Homeಕರ್ನಾಟಕಚಿಕ್ಕಬಳ್ಳಾಪುರ: ಕೆ.ಸುಧಾಕರ್ ಸ್ಪರ್ಧೆಗೆ ಬಿಜೆಪಿಯಲ್ಲೆ ವಿರೋಧ; ಮೌನಕ್ಕೆ ಶರಣಾದ ’ದಳಪತಿ’ಗಳು; ಯುವ ನಾಯಕ ರಕ್ಷಾ ರಾಮಯ್ಯ...

ಚಿಕ್ಕಬಳ್ಳಾಪುರ: ಕೆ.ಸುಧಾಕರ್ ಸ್ಪರ್ಧೆಗೆ ಬಿಜೆಪಿಯಲ್ಲೆ ವಿರೋಧ; ಮೌನಕ್ಕೆ ಶರಣಾದ ’ದಳಪತಿ’ಗಳು; ಯುವ ನಾಯಕ ರಕ್ಷಾ ರಾಮಯ್ಯ ಸ್ಪರ್ಧೆಗೆ ಕಾಂಗ್ರೆಸ್ ಮುಖಂಡರ ಒಲವು

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಕಾವು ನಿಧಾನಕ್ಕೆ ಬಿಸಿಯೇರುತ್ತಿದೆ. ರಾಜ್ಯದಲ್ಲಿರುವ 28 ಸೀಟುಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ; ಹಲವು ಸಂಸದರು 2024ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಅವರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡರು ಒಬ್ಬರು.

ತಮ್ಮ ರಾಜಕೀಯ ಕಡುವೈರಿ ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿಗೆ ಕರೆತಂದಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಸಿಟ್ಟಿಗೆದ್ದಿದ್ದ ಬಿ.ಎನ್. ಬಚ್ಚೇಗೌಡರು, ಹೊಸಕೋಟೆಯಲ್ಲಿ ತಮ್ಮ ರಾಜಕೀಯ ’ಶತ್ರು’ವಿಗೆ ಬಿಜೆಪಿ ಟಿಕೆಟ್ ನೀಡಿದ ನಂತರ ಮತ್ತಷ್ಟು ಕೆರಳಿದ್ದರು. ಅಂದಿನಿಂದ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಮತ್ತೊಂದು ಕಡೆ ಅವರ ಪುತ್ರ ಶರತ್ ಬಚ್ಚೇಗೌಡ ಈಗ ಕಾಂಗ್ರೆಸ್ ಸೇರಿ, ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿ ಶಾಸಕರಾಗಿದ್ದಾರೆ.

ಬಿ.ಎನ್. ಬಚ್ಚೇಗೌಡ

ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್. ಬಚ್ಚೇಗೌಡರು, 2014ರಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ವಿರುದ್ಧ ಸೋತರೆ, 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೊಯ್ಲಿಯವರನ್ನು ಮಣಿಸಿ ಸಂಸದರಾಗಿದ್ದರು. ಮೈತ್ರಿ ಸರ್ಕಾರ ಉರುಳಿದ ನಂತರ ಬಿಜೆಪಿ ಜತೆಗಿನ ಬಚ್ಚೇಗೌಡರ ಹಳಸಿದ ಸಂಬಂಧ ಹಾಗೂ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರಿಂದ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಎದ್ದಿದೆ!

2023ರ ವಿಧಾನಸಭಾ ಚುಣಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಹಲವು ಬಿಜೆಪಿ ಮಾಜಿ ಮಂತ್ರಿಗಳು, ರಾಜ್ಯದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಗಿಟ್ಟಿಸಲು ಹವಣಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿಯ ಹಾಲಿ-ಮಾಜಿ ಶಾಸಕರು ಭಾರೀ ಲಾಬಿ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲು ಕಂಡ ಮಾಜಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ. ಕಳೆದ ವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಿ ಕೇಸರಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ದೆಹಲಿಯಿಂದ ವಾಪಸಾದ ಬಳಿಕ ಪ್ರಚಾರ ಕಾರ್ಯದಲ್ಲಿ ಬಿರುಸಾಗಿ ತೊಡಗಿಸಿಕೊಂಡಿದ್ದಾರೆ.

ಬೆಂಬಲಿಗರಿಗೆ ಧೈರ್ಯ ತುಂಬಿರುವ ಸುಧಾಕರ್, ’ಪಕ್ಷದಿಂದ ನನಗೆ ಗ್ರೀನ್ ಸಿಗ್ನಲ್’ ಸಿಕ್ಕಿದೆ ಎಂದು ಹೇಳಿದ್ದಾರೆ. ಮಾಜಿ ಸಚಿವರು ಮಾತಿಗೆ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕೆರಳಿದ್ದು, ’ಸುಧಾಕರ್ ಅವರಿಗೆ ಬಿಜೆಪಿಯೊಳಗಿನ ಶಿಸ್ತು, ನೀತಿ ನಿಯಮಗಳ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಏಕೆಂದರೆ, ವಿಶ್ವನಾಥ್ ಸಹ ತಮ್ಮ ಪುತ್ರ ಅಲೋಕ್‌ಗೆ ಟಿಕೆಟ್ ಕೊಡಿಸಲು ಪ್ರಯತ್ನ ಮುಂದುವರಿಸಿದ್ದು, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಹೊಸಕೋಟೆಯ ತಮ್ಮ ಬೆಂಬಲಿಗರ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗಿದೆ.

ಸುಧಾಕರ್ ಸ್ಪರ್ಧೆಗೆ ಬಿಜೆಪಿಯಲ್ಲೆ ವಿರೋಧ

ರಾಜ್ಯದಲ್ಲಿ ಈಗ ’ಕಮಲ-ದಳ’ ಮೈತ್ರಿಯಾಗಿದ್ದು, ಚಿಕ್ಕಬಳ್ಳಾಪುರ ಎಂಪಿ ಕ್ಷೇತ್ರದ ಟಿಕೆಟ್ ಯಾವ ಪಕ್ಷಕ್ಕೆ ಎಂಬ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಆದರೆ, ಬಿಜೆಪಿ ಆಕಾಂಕ್ಷಿಗಳು ಮಾತ್ರ ಟಿಕೆಟ್ ತಮ್ಮ ಪಕ್ಷಕ್ಕೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದು, ಮಾಜಿ ಸಚಿವ ಸುಧಾಕರ್ ಹಾಗೂ ಶಾಸಕ ವಿಶ್ವನಾಥ್ ಈಗಾಗಲೇ ಟಿಕೆಟ್ ದಕ್ಕಿಸಿಕೊಳ್ಳಲು ಲಾಭಿ ನಡೆಸುತ್ತಿದ್ದಾರೆ. ಇತ್ತ ’ದಳಪತಿ’ಗಳಿಂದ ಯಾವುದೇ ಸೂಚನೆ ಸಿಗದ ಎರಡು ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಬಿದ್ದಿದ್ದಾರೆ.

’ತಾನು ಈ ಹಿಂದೆ ಬಿಜೆಪಿಯಲ್ಲಿ ಮಂತ್ರಿಯಾಗಿದ್ದವನು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಲ್ಲಿ ನಾನೂ ಒಬ್ಬ. ಚಿಕ್ಕಬಳ್ಳಾಪುರ ಚುನಾವಣೆಯಲ್ಲಿ ಬಿಜೆಪಿಯವರೇ ನನ್ನನ್ನು ಸೋಲಿಸಿದ್ದಾರೆ. ಆದ್ದರಿಂದ, ನನಗೆ ಎಂಪಿ ಟಿಕೆಟ್ ಕೊಡಬೇಕು’ ಎಂದು ಸುಧಾಕರ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆ ಸೋಲಿನ ನಂತರ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಸುಧಾಕರ್, ಇದೀಗ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಹುರುಪು ಪಡೆದುಕೊಂಡಿದ್ದಾರೆ; ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಎಸ್.ಆರ್ ವಿಶ್ವನಾಥ್

ಮತ್ತೊಂದು ಕಡೆ, ತಮ್ಮ ಪುತ್ರ ಅಲೋಕ್‌ನನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ, ಮೋದಿ ಹಾಗೂ ಶ್ರೀರಾಮನ ಅಲೆಯಲ್ಲಿ ಮಗನನ್ನು ಎಂಪಿಯನ್ನಾಗಿ ಮಾಡಲು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪ್ರಯತ್ನ ನಡೆಸುತ್ತಿದ್ದಾರೆ. ಸುಧಾಕರ್ ಮಾತಿಗೆ ತಿರುಗೇಟು ಕೊಟ್ಟಿರುವ ವಿಶ್ವನಾಥ್, ’ಅವರ ಈ ಹೇಳಿಕೆ ಸರಿಯಲ್ಲ; ಹೈಕಮಾಂಡ್ ಘೋಷಣೆಗೂ ಮುನ್ನ ಯಾರೂ ಅಭ್ಯರ್ಥಿ ಎಂದು ಹೇಳಿಕೊಳ್ಳಬೇಡಿ’ ಎಂದು ಕಿಡಿಕಾರಿದ್ದಾರೆ.

ಜೊತೆಗೆ, ಸುಧಾಕರ್ ವರ್ತನೆಗೆ ಬಿಜೆಪಿ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದಾರೆ. ಎಂಪಿ ಟಿಕೆಟ್ ತನಗೆ ಸಿಗುತ್ತದೆ ಎಂದು ಪ್ರಚಾರ ಆರಂಭಿಸಿರುವ ಮಾಜಿ ಸಚಿವರ ನಡೆಗೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ತಮ್ಮ ಹೆಸರು ಹೇಳದೆ ಮಾತನಾಡಿದ ದೇವನಹಳ್ಳಿ ಬಿಜೆಪಿ ಮುಖಂಡರೊಬ್ಬರು, “ಸುಧಾಕರ್ ಬಗ್ಗೆ ಕ್ಷೇತ್ರದ ಜನತೆಗೆ ಒಳ್ಳೆಯ ಅಭಿಪ್ರಾಯವಿಲ್ಲ. ಸಚಿವರಾಗಿದ್ದಾಗ ಅವರ ಸರ್ವಾಧಿಕಾರಿ ಧೋರಣೆ, ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಕಾರ್ಯಕರ್ತರ ನಿರ್ಲಕ್ಷ್ಯ ಹಾಗೂ ಅವರ ಮೇಲೆ ಕೇಳಿಬಂದಿರುವ ಕೋವಿಡ್ ಭ್ರಷ್ಟಾಚಾರ ಆರೋಪದ ಕಾರಣಕ್ಕೆ ಸೋಲು ಕಂಡಿದ್ದಾರೆ. ಪಕ್ಷ ಅವರನ್ನು ಬಿಟ್ಟು, ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಸರಿ, ಮೋದಿ ಜನಪ್ರಿಯತೆ ಹಾಗೂ ಅವರ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತೇವೆ” ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಾ ಬಂದಿದೆ; ಇಲ್ಲಿ ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಈ ಎಂಪಿ ಕ್ಷೇತ್ರದಲ್ಲಿ 1996ರಲ್ಲಿ ಒಮ್ಮೆ ಮಾತ್ರ ಜನತಾದಳದಿಂದ ಆರ್.ಎಲ್. ಜಾಲಪ್ಪ ಸಂಸದರಾಗಿದ್ದರು. ಆ ನಂತರ ಸ್ಪರ್ಧಿಸಿದ ಯಾವ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಂಡಿಲ್ಲ. 2014ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಡಿ. ಕುಮಾರಸ್ವಾಮಿ, 3,46,339 ಮತಗಳನ್ನು (ಶೇ. 27.40) ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಕಾಂಗ್ರೆಸ್‌ನ ಎಂ ವೀರಪ್ಪ ಮೊಯ್ಲಿ 4,24,800 ಮತಗಳನ್ನು ಪಡೆದು ಗೆದ್ದರೆ, ಬಿಜೆಪಿಯ ಬಿ.ಎನ್. ಬಚ್ಚೇಗೌಡ ಮೋದಿ ಅಲೆಯಲ್ಲಿ 4,15,280 ಮತ ಪಡೆದು ರನ್ನರ್ ಅಪ್ ಆಗಿದ್ದರು.

ಎಚ್.ಡಿ. ಕುಮಾರಸ್ವಾಮಿ

ಇದೀಗ ಎನ್‌ಡಿಎ ಜತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ರಾಜ್ಯದಲ್ಲಿ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದ್ದು, ಅದರಲ್ಲಿ ಚಿಕ್ಕಬಳ್ಳಾಪುರವೂ ಸೇರಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಚಿಕ್ಕಬಳ್ಳಾಪುರ ಟಿಕೆಟ್ ಜೆಡಿಎಸ್‌ಗೆ ಖಚಿತವಾದರೆ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದೇವೇಗೌಡರ ಕುಟುಂಬ ಹೊರತುಪಡಿಸಿ ಇನ್ಯಾವುದೇ ಅಭ್ಯರ್ಥಿ ದಳದಿಂದ ನಿಂತರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ ಇಲ್ಲಿನ ಜೆಡಿಎಸ್ ಕಾರ್ಯಕರ್ತರು. ಆದರೆ, ಕುಮಾರಸ್ವಾಮಿಯವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತೂ ಬಿರುಸಾಗಿ ಹರಡುತ್ತಿದೆ.

ಕ್ಷೇತ್ರ ’ಕೈ’ವಶ ಮಾಡಿಕೊಳ್ಳುವ ಹುರುಪಿನಲ್ಲಿ ಕಾಂಗ್ರೆಸ್

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ (ಕ್ಷೇತ್ರ ಮರುವಿಂಗಣೆಯಾಗುವ ಮುಂಚಿನಿಂದ) ಚುನಾವಣೆಗಳಲ್ಲಿ 1996ರಲ್ಲಿ ಜೆಡಿಎಸ್ ಮತ್ತು 2019ರಲ್ಲಿ ಬಿಜೆಪಿ ಗೆದ್ದಿದೆ; ಉಳಿದಂತೆ ಕಾಂಗ್ರೆಸ್ ತನ್ನ ನಾಗಾಲೋಟ ಮುಂದುವರಿಸಿತ್ತು. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವಾದರೂ ಸಹ ಹಿಂದುಳಿದ ಸಮುದಾಯದ (ಒಬಿಸಿ) ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಷ್ಟರಮಟ್ಟಿಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಎಂ ವೀರಪ್ಪ ಮೊಯ್ಲಿ ಅವರು 2009ರಲ್ಲಿ 3,90,500, 2014ರಲ್ಲಿ 4,24,800, 2019ರ ಚುನಾವಣೆಯಲ್ಲಿ 5,63,802 ಮತಗಳನ್ನು ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಕಾಂಗ್ರೆಸ್‌ನ ಮತಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್‌ನ ಮತ ಪ್ರಮಾಣ ಸ್ಥಿರವಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರಿಲ್ಲ ಯಾಕೆ?

2019ರ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಕ್ಷೇತ್ರವನ್ನು ’ಕೈ’ಗೆ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್‌ಗೆ ಚಲಾವಣೆಯಾಗುತ್ತಿದ್ದ ಒಂದೊಷ್ಟು ಮತಗಳು, ಬಿಜೆಪಿಯ ಬಿ.ಎನ್. ಬಚ್ಚೇಗೌಡರಿಗೆ ಪಾಲಾಗಿದ್ದರಿಂದ ವೀರಪ್ಪ ಮೊಯ್ಲಿ ಸೋಲಬೇಕಾಯಿತು. ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದಾರೆ; ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಅವರ ಬೆಂಬಲವೂ ಕಾಂಗ್ರೆಸ್ಸಿಗೆ ಇದೆ ಎನ್ನಲಾಗುತ್ತಿದೆ. ಆದರೆ, ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಲಹಂಕ ಮತ್ತು ದೊಡ್ಡಬಳ್ಳಾಪುರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಶಾಸಕರ ಬಲದ ಆಧಾರದ ಮೇಲೆ, ಕಾಂಗ್ರೆಸ್‌ನ ಐದು ಗ್ಯಾರಂಟಿಗಳಿಂದ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಗಲಿದೆ ಎಂದು ’ಕೈ’ ನಾಯಕರು ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್ ಟಿಕೆಟ್ ಯಾರಿಗೆ?

ಸುಲಭ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ಗೆ ಈಗ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಸವಾಲು ಎದುರಾಗಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯುವರಾದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಇಲ್ಲಿ ಎರಡು ಬಾರಿ ಸಂದರಾಗಿ ಆಯ್ಕೆಯಾಗಿದ್ದರು. ಚಿಕ್ಕಬಳ್ಳಾಪುರದಲ್ಲೇ ಮನೆ ಮಾಡಿಕೊಂಡು, ಕ್ಷೇತ್ರದ ಜನಪ್ರತಿನಿಧಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. 2024ರಲ್ಲಿ ಸೀಟು ಸಿಗುತ್ತದೆ ಎಂಬ ವಿಶ್ವಾಸದಲ್ಲಿರುವ ಅವರು, ಆಗಾಗ ಕಾಂಗ್ರೆಸ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಹಿರಿಯ ಕಾಂಗ್ರೆಸ್ಸಿಗರ ಒಲವು 84 ವರ್ಷದ ಮಾಜಿ ಮುಖ್ಯಮಂತ್ರಿ ಮೇಲಿದೆ.

ಎಂ ವೀರಪ್ಪ ಮೊಯ್ಲಿ

ಮತ್ತೊಂದು ಕಡೆ ಯುವ ಕಾಂಗ್ರೆಸ್ ನಾಯಕ, ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ರಕ್ಷಾ ರಾಮಯ್ಯ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಅವರು ವಿಧಾನಸಭೆ ಚುನಾವಣೆಗೆ ಮುಂಚಿನಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆ ಸಹಯೋಗದೊಂದಿಗೆ ಹೆಲ್ತ್ ಕ್ಯಾಂಪ್‌ಗಳನ್ನು ನಡೆಸಿ, ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ’ಎಂ.ಎಸ್. ರಾಮಯ್ಯ ಯೂತ್ ಫೌಂಡೇಶನ್’ ಕಚೇರಿ ತೆರೆದು ಜನರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಅಭ್ಯರ್ಥಿ ಆಯ್ಕೆಗೆ ಸಭೆ

ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಕೊಟ್ಟರೆ ಸೂಕ್ತ ಎಂಬ ಬಗ್ಗೆಯೂ ಚರ್ಚೆಯಾಗಿದ್ದು, ರಕ್ಷಾ ರಾಮಯ್ಯ ಪರ ಹಲವರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾತನಾಡಿರುವ ರಕ್ಷಾ ರಾಮಯ್ಯ, ’ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸೋದು ಖಚಿತ. ಮಾಜಿ ಸಚಿವರಾದ ಡಾ ಕೆ ಸುಧಾಕರ್ ನನ್ನ ವಿರುದ್ಧ ಸ್ಪರ್ಧಿಸಿದರೂ ಪರವಾಗಿಲ್ಲ. ಸುಧಾಕರ್ ಎದುರಾಳಿಯಾಗಿ ಬಂದರೂ ನಮಗೆ ಒಳ್ಳೆಯದೇ ಯಾರೇ ಬಂದರೂ ಒಳ್ಳೆಯದೇ. ಹತ್ತು ವರ್ಷ ಕಾಂಗ್ರೆಸ್ ಇಲ್ಲಿ ಎಲ್ಲವನ್ನು ಕಳೆದುಕೊಂಡಿದೆ. ಇನ್ನು ಮುಂದೆ ಎಲ್ಲವನ್ನೂ ಪಡೆದುಕೊಳ್ಳೋದ್ದರಲ್ಲಿ ಎರಡು ಮಾತಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಗನ ಬೆನ್ನಿಗೆ ನಿಂತ ಸೀತಾರಾಮ್

ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಕೊಡಿಸಲು ಸಚಿವ ಎಂ.ಆರ್ ಸೀತಾರಾಂ ಹಠಕ್ಕೆ ಬಿದ್ದಿದ್ದಾರೆ. 2009ರಲ್ಲಿ ನಾನು ಅಧಿಕೃತ ಅಭ್ಯರ್ಥಿ ಆಗಿ ಪ್ರಚಾರ ಪ್ರಾರಂಭ ಮಾಡಿದ್ದೆ. ಆಗ ವೀರಪ್ಪ ಮೊಯ್ಲಿ ಬಂದರು ಅಂತ ನನಗೆ ಟಿಕೆಟ್ ಕೈ ತಪ್ಪಿತು. 2014ರಲ್ಲಿಯೂ ಅನಿವಾರ್ಯ ಕಾರಣಗಳಿಂದ ಮೊಯ್ಲಿಗೆ ಬೆಂಬಲ ಕೊಟ್ಟಿದ್ದೇವೆ. ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆದಂತಯೇ ಲೋಕಸಭೆ ಕ್ಷೇತ್ರವೂ ಆಗುತ್ತೆ. ಅವಕಾಶ ಕೊಟ್ಟರೆ ನನ್ನ ಮಗ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿರುವ ಅವರು, ಮಗನಿಗೆ ಟಿಕೆಟ್ ಕೊಡಿಸಲು ಹೈಕಮಾಂಡ್ ವರಿಷ್ಠರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ.

ಎಂ.ಆರ್ ಸೀತಾರಾಂ

’ಎಂ. ವೀರಪ್ಪ ಮೋಯ್ಲಿ ಅವರಿಗೆ 84 ವರ್ಷ ವಯಸ್ಸಾಗಿದ್ದು, ಅವರು ಕಾಂಗ್ರಸ್‌ನಲ್ಲಿ ಈಗಾಗಲೇ ಸಾಕಷ್ಟು ಹುದ್ದೆಗಳನ್ನು ಅನುಭವಿಸಿದ್ದು, ಯುವ ನಾಯಕ, ಉತ್ಸಾಹಿ ಕಾರ್ಯಕರ್ತ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಬೇಕು’ ಎಂದು ಹಲವು ಕಾಂಗ್ರೆಸ್ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ, ಸುಧಾಕರ್ ಅಥವಾ ಅಲೋಕ್ ಸೇರಿದಂತೆ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಆರ್ಥಿಕವಾಗಿ ಅವರಿಗೆ ಪೈಪೋಟಿ ನೀಡಲು ಎಂ.ಆರ್ ಸೀತಾರಾಮ್ ಮತ್ತು ರಕ್ಷಾ ರಾಮಯ್ಯ ಸಮರ್ಥರಿದ್ದಾರೆ; ಆದ್ದರಿಂದ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ವಶ ಮಾಡಿಕೊಳ್ಳಬೇಕಾದರೆ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಕ್ಷೇತ್ರದ ಜಾತಿ ಲೆಕ್ಕಾಚಾರ

ಚಿಕ್ಕಬಳ್ಳಾಪು ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಒಬಿಸಿ ಮತಗಳೇ ನಿರ್ಣಾಯಕ. 2014ರಲ್ಲಿ ಕುಮಾರಸ್ವಾಮಿಯವರು ಸ್ಪರ್ಧಿಸಿದ್ದರು; ಅವರು 3 ಲಕ್ಷಕ್ಕೂ ಅಧಿಕ ಮತ ಪಡೆದುಕೊಂಡಿದ್ದರಿಂದ ಒಕ್ಕಲಿಗ ಸಮುದಾಯದ ಮತಗಳು ವಿಭಜನೆಯಾಗಿ, ’ಮೋದಿ ಅಲೆ’ ಇದ್ದರೂ ಬಿಜೆಪಿಯ ಬಿ.ಎನ್. ಬಚ್ಚೇಗೌಡ ಸೋಲು ಕಂಡಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಒಳಗೊಳಗೆ ಬಿಜೆಪಿಗೆ ಬೆಂಬಲಿಸಿದ್ದರಿಂದ ಒಕ್ಕಲಿಗರ ಬಹುಪಾಲು ಮತಗಳು ಬಚ್ಚೇಗೌಡರ ಪಾಲಾಗಿದ್ದವು ಎನ್ನಲಾಗುತ್ತದೆ. ಆದರೆ, ಕಾಂಗ್ರೆಸ್ ಪರವಾದ ಮತಗಳು ಮಾತ್ರ ಸ್ಥಿರವಾಗಿದ್ದವು. ಇದೀಗ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಒಕ್ಕಲಿಗ ಸಮುದಾಯದ ಮತಗಳು ಕೈ ಹಿಡಿಯುತ್ತವೆ ಎಂಬ ವಿಶ್ವಾಸದಲ್ಲಿ ಸುಧಾಕರ್ ಮತ್ತು ವಿಶ್ವನಾಥ್ ಬಿಜೆಪಿ ಟಿಕೆಟ್ ಪಡೆಯಲು ಪೈಪೋಟಿಗೆ ಬಿದ್ದಿದ್ದಾರೆ.

ಆದರೆ ಈ ಕ್ಷೇತ್ರದಲ್ಲಿ ಜಾತಿ ಕಾರಣಕ್ಕೆ ಅಭ್ಯರ್ಥಿಗಳು ಗೆದ್ದಿದ್ದು ಬಹಳ ಕಡಿಮೆ. ಕ್ಷೇತ್ರದಲ್ಲಿ ನಿರಂತರವಾಗಿ ಗೆದ್ದು, ಕೇಂದ್ರದಲ್ಲಿ ಸಚಿವರಾಗಿದ್ದ ಆರ್.ಎಲ್. ಜಾಲಪ್ಪ, ವೀರಪ್ಪ ಮೋಯ್ಲಿಯವರು ಅತಿ ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ಬಹುಪಾಲು ಸಂದರ್ಭಗಳಲ್ಲಿ ಕ್ಷೇತ್ರದ ಜನತೆ ಜಾತಿ ನೋಡದೆ, ವ್ಯಕ್ತಿ ನೋಡಿ ಮತ ಚಲಾಯಿಸಿರುವುದಕ್ಕೆ ಸಾಕ್ಷಿ ಇದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕುರಿತು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವಿಸ್ತಾರದಲ್ಲಿ ಬಹಳ ದೊಡ್ಡದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲೂಕುಗಳ ಜತೆಗೆ ಯಲಹಂಕ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕಡೆ ಕಾಂಗ್ರೆಸ್ ಶಾಸಕರು ಮತ್ತು ಗೌರಿಬಿದನೂರಿನಲ್ಲಿ ಮಾತ್ರ ಪಕ್ಷೇತರ ಶಾಸಕರಿದ್ದಾರೆ. ಯಲಹಂಕದಲ್ಲಿ ವಿಶ್ವನಾಥ್ ಮತ್ತು ದೊಡ್ಡಬಳ್ಳಾಪುರದಲ್ಲಿ ಧೀರಜ್ ಮುನಿರಾಜು ಬಿಜೆಪಿ ಶಾಸಕರಿದ್ದಾರೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತದಾರರ ಸಂಖ್ಯೆ ಹೆಚ್ಚಿದ್ದರೆ, ಯಲಹಂಕದಲ್ಲಿ ವಿಶ್ವನಾಥ್‌ಗೆ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪ್ರಬಲ ಪೈಪೋಟಿ ನೀಡಿದ್ದರು.

ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಒಟ್ಟು ವಿಧಾನಸಭಾ ಕ್ಷೇತ್ರಗಳು-8

ಕಾಂಗ್ರೆಸ್: ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ (5)
ಬಿಜೆಪಿ: ದೊಡ್ಡಬಳ್ಳಾಪುರ, ಯಲಹಂಕ (2)
ಪಕ್ಷೇತರ: ಗೌರಿಬಿದನೂರು (1)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...