Homeಅಂಕಣಗಳುದೇವನೂರ ಮಹಾದೇವ 75

ದೇವನೂರ ಮಹಾದೇವ 75

- Advertisement -
- Advertisement -

‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸಿವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು ಶಂಕರ್ ಮೊಕಾಶಿ ಪುಣೇಕರ್ ಹೇಳುವುದುಂಟು. ಈ ಮಾತು ದೇವನೂರರಿಗೆ ಚೆನ್ನಾಗಿ ಅನ್ವಯವಾಗುತ್ತದೆ. ಅವರ ಮಾತುಕತೆ ಭಾಷಣಗಳಲ್ಲಿ ಸಾಮಾನ್ಯವಾಗಿರುವ ಅರೆಬರೆ ವಾಕ್ಯಗಳು, ಒಗಟಿನಂತಹ ಹೇಳಿಕೆಗಳು ಅವರ ಚಿಂತನೆಯ ಗೊಂದಲ ಅಥವಾ ಕೊರತೆಯನ್ನು ಸೂಚಿಸುವುದಿಲ್ಲ. ಬದಲಿಗೆ ಈ ಬಗ್ಗೆ ಇನ್ನೂ ಚಿಂತಿಸಬೇಕಾದ್ದಿದೆ; ಅದನ್ನು ಸರಳವಾಗಿ ಹೇಳಲು ಆಗುವುದಿಲ್ಲ ಎಂಬ ಸಂಕೀರ್ಣತೆಯನ್ನು ಪ್ರತಿನಿಧಿಸುತ್ತವೆ. ಆದರೆ ಎಲ್ಲೆಲ್ಲಿ ರಾಜಕೀಯವಾಗಿ ಸ್ಪಷ್ಟ ನಿಲುವನ್ನು ತಾಳಬಹುದೊ ಅಲ್ಲೆಲ್ಲ ದೇವನೂರರು ತಾಳುತ್ತಾರೆ. ದೇವನೂರರು ಕನ್ನಡ ಸಾಹಿತ್ಯ ಓದಿದ್ದರೂ, ಅವರು ಮಾಡುವ ಸಾಹಿತ್ಯಕ ಚರ್ಚೆಗಳು ಅಕೆಡೆಮಿಕ್ ನೆಲೆಯಲ್ಲಿ ಇರದೆ, ಸಾಹಿತ್ಯವನ್ನು ಒಬ್ಬ ಸೃಜನಶೀಲ ಲೇಖಕ ಮತ್ತು ಚಳವಳಿಗಾರ ಮುಖಾಮುಖಿ ಮಾಡಿದ ತರಹ ಇರುತ್ತವೆ. ಹೀಗಾಗಿಯೇ ಅವು ಹೊಸಹೊಳಹುಗಳನ್ನು ಕೊಡುತ್ತವೆ. ಜಡವೆನಿಸದೆ ಜೀವಂತವಾಗಿರುತ್ತವೆ.

ಕರ್ನಾಟಕದ ರಾಜಕೀಯ ವಿದ್ಯಮಾನಗಳಲ್ಲಿ ಭಾಗವಹಿಸಿದ ಆಧುನಿಕ ಲೇಖಕರಲ್ಲಿ ದೇವನೂರರು ಒಬ್ಬರು. ಬೇರೆಬೇರೆ ರಾಜಕೀಯ ಸಾಮಾಜಿಕ ಸಾಹಿತ್ಯಕ ವಲಯಗಳು ದೇವನೂರರ ಸಾಹಿತ್ಯಕ, ರಾಜಕೀಯ ಹಾಗೂ ಚಳವಳಿಯ ನಿಲುವುಗಳನ್ನು ಒಪ್ಪದೆ ಟೀಕಿಸಿವೆ. ಸಜನಶೀಲ ಕಲಾವಿದರು ಮಾಡುವ ರಾಜಕೀಯ ಚಿಂತನೆಗಳ ವಿಧಾನವು ವಿಭಿನ್ನವಾಗಿರುತ್ತದೆ. ಅಲ್ಲಿ ಸಿಗುವ ಒಳಗನೋಟಗಳಲ್ಲಿ ಗೊಂದಲಗಳು ಇರುವ ಸಾಧ್ಯತೆಯಿದೆ. ಅವರನ್ನು ಈ ವೈರುಧ್ಯಗಳ ಸಮೇತವೇ ಸ್ವೀಕರಿಸಬೇಕಿದೆ. ಕುವೆಂಪು ಬಿಟ್ಟರೆ ಕನ್ನಡಿಗರ ಪ್ರೀತಿಯನ್ನು ಉಂಡ ಮತ್ತೊಬ್ಬ ಆಧುನಿಕ ಲೇಖಕ ದೇವನೂರ ಮಹದೇವ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಇಂತಹ ದೇವನೂರರಿಗೆ 75 ತುಂಬಿದೆ. ಈ ಹೊತ್ತಲ್ಲಿ 25 ವರ್ಷಗಳ ಹಿಂದೆ ಮಾಡಿದ ಅವರ ಸಂದರ್ಶನದ ಆಯ್ದಭಾಗವನ್ನು ಇಲ್ಲಿ ಕೊಟ್ಟಿದೆ. ಪೂರ್ಣ ಸಂದರ್ಶನವು, ‘ಲೋಕವಿರೋಧಿಗಳ ಜತೆಯಲ್ಲಿ’ ಕೃತಿಯಲ್ಲಿ ಪ್ರಕಟವಾಗಿದೆ.

ಪ್ರ: ದ್ಯಾವನೂರು ಸಂಕಲನದ ಕತೆಗಳನ್ನು ಬರೆವಾಗ ಇದ್ದ ಕನ್ನಡ ಸಾಹಿತ್ಯದ ವಾತಾವರಣ ಹೇಗಿತ್ತು?

: ನವ್ಯದ ವಾತಾವರಣ ತೀವ್ರವಾಗಿತ್ತು. ಅನಂತಮೂರ್ತಿ ಲಂಕೇಶ್ ತೇಜಸ್ವಿ ಕಂಬಾರ ಮತ್ತು ಅಡಿಗ ಮುಂತಾದವರು, ಸಾಹಿತ್ಯಾನೇ ಜೀವ ಅದೇ ಸರ್ವಸ್ವ ಅಂತ್ಹೇಳಿ ತೊಡಗಿಸಿಕೊಂಡಿದ್ದವರು, ಇದ್ರು. ಈಗ ನಾವು ಸೋಶಿಯಲ್ ಮೂಮೆಂಟ್ಸ್ ಜತೆಗೆ ಇದೂ ಅದೂ ಎರಡೂ ಮಿಕ್ಸ್ ಮಾಡ್ಕೊಳ್ತಾ ಇರ್ತೀವಲ್ಲ? ಆವಾಗ ಅದೇ ವಿಶ್ವ, ಅದೇ ರಾಜಕೀಯ, ಅದೇ ಬದುಕು, ಅನ್ನೊ ತರದವರು ಸುಮಾರು ಜನ ಇದ್ರು.

ಪ್ರ: ನಿಮಗೆ ’ಲೋಹಿಯಾವಾದಿ’ ಅಂತ ಗುರುತಿಸ್ತಾರೆ. ಅದನ್ನು ಕೇಳಿದಾಗ ಏನನ್ಸುತ್ತೆ?

: ಬರೆವಾಗಂತೂ ವಾದಗೀದ ಇರಲ್ಲ ನನ್ಹತ್ರ. ಕಮ್ಯುನಿಸ್ಟರ ಬಗ್ಗೆ ಸ್ವಲ್ಪ ರಿಸರ್ವೇಶನ್ ಇತ್ತು ನನಗೆ. ಆ ಟೈಮಲ್ಲಿ ಬರೆದದ್ದು ’ಅಮಾಸ’ ಕತೆ. ಅಲ್ಲಿ ಒಂದು ಕ್ಯಾರೇಕ್ಟರ್ ಬರ್ತದೆ. ಅವನು ಗ್ಯಾಂಗ್‌ಮನ್ ಸಿದ್ದಪ್ಪ. ’ಲೋಹಿಯಾ ಸಮಾಜವಾದ ಬರಬೇಕು’ ಅಂತ ಅವನ ಬಾಯಲ್ಲಿ ಬರೋಕೆ ಸಾಧ್ಯವಿಲ್ಲ. ಅಲ್ಲಿ ’ಕಮ್ಯುನಿಸಂ ಬರಬೇಕು’ ಅಂತಾ ಹೇಳ್ತಾನೆ ಅವನು.

ಪ್ರ: ಕನ್ನಡ ಸಾಹಿತ್ಯ ಪರಂಪರೇಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕರು?

: ಕುವೆಂಪು

ಪ್ರ: ಯಾಕೆ ಅಂತ ವಿವರಿಸಬಹುದಾ?

: ’ಮಲೆಗಳಲ್ಲಿ ಮದುಮಗಳು’ ಬಗ್ಗೆ ಸುಮಾರು ಆಕ್ಷೇಪಣೆಗಳು ಬಂದ್ವು. ಅದಕ್ಕೆ ಕೇಂದ್ರ ಇಲ್ಲ, ಮಣ್ಣು ಮಸಿ ಇಲ್ಲ ಅಂತ. ಆದ್ರೆ ಇವತ್ತಿಗೂ ಈಗ ತಾನೇ ಹುಟ್ಟಿದ ಥರ ಇದೆ ಆ ನಾವೆಲ್ಲು. ಆಮ್ಯಾಲೆ, ಈ ನವ್ಯ ಕಾಲದಲ್ಲಿ ಬಂದ್ವಲ್ಲ, ದಿ ಬೆಸ್ಟ್ ಅನ್ನೋ ಹತ್ತು ಕಾದಂಬರಿಗಳನ್ನ ಒಂದು ತಕ್ಕಡೀಲಿಟ್ರೂ, ಇದಕ್ಕೆ ತಡ್ಕಳೋ ಸಾಮರ್ಥ್ಯ ಇದೆ. ಜೊತೆಗೆ ಕುವೆಂಪು ಅವರ ದೃಷ್ಟಿಕೋನ-ದರ್ಶನ ಇದೆಯಲ್ಲ, ಅದು ಜೀವಸಂಕುಲವೇ ಒಂದು ಅನ್ನೊ ಥರದ್ದು.

ಪ್ರ: ವಚನ ಸಾಹಿತ್ಯ ಯಾಕೆ ಅದು ಮುಖ್ಯ ಅನಿಸ್ತು?

: ವಚನ ಆಂದೋಲನ ಇದೆಯಲ್ಲ, ಇಡೀ ಜಗತ್ತಲ್ಲೇ ಹುಡುಕುದ್ರೂ ಸಿಗಲ್ವೇನೋ? ಆ ಥರದ ಒಂದು ಪ್ರಯೋಗ ಕರ್ನಾಟಕದಲ್ಲಿ ಆಗಿದೆ. ಮೊದಲ್ನೇದಾಗಿ ವರ್ಣಕ್ಕೆ ದೊಡ್ಡೇಟು ಕೊಟ್ರು ಅವರು. ಮತ್ತು ಎಲ್ರಿಗೂ ಪ್ರವೇಶ ಇಲ್ದೇ ಇರತಕ್ಕಂಥ ದೇವಸ್ಥಾನ ನಿರಾಕರಿಸಿದ್ರು. ಮತ್ತೆ ಗಂಡು ಹೆಣ್ಣು ಉಂಟಲ್ಲ, ಒಂಥರ ನೋಡಿದ್ರು. ಮತ್ತೆ ಜಾತಿ ಅಂತೂ ಬರಲೇ ಇಲ್ಲ ಅಲ್ಲಿ. ಆಮೇಲೆ ಮೋಕ್ಷಕ್ಕೆ ಕಾಡಿಗೆ ಹೋಗ್ಬೇಕು ತಪಸ್ ಮಾಡ್ಬೇಕು ಆ ಪರಿಕಲ್ಪನೇನೇ ಅವರಲ್ಲಿಲ್ಲ. ಸಂಸಾರ ಬಿಡಬೇಕು ಅಂತಿಲ್ಲ. ಸಂಸಾರ ಮಾಡ್ಕಂಡೇ- ಅಥವಾ ಇಬ್ಬರು ಹೆಂಡೀರ ಇಟ್ಕಂಡೇ ಮೋಕ್ಷ ಸಾಧ್ಯ. ಇವೆಲ್ಲ ಸಾಮಾನ್ಯ ಅಲ್ಲ. ಒಂದಾ ಎರಡಾ? ಈಥರದ್ದು ಹುಡುಗಾಟಾನ? ಸಾಮಾನ್ಯವಾಗಿ ಬೇರೆಬೇರೆ ಧರ್ಮಗಳಲ್ಲಿ ಒಬ್ಬ ಪ್ರವಾದಿ ಇರ್ತಾನೆ. ಅನುಯಾಯಿಗಳಿರ್ತಾರೆ. ಇಲ್ಲಿ ಎಲ್ರೂ ಸಮಾನರು.

ಪ್ರ: ಆದ್ರೂ ಇಡೀ ಚಳವಳಿಯ ಒಳಗೇನೇ ಅನೇಕ ತಾತ್ವಿಕ ಭಿನ್ನಮತಗಳು ಸಂಘರ್ಷಗಳು ಇದ್ದವು. ಚೆನ್ನಬಸವಣ್ಣ..

: ಚಿಕ್ಕೋನು ಅವನು. ಕೊನೇಲಿ ಬಂದು ಚಳವಳಿಗೆ ಒಂದು ರೂಪ ಕೊಡಕೆ ಪ್ರಯತ್ನಪಟ್ಟೋನು. ’ಜಾತಿ ಮದುವೆ ಅನಾಚಾರ’ ಅಂತಾನಲ್ಲ. ಇದೊಂದು ಸಾಕಲ್ವ? ಇರಲಿ, ಅಂಥ ಚಳವಳೀನ ಈವತ್ಗೂ ನೆನಸ್ಕಳಕೆ ಅಗಲ್ವಲ್ಲ ನಮಗೆ.

ಪ್ರ: ವಚನ ಪರಂಪರೆಯಲ್ಲಿ ಬಸವಣ್ಣನ ಧಾರೆ, ಅಲ್ಲಮನ ಧಾರೆ ಅಂತ ವಿಂಗಡಿಸಿ ನೋಡೋದಾದ್ರೆ, ನಿಮಗೆ ಯಾವ ಧಾರೆಯ ಜತೆ ಗುರ್ತಿಸಿಕೊಬೇಕು ಅನಿಸುತ್ತೆ?

: ಇದು ಬಲೇ ಕಷ್ಟ ಆಗುತ್ತೆ. ಮೊದಲ್ನೇದಾಗಿ ಎರಡೂ ಒಟ್ಟಿಗೆ ಹೋಗಬೇಕು ಅಂತ ಆಸೆಪಡಬೇಕು. ನನ್ನ ಆಸೆ ಈವಾಗ ಅಲ್ಲಮ, ಆಯ್ತಾ? ಆದ್ರೆ ಅಲ್ಲಮ ಒಂದು ಸ್ಪಿರಿಟ್ ಥರ. ಗಾಳಿ ಥರ. ಸಮಾಜದ ಮೇಲೆ ಅವನು ಯಾವ ಪರಿಣಾಮ ಮಾಡ್ತಾನೆ? ಯಾರು ಎನ್‌ಲೈಟನ್ಸೊ, ಅವರ ಮೇಲೆ ಪರಿಣಾಮ ಮಾಡ್ತಾನೆ. ಅವನೇನೂ ಕಟ್ಟಲ್ಲ. ಇಲ್ಲಿ ಸಮಾಜದ ಮೇಲೇನೇ ಅಲ್ಲೋಲಕಲ್ಲೋಲ ಆಗಬೇಕಲ್ಲ, ಬದಲಾವಣೆಗಳು ಆಗಬೇಕಲ್ಲ, ಅದಕ್ಕೆ ಯಾರ್ ಕಾರಣ? ಇವತ್ತು ನಮಗೆ ಸಂತರ ಜತೆಗೆ ಒಳ್ಳೇ ರಾಜಕಾರಣೀನೂ ಬೇಕು. ಗಾಂಧಿಯಷ್ಟೇ ಅಬ್ರಾಹಿಂ ಲಿಂಕನ್ ಕೂಡ ಬೇಕು. ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಬಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ, ಅಲ್ವಾ?

ಪ್ರ: ಪಶ್ಚಿಮದಲ್ಲಿ ಯಾವ ಲೇಖಕರು ನಿಮಗೆ ಮುಖ್ಯ ಆದ್ರು?

: ಮೊದಲು ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್. ಇತ್ತೀಚೆಗೆ ನಾನು ಮಾರ್ಕ್ವೆಜ್‌ನ ಓದಿದೆ. ಬಹಳ ಗ್ರೇಟ್ ರೈಟರ್ ಅವನು. ಸಿಕ್ಕಾಪಟ್ಟೆ ದೊಡ್ಡ ಲೇಖಕ.

ಪ್ರ: ಯಾಕೆ ದೊಡ್ಡ ಲೇಖಕ ಅನಿಸಿದ?

: ಮೊದಲ್ನೇದಾಗಿ ಸಮುದಾಯದ ಮನಸ್ಸು ಅವನದು. ಆಮೇಲೆ ಅವನಿಗೆ ಪ್ರಸ್ತುತಾನೆ ಕತೆ ಮಾಡೋ ಅಸಾಮಾನ್ಯವಾದ ಕಲೆ ಇದೆ. ಈಗ ಯಾರೋ ಬಂದ್ರು. ನಾವಿಲ್ಲಿ ಭೇಟಿಯಾದೊ. ಈಥರದ್ದು ಒಂದಿದೆ ಅಂತ ಇಟ್ಕೊಳಿ. ಅದನ್ನೇ ಅದ್ಭುತವಾದ ಕತೆ ಮಾಡಿಬಿಡ್ತಾನೆ. ಅಸಾಮಾನ್ಯವಾದ ಗುಣ ಅದು. ಇನ್ನೊಂದು ಪುಸ್ತಕ ಓದಿದೆ ಅವಂದು. ’ಕ್ರಾನಿಕಲ್ ಆಫ್ ಎ ಡೆತ್ ಪೋರ್ ಟೋಲ್ಡ್’ ಅಂತ. ಅಲ್ಲಿ ಒಬ್ಬ ಯಾವದೊ ಒಂದು ಸಂದರ್ಭದಲ್ಲಿ ಒಬ್ಬನ್ನ ಕೊಲೆ ಮಾಡ್ತೀನಿ ಅಂತ ಡಿಕ್ಲೇರ್ ಮಾಡ್‌ಬಿಡ್ತಾನೆ. ಆದ್ರೆ ಒಳಗಡೇನೇ ಯಾರಾದ್ರೂ ಕೊಲೆ ಮಾಡದನ್ನ ತಪ್ಪಿಸಲಿ ಅಂತ ಬಯಸ್ತಾನೆ. ಎಂಥ ಆಸೆ ಇದು! ಆದ್ರೆ ಯಾರೂ ತಪ್ಪಿಸಲ್ಲ. ಕೊಂದ್‌ಬಿಡ್ತಾನೆ. ಅವನ್ನ ಈ ಥರದವೆಲ್ಲ ಕಾಡೋವಂಥ ಸಂಗತಿಗಳು. ಅಮೇಲೆ ಒಂದೆಲ್ಲೊ ಕೊಲೆ ಆಗುತ್ತೆ. ಅವನ ರಕ್ತ ಹರ್‍ಕಂಡು ಆ ಬೀದಿ ಸುತ್ತಿ ಈ ಬೀದಿ ಸುತ್ತಿ, ಅವನ ತಾಯಿ ಇರ್ತಾಳೆ, ಅಲ್ಹೋಗ್ ನಿಂತ್ ಬಿಡ್ತದೆ. ಆಕ್ಚುವಲಿ ನಾನು ’ಕುಸುಮಬಾಲೆ’ ಬರೀವಾಗ ಇದನ್ನ ಓದಿರ್ಲಿಲ್ಲ. ನನಗೂ ಈ ಥರದ್ದು ಕಾಡಿದೆ.

ಪ್ರ: ’ಕುಸುಮಬಾಲೆ’ ಬರೀವಾಗ ನಿಮಗೆ ಒಂದು ರಕ್ತದ ಕಲೇನೇ ಪ್ರೇರಣೆ ಕೊಡ್ತು ಅಂತ ಕೇಳಿದೇನೆ..

: ’ಕುಸುಮಬಾಲೆ’ ಬರಿಯಕ್ಕೆ ಸ್ವಲ್ಪ ಕಾರಣವಾದ್ದು ಅದೊಂದು. ಕೆ.ಆರ್ ನಗರದ ಹತ್ರ, ಒಂದು ಕೊಲೆ ಆಗ್ಬಿಟ್ಟಿತ್ತು. ಹೋದೊ. ಯಾರೋ ಹೇಳಿದ್ರು: ”ಏ, ನಿನ್ನೆ ಬಂದಿದ್ರೆ ರಕ್ತದ ಕಲೆ ಇತ್ತು. ಇವತ್ತು ಅಳ್ಸಿಬಿಟ್ಟಿದೆ” ಅಂತ. ಗೋಡೆಯಿಂದ ಅಳಿಸಿದರೆ ಮನಸ್ಸಲ್ಲಿ ಅಳಿಸಿ ಹೋಗುತ್ತಾ ಅಂತ ಪ್ರಶ್ನೆ ನಿಂತಿತು.

ಪ್ರ: ಭಾರತೀಯ ಲೇಖಕರಲ್ಲಿ..?

: ವೈಕಂ ಓದಿದೀನಿ. ಈಗ ’ಪಾತುಮ್ಮಳ ಆಡು’. ’ಒಡಲಾಳ’ದಲ್ಲಿ ಅದರ ಇನ್‌ಫ್ಲುಯೆನ್ಸ್ ಇರಬಹುದು. ಪ್ರೇಮಚಂದ್ ಇನ್‌ಫ್ಲುಯೆನ್ಸ್ ಇರಬಹುದು. ಇನ್‌ಫ್ಲುಯೆನ್ಸ್ ಅಂತ ಗೊತ್ತಾದ್ರೆ ತಪ್ಪುಸ್ತೀನಿ. ಗೊತ್ತಿಲ್ಲದಲೆ ಬಂದಿರೊ ಸಾಧ್ಯತೆ ಇರ್ತದೆ.

ಪ್ರ: ಸಾಮಾಜಿಕ-ರಾಜಕೀಯ ಅಂದೋಲನಗಳಲ್ಲಿ ಲೇಖಕರು ಭಾಗವಹಿಸೋದೇನೇ ಸಾಹಿತ್ಯ ಸೃಷ್ಟಿಗೆ ಮಾರಕ ಅನ್ನೋ ಥರ ಎಸ್.ಎಲ್ ಭೈರಪ್ಪನವರು ಮಾತಾಡ್ತಿದ್ದಾರೆ.

: ತೇಜಸ್ವಿ ಇದಕ್ಕೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ. ಅದಕ್ಕಿಂತ ಸಮರ್ಥವಾಗಿ ಉತ್ತರ ಕೊಡಕೆ ಆಗಲ್ಲ ನನಗೆ. ಯಜ್ಞ ಯಾಗಾದಿ ತಪಸ್ಸು ಮಾಡ್ಕಂಡಿದ್ರೂ ಬರಿಯಕ್ಕೆ ಆಗ್ದೆ ಇರಬಹುದು. ಪೋಲಿ ತಿರಕ್ಕಂಡು ಇದ್ದವನೇ ದೊಡ್ಡದು ಬರದುಬಿಡಬಹುದು.

ಪ್ರ: ಇದು ಸೃಷ್ಟಿಕ್ರಿಯೆ ಹೇಗಾಗುತ್ತೆ ಅನ್ನೋ ಚರ್ಚೆಗೆ ಎಳ್ಕಂಡು ಹೋಗುತ್ತೆ.

: ಸೃಜನಶೀಲತೆ ಸೃಷ್ಟಿ ಹುಟ್ಟು ಅನ್ನೋದು ಹುಟ್ಸೋನಿಗೇ ಗೊತ್ತಿಲ್ವಲ್ಲ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...