Homeಕರ್ನಾಟಕ‘ಸ್ವಾಮೀಜಿಗೆ ಅವಹೇಳನ ಮಾಡಿಲ್ಲ, ರಾಜಕೀಯವಾಗಿ ಮಾತನಾಡಿದ್ದೇನಷ್ಟೇ’: ಕ್ಷಮೆಯಾಚಿಸಿದ ಅಡ್ಡಂಡ ಕಾರ್ಯಪ್ಪ

‘ಸ್ವಾಮೀಜಿಗೆ ಅವಹೇಳನ ಮಾಡಿಲ್ಲ, ರಾಜಕೀಯವಾಗಿ ಮಾತನಾಡಿದ್ದೇನಷ್ಟೇ’: ಕ್ಷಮೆಯಾಚಿಸಿದ ಅಡ್ಡಂಡ ಕಾರ್ಯಪ್ಪ

“ಜಾತಿಯನ್ನು ಮೀರಿ ಸ್ವಾಮೀಜಿಗಳು ಬೆಳೆಯಲಿ ಎಂದು ನಾನು ಬಯಸುತ್ತೇನೆ” ಎಂದು ರಂಗಾಯಣ ನಿರ್ದೇಶಕರು ಆಶಿಸಿದ್ದಾರೆ

- Advertisement -
- Advertisement -

“ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ನಾನು ಅವಹೇಳನ ಮಾಡಿಲ್ಲ, ರಾಜಕೀಯವಾಗಿ ಮಾತನಾಡಿದ್ದೇನಷ್ಟೇ” ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸ್ಪಷ್ಟಪಡಿಸಿದ್ದಾರೆ.

ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ, ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲ” ಎಂದು ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿರುವ ಅಡ್ಡಂಡ ಅವರು ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಜೊತೆಗೆ ಕ್ಷಮೆ ಕೋರಿದ್ದಾರೆ.

ಅಡ್ಡಂಡ ಕಾರ್ಯಪ್ಪ ಅವರ ಕ್ಷಮೆಯಾಚನೆ ಹೀಗಿದೆ:

“ನಿರ್ಮಲಾನಂದ ಸ್ವಾಮೀಜಿಯವರನ್ನು ಅವಮಾನಿಸಿದ್ದೇನೆ ಎಂಬುದು ಶುದ್ಧ ಸುಳ್ಳು. ನಾನು ಮೂರ್ಖನಾಗಿ ಏನನ್ನೂ ಮಾತನಾಡಿಲ್ಲ. ಸಂತರ ನಾಡು ಇದು. ಸಂತರಿಲ್ಲದಿದ್ದರೆ ಈ ನಾಡನ್ನು ಕಟ್ಟಲು ಆಗುತ್ತಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿಯವರ ಮೇಲೆ ನನಗೆ ಅಪಾರವಾದ ಗೌರವವಿದೆ. ಅವರು ಕೇವಲ ಸಂತರಲ್ಲ, ಎಂಟೆಕ್‌ ಓದಿಕೊಂಡವರು.”

“ಕೊಡವರಿಗೆ ಮಠಾಧೀಶರಿಲ್ಲ. ನನಗೆ ಯಾರು ಸ್ವಾಮೀಜಿ? ನಿರ್ಮಲಾನಂದ ಸ್ವಾಮೀಜಿಯವರೇ ನನಗೂ ಸ್ವಾಮೀಜಿ. ಕೊಡಗಿನಲ್ಲಿ ಅರೆಭಾಷೆ ಗೌಡರಿದ್ದಾರೆ. ಕೊಡವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದ ಅರೆಭಾಷೆ ಗೌಡ ಸಮುದಾಯಕ್ಕೂ ನಿರ್ಮಲಾನಂದರೇ ಸ್ವಾಮೀಜಿ. ಈ ಸ್ವಾಮೀಜಿಯವರ ಬಗ್ಗೆ ಕೆಟ್ಟ ಮಾತನಾಡಲು ಸಿದ್ಧನಿಲ್ಲ, ನಾನು ಆ ಕೆಲಸ ಮಾಡುವುದಿಲ್ಲ.”

“ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿ ಇರಬೇಕೆಂದು ಕುಮಾರಸ್ವಾಮಿಯವರನ್ನು ಬೆಂಬಲಿಸುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಹೇಳಿರುವುದಾಗಿ ಪತ್ರಿಕೆಯಲ್ಲಿ ಬಂದಿದೆ ಎಂದು ಹೇಳಿದ್ದೇನಷ್ಟೇ. ಅದು ಸುಳ್ಳಾದರೆ ಸುಳ್ಳು. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ.”

“ಸ್ವಾಮೀಜಿಯವರಿಗೆ ಬುದ್ಧಿವಾದ ಹೇಳುವಷ್ಟು ನಾನು ಗ್ರೇಟ್ ಅಲ್ಲ. ನಿರ್ಮಲಾನಂದನಾಥ ಸ್ವಾಮೀಜಿಯವರು ಈ ನಾಡಿನ ಸಂತ. ಇವರಂತೆಯೇ ಅನೇಕ ಸ್ವಾಮೀಜಿಗಳು ಈ ನಾಡಿನಲ್ಲಿ ಇದ್ದಾರೆ. ಎಲ್ಲರೂ ಸಂತರೇ. ಇವರನ್ನು ಆರ್‌ಎಸ್‌ಎಸ್‌ ಗೌರವಿಸುತ್ತದೆ, ಸಮಾಜವಾದಿಗಳು ಗೌರವಿಸುತ್ತಾರೆ.”

“ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಅವಹೇಳನ ಮಾಡಿದ್ದೇನೆ ಎಂಬುದು ಸುಳ್ಳು, ರಾಜಕೀಯವಾಗಿ ಮಾತನಾಡಿದ್ದೇನೆ. ರಂಗಾಯಣ ನಿರ್ದೇಶಕರಾಗಿರುವ ನೀನು ರಾಜಕೀಯ ಮಾತನಾಡಬಹುದೇ ಎಂದು ಕೇಳುತ್ತಾರೆ. ರಾಜಕೀಯವೆಂದರೆ ಪವಿತ್ರ ಕ್ಷೇತ್ರ. ಪ್ರಧಾನಿ, ರಾಷ್ಟ್ರಪತಿಯವರೆಲ್ಲ ರಾಜಕೀಯದಿಂದ ಬಂದವರು. ರಾಜಕೀಯ ಮಾತನಾಡಬಾರದು ಎಂಬುದು ಅವೈಜ್ಞಾನಿಕ ಅರೆಜ್ಞಾನ. ರಾಜಕೀಯ ಮಾತನಾಡಿದರೆ ತಪ್ಪೇನು?”

“ಯಾವುದೋ ಒಂದು ಪಕ್ಷದ ಕುರಿತು ಹೇಳಿಲ್ಲ. ಒಟ್ಟು ರಾಜಕೀಯದ ಚರ್ಚೆಯನ್ನು ಮಾಡಿದ್ದೇವೆ. ನಾನು ಈಗ ನೇರವಾಗಿ ಆದಿಚುಂಚನಗಿರಿ ಮಠಕ್ಕೆ ಹೋಗುತ್ತೇನೆ. ಅವರೇನು ನನ್ನನ್ನು ಅಲ್ಲಿಂದ ಓಡಿಸುವುದಿಲ್ಲ. ಯಾಕೆಂದರೆ ಅವರು ಅತ್ಯಂತ ಶಾಂತ ಸ್ವಭಾವದವರು. ಅವರು ಕೋಪ ಮಾಡಿಕೊಂಡಿದ್ದನ್ನು ಎಂದೂ ಕಂಡಿಲ್ಲ.”

“ನಮ್ಮ ನಾಡಿನಲ್ಲಿ ಎಲ್ಲಾ ಜನಾಂಗಗಳಿಗೂ ಸ್ವಾಮೀಜಿಗಳು ಇದ್ದಾರಲ್ಲವಾ? ಅದು ಸುಳ್ಳಾ? ವೀರಶೈವರಿಗೆ ಒಬ್ಬರು ಸ್ವಾಮೀಜಿ, ದಲಿತರಿಗೊಬ್ಬರು ಸ್ವಾಮೀಜಿ ಇದ್ದಾರೆ. ಮುನ್ನೂರು ಜನ ಸ್ವಾಮೀಜಿಗಳು ನನ್ನ ‘ಟಿಪ್ಪು ನಿಜಕನಸುಗಳು’ ನಾಟಕ ನೋಡಲು ಕಲ್ಬುರ್ಗಿಯಲ್ಲಿ ಬಂದಿದ್ದರು. ನಾನು ಸಂತರಿಗೆ ಗೌರವ ಕೊಡುವ ಸಂಸ್ಕಾರದವನು. ನಾನು ಕಮ್ಯುನಿಸ್ಟ್ ಅಲ್ಲ.ಈ ಚುನಾವಣೆ ಸಂದರ್ಭದಲ್ಲಿ ನಿರ್ಮಲಾನಂದ ಸ್ವಾಮೀಜಿಯವರ ಹೆಸರನ್ನು ಯಾರಾದರೂ ಬಳಸಿಕೊಂಡರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಸಂತರು ಕ್ಷಮಿಸಬಲ್ಲರಲ್ಲವಾ? ಕ್ಷಮಿಸಿ.”

“ಒಕ್ಕಲಿಗರು ಬಂದು ಮುತ್ತಿಗೆ ಹಾಕಿದ್ದಾರೆ ಎನ್ನುತ್ತೀರಿ. ಯಾವ ಒಕ್ಕಲಿಗರು ಎಂದು ನೋಡಬೇಕಲ್ಲವಾ? ಜೆಡಿಎಸ್‌‌ ಒಕ್ಕಲಿಗರಾ? ಕಾಂಗ್ರೆಸ್ ಒಕ್ಕಲಿಗರಾ? ಬಿಜೆಪಿ ಒಕ್ಕಲಿಗರ?- ಇದು ರಾಜಕೀಯ. ಸ್ವಾಮೀಜಿಯವರಲ್ಲಿ ವಿನಂತಿ ಮಾಡುತ್ತೇನೆ. ನಾನು ನಿಮ್ಮಷ್ಟು ದೊಡ್ಡ ವ್ಯಕ್ತಿಯಾಗಲಾರೆ. ಜಾತಿಯನ್ನು ಮೀರಿ ಸ್ವಾಮೀಜಿಗಳು ಬೆಳೆಯಲಿ ಎಂದು ನಾನು ಬಯಸುತ್ತೇನೆ. ನಿರ್ಮಲಾನಂದ ಸ್ವಾಮೀಜಿಯವರು ಬೆಳೆಯಬೇಕೆಂದು ಹೇಳುತ್ತಿಲ್ಲ, ಒಟ್ಟಾರೆ ಸ್ವಾಮೀಜಿಗಳ ಕುರಿತು ಹೇಳುತ್ತಿದ್ದೇನೆ.”

ಇದನ್ನೂ ಓದಿರಿ: ನಿರ್ಮಲಾನಂದನಾಥರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಲ್ಲ: ಅಡ್ಡಂಡ ಕಾರ್ಯಪ್ಪ

“ನಾನು ಮಾತನಾಡಿದ್ದು ತಪ್ಪು ಎಂಬುದಾದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ವಿಷಾದ ಬೇರೆಯಲ್ಲ, ಕ್ಷಮೆ ಬೇರೆಯಲ್ಲ. ಸ್ವಾಮೀಜಿಗಿಂತ ದೊಡ್ಡವನು ನಾನಲ್ಲ. ನಾನು ಸ್ವಾಮೀಜಿಗೆ ಅವಮಾನ ಮಾಡಿಲ್ಲ. ಮಾಡುವುದೂ ಇಲ್ಲ. ನನ್ನ ಹೇಳಿಕೆಯಿಂದ ಅವರ ಭಕ್ತಕೋಟಿಯಲ್ಲಿ ಮುಜುಗರವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನಿರ್ಮಲಾನಂದ ಸ್ವಾಮೀಜಿಯವರಲ್ಲಿ ನಾನು ಕ್ಷಮೆ ಕೋರುತ್ತೇನೆ ಹೊರತು, ಇಲ್ಲಿ ಬಂದು ರಾಜಕೀಯಕ್ಕಾಗಿ ಗಲಾಟೆ ಮಾಡುವವರಲ್ಲಿ ಅಲ್ಲ. ಒಂದು ಪಕ್ಷದ ಹಿಂಬಾಲಕರಲ್ಲಿ ಕ್ಷಮೆ ಕೇಳಲ್ಲ.”

“ನಿರ್ಮಲಾನಂದ ಸ್ವಾಮೀಜಿಯವರ ಬಗ್ಗೆ ನಾನು ಅಪಮಾನಕರವಾಗಿ ಮಾತನಾಡಿಲ್ಲ. ತಿರುಚಲ್ಪಟ್ಟು ಮಾಧ್ಯಮಗಳಲ್ಲಿ ಬಂದರೆ ಅದಕ್ಕೆ ನಾನು ಹೊಣೆಯಲ್ಲ. ನಾನು ಮಾತನಾಡಿದ್ದು ನನ್ನ ಬಳಿ ರೆಕಾರ್ಡ್‌‌ನಲ್ಲಿ ಇದೆ. ನಾನು ಎಲ್ಲ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಲ್ಲ, ಮಾಧ್ಯಮ ಗೋಷ್ಠಿ ನಡೆಸಿ ಹೇಳಿದ್ದಲ್ಲ. ಯಾವುದೋ ಒಂದು ಮಿಡಿಯದವರು ತಮಗೆ ಬೇಕಾದಂತೆ ಬಳಸಿಕೊಂಡು ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರೆ, ಅವರಿಗೆ ಲಾಭವಾಗಿದ್ದರೆ ಧನ್ಯವಾದ. ಆ ಟಿ.ವಿ. ಚಾನೆಲ್‌ ಕೂಡ ಲಾಸ್ ಆಗಬಾರದು.”

-ಈ ಮೇಲಿನ ಮಾತುಗಳನ್ನು ಅಡ್ಡಂಡ ಕಾರ್ಯಪ್ಪ ಅವರು ಖಾಸಗಿ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...