Homeಕರ್ನಾಟಕವಿವಾಹದ ಬಳಿಕ ದೈಹಿಕ ಸಂಪರ್ಕಕ್ಕೆ ನಿರಾಕರಿಸುವುದು ಐಪಿಸಿಯಡಿ ಅಪರಾಧವಲ್ಲ: ಹೈಕೋರ್ಟ್

ವಿವಾಹದ ಬಳಿಕ ದೈಹಿಕ ಸಂಪರ್ಕಕ್ಕೆ ನಿರಾಕರಿಸುವುದು ಐಪಿಸಿಯಡಿ ಅಪರಾಧವಲ್ಲ: ಹೈಕೋರ್ಟ್

- Advertisement -
- Advertisement -

ವಿವಾಹದ ಬಳಿಕ ದೈಹಿಕ ಸಂಪರ್ಕಕ್ಕೆ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ಕ್ರೌರ್ಯ ಎನಿಸಿದರೂ, ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 498-ಎ (ಹೆಣ್ಣಿನ ಪತಿ ಅಥವಾ ಪತಿ ಸಂಬಂಧಿಯಿಂದ ಕ್ರೌರ್ಯ) ಅಡಿಯಲ್ಲಿ ಅದು ಕ್ರೌರ್ಯದ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

ವಿವಾಹ ನಂತರ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಹಿನ್ನೆಲೆ ಪತ್ನಿಯು ಐಪಿಸಿ ಕಲಂ 498-ಎ ಅಡಿಯಲ್ಲಿ ಕ್ರೌರ್ಯದ ಆರೋಪ ಹೊರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಅವರ ಪತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿದೆ.

ಡಿಸೆಂಬರ್ 2019 ರಲ್ಲಿ ವಿವಾಹದ ಬಳಿಕ ಪತಿ-ಪತ್ನಿ 28 ದಿನಗಳ ಕಾಲ ಜೊತೆಗೆ ಇದ್ದರು. ಆದರೆ ಪತ್ನಿ ಮಾಡಿರುವ ಏಕೈಕ ಆರೋಪವೆಂದರೆ, ”ಪತಿಯು ಆಧ್ಯಾತ್ಮಕ ಚಿಂತಕರೊಬ್ಬರ ಅನುಯಾಯಿಯಾಗಿದ್ದಾರೆ. ಸದಾ ಅವರ ಪ್ರವಚನಗಳ ವಿಡಿಯೊ ಕಡೆಗೇ ಆಸಕ್ತಿ ತೋರುತ್ತಾ ಆಧ್ಯಾತ್ಮಿಕ ಒಲವು ಬೆಳೆಸಿಕೊಂಡಿದ್ದಾರೆ. ನನ್ನೊಡನೆ ಯಾವತ್ತೂ ದೈಹಿಕ ಸಂಪರ್ಕ ಬೆಳೆಸುವ ಆಸಕ್ತಿ ತೋರಿಸಿಲ್ಲ. ಇದು ಹಿಂದೂ ವಿವಾಹ ಕಾಯ್ದೆಯಡಿ ನಿಸ್ಸಂದೇಹವಾಗಿ ಕ್ರೌರ್ಯ ಎನಿಸಲಿದೆ” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ನ್ಯಾಯಪೀಠವು, ”ಇದು ಐಪಿಸಿ ಕಲಂ 498- ಎ ಅಡಿಯಲ್ಲಿ ಹೇಳಿರುವಂತಹ ಕ್ರೌರ್ಯದ ಅಪರಾಧ ಕೃತ್ಯವಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿದೆ.

ನವೆಂಬರ್ 2022 ರಲ್ಲಿ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ಪತ್ನಿಯ ಮನವಿಯ ಮೇರೆಗೆ ಕೌಟುಂಬಿಕ ನ್ಯಾಯಾಲಯವು ಈಗಾಗಲೇ ವಿಚ್ಛೇದನದ ಆದೇಶವನ್ನು ನೀಡಿತ್ತು.

ದೂರಿನಲ್ಲಿ ಮತ್ತು ದೋಷಾರೋಪ ಪಟ್ಟಿಯಲ್ಲಿ 498-ಎ ಅಡಿಯಲ್ಲಿ ಕ್ರೌರ್ಯದ ಅಪರಾಧ ನಡೆದಿದೆ ಎನ್ನಲಾದ ಬಗ್ಗೆ ಯಾವುದೇ ಅಂಶಗಳು ಕಂಡುಬರುತ್ತಿಲ್ಲ. ಹೀಗಾಗಿ, ಪತಿ ಹಾಗೂ ಅವರ ತಂದೆ-ತಾಯಿ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಹಾಗಾಗಿ ಪತಿ ಮತ್ತು ಅವರ ಪೋಷಕರ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ನ್ಯಾಯಪೀಠ ತೀರ್ಮಾನಿಸಿದೆ.

ಇದನ್ನೂ ಓದಿ: ಲಿವ್‌ ಇನ್‌ ರಿಲೇಷನ್‌ಷಿಪ್‌ಗಳಿಗೆ ಕಾನೂನಿನಡಿ ಮದುವೆಯ ಮಾನ್ಯತೆ ಇಲ್ಲ: ಕೇರಳ ಹೈಕೋರ್ಟ್

ಏನಿದು ಪ್ರಕರಣ?:

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪತಿ-ಪತ್ನಿ 2019ರ ಡಿಸೆಂಬರ್ 18 ರಂದು ವಿವಾಹವಾಗಿದ್ದರು. ವಿವಾಹದ ಬಳಿಕ ಪತಿ-ಪತ್ನಿ 28 ದಿನಗಳ ಕಾಲ ಜೊತೆಗೆ ಇದ್ದರು. ನಂತರ ಪತಿಯ ಮನೆಯನ್ನು ತೊರೆದಿದ್ದರು. 2020ರ ಫೆಬ್ರುವರಿ 5ರಂದು ಪತಿ ಮತ್ತು ಅವರ ಪೋಷಕರ ವಿರುದ್ಧ ಐಪಿಸಿ ಕಲಂ 498-ಎ, ವರದಕ್ಷಿಣೆ ತಡೆ ಕಾಯ್ದೆ ಕಲಂ 4ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಮತ್ತೊಂದೆಡೆ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಕ್ರೌರ್ಯದ ಆಧಾರದ ಮೇಲೆ ಮದುವೆ ಅಸಿಂಧುಗೊಳಿಸುವಂತೆ ಕೋರಿದ್ದರು.

ಕೌಟುಂಬಿಕ ನ್ಯಾಯಾಲಯವು 2022ರ ನವೆಂಬರ್ 16ರಂದು ದಂಪತಿಯ ವಿವಾಹವನ್ನು ಅನೂರ್ಜಿತಗೊಳಿಸಿ ಆದೇಶಿಸಿತ್ತು. ಇದಾದ ನಂತರ ವರದಕ್ಷಿಣೆ ಕಿರುಕುಳ ಆರೋಪದಡಿ ಪತಿಯ ವಿರುದ್ಧದ ಪ್ರಕರಣವನ್ನು ಪತ್ನಿ ಮುಂದುವರಿಸಿದ್ದರು.

ಆ ಬಳಿಕ ಪೊಲೀಸರು ಕ್ರಿಮಿನಲ್‌ ಪ್ರಕರಣದ ಸಂಬಂಧ ತನಿಖೆ ನಡೆಸಿದ್ದರು. ಪತಿ ಮತ್ತು ಅವರ ತಂದೆ, ತಾಯಿ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೋಷಾರೋಪ ಪಟ್ಟಿ ರದ್ದು ಕೋರಿ ಪತಿ 2021ರ ಸೆಪ್ಟೆಂಬರ್ 6ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿದ್ದ ವಿಚಾರಣೆಯ ಪ್ರಕ್ರಿಯೆಗೆ ತಡೆ ನೀಡಿತ್ತು. ಪತ್ನಿಯ ಆರೋಪಗಳನ್ನು ಅಲ್ಲಗೆಳೆದಿದ್ದ ಪತಿ, ವಿವಾಹಯಾದ ನಂತರ ನನ್ನ ತಂದೆ-ತಾಯಿ ನಮ್ಮ ಜೊತೆಗೆ ನೆಲೆಸಿರಲಿಲ್ಲವಾದರೂ ಅವರನ್ನೂ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. ಹೀಗಾಗಿ, ಐಪಿಸಿ 498-ಎ ಅಡಿ ಮಾಡಿರುವ ಆರೋಪಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...