Homeಮುಖಪುಟ370ನೇ ವಿಧಿಯ ರದ್ದತಿಯನ್ನು ಟೀಕಿಸುವುದು, ಪಾಕಿಸ್ತಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್

370ನೇ ವಿಧಿಯ ರದ್ದತಿಯನ್ನು ಟೀಕಿಸುವುದು, ಪಾಕಿಸ್ತಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್

"ಭಿನ್ನಾಭಿಪ್ರಾಯ, ಟೀಕೆ ವ್ಯಕ್ತಪಡಿಸುವುದು ನಾಗರಿಕರ 'ಮೂಲಭೂತ ಹಕ್ಕು, ಇತರ ದೇಶಗಳಿಗೆ ಶುಭ ಹಾರೈಸುವುದು ಸದ್ಭಾವನೆಯ ಸಂಕೇತ"

- Advertisement -
- Advertisement -

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನ 370ನೇ ವಿಧಿಯ ರದ್ದತಿಯ ದಿನವನ್ನು ‘ಕರಾಳ ದಿನ’ ಎನ್ನುವುದು ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಅಲ್ಲಿನ ನಾಗರಿಕರಿಗೆ ಶುಭಾಷಯ ತಿಳಿಸುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಲೈವ್‌ ಲಾ ವರದಿ ತಿಳಿಸಿದೆ.

ವಿಧಿ 370ರ ರದ್ದತಿಯ ದಿನವನ್ನು ಜಮ್ಮು ಕಾಶ್ಮೀರದ ‘ಕರಾಳ ದಿನ’ ಎಂದು ಟೀಕಿಸಿ ವಾಟ್ಸಾಪ್ ಸಂದೇಶ ಹಾಕಿದ್ದ ಪ್ರಾಧ್ಯಾಪಕನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.

ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಪ್ರಾಧ್ಯಾಪಕನ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಕೋಮು ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಧಿ 370ರ ರದ್ದತಿಯ ದಿನವನ್ನು ಜಮ್ಮು ಕಾಶ್ಮೀರದ ‘ಕರಾಳ ದಿನ’ ಎಂದು ಟೀಕಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪ್ರಾಧ್ಯಾಪಕ ಪ್ರೊ. ಜಾವೆದ್ ಅಹ್ಮದ್ ಹಜಾಮ್ ಅವರ ವಿರುದ್ದ ಮಹಾರಾಷ್ಟ್ರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಸಂವಿಧಾನದ ವಿಧಿ 370ರ ರದ್ದತಿಯ ದಿನವಾದ ‘ಆಗಸ್ಟ್ 5 ಜಮ್ಮು ಕಾಶ್ಮೀರದ ಜನತೆಗೆ ಕರಾಳ ದಿನ’ ಎಂದು ಶಿಕ್ಷಕರು ಮತ್ತು ಪೋಷಕರ ವಾಟ್ಸಾಪ್ ಗ್ರೂಪ್‌ನಲ್ಲಿ ಪ್ರಾಧ್ಯಾಪಕ ಪ್ರೊ. ಜಾವೆದ್ ಅಹ್ಮದ್ ಮೆಸೇಜ್ ಹಾಕಿದ್ದರು. ಅಲ್ಲದೆ, ‘ಆಗಸ್ಟ್ 14ರಂದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯ’ ಕೋರಿದ್ದರು.

ಕೋಮು ದ್ವೇಷ ಉತ್ತೇಜಿಸುವ ಸಂದೇಶ ಹಾಕಿದ್ದಾರೆ ಎಂಬ ಆರೋಪದ ಮೇಲೆ ಪ್ರೊ. ಜಾವೆದ್ ಅಹ್ಮದ್ ವಿರುದ್ದ ಮಹಾರಾಷ್ಟ್ರ ಪೊಲೀಸರು ದಾಖಲಿಸಿದ್ದ ಎಫ್‌ಐಅರ್‌ ರದ್ದತಿಗೆ ಈ ಹಿಂದೆ ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ ಭಾರತೀಯ ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿರುವ ಸಂವಿಧಾನದ ‘ಪರಿಚ್ಛೇದ 19(1)(ಎ)’ ಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿ ವಿಭಿನ್ನ ನಿಲುವು ಪ್ರಕಟಿಸಿದೆ.

ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮತ್ತು ಟೀಕೆಗಳನ್ನು ವ್ಯಕ್ತಪಡಿಸುವುದು ಭಾರತೀಯ ನಾಗರಿಕರ ‘ಮೂಲಭೂತ ಹಕ್ಕು’ ಎಂದು ಒತ್ತಿ ಹೇಳಿದೆ.

ಪ್ರೊ. ಜಾವೆದ್ ಅಹ್ಮದ್ ಅವರು 370ನೇ ವಿಧಿಯ ರದ್ದತಿಯನ್ನು ಟೀಕಿಸಿ ಸಂದೇಶ ಹಾಕುವಾಗ ಯಾವುದೇ ಗುಂಪು, ಜಾತಿ, ಜನಾಂಗ ಮತ್ತು ಧರ್ಮವನ್ನು ಉಲ್ಲೇಖಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಜಾವೆದ್ ಅವರ ವಾಟ್ಸಾಪ್ ಸಂದೇಶ 370 ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಒಂದು ‘ಸರಳ ಪ್ರತಿಭಟನೆ’ ಎಂದು ಪರಿಗಣಿಸಬಹುದು ಎಂದಿದೆ.

ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಷಯ ಕೋರಿರುವ ಎರಡನೇ ವಾಟ್ಸಾಪ್ ಸಂದೇಶಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ನ್ಯಾಯಾಲಯ, ‘ಪಾಕಿಸ್ತಾನಕ್ಕೆ ಶುಭಾಷಯ ಕೋರುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. ಪಾಕಿಸ್ತಾನಕ್ಕೆ ಶುಭಾಷಯ ಕೋರಿದಂತೆ, ಇತರ ದೇಶಗಳಿಗೆ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಲು ನಾಗರಿಕರಿಗೆ ಹಕ್ಕಿದೆ. ಭಾರತದ ಪ್ರಜೆಯು ಪಾಕಿಸ್ತಾನದ ನಾಗರಿಕರಿಗೆ ಅವರ ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 14 ರಂದು ಶುಭ ಹಾರೈಸಿದರೆ ಅದರಲ್ಲಿ ತಪ್ಪೇನಿಲ್ಲ. ಇದು ಸದ್ಭಾವನೆಯ ಸಂಕೇತವಾಗಿದೆ’ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಈ ಪ್ರಕರಣದಲ್ಲಿ ಪ್ರೊ. ಜಾವೆದ್ ಅಹ್ಮದ್ ಅವರ ಧರ್ಮದ ಆಧಾರದಲ್ಲಿ ಅವರ ಉದ್ದೇಶವನ್ನು ನಿರ್ಧರಿಸಲು ಮತ್ತು ಅವರನ್ನು ಗುರಿಯಾಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ‘ನಾನು ಜೈಲಿನಿಂದ ಜೀವಂತವಾಗಿ ಹೊರಬಂದಿರುವುದು ಆಕಸ್ಮಿಕ’: ಪ್ರೊ.ಜಿ.ಎನ್‌ ಸಾಯಿಬಾಬಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...