Homeಮುಖಪುಟಬೀದಿ ನಾಟಕ: ನಾಗಪುರದ ತೊಗಲು ಬೊಂಬೆ ಆಟ

ಬೀದಿ ನಾಟಕ: ನಾಗಪುರದ ತೊಗಲು ಬೊಂಬೆ ಆಟ

- Advertisement -
- Advertisement -

ತೆರೆಯ ಹಿಂದೆ ತೊಗಲು ಬೊಂಬೆ ಆಟಗಾರರು. ತೆರೆಯ ಮೇಲೆ ಬೊಂಬೆಗಳು ಆಡುತ್ತವೆ..

ಹಾಡು :

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು
ಹೀಗೆ ನಗುತಲಿರುವುದು ಹೀಗೇ ನಗುತಲಿರುವುದು..

(ಬುಡಬುಡಿಕೆಯವನ ಪ್ರವೇಶ)

ಬುಡಬುಡಿಕೆ : ಜಯವಾಗತೈತೆ ಸ್ವಾಮಿ ಜಯವಾಗುತೈತೆ

ಈ ಸಲದ ಚುನಾವಣೆಯಲಿ ಜಯವಾಗುತೈತೆ
ಬುಡಬುಡಿಕೆ ಶಕುನ ನುಡಿಸುತೈತೆ ಸ್ವಾಮಿ

ಈ ಸಲದ ಚುನಾವಣೆಯಲಿ ಗೆಲುವಾಗುತೈತೆ ಸ್ವಾಮಿ
ಗೆಲುವಾಗುತೈತೆ (ಬುಡಬುಡಿಕೆ ನುಡಿಸುವನು)

ಸೂತ್ರಧಾರ : ಏ ಬುಡಬುಡಿಕೆ! ಇಷ್ಟು ದಿನ ಎಲ್ಲೋಗಿದ್ಯೋ?

ಬುಡಬುಡಿಕೆ : ಯಾಕೆ ಸ್ವಾಮಿ? ಹೊಟ್ಟೆ ಪಾಡಿಗೆ ಒಂದು ಊರೆ? ಒಂದು ಕೇರಿನಾ? ಒಂದು ದೇಶನಾ?

ಸೂತ್ರಧಾರ : ಹೌದೌದು! ಏನ್ ಸುಡಾನ್ ದೇಶಕ್ಕೆ ಹೋಗಿದ್ದೇನು? ಬಹಳ ದಿವಸಾತ್ ನೀನು ಬಂದು!

ಬುಡಬುಡಿಕೆ : ಸುಡಾನ್‌ಗೂ ಇಲ್ಲ ಶ್ರೀಲಂಕಾಕ್ಕೂ ಇಲ್ಲ. ನಾಗಪುರಕ್ಕೆ ಹೋಗಿದ್ದೆ.

ಸೂತ್ರಧಾರ : ಅರೆರೆ ಬುಡಬುಡಿಕೆ ನಾಗಪುರಕ್ಕೆ ಯಾಕೋದೋ? ಅಲ್ಲೇನೈತೋ ನೋಡೋಕೆ?

ಬುಡಬುಡಿಕೆ : ಯಾಕೆಂದ್ರೆ ಮಂಕೀಬಾತ್‌ನಲ್ಲಿ ಮೋದಿ ಹೇಳಲಿಲ್ಲವೆ- ನಾಗಪುರ ಎಂದರೆ ತೊಗಲು ಬೊಂಬೆ ತಯಾರಿಕೆಯಲ್ಲಿ ಜಗತ್ಪ್ರಸಿದ್ಧ ಅಂತ, ಆ ಕಾರ್ಯಾಗಾರ ನೋಡಾಕೋಗಿದ್ದೆ.

ಸೂತ್ರಧಾರ: ಏಯ್, ಮಂಕೀಬಾತ್ ಅಲ್ಲೋ ಮನ್ ಕೀ ಬಾತ್! ಮನದ ಮಾತು. ಅದಿರಲಿ ಅಲ್ಲೇನದಲೇ ನೋಡಾಂತದ್ದು?

ಬುಡಬುಡಿಕೆ: ನಾನೂ ಅದೇ ಅಂದ್ಕಂಡಿದ್ದೆ, ನನ್ ಗೆಣೇಕಾರ ಒಬ್ಬ ಬಾರಲೆ ನೋಡಿ ಬರಾನ, ಅದೆಂತ ಚರ್ಮದಲ್ಲಿ ಮಾಡ್ತಾರೆ ಅಂತ ಕರೆದ, ಅವನಿಗೆ ಕಂಪನಿ ಕೊಟ್ಟಿದ್ದೆ.

ಸೂತ್ರಧಾರ: ಸರಿಕಣೋ. ಅಲ್ಲೇನೇನ್ ಕಂಡ್ಯೋ? ಯಾರ್ ತೋರಿಸಿದ್ರು? ಹೆಂಗೆ ಮಾಡ್ತಾರೊ ಆ ತೊಗಲು ಬೊಂಬೆಗಳನ್ನಾ?

ಬುಡಬುಡಿಕೆ: ಅವರಿವರ ಕೈಕಾಲ್ ಕಟ್ಟಿ ಕಾರ್ಯಾಗಾರ ನೋಡಲು ಪರ್ಮಿಷನ್ ತಗೊಂಡ್ವಿ.

ಸೂತ್ರಧಾರ: ಏ ಬುಡಬುಡಿಕೆ, ಗೋವಿನ ಚರ್ಮದಲ್ಲಿ ಆ ಬೊಂಬೆಗಳನ್ನ ಮಾಡ್ತಾರಂತಲ್ಲೊ!

ಬುಡಬುಡಿಕೆ: ಹೌದು, ಇಲ್ಲವಾದರೆ ತೊಗಲು ಬೊಂಬೆಗಳನ್ನು ಮಾಡುವುದು ಹೇಗೆ ಸ್ವಾಮಿ? ತಮಟೆ, ಮೃದಂಗ, ಅರೆ ಇತ್ಯಾದಿ ವಾದ್ಯಗಳನ್ನು ಮಾಡಿದಂತೆಯೇ ಈ ತೊಗಲು ಬೊಂಬೆಗಳನ್ನೂ ಚರ್ಮದಿಂದಲೇ ಮಾಡಬೇಕಲ್ಲ?

ಸೂತ್ರಧಾರ: ಹೆಂಗ್ ಮಾಡ್ತಾರೊ?

ಬುಡಬುಡಿಕೆ: ಮೊದಲು ಆಟಕ್ಕೆ ಬೇಕಾದ ರಾಮ, ಸೀತೆ, ಆಂಜನೇಯ, ಲಕ್ಷ್ಮಣ, ವಾಲಿ, ಸುಗ್ರೀವ, ರಾವಣ, ಕುಂಭಕರ್ಣ, ವಿಭೀಷಣ, ಮಂಡೋದರಿ, ಇಂದ್ರಜಿತು ಇತ್ಯಾದಿ ಪಾತ್ರಗಳ ಆಕಾರಕ್ಕೆ ಸರಿಯಾಗಿ ರೊಟ್ಟಿನ ಮಾಡೆಲ್‌ಗಳನ್ನು ಕತ್ತರಿಸುತ್ತಾರೆ. ಆಮೇಲೆ ಅವಕ್ಕೆ ಹದಮಾಡಿದ ಚರ್ಮವನ್ನು ಹೊದಿಸಿ ಕರೆಕ್ಟಾಗಿ ಕತ್ತರಿಸಿಕೊಳ್ಳುತ್ತಾರೆ.

ಸೂತ್ರಧಾರ: ರೊಟ್ಟಿನ ಮಾದರಿ ಗೊಂಬೆಗಳು ಕೈಕಾಲು ಆಡಿಸುವುದು ಹೇಗೋ?

ಬುಡಬುಡಿಕೆ: ನೀವೇ ಸೂತ್ರಧಾರರಲ್ಲವೆ? ನಮ್ಮ ಶರೀರದ ಅಂಗಾಂಗಗಳು ಹೇಗೆ ಆಡುತ್ತವೊ ಹಾಗೆ. ಕೈ, ಕಾಲು, ಬಾಗು, ಬಳುಕು, ತಲೆ ವಾಲುವಿಕೆ ಇತ್ಯಾದಿಗಳ ಚಲನೆಗೆ ಅನುಕೂಲವಾಗುವಂತೆ ಕೀಲು ಕೀಲಿಗೂ ರಂಧ್ರ ಮಾಡಿ ಸೂತ್ರ (ದಾರ)ಗಳನ್ನು ಹಾಕಿರುತ್ತಾರೆ.

ಸೂತ್ರಧಾರ: ಆಮೇಲೆ?

ಬುಡಬುಡಿಕೆ: ಆಮೇಲೆ, ಆಯಾ ಪಾತ್ರಗಳ ಕಲ್ಪನೆಗೆ ತಕ್ಕಂತೆ ಬಣ್ಣ ಹಚ್ಚುತ್ತಾರೆ, ರಾಮನಿಗೆ ನೀಲವರ್ಣ, ಸೀತೆಗೆ ಬಂಗಾರದ ಬಣ್ಣ, ಆಂಜನೇಯನಿಗೆ ರೋಮ ರೋಮ ಕಾಣುವಂತೆ ಬೂದು ಬಣ್ಣ.. ಲಕ್ಷ್ಮಣ, ಇಂದ್ರಜಿತ್‌ಗೆ ತಾಮ್ರವರ್ಣ.. ಹೀಗೆ ವಿವಿಧ ಪಾತ್ರಗಳಿಗೆ ವಿವಿಧ ವರ್ಣ! ಇಗೋ ಪ್ರದರ್ಶನವನ್ನೇ ನೋಡಿ! ಬೇಕಾದ್ರೆ.

ತೊಗಲು ಬೊಂಬೆ ನಾಟಕ ಆರಂಭ

ತೆರೆಯ ಹಿಂದೆ ಬೊಂಬೆಯಾಟದ ಸೂತ್ರಧಾರ. ಅವನ ಕೈಚಳಕಕ್ಕೆ ಸರಿಯಾಗಿ ನೆರಳು ಬೆಳಕಿನಲ್ಲಿ ಆ ಬೊಂಬೆಗಳು ನರ್ತಿಸುತ್ತವೆ. ಎದುರಿಗೆ ಪ್ರೇಕ್ಷಕ ವರ್ಗ.

ಭಾಗವತನ ಆಲಾಪ: ಆಡುತಾಡುತಾ ಬಂದಾ ರಾಮಾ
ಆಡುತಾಡುತಾ ಬಂದಾ ರಾಮಾ.. (ಪಲ್ಲವಿ)
ಆಡುತ ಪಾಡುತ ನೋಡುತ ಎಡಬಲ
ಆಡುತಾಡುತಾ ಬಂದಾ ರಾಮ. (ಅನು ಪಲ್ಲವಿ)
ಆಡು…ತಾ..ಡು..ತಾ ಬಂದಾ..ರಾ…ಮಾ. ಆಲಾಪ

ಭಾಗವತ: ನಾವು ಈ ದಿನ ಸಂಪೂರ್ಣ ರಾಮಾಯಣ ಎಂಬ ತೊಗಲು ಬೊಂಬೆ ಆಟವನ್ನು ಈ ನಗರದ ಬೀದಿಬೀದಿಗಳಲ್ಲಿ, ಪ್ರದರ್ಶನ ಗಾಡಿಯಲ್ಲಿ ’ರೋಡ್ ಶೋ’ ಮಾಡುತ್ತಿದ್ದೇವೆ. ರಸಿಕಜನ ತಾವಿರುವಲ್ಲಿಯೇ ನೋಡಿ ಆನಂದಿಸಲಿ ಎಂದು.

ಸೂತ್ರಧಾರ: ರೋಡ್ ಶೋ ಪ್ರಯೋಗ ನಮ್ಮ ನಗರದಲ್ಲಿ ಇದೇ ಮೊಟ್ಟ ಮೊದಲನೆಯದು. ನಮ್ಮ ಈ ತೊಗಲು ಬೊಂಬೆ ಆಟವನ್ನು ಜನ ನೋಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

[ಹಿನ್ನೆಲೆ ಸಂಗೀತ, ಧ್ವನಿವರ್ಧಕದಲ್ಲಿ]

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು.
ಹಾಡಿನ ಲಯಕ್ಕೆ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಬೊಂಬೆಗಳು ಅಭಿನಯಿಸುತ್ತವೆ.

(ಪ್ರದರ್ಶನದ ಟ್ರಕ್ಕು ನಗರದ ಬೀದಿಬೀದಿಗಳಲ್ಲಿ ಕೇಂದ್ರ ವೃತ್ತಗಳಲ್ಲಿ ನಿಂತು ನಿಂತು ಸಾಗುತ್ತದೆ. ಧ್ವನಿವರ್ಧಕದ ಹಾಡಿಗೆ ತಕ್ಕಂತೆ ತೊಗಲು ಬೊಂಬೆಗಳು ಅಭಿನಯಿಸುತ್ತವೆ.)

ಇದನ್ನೂ ಓದಿ: ಒಂದಿಷ್ಟು ಜಪಾನೀ ಹಾಯ್ಕುಗಳು

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು
ಹಿರಿಯರೆ ಬರಲಿ ಕಿರಿಯರೆ ಬರಲಿ ಭೇದ ತೋರದು
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರುವುದು
ತೂಗುತಿರುವುದು. ಆಡಿಸಿನೋಡು…

ಪ್ರೇಕ್ಷಕ-1: ಯಾವೂರಿನ ಆಟದವರೋ ಮಾರಾಯ ಇವರು?

ಪ್ರೇಕ್ಷಕ-2: ಯಾವೂರು ಆದರೇನು? ಬೊಂಬೆಗಳ ನಟನೆ ನೋಡಿ ಅದ್ಭುತ.

ಪ್ರೇಕ್ಷಕ-3: ಇದು ನಾಗಪುರದ ತೊಗಲು ಬೊಂಬೆ ಆಟದ ಕಂಪನಿಯಂತೆ ಕಂಡ್ರೊ.

ಪ್ರೇಕ್ಷಕ-4: ನಾಗಪುರ ಅಂದ್ರೆ!

ಪ್ರೇಕ್ಷಕ-1: ಅಯೋಧ್ಯೆಯನ್ನೇ, ಹಸ್ತಿನಾವತಿ, ನಾಗಪುರ ಮುಂತಾಗಿ ಕರಿತಾರೆ.

ಪ್ರೇಕ್ಷಕ-4: ಯಾವೂರಾದ್ರೇನು ಇಂಥ ಆಟ ನನ್ನ ಜನ್ಮದಲ್ಲೇ ಕಾಣಲಿಲ್ಲ ಬಿಡೋ.

ಪ್ರದರ್ಶನ ಗಾಡಿ ಮುಂದೆ ಮುಂದೆ ಸಾಗುತ್ತದೆ. ಧ್ವನಿವರ್ಧಕ ಹಾಡುತ್ತದೆ.

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯೆ ಜೀವವ ತುಂಬಿ ಕುಣಿಸಿ ನಗಿಸಿದೆ
ಆ ಕೈ ಸೋತರೆ ಬೊಂಬೆಯ ಕತೆಯು ಕೊನೆಯಾಗುವುದೇ. ಕೊನೆಯಾಗುವುದೇ
ಆಡಿಸಿ ನೋಡು..

ಮುಂದಿನ ಸರ್ಕಲ್‌ನಲ್ಲಿ ಗಾಡಿ ಕೊಂಚ ನಿಲ್ಲುತ್ತದೆ. ಧ್ವನಿವರ್ಧಕ ಹಾಡುತ್ತಲೇ ಇದೆ.

ಒಬ್ಬ ಮುದುಕಿ: ನೋಡವ್ವ ಇದು ತೊಗಲು ಬೊಂಬೆ ಆಟ ಅಂತ ಅನ್ನಿಸುವುದೇ ಇಲ್ಲ. ಜೀವದ ಬೊಂಬೆಗಳು ಹಂಗಿವೆ

ಒಬ್ಬ ತಾಯಿ: ಹೌದಜ್ಜಿ ಈ ತೊಗಲು ಬೊಂಬೆಗಳೇ ನಡೆದಾಡುವ ದೇವರಂತಿವೆ, ಇಷ್ಟು ಜೀವಂತ ಉಂಟೇನಜ್ಜಿ?

ಮಕ್ಕಳ ತಾಯಿ: ಆ ಬೊಂಬೆ ಗಾಡಿ ಎದುರಿಗೆ ತನ್ನ ಕೈಕೂಸನ್ನು ಎತ್ತಿ ನೀವಾಳಿಸಿ ರಸ್ತೆಯಲ್ಲಿ ಅಡ್ಡ ಮಲಗಿಸಿ ತಾನೂ ದೀರ್ಘ ದಂಡ ನಮಸ್ಕರಿಸುತ್ತಾಳೆ.

ಇನ್ನೊಬ್ಬಾಕೆ: ಅವಸರದಿಂದ ಮನೆಯಿಂದ ಈಚೆ ಬಂದವಳೆ ದೇವರ ಗಾಡಿ ಹೋದ ದಾರಿಯ ಧೂಳನ್ನೇ ಎತ್ತಿಕೊಂಡು ಹಣೆಗೆ ಇಟ್ಟುಕೊಳ್ಳುತ್ತಾಳೆ.

ಧ್ವನಿವರ್ಧಕ ಹಾಡುತ್ತದೆ. ಪ್ರದರ್ಶನ ಗಾಡಿ ಮುಂದೆ ಸಾಗುತ್ತದೆ

ಆಡಿಸಿನೋಡು..

ದೃಶ್ಯ ಬದಲು

ಬುಡಬುಡಿಕೆ ಪ್ರವೇಶ: ಶುಭ ನುಡಿಯೆ ಶಕುನದ ಹಕ್ಕಿ ಶುಭನುಡಿಯೆ
ಜಯವಾಗುತೈತೆ ಸ್ವಾಮಿ ಜಯವಾಗುತೈತೆ

ಈ ಸಲದ ಚುನಾವಣೆಯಲಿ ನೀವು ಕೋರಿಕೊಂಡ ಫಲ ಕೈ ಸಾರುತ್ತೆ ಸ್ವಾಮಿ, ಕೈ ಸಾರುತ್ತೆ… ಶುಭ ನುಡಿಯೆ…

ದಿಢೀರನೆ ಸೂತ್ರಧಾರನ ಪ್ರವೇಶ: ಏ ಬುಡಬುಡಿಕೆ, ಇರು ಇರು ಹೋಗಬೇಡ ನೀನ್ ಹೇಳಿದಂಗೆ ನಾಗಪುರದ ತೊಗಲು ಬೊಂಬೆ ಆಟ ಬೊಂಬಾಟ್ ಕಣೋ!

ಬುಡಬುಡಿಕೆ: ಅದಕ್ಕೆ ನಾವು ಹೋಗಿ ಬಂದದ್ದು, ಆ ಕಾರ್ಯಾಗಾರ ನೋಡೋದೆ ಒಂದು ವಿಸ್ಮಯ. ಆ ಸನಾತನ ಕಾರ್ಯಾಗಾರದಲ್ಲಿರುವ ಗುಡಿಕೈಗಾರಿಕೆಯವರ ಕೈ ಚಳಕವೇ ಹಾಗಂತೆ! ಜಗತ್ಪ್ರಸಿದ್ಧ. ಇಂಡಿಯಾ ದೇಶದ ಕೇಂದ್ರ ಬಿಂದು ಅದು.

ಸೂತ್ರಧಾರ: ಕರುನಾಡಿನ ಪುಣ್ಯಕೋಟಿ ಸಂತತಿಯ ಗೋವಿನ ಚರ್ಮ ಕೂಡ ಅಲ್ಲಿಗೆ ಹೋಗುತ್ತದಂತೆ!

ಬುಡಬುಡಿಕೆ: ಗೋವಿನ ಚರ್ಮ ಹೋಗುತ್ತೋ ಅಥವಾ ಜೀವಂತ ಗೋವುಗಳೇ ಹೋಗುತ್ತವೊ ನಮಗೇನೂ ಗೊತ್ತಿಲ್ಲ ಸ್ವಾಮಿ.

ಸೂತ್ರಧಾರ: ಈಗ ಹಂಗೆಲ್ಲ ಜೀವಂತ ಸಾಗಿಸೊ ಹಂಗಿಲ್ಲ- ಖಾಸಗಿ ಗೋರಕ್ಷಕರು ಗಾಡಿ ತಡಿತಾರೆ

ಬುಡಬುಡಿಕೆ: ನಾಗಪುರದ ತೊಗಲು ಬೊಂಬೆ ತಯಾರಿಕೆ ಎಂದ್ರೆ ಯಾರೂ ತಡಿಯಾದಿಲ್ಲ ಬಿಡಿ ಸ್ವಾಮಿ! ಪರವಾನಗಿ ಕೊಡ್ತಾರೆ.

ಸೂತ್ರಧಾರ: ಹೋಗಲಿ, ಬಿಡೋ ನಮಗ್ಯಾಕೆ ಆ ಉಸಾಬರಿ? ಈ ಸಲದ ಚುನಾವಣೆ ಭವಿಷ್ಯ ಏನಾಗುತ್ತೆ ಅಂತ ಹೇಳುತ್ತೇನೊ ನಿನ್ನ ಬುಡಬುಡಿಕೆ ಕಣಿ?

ಬುಡಬುಡಿಕೆ: ಹೇಳ್ತೀನಿ! ಅದಕ್ಕೇ ಅಲ್ವ ನಾನು ಮತ್ತೆ ಬಂದದ್ದು. ಮೊದಲು ಏನಾರ ಕೊಡಿ ಸ್ವಾಮಿ.

ಸೂತ್ರಧಾರ: ಏನ್ ಕೊಡಬೇಕೊ, ಈಗಾಗಲೆ ನಿನ್ನ ಹೆಗಲ ಮೇಲೆ ಅಷ್ಟೊಂದು ಬಟ್ಟೆಬರೆ ಕಂಬಳಿ ಹೊರುವಷ್ಟಿದೆ. ತಲೆ ತುಂಬ ತರಹೇವಾರಿ ಪೇಟ ಹಾಕಿದ್ದೀಯಾ. ಇನ್ನೇನ್ ಬೇಕೊ?

ಬುಡಬುಡಿಕೆ: ಇದೆಲ್ಲ ಉದರ ನಿಮಿತ್ತ ಬಹುಕೃತ ವೇಷ! ನಿಮ್ಮ ರಾಜಕಾರಣಿಗಳೇ ನನಗಿಂತ ಬಹುಕೃತ ವೇಷ ಧರಿಸುತ್ತಾರೆ ರೋಡ್ ಶೋನಲ್ಲಿ. ಸಭೆಗೊಂದು ಡ್ರೆಸ್ಸು. ಕಿರೀಟ, ಹಾರ, ತುರಾಯಿ ಹಾಕ್ಕೊಂಡು ಮಾರೆಮ್ಮಗೆ ಬಿಟ್ಟ ಕೋಣದಂತೆ ಮೆರೀತಾರೆ.

ಸೂತ್ರಧಾರ: ಅವರೇನ್ ಮಾಡ್ತಾರೋ, ಪಾರ್ಟಿಜನ ಕುಣಿಸದ್ದಾಂಗ ಕುಣೀತಾರೆ! ಅಷ್ಟೆ.

ಬುಡಬುಡಿಕೆ: ನಿಜ, ನಿಜ. ಅವರ ವೇಷ ಭೂಷಣ ನೋಡಿದರೆ ನಾಗಪುರದ ತೊಗಲು ಬೊಂಬೆಗಳೂ ನಾಚಿ ನೀರಾಗ್ತವೆ. ಅವರ ಅಭಿನಯ ಕಂಡರೆ ಆಂಜನೇಯ ಕಿಷ್ಕಿಂಧೆಗೆ ಓಟ ಕೀಳುವನು.

ಸೂತ್ರಧಾರ: ಸರಿಸರಿ ಬರೀ ಮಾತೆ ಆಯ್ತು. ನಿನ್ನ ಭವಿಷ್ಯ ಹೇಳೋ. ಕೊಡೋದು ಬಿಡೋದು ಆಮೇಲೆ…

ಬುಡಬುಡಿಕೆ: ಶುಭ ನುಡಿಯೆ ಶಕುನದ ಹಕ್ಕಿ ಶುಭನುಡಿಯೆ….

ಬುಡಬುಡಿಕೆ ನುಡಿಸುತ್ತಾ…

ಈ ಸಲ ಏರುತ್ತಿರುವ ತಾಪಮಾನಕ್ಕೆ ಗಂಗಾ-ಕಾವೇರಿ ನೀರೂ ಬಿಸಿಯಾಗುತ್ತೆ. ’ತಾವರೆ ಹೂ’ ಬಾಡಬಹುದು….
ಈ ಬಿಸಲ ಝಳಕ್ಕೆ ’ಕೈ’ ಅಡ್ಡಲಾಗಿ ಇಟ್ಟವರು ಬಹುಶಃ ಬಚಾವ್….
’ಹುಲ್ಲು ಹೊರೆ ಹೊತ್ತ’ ಹೆಂಗಸಂತೂ ಈ ಸಲದ ಬಿಸಿಲಿಗೆ ಬಸವಳಿದು ಗ್ಯಾನ ತಪ್ತಾಳೆ….
ಶುಭ ನುಡಿಯೇ ಶಕುನದ ಹಕ್ಕಿ ಶುಭ ನುಡಿಯೆ….
ಬುಡಬುಡಿಕೆ ನುಡಿಸುತ್ತಾ ಹೋಗುವನು. ಸೂತ್ರಧಾರ ನೋಡುತ್ತಾ ನಿಲ್ಲುವನು.
-ಹೋಗುವರು-
-ತೆರೆ-

ಪ್ರೊ. ಶಿವರಾಮಯ್ಯ

ಪ್ರೊ.ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...