ಪೂರ್ವ ಘಟಕದ ಉಸ್ತುವಾರಿ ವಹಿಸಲಾಯಿತು. ಈಗ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆಂತರಿಕ ಕಲಹಗಳು ಇನ್ನೂ ಪಕ್ಷವನ್ನು ಪೀಡಿಸುತ್ತಿರುವುದರಿಂದ, ಹೊಸ ಜವಾಬ್ದಾರಿಗೆ ತಾನು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ ಮತ್ತು ಹೈಕಮಾಂಡ್ ತನ್ನಲ್ಲಿ ವ್ಯಕ್ತಪಡಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಎಂದು ಲಲ್ಲು ಹೇಳಿದ್ದಾರೆ.

ಮಾಹಿತಿ ಕೃಪೆ: ದಿಪ್ರಿಂಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...