ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಟಿಕೆಟ್ನಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿರುವ ಕೊಲೆ ಪ್ರಕರಣದ ಅಪರಾಧಿಯ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡನೆಗೆ ಅಲಹಾಬಾದ್ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ‘ಬಾರ್ & ಬೆಂಚ್’ ವರದಿ ಮಾಡಿದೆ.
ರಾಮಜನ್ಮಭೂಮಿ ಚಳವಳಿಯ ಸಕ್ರಿಯ ಕಾರ್ಯಕರ್ತ ಪ್ರಮೋದ್ ಕುಮಾರ್ ನಿಗಮ್ ಅವರ ಹತ್ಯೆ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯವು 2025ರ ಏಪ್ರಿಲ್ನಲ್ಲಿ ನಂದನ್ಲಾಲ್ ರೈ ಅಲಿಯಾಸ್ ಬಬ್ಲೂ ರೈ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ನಂದನ್ಲಾಲ್ ರೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿರುವ ವಕೀಲರು, ನಂದನ್ಲಾಲ್ ರೈ ಅವರು ಶಿಕ್ಷೆಯಾಗುವ ಮುನ್ನ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು ಹಾಗೂ ಅವರು 2027ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ಸಾಧ್ಯವಾದರೆ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸಿದ್ಧಾರ್ಥ್ ಹಾಗೂ ನ್ಯಾಯಮೂರ್ತಿ ವಿನಯ್ ಕುಮಾರ್ ದ್ವಿವೇದಿ ಅವರನ್ನೊಳಗೊಂಡ ಪೀಠವು, ಕಳೆದ ಅಕ್ಟೋಬರ್ 5 ರಂದು ನಂದನ್ಲಾಲ್ ರೈ ಅವರ ಶಿಕ್ಷೆ ಹಾಗೂ ದಂಡನೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿದೆ. “ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಮತದಾರರಿಗೆ ವಿಶೇಷ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಿಕ್ಷೆಗೆ ತಡೆ ನೀಡದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಅವರು ಕಳೆದುಕೊಳ್ಳಬೇಕಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ವಿವಿಧ ಆದೇಶಗಳನ್ನು ಹೈಕೋರ್ಟ್ ಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೊಲೆ ಪ್ರಕರಣದ ತನಿಖೆಯಲ್ಲಿ ರೈ ಅವರ ಹೆಸರು ತಡವಾಗಿ ಸೇರ್ಪಡೆಯಾಗಿದೆ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು ಮತ್ತು ಆಯುಧ ವಶಪಡಿಸಿಕೊಂಡ ಪ್ರಕ್ರಿಯೆಗಳು ಸಂಶಯಾಸ್ಪದವಾಗಿವೆ ಹಾಗೂ ಕೇವಲ ಅನುಮಾನಗಳ ಆಧಾರದ ಮೇಲೆ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದಾರೆ. ಇನ್ನು ನಂದನ್ಲಾಲ್ ರೈ ಅವರು ಈ ಹಿಂದೆ ದಿವಂಗತ ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರೊಂದಿಗೆ ನಂಟು ಹೊಂದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು ಎಂಬುದನ್ನು ವರದಿಗಳು ಉಲ್ಲೇಖಿಸಿವೆ.
“ಸಾಮಾನ್ಯ ವ್ಯಕ್ತಿಯ ಜೀವನೋಪಾಯದ ಹಕ್ಕು ರಾಜಕಾರಣಿಯೊಬ್ಬನ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಗಿಂತ ಕಡಿಮೆಯೇನಲ್ಲ. ಆದ್ದರಿಂದ, ಮೇಲ್ಮನವಿಯ ಅಂತಿಮ ತೀರ್ಪು ಬರುವವರೆಗೆ ಅರ್ಜಿದಾರರು ಸಮಾಜದಲ್ಲಿ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುವಂತೆ ಅವರ ಶಿಕ್ಷೆಗೆ ತಡೆ ನೀಡುವುದು ಸೂಕ್ತವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಇದು ಕೇವಲ ಮೇಲ್ಮನವಿ ವಿಚಾರಣೆಯ ಅಂತಿಮ ಹಂತದವರೆಗೆ ಮಾತ್ರ ಅನ್ವಯಿಸುವ ಮಧ್ಯಂತರ ತಡೆಯಾಗಿದ್ದು, ಈ ಆದೇಶವು ಯಾವುದೇ ರೀತಿಯ ಖುಲಾಸೆಯಲ್ಲ ಮತ್ತು ಮೇಲ್ಮನವಿಯ ಅಂತಿಮ ಫಲಿತಾಂಶ ಬಾಕಿ ಇದೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.


