ಹರಿದ್ವಾರದಲ್ಲಿ ದ್ವೇಷ ಭಾಷಣದ ‘ಧರ್ಮ ಸಂಸದ್’ ಆಯೋಜಿಸಿದ್ದ ನರಸಿಂಗಾನಂದ ಅವರು ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ವಿರುದ್ದ ಇತ್ತೀಚೆಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗಳ ವಿರುದ್ದ ನಿಂದನೆ ಪ್ರಕ್ರಿಯೆ ಆರಂಭಿಸಲು ಭಾರತದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಶುಕ್ರವಾರ ಸಮ್ಮತಿ ನೀಡಿದ್ದಾರೆ.
ಜನವರಿ 14 ರಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದ ಸಂದರ್ಶನದಲ್ಲಿ ನೀಡಿದ್ದ ಅವಹೇಳನಕಾರಿ ಹೇಳಿಕೆಗಳಿಗಾಗಿ ನರಸಿಂಗಾನಂದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಶಚಿ ನೆಲ್ಲಿ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಅಟಾರ್ನಿ ಜನರಲ್ ಒಪ್ಪಿಗೆ ನೀಡಿದ್ದಾರೆ.
“ನರಸಿಂಗಾನಂದ ನೀಡಿದ್ದ ಹೇಳಿಕೆಗಳು ಖಂಡಿತವಾಗಿಯೂ ಭಾರತದ ಸರ್ವೋಚ್ಚ ನ್ಯಾಯಾಲಯದ ಅವಹೇಳನಕ್ಕೆ ಸಮಾನವಾಗಿರುತ್ತದೆ” ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಇದನ್ನೂ ಓದಿ:ದ್ವೇಷ ಭಾಷಣ ಪ್ರಕರಣ: ಆರೋಪಿ ಯತಿ ನರಸಿಂಗಾನಂದ ಜಾಮೀನು ಅರ್ಜಿ ವಜಾ
“ಈ ವ್ಯವಸ್ಥೆಯನ್ನು ನಂಬುವವರು, ರಾಜಕಾರಣಿಗಳು, ಸುಪ್ರೀಂ ಕೋರ್ಟ್ ಮತ್ತು ಸೈನ್ಯದ ಎಲ್ಲರೂ ನಾಯಿ ಸತ್ತಂತೆ ಸಾಯುತ್ತಾರೆ” ಎಂದು ನರಸಿಂಗಾನಂದ ಹೇಳಿದ್ದರು. ಈ ಮಾತನ್ನು ಉಲ್ಲೇಖಿಸಿರುವ ಅಟಾರ್ನಿ ಜನರಲ್, “ಇದು ಸಾಮಾನ್ಯ ಜನರ ಮನಸ್ಸಿನಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ತುಚ್ಛವಾಗಿ ಕಾಣುವಂತೆ ಮಾಡುವ ನೇರ ಪ್ರಯತ್ನ” ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಕ್ರಿಮಿನಲ್ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸಲು ಸಮ್ಮತಿಯನ್ನು ನೀಡಿದ್ದಾರೆ.
ನರಸಿಂಗಾನಂದ ವಿರುದ್ದ ಸಂವಿಧಾನ ಮತ್ತು ಸುಪ್ರೀಂಕೋರ್ಟ್ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಸಮ್ಮತಿ.#NaanuGauri #HateSpeech #YatiNarsinghanand #Narsinghanand pic.twitter.com/kyOOYsQ7S6
— Naanu Gauri (@naanugauri) January 21, 2022
ಹರಿದ್ವಾರದ ಧರ್ಮ ಸಂಸದ್‌ನಲ್ಲಿ ಮುಸ್ಲಿಂ ವಿರೋಧಿ ದ್ವೇಷದ ಭಾಷಣ ಮಾಡಿದ್ದಕ್ಕಾಗಿ ಉತ್ತರಾಖಂಡ್ ಪೊಲೀಸರು ಅವರನ್ನು ಬಂಧಿಸಿದ್ದು, ಪ್ರಸ್ತುತ ಬಂಧನದಲ್ಲಿದ್ದಾರೆ.
ಹರಿದ್ವಾರ ದ್ವೇಷದ ಭಾಷಣದ ಪ್ರಕರಣದಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ಮಾತನಾಡಿದ್ದ ನರಸಿಂಗಾನಂದ, “ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನಂಬಿಕೆ ಇಲ್ಲ. ಸಂವಿಧಾನ ಈ ದೇಶದ 100 ಕೋಟಿ ಹಿಂದೂಗಳನ್ನು ಕಬಳಿಸುತ್ತದೆ. ಈ ಸಂವಿಧಾನವನ್ನು ನಂಬುವವರು, ರಾಜಕಾರಣಿಗಳು, ಸುಪ್ರೀಂ ಕೋರ್ಟ್ ಮತ್ತು ಸೈನ್ಯದ ಎಲ್ಲರೂ ನಾಯಿ ಸತ್ತಂತೆ ಸಾಯುತ್ತಾರೆ” ಎಂದು ಹೇಳಿದ್ದರು. ಇದನ್ನು ಅಟಾರ್ನಿ ಜನರಲ್‌ಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಮುಸ್ಲಿಮರ ಹತ್ಯೆಗೆ ಕರೆ: ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಅರೆಸ್ಟ್