Homeಕರ್ನಾಟಕಒಳಜಗಳದ ಏಟಿನಿಂದ ಪಾಠ ಕಲಿಯದ ಕಾಂಗ್ರೆಸ್ ನಾಯಕರು; ತಪ್ಪು ಸರಿಪಡಿಸುವ ತವಕದಲ್ಲಿ ಕೋಲಾರ ಮತದಾರರು

ಒಳಜಗಳದ ಏಟಿನಿಂದ ಪಾಠ ಕಲಿಯದ ಕಾಂಗ್ರೆಸ್ ನಾಯಕರು; ತಪ್ಪು ಸರಿಪಡಿಸುವ ತವಕದಲ್ಲಿ ಕೋಲಾರ ಮತದಾರರು

- Advertisement -
- Advertisement -

(ಇದು ನ್ಯಾಯಪಥ ಫೆಬ್ರವರಿ 15-29 ಸಂಚಿಕೆಯಲ್ಲಿ ಪ್ರಕಟವಾದ ಬರಹ..)

2019ರ ಲೋಕಸಭಾ ಚುನಾವಣೆಯಲ್ಲಿ ಹಲವು ತಾಪತ್ರಯಗಳ ನಡುವೆಯೂ ಕೋಲಾರ ಬಿಜೆಪಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಎಸ್. ಮುನಿಸ್ವಾಮಿಗೆ ಕಾರ್ಯಕರ್ತರ ಬೆಂಬಲವೇ ಇಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಕಮಲ ಪಕ್ಷದ ದಲಿತ ನಾಯಕರಾದ ಡಿ.ಎಸ್. ವೀರಯ್ಯ, ಛಲವಾದಿ ನಾರಾಯಣಸ್ವಾಮಿ ಮತ್ತು ಚಿ.ನಾ. ರಾಮು ಅವರನ್ನು ಹಿಂದಿಕ್ಕುವ ಮೂಲಕ ಮುನಿಸ್ವಾಮಿ ಬಿ ಫಾರಂ ಪಡೆದುಕೊಂಡಿದ್ದರು. ವಿಶೇಷವೆಂದರೆ, ನಾಮಪತ್ರ ಸಲ್ಲಿಸುವ ಮುಂಚೆ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಜನರೇ ಇರಲಿಲ್ಲ. ಏಳು ಬಾರಿ ಗೆದ್ದು ಸಂಸದರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್. ಮುನಿಯಪ್ಪ ವಿರುದ್ಧ ಮುನಿಸ್ವಾಮಿ ಹೀನಾಯವಾಗಿ ಸೋಲುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಫಲಿತಾಂಶ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು; ಭಾರಿ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ, ಕಾಂಗ್ರೆಸ್‌ನ ಒಳಜಗಳ ಮತ್ತು ಜೆಡಿಎಸ್ ಕೊಟ್ಟ ಒಳೇಟು ಜಗಜ್ಜಾಹೀರಾಗಿತ್ತು.

ಈ ಗೆಲುವು ಸ್ವತಃ ಬಿಜೆಪಿ ನಾಯಕರಿಗೂ ಅಚ್ಚರಿ ಮೂಡಿಸಿತ್ತು. ಏಕೆಂದರೆ, ಕ್ಷೇತ್ರದಲ್ಲಿ ಕಮಲ ಪಕ್ಷಕ್ಕೆ ಪ್ರಬಲ ನಾಯಕರೇ ಇರಲಿಲ್ಲ; ಹೇಳಿಕೊಳ್ಳುವಂತ ಮತಬ್ಯಾಂಕ್ ಕೂಡ ಇರಲಿಲ್ಲ. ದಲಿತ, ರೈತ, ಕನ್ನಡ, ಪ್ರಗತಿಪರ ಚಳವಳಿಗಳಿಗೆ ಹೆಸರುವಾಸಿಯಾಗಿರುವ ಮತ್ತು ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್)ನ ಕಾರ್ಮಿಕ ಹೋರಾಟಗಳ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿತ್ತು.

ಕೆ.ಎಚ್. ಮುನಿಯಪ್ಪ

ರಾಜ್ಯದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಕೋಲಾರವೂ ಒಂದು; ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಗಣಿ ಜಿಲ್ಲೆಯಲ್ಲಿ 1992ರಿಂದ 2014ರ ನಡುವೆ ನಡೆದಿರುವ ಏಳು ಚುನಾವಣೆಗಳಲ್ಲಿ ಸತತವಾಗಿ ಕೆ.ಎಚ್. ಮುನಿಯಪ್ಪ ಗೆಲುವು ಸಾಧಿಸಿದ್ದರು. 2014ರ ಮೋದಿ ಅಲೆಯ ನಡುವೆಯೂ ಅವರು, 344771 ಮತಗಳನ್ನು ಪಡೆದುಕೊಂಡು ಏಳನೇ ಅವಧಿಗೆ ಕೋಲಾರ ಸಂಸದರಾಗಿದ್ದರು. ಆದರೆ, 2019ರ ಚುನಾವಣೆಯಲ್ಲಿ ಅವರು ತಮ್ಮ ಮತಗಳನ್ನು 418926ಕ್ಕೆ ಹೆಚ್ಚಿಸಿಕೊಂಡರೂ, ಮುನಿಸ್ವಾಮಿ ವಿರುದ್ಧ ಭಾರಿ ಅಂತರದಲ್ಲಿ ಸೋಲಬೇಕಾಯಿತು. ಬಿಜೆಪಿ ಪರವಾಗಿ 709165 ಮತ ಚಲಾವಣೆಯಾಗಿದ್ದವು.

ಕೆ.ಎಚ್. ಮುನಿಯಪ್ಪ ಕೋಲಾರದಲ್ಲಿ ’ಸೋಲಿಲ್ಲದ ಸರದಾರ’ ಎನಿಸಿದ್ದರು. ಸತತವಾಗಿ ಏಳು ಬಾರಿ ಸಂಸದರಾಗಿದ್ದ ಅವರು, ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದವರು. ಕೋಲಾರ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲೂ ಜೆಡಿಎಸ್ ಪ್ರಬಲವಾಗಿದ್ದರೂ, ಮುನಿಯಪ್ಪ ಮಾತ್ರ ಅನಾಯಾಸವಾಗಿ ಗೆಲ್ಲುತ್ತಿದ್ದರು. ಅವರ ಗೆಲುವಿನಲ್ಲಿ ಜೆಡಿಎಸ್ ಪಾತ್ರವೂ ಇತ್ತು ಎನ್ನಲಾಗುತ್ತಿದೆ. ಆದರೆ, 2019ರ ಚುನಾವಣೆಯ ಹೊತ್ತಿಗೆ ಕೋಲಾರ ಕಾಂಗ್ರೆಸ್ಸಿನಲ್ಲಿ ಹಲವು ಬಣಗಳು ಮುನಿಯಪ್ಪ ವಿರುದ್ಧ ಸಕ್ರಿಯವಾಗಿದ್ದವು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೊತ್ತೂರು ಮಂಜು ಸೇರಿದಂತೆ ಹಲವರು ಒಟ್ಟಾಗಿ, ಮುನಿಯಪ್ಪ ಅವರನ್ನು ಸೋಲಿಸಿದರು ಎಂಬ ವಿಚಾರ ಈಗ ಗುಟ್ಟಾಗೇನೂ ಉಳಿದಿಲ್ಲ. ಮುನಿಯಪ್ಪ ಅವರು ಕೂಡ ಇಂತಹ ಅಸಮಾಧಾನಿತ ಬಣಗಳನ್ನು ನಿರ್ಲಕ್ಷ್ಯ ಮಾಡಿದ್ದೇ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

’ಒಳಜಾತಿ’ ಜಗಳಕ್ಕೆ ಸೋಲು

ಪರಿಶಿಷ್ಟ ಜಾತಿಯ ಎಡಗೈ (ಮಾದಿಗ) ಸಮುದಾಯಕ್ಕೆ ಸೇರಿದ ಮುನಿಯಪ್ಪ ಅವರಿಗೆ ಕ್ಷೇತ್ರದ ಬಹುಸಂಖ್ಯಾತ ಬಲಗೈ (ಹೊಲೆಯ) ಸಮುದಾಯ ಹಲವು ವರ್ಷಗಳಿಂದ ಬೆಂಬಲ ನೀಡುತ್ತಾ ಬಂದಿದೆ. ಇಲ್ಲಿ ಎಡಗೈ ಸಮುದಾಯದ ಮತಗಳು 95 ಸಾವಿರ ಇದ್ದರೆ, ಬಲಗೈ ಸಮುದಾಯದ 3.20 ಲಕ್ಷ ಮತದಾರರಿದ್ದಾರೆ. ಮುನಿಸ್ವಾಮಿ ಬಲಗೈ ಎಂಬ ಕಾರಣಕ್ಕೆ, ಈ ಮೂರು ಲಕ್ಷಕ್ಕೂ ಹೆಚ್ಚು ಮತದಾರರು ಪಕ್ಷಾತೀತವಾಗಿ ಬಿಜೆಪಿಗೆ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್ ಸೋಲಬೇಕಾಯಿತು ಎಂಬ ಮಾತುಗಳು ಕೂಡ ಚಾಲ್ತಿಯಲ್ಲಿವೆ. ಜೊತೆಗೆ, ಕ್ಷೇತ್ರದಲ್ಲಿ 2.60 ಲಕ್ಷ ಮುಸ್ಲಿಂ ಮತದಾರರಿದ್ದು, ಇಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರ ಮಾತಿನಂತೆ ಮುನಿಯಪ್ಪ ವಿರುದ್ಧ ಮತ ಚಲಾಯಿಸಿದ್ದರು ಎನ್ನಲಾಗುತ್ತಿದೆ.

ಕೋಲಾರ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರಾಜಕೀಯ ಪ್ರಯೋಗಶಾಲೆಯಾಗಿದೆ; ಇಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಆದರೂ ಕಳೆದ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದಿದ್ದಾರೆ.

ಇದೀಗ ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇಲ್ಲಿ ಮತ್ತೊಮ್ಮೆ ಗೆಲುವು ಸಾಧಿಸುವ ತವಕದಲ್ಲಿದೆ. ಕಾಂಗ್ರೆಸ್ ಒಳಜಗಳ ಜೆಡಿಎಸ್ ನಾಯಕರಿಗೆ ವರವಾಗಿ ಕಾಣುತ್ತಿದೆ. ಉಭಯ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಹವಣಿಸುತ್ತಿವೆ. ಕರ್ನಾಟಕದಲ್ಲಿ ಸೀಟು ಹಂಚಿಕೆ ಸಂಬಂಧ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಜತೆಗೆ ಮಾತುಕತೆ ನಡೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಒಟ್ಟು ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದು, ತಮ್ಮ ಪಕ್ಷದ ಮತಬ್ಯಾಂಕ್ ಗಟ್ಟಿಯಾಗಿರುವ ಕೋಲಾರವನ್ನೂ ಕೇಳಿದ್ದಾರೆ ಎನ್ನಲಾಗುತ್ತಿದೆ. ಕೋಲಾರ ಎಂಪಿ ಟಿಕೆಟ್ ಜೆಡಿಎಸ್‌ಗೆ ಎಂಬ ಮಾತುಗಳು ಕ್ಷೇತ್ರದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಕೋಲಾರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಹಿಂದಿನ ಸಾಧನೆಗಳು ಮತ್ತು 2.95 ಲಕ್ಷ ಒಕ್ಕಲಿಗ ಮತದಾರರ ದಾಖಲೆಯನ್ನು ಬಿಜೆಪಿ ಹೈಕಮಾಂಡ್ ಮುಂದಿಟ್ಟಿರುವ ಜೆಡಿಎಸ್ ನಾಯಕರು, ಕ್ಷೇತ್ರವನ್ನು ತಮಗೇ ಬಿಟ್ಟುಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ಕ್ಷೇತ್ರದಲ್ಲಿಯೂ ಕೂಡ ಇದೇ ಮಾತುಗಳು ಕೇಳಿಬರುತ್ತಿವೆ.

ಸಿಎಂ ಮುನಿಯಪ್ಪ

ಈ ಎಲ್ಲ ಬೆಳವಣಿಗೆಗಳ ನಡುವೆ ಕೋಲಾರ ಕಾಂಗ್ರೆಸ್ಸಿನಲ್ಲಿನ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ರಮೇಶ್ ಕುಮಾರ್, ಸಚಿವ ಎಂಸಿ ಸುಧಾಕರ್ ಮತ್ತು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು, ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ಕೊಡುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗುತ್ತಿದೆ. ಇವರೆಲ್ಲರೂ ಸೇರಿ ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ, ಪತ್ರಕರ್ತ, ಕಾಂಗ್ರೆಸ್ ಮುಖಂಡ ಸಿಎಂ ಮುನಿಯಪ್ಪ ಅವರ ಹೆಸರನ್ನು ರಾಜ್ಯ ನಾಯಕರು ಮತ್ತು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ದಲಿತ ಚಳವಳಿಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಸಿಎಂ ಮುನಿಯಪ್ಪ ಅವರು, ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ತಿಂಗಳು ಕೋಲಾರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕೆ.ಎಚ್. ಮುನಿಯಪ್ಪ ಮತ್ತು ಕೊತ್ತೂರು ಮಂಜುನಾಥ್ ಬೆಂಬಲಿಗರು ಬಡಿದಾಡಿಕೊಂಡಿದ್ದಾರೆ. ಕಾಂಗ್ರೆಸ್ ಸಭೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿ ತಮ್ಮ ನಾಯಕರ ಫೋಟೋ ಹಾಕಿಲ್ಲ ಎನ್ನುವ ಕಾರಣಕ್ಕೆ, ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗನ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಮಾಧ್ಯಮಗಳ ಮುಂದೆಯೇ ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆಯಿತು.

ಕೋಲಾರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬೂತ್ ಮಟ್ಟದ ಏಜೆಂಟರ ಸಭೆಯಲ್ಲಿ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ನಮ್ಮ ನಾಯಕರ ಫೋಟೋವನ್ನು ಫ್ಲೆಕ್ಸ್‌ನಲ್ಲಿ ಹಾಕಿಲ್ಲ ಎನ್ನುವ ಕಾರಣ ಮುಂದಿಟ್ಟು ಜಗಳ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದವರನ್ನ ವೇದಿಕೆಯಲ್ಲಿ ಕೂರಿಸಲಾಗಿದೆ ಎಂಬ ಕಾರಣಕ್ಕೂ ಜಗಳ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳು ಇರುವ ಹೊತ್ತಿನಲ್ಲಿಯೂ ಪಕ್ಷದೊಳಗಿನ ಭಿನ್ನಮತ ಶಮನವಾಗದೆ ಇರುವುದು ಜೆಡಿಎಸ್‌ಗೆ ವರದಾನವಾಗಿ ಕಾಣುತ್ತಿದೆ.

ಕೆ.ಎಚ್. ಮುನಿಯಪ್ಪ ಹೊರಗಿಡುವುದಕ್ಕೆ ರಹಸ್ಯ ಕಾರ್ಯಾಚರಣೆ

ಕೆ. ಎಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕರು; ದೇವನಹಳ್ಳಿಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಅವರ ಫೋಟೋವನ್ನು ಇಲ್ಲೇಕೆ ಹಾಕಬೇಕು ಎಂಬುದು ಮುನಿಯಪ್ಪ ವಿರೋಧಿ ಬಣದ ವಾದವಾಗಿದೆ. ಸತತ ಏಳು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿರುವ ಮುನಿಯಪ್ಪ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಗೆದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾರೆ. ಆದರೆ, ತಾನು ಮೂರು ದಶಕಗಳ ಕಾಲ ಪ್ರತಿನಿಧಿಸಿ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಿಲ್ಲದ ಅವರು, ಕೋಲಾರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ’ಟಿಕೆಟ್ ನನಗಾದರೂ ಕೊಡಿ; ಇಲ್ಲದಿದ್ದರೆ ನನ್ನ ಕುಟುಂಬದ ಯಾರಿಗಾದರೂ ಕೊಡಿ’ ಎಂದು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.

ಕೊತ್ತೂರು ಮಂಜುನಾಥ್

ಆದರೆ, ಕೋಲಾರ ಕ್ಷೇತ್ರದಲ್ಲಿ ಮುನಿಯಪ್ಪ ಕುಟುಂಬ ಈಗಾಗಲೇ ರಾಜಕಾರಣ ಮಾಡುತ್ತಿದೆ; ಸ್ವತಃ ಅವರೇ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದು, ಅವರ ಪುತ್ರಿ ಕೆಜಿಎಫ್ ಶಾಸಕಿಯಾಗಿ, ಬೋರ್ಡ್ ಒಂದಕ್ಕೆ ಅಧ್ಯಕ್ಷರಾಗಿದ್ದಾರೆ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮುನಿಯಪ್ಪ ವಿರೋಧಿ ಬಣ ಪಟ್ಟು ಹಿಡಿದಿದೆ.

ತಪ್ಪು ಸರಿಪಡಿಸಿಕೊಳ್ಳುವ ತವಕದಲ್ಲಿ ಕೋಲಾರ ಜನತೆ

ಏಳು ಬಾರಿ ಕ್ಷೇತ್ರದ ಸಂಸದರಾಗಿ, ಕೇಂದ್ರ ಸಚಿವರಾಗಿ ಕೆ.ಎಚ್. ಮುನಿಯಪ್ಪ ಮಾಡಿದ ಕೆಲಸದ ಬಗ್ಗೆ ಕ್ಷೇತ್ರದ ಜನತೆಗೆ ಅಸಮಾಧಾನವಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಜನಸಾಮಾನ್ಯರ ಕೈಗೆ ಸಿಗುತ್ತಿರಲಿಲ್ಲ ಎಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಸಂಸದರಿದ್ದಾರೆ ಎಂಬುದೇ ಹಲವರಿಗೆ ಗೊತ್ತಾಗುತ್ತಿರಲಿಲ್ಲ. ಆದರೂ, ಮುನಿಯಪ್ಪ ಸತತವಾಗಿ ಏಳು ಬಾರಿ ಗೆದ್ದಿದ್ದಾರೆ. ಆದರೆ, 2019ರ ಚುನಾವಣೆಯಲ್ಲಿ ಮುನಿಯಪ್ಪ ವಿರುದ್ಧ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿತ್ತು. ಇದರಿಂದ ಅಹಿಂದ ಜನರೂ ಕೂಡ ಬಿಜೆಪಿಗೆ ಮತ ಹಾಕಿದ್ದರು.

ರಮೇಶ್ ಕುಮಾರ್

ಮುನಿಯಪ್ಪ ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದ ಎಸ್. ಮುನಿಸ್ವಾಮಿ, ಅದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರೂ ಆಗಿದ್ದರು. ಬೆಂಗಳೂರು ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಅವರ ವಿರುದ್ಧ ರೌಡಿ ಶೀಟರ್ ಫೈಲ್ ಕೂಡ ಓಪನ್ ಆಗಿತ್ತು. ಅಚಾನಕ್ಕಾಗಿ ಗೆದ್ದ ಮುನಿಸ್ವಾಮಿಯವರು ಕೋಲಾರದಲ್ಲಿ ’ಹಿಂದುತ್ವ’ ರಾಜಕೀಯ ಆರಂಭಿಸಿದರು. ಕೋಲಾರದ ಪ್ರಮುಖ ಗಡಿಯಾರ ಗೋಪುರದ ಹಸಿರು ಬಣ್ಣ ಒಂದು ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ಸಂಸದ, ಅದಕ್ಕೆ ತ್ರಿವರ್ಣ ಬಣ್ಣ ಬಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನಗರದ ಮುಸ್ಲಿಂ ಸಮುದಾಯ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ವಿವಾದ ಬೇಡ ಎಂದು ತಾವೇ ಮುಂದೆ ನಿಂತು ಬಣ್ಣ ಬದಲಿಸುವುದಕ್ಕೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆ.ಸುಧಾಕರ್ ಸ್ಪರ್ಧೆಗೆ ಬಿಜೆಪಿಯಲ್ಲೆ ವಿರೋಧ; ಮೌನಕ್ಕೆ ಶರಣಾದ ’ದಳಪತಿ’ಗಳು; ಯುವ ನಾಯಕ ರಕ್ಷಾ…

ಇಷ್ಟಕ್ಕೆ ಸುಮ್ಮನಾಗದ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ನಾಯಕರು ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುವುದನ್ನು ಮುಂದುವರಿಸಿದರು. ಕ್ಷೇತ್ರದಲ್ಲಿ ಮೊದಲ ಬಾರಿಗೆ ಹಿಂದುತ್ವ ರಾಜಕಾರಣ ಮುನ್ನಲೆಗೆ ಬಂದಿತ್ತು. ಸಾಲದ್ದಕ್ಕೆ, ಸರ್ಕಾರದ ವೇದಿಕೆ ಮೇಲೆಯೇ ಕಾಂಗ್ರೆಸ್ ಶಾಸಕರ ಜೊತೆಗೆ ಜಗಳ ತೆಗೆದು ಸುದ್ದಿಯಾಗಿದ್ದರು. ಸಂಸದರ ಈ ಆಟಾಟೋಪಗಳನ್ನು ಗಮನಿಸಿರುವ ಕ್ಷೇತ್ರದ ಅಹಿಂದ ಮತದಾರರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಮುನಿಸ್ವಾಮಿಗೆ ಟಿಕೆಟ್ ಕೊಟ್ಟರೆ ಮತ ಚಲಾಯಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಹಿಂದುತ್ವ ಕಾರ್ಯಕರ್ತರು ಮುನಿಸ್ವಾಮಿ ಬೆಂಬಲಕ್ಕೆ ನಿಂತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯಾರು?

ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಪುತ್ರ ಅಥವಾ ಅಳಿಯನಿಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ಸಿಎಂ ಮುನಿಯಪ್ಪ ಅವರ ಹೆಸರನ್ನು ಮುಂದಿಟ್ಟಿದೆ. ಇನ್ನೂ ಹಲವು ಕಾಂಗ್ರೆಸ್ ನಾಯಕರು ಟಿಕೆಟ್ ಕೇಳುತ್ತಿದ್ದಾರೆ. ಎರಡೂ ಬಣಗಳ ನಡುವೆ ಜಗಳ ಜೋರಾಗಿರುವುದರಿಂದ, ಮೂರನೇ ಬಣದ ಯಾರಿಗಾದರೂ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿ ಆಯ್ಕೆ ಸಂಬಂಧ ಸಮೀಕ್ಷೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೊಸ ಮುಖವನ್ನು ಕಣಕ್ಕಿಳಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ರಾಜ್ಯ ನಾಯಕರು ಎರಡೂ ಬಣಗಳಿಗೆ ತಾಕೀತು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೈತ್ರಿ ಟಿಕೆಟ್ ಯಾವ ಪಕ್ಷಕ್ಕೆ?

ಹಾಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ’ಯಾರಿಗೆ ಟಿಕೆಟ್ ನೀಡಬೇಕು ಎಂದು ನಿರ್ಧರಿಸಲು ಪಕ್ಷದ ವರಿಷ್ಠರು ಸಮೀಕ್ಷೆ ನಡೆಸಿದ್ದಾರೆ. ಐದು ವರ್ಷಗಳಿಂದ ಕೋಲಾರ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸ ನಡೆದಿದೆ ಎಂಬುದು ರಾಜ್ಯ, ರಾಷ್ಟ್ರ ವರಿಷ್ಠರಿಗೆ ಮಾಹಿತಿ ಇದೆ. ಕೆಲ ಮಾಧ್ಯಮಗಳು ’ಬಿ’ ಫಾರಂ ಆಗಲೇ ಬಂತೆಂದು ಸುದ್ದಿ ಪ್ರಕಟಿಸುತ್ತಿವೆ. ನನ್ನ ಅವಧಿಯೇ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಕೆಲವರು ತಮಗೆ ಟಿಕೆಟ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರೂ ಟಿಕೆಟ್ ಕುರಿತು ಚರ್ಚಿಸಿಲ್ಲ. ಆದರೆ, ರಾಮಭಕ್ತರಿಗೆ ಅನ್ಯಾಯ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಎಸ್ ಮುನಿಸ್ವಾಮಿ

ಆದರೆ, ಕೋಲಾರ ಟಿಕೆಟ್ ದಳಕ್ಕೆ ಸಿಕ್ಕೇಸಿಗುತ್ತದೆ ಎಂದು ಜೆಡಿಎಸ್ ನಾಯಕರು ವಿಶ್ವಾಸದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ಮುನಿಸ್ವಾಮಿ ಗೆಲುವು ಮತ್ತು ಅದಕ್ಕೂ ಮುಂಚೆ ಮುನಿಯಪ್ಪ ಗೆಲುವಿನಲ್ಲಿ ಜೆಡಿಎಸ್ ಪಕ್ಷದ ಪಾತ್ರವನ್ನು ಬಿಜೆಪಿ ಹೈಕಮಾಂಡ್ ಮುಂದಿಟ್ಟು ದಳಪತಿಗಳು ಟಿಕೆಟ್ ಕೇಳಿದ್ದಾರೆ. ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್ ಅವರು ಕೋಲಾರದ ಜೆಡಿಎಸ್ ಲೋಕಸಭಾ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈವರೆಗೆ ಒಮ್ಮೆ ಮಾತ್ರ, 1984ರಲ್ಲಿ ಜೆಡಿಎಸ್ ಕೋಲಾರದಲ್ಲಿ ಗೆದ್ದಿದೆ. ಆ ನಂತರ ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡಿದೆ. ಸಾಲದ್ದಕ್ಕೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಬಹುಪಾಲು ಮತಗಳು ಬಿಜೆಪಿಗೆ ಚಲಾವಣೆಯಾಗಿವೆ ಎಂದು ಜನ ಮಾತನಾಡುತ್ತಿದ್ದಾರೆ. ಕೋಲಾರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಶಿಡ್ಲಘಟ್ಟ, ಚಿಂತಾಮಣಿ ಮತ್ತು ಮುಳಬಾಗಿಲಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಬಿಜೆಪಿ ಒಂದು ಕ್ಷೇತ್ರದಲ್ಲೂ ಗೆದ್ದಿಲ್ಲ. (ಈಗ ಜೆಡಿಎಸ್ ಕೋಲಾರಕ್ಕೆ ಮಲ್ಲೇಶ್ ಬಾಬು ಅಭ್ಯರ್ಥಿಯಾಗಲಿದ್ದಾರೆ ಎಂದು ಗೋಷಿಸಿದ್ದರೂ, ಅದು ಬದಲಾಗುವ ಸಾಧ್ಯತೆಯಿದೆ, ನಿಸರ್ಗ ನಾರಾಯಣಸ್ವಾಮಿಯವರಿಗೆ ಟಿಕೆಟ್ ಸಿಗಲಿದೆ ಎಂಬ ವದಂತಿಗಳೂ ಚಾಲ್ತಿಯಲ್ಲಿವೆ.)

ಜಾತಿ ಲೆಕ್ಕಾಚಾರ ಏನು ಹೇಳುತ್ತದೆ?

ಕೋಲಾರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 1708565 ಲಕ್ಷ ಮತದಾರರಿದ್ದಾರೆ. ಅದರಲ್ಲಿ 2.95 ಲಕ್ಷ ಒಕ್ಕಲಿಗ, 3.20 ಲಕ್ಷ ಪರಿಶಿಷ್ಟ ಜಾತಿ ಬಲಗೈ, 95 ಸಾವಿರ ಪರಿಶಿಷ್ಟ ಜಾತಿ ಎಡಗೈ, 90 ಸಾವಿರ ಭೋವಿ, 16 ಸಾವಿರ ಕೊರಚ, ಕೊರಮ, ಲಂಬಾಣಿ ಮತದಾರರು, 8 ಸಾವಿರ ಪಿಚ್ಚಾಗುಂಟ ಸನ್ಯಾಸಿ, ಬೈರಾಗಿ, 1.10 ಲಕ್ಷ ಪರಿಶಿಷ್ಟ ಪಂಗಡ, 2.60 ಲಕ್ಷ ಮುಸ್ಲಿಂ, 40 ಸಾವಿರ ಕ್ರಿಶ್ಚಿಯನ್, 1.20 ಲಕ್ಷ ಕುರುಬ, 60 ಸಾವಿರ ಬಲಿಜ, 52 ಸಾವಿರ ಯಾದವ ಮತ್ತು ಗೊಲ್ಲ, 48 ಸಾವಿರ ತಿಗಳ, 22 ಸಾವಿರ ಲಿಂಗಾಯತ, 17 ಸಾವಿರ ಬ್ರಹ್ಮಣ, 20 ಸಾವಿರ ವೈಶ್ಯ, 8 ಸಾವಿರ ಜೈನ, 19 ಸಾವಿರ ಗಾಣಿಗ, 23 ಸಾವಿರ ಸವಿತ ಸಮಾಜ, 12 ಸಾವಿರ ಬೆಸ್ತ, 16 ಸಾವಿರ ಮಡಿವಾಳ, 15 ಸಾವಿರ ಕುಂಬಾರ, 11 ಸಾವಿರ ಉಪ್ಪಾರ, 10 ಸಾವಿರ ವಿಶ್ವಕರ್ಮ, 8 ಸಾವಿರ ಕ್ಷತ್ರಿಯ, 6 ಸಾವಿರ ಕಮ್ಮ ನಾಯ್ಡು, ಇತರೆ ಸಮುದಾಯದ 7565 ಮತದಾರರಿದ್ದಾರೆ.

ಒಂದು ವೇಳೆ ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಪಕ್ಷಕ್ಕೆ ಟಿಕೆಟ್ ಖಚಿತವಾದರೆ ಒಕ್ಕಲಿಗರ ಸಿಂಹಪಾಲು ಮತಗಳು ಅವರಿಗೆ ಚಲಾವಣೆಯಾಗುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರ ಹಾಗೂ ’ಹಿಂದ’ ಮತದಾರರನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಹೈಕಮಾಂಡ್ ದಳಕ್ಕೆ ಕ್ಷೇತ್ರ ಬಿಟ್ಟುಕೊಟ್ಟರೆ, ಕಾಂಗ್ರೆಸ್-ದಳದ ನಡುವೆ ತೀವ್ರ ಪೈಪೋಟಿ ಏರ್ಪಡುತ್ತದೆ ಎನ್ನುತ್ತಾರೆ ಸ್ಥಳೀಯರು. ಬಿಜೆಪಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮುನಿಯಪ್ಪ ಕುಟುಂಬ ಮತ್ತು ರಮೇಶ್ ಕುಮಾರ್ ಬಣ ಹೊರತುಪಡಿಸಿ, ಪರಿಶಿಷ್ಟ ಜಾತಿಯ ಎಡಗೈ ಅಥವಾ ಬಲಗೈ ಯಾವುದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕಾಂಗ್ರೆಸ್ಸಿಗೆ ಗೆಲುವು ಸುಲಭ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಮಹಿಳಾ ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಗ್ಯಾರಂಟಿ ಕೈ ಹಿಡಿಯುವ ಜೊತೆಗೆ, ಅತ್ಯಧಿಕ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರವಿದೆ.

ಪಕ್ಷಾವಾರು ಶಾಸಕರ ಬಲಾಬಲ

ಶಿಡ್ಲಘಟ್ಟ- ಜಾತ್ಯತೀತ ಜನತಾದಳ (ಜೆಡಿಎಸ್)
ಚಿಂತಾಮಣಿ- ಕಾಂಗ್ರೆಸ್
ಶ್ರೀನಿವಾಸಪುರ- ಜಾತ್ಯತೀತ ಜನತಾದಳ (ಜೆಡಿಎಸ್)
ಮುಳಬಾಗಿಲು (ಎಸ್ಸಿ)- ಜಾತ್ಯತೀತ ಜನತಾದಳ (ಜೆಡಿಎಸ್)
ಕೋಲಾರ್ ಗೋಲ್ಡ್ ಫೀಲ್ಡ್ (ಎಸ್ಸಿ)- ಕಾಂಗ್ರೆಸ್
ಬಂಗಾರಪೇಟೆ (ಎಸ್ಸಿ)- ಕಾಂಗ್ರೆಸ್
ಕೋಲಾರ- ಕಾಂಗ್ರೆಸ್
ಮಾಲೂರು- ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...