Homeಕರ್ನಾಟಕಮೋದಿ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು; ಬಿಜೆಪಿ ವಕ್ತಾರ

ಮೋದಿ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು; ಬಿಜೆಪಿ ವಕ್ತಾರ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸೋಲು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ತೋರಿಸುತ್ತಿದೆ ಎಂದು ಬಿಜೆಪಿ ವಕ್ತಾರ ವಾಮನ ಆಚಾರ್ಯ ಅಭಿಪ್ರಾಯ ತಾಳಿದ್ದಾರೆ. ಸೋಮವಾರ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ಬರೆದ ಲೇಖನದಲ್ಲಿ ಬಿಜೆಪಿ ಸೋಲಿನ ಆತ್ಮಾವಲೋಕವನ್ನು ಅವರು ಮಾಡಿದ್ದಾರೆ.

224 ಸ್ಥಾನಗಳಿಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, 1989 ನಂತರದಲ್ಲಿ ಅತಿಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ದಿಗ್ವಿಜಯ ಸಾಧಿಸಿದೆ. ಪ್ರಸ್ತುತ ಬಿಜೆಪಿ 66 ಸ್ಥಾನಗಳನ್ನು ಗೆದ್ದುಕೊಂಡರೆ, ದಕ್ಷಿಣ ಭಾರತದಲ್ಲಿನ ತನ್ನ ಅಧಿಕಾರ ಕಳೆದುಕೊಂಡಿದೆ.

ಈ ಕುರಿತು ಲೇಖನ ಬರೆದಿರುವ ಆಚಾರ್ಯ, “ಕರ್ನಾಟಕದಲ್ಲಿ ಕೇಸರಿ ಪಕ್ಷದ ಸೋಲು ರಾಜ್ಯದಲ್ಲಿ ನಿರ್ಣಾಯಕ ನಾಯಕತ್ವದ ಕೊರತೆಯನ್ನು ಎತ್ತಿಹಿಡಿದಿದೆ. ಮೋದಿಯವರ ರ್‍ಯಾಲಿಗಳು ಸಹ ಬಿಜೆಪಿಯ ಸ್ಥಾನಗಳನ್ನು ಉಳಿಸಿಕೊಳ್ಳಲು ವಿಫಲವಾಗಿವೆ” ಎಂದು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ನಾಯಕತ್ವವು ಮತದಾರರ ಅಥವಾ ಪಕ್ಷದ ಕಾರ್ಯಕರ್ತರ ನಾಡಿಮಿಡಿತವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಅವರಲ್ಲಿ [ಬೊಮ್ಮಾಯಿ] ಯಾರೂ ಪ್ರಬಲ ನಾಯಕತ್ವವನ್ನು ಕಾಣಲಿಲ್ಲ. ಅವರನ್ನು ಯಾವಾಗಲೂ ರಾಜಿ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ” ಎಂದು ಆಚಾರ್ಯ ಟೀಕಿಸಿದ್ದಾರೆ. “ಬೇರೆಡೆ ಬಿಜೆಪಿಯ ಅನುಭವದಂತೆಯೇ, ಪ್ರಬಲ ಮುಖ್ಯಮಂತ್ರಿ ಅಭ್ಯರ್ಥಿಗಳ ಕೊರತೆಯು ತುಂಬಾ ದುಬಾರಿಯಾಗಿ ಈ ಚುನಾವಣೆ ಪರಿಣಮಿಸಿದೆ” ಎಂದಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರ ಆರೋಪಗಳು ಮತದಾರರ ಮೇಲೆ ಪರಿಣಾಮ ಬೀರಿವೆ ಎಂದು ಪಕ್ಷದ ವಕ್ತಾರರು ಗಮನ ಸೆಳೆದ್ದಾರೆ. ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಉದ್ಯೋಗ ನೇಮಕಾತಿ ಮತ್ತು ವರ್ಗಾವಣೆಗಾಗಿ ಭಾರೀ ಲಂಚವನ್ನು ಪಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ರೇಟ್‌ ಕಾರ್ಡ್ ಬಿಡುಗಡೆ ಮಾಡಿ ಜಾಹೀರಾತನ್ನೂ ನೀಡಿತ್ತು.

“ಎಲ್ಲ ಯಶಸ್ವಿ ಸರ್ಕಾರಗಳು ಭ್ರಷ್ಟಾಚಾರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿವೆ” ಎಂದಿರುವ ವಾವನ ಆಚಾರ್ಯ, “ಬಿಜೆಪಿ ಸರ್ಕಾರದಿಂದ ಈ ಪ್ರವೃತ್ತಿಯನ್ನು ಬದಲಾಯಿಸಲಾಗಿಲ್ಲ” ಎಂದು ಟೀಕಿಸಿದ್ದಾರೆ.

ಅಭಿವೃದ್ಧಿ, ಮೂಲಸೌಕರ್ಯ ವಿಷಯದಲ್ಲಿ ಜನರಿಗೆ ತೋರಿಸಲು ಏನೂ ಇಲ್ಲದ ಕಾರಣ ಪಕ್ಷವು ಅಧಿಕಾರಕ್ಕೆ ಮರಳಲು ವಿಫಲವಾಗಿದೆ ಎಂದು ಆಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಇತರ ಹಿಂದುಳಿದ ವರ್ಗಗಳ ಕೋಟಾದಲ್ಲಿದ್ದ ಮುಸ್ಲಿಮರ 4% ಮೀಸಲಾತಿಯನ್ನು ರದ್ದುಗೊಳಿಸಿದ್ದರೂ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: ವಿವಿಧ ಜಾತಿಗಳಿಗೆ ಮೂರು ಪಕ್ಷಗಳು ಟಿಕೆಟ್ ನೀಡಿದೆಷ್ಟು? ಗೆದ್ದಿದೆಷ್ಟು?

ಮಾರ್ಚ್‌ನಲ್ಲಿ ನಡೆದ ತನ್ನ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ, ರಾಜ್ಯದ ಬಿಜೆಪಿ ಸರ್ಕಾರವು ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿತು. ಆ ಮೀಸಲಾತಿಯನ್ನು ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತರಿಗೆ ಸಮಾನವಾಗಿ ಹಂಚಿಕೆ ಮಾಡಿತು.

“ಬಿಜೆಪಿ ಸರ್ಕಾರದ ಹದಿನಾಲ್ಕು ಮಂತ್ರಿಗಳು ಚುನಾವಣೆಯಲ್ಲಿ ಸೋತರು” ಎಂಬ ಅಂಶದತ್ತ ಅವರು ಗಮನ ಸೆಳೆದಿದ್ದಾರೆ. “ಇದು ಏನನ್ನಾದರೂ ಹೇಳುತ್ತದೆ. ಮೀಸಲಾತಿಯ ಕುರಿತ ಕೊನೆ ಕ್ಷಣದ ಕಸರತ್ತು ಸಹಾಯ ಮಾಡಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಹೊಸ ನಾಯಕತ್ವವನ್ನು ಹೇಗೆ ತರಬಹುದು ಮತ್ತು ಮೋದಿ ಮೇಲಿನ ಅವಲಂಬನೆಯನ್ನು ಹೇಗೆ ಕಡಿಮೆ ಮಾಡಬಹುದು ಸೇರಿದಂತೆ ಹಲವಾರು ಪ್ರಶ್ನೆಗಳ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪಕ್ಷದ ವಕ್ತಾರರು ಸಲಹೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...