Homeಅಂಕಣಗಳುಬಹುಮುಖಿ ದಾಳಿಯನ್ನು ಎದುರಿಸುವುದು ಸಾಧ್ಯವೇ?

ಬಹುಮುಖಿ ದಾಳಿಯನ್ನು ಎದುರಿಸುವುದು ಸಾಧ್ಯವೇ?

- Advertisement -
- Advertisement -

| ಡಾ. ವಾಸು ಎಚ್.ವಿ |

ಪತ್ರಿಕೆಯಲ್ಲಿ ಈ ದಿನ ಅಥವಾ ವಾರ ನೀವು ಯಾವುದರ ಮೇಲೆ ಕೇಂದ್ರೀಕರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸುವುದು ಈ ಕಾಲದಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ ನಿಮ್ಮ ಗಮನ ಅಸಲೀ ಸಮಸ್ಯೆಯ ಮೇಲೆ ಹೋಗದಂತೆ ಮಾಡಲೆಂದೇ ಕೆಲವು ವಾಗ್ವಾದಗಳನ್ನು ತೇಲಿಬಿಟ್ಟಿರಬಹುದೆಂಬ ಅನುಮಾನ ಬಂದಿರುತ್ತದೆ. ಕೆಲವೊಮ್ಮೆ ಅವು ಕೇವಲ ವಾಗ್ವಾದಗಳಾಗಿರುವುದಿಲ್ಲ; ಯಾರದ್ದೋ ಬದುಕಿನ ಅತ್ಯಂತ ಜ್ವಲಂತ ಸಮಸ್ಯೆಯಾಗಿರುತ್ತದೆ. ಉದಾಹರಣೆಗೆ ಕಾಶ್ಮೀರ, ಎನ್‍ಆರ್‍ಸಿ ಇತ್ಯಾದಿ. ಕೆಲವು ಸಾರಿ ಅದು ಯಾರ ಬದುಕಿನ ತಕ್ಷಣದ ಕಾಡುವ ಸಮಸ್ಯೆಯೂ ಆಗಿರುವುದಿಲ್ಲ; ಆದರೆ ನಮ್ಮ ಇತಿಹಾಸದಲ್ಲಿ ಅಡಗಿರುವ ಸತ್ಯಗಳನ್ನು ಬುಡಮೇಲು ಮಾಡುವ ಕೆಲಸ ನಡೆದಿರುತ್ತದೆ. ಸಾವರ್ಕರ್‍ಗೆ ಭಾರತರತ್ನ ನೀಡುತ್ತೇವೆನ್ನುವುದನ್ನು ಬಿಜೆಪಿ ಪಕ್ಷವು ಮಹಾರಾಷ್ಟ್ರ ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಅದಕ್ಕೆ ನಿದರ್ಶನ.

ಅಸಲೀ ಸಮಸ್ಯೆ ಮತ್ತು ಹೊಸದಾಗಿ ಸೃಷ್ಟಿಸಿದ ಇಶ್ಯೂ ಎರಡನ್ನೂ ಆಯ್ದುಕೊಂಡು, ಅವುಗಳನ್ನು ಸತ್ಯದ ಮುಖಾಂತರ ಎದುರಿಸಬೇಕಾದ್ದು ನಮ್ಮ ಜವಾಬ್ದಾರಿ. ಆದರೆ, ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವಂತೆ ಪರಿಸ್ಥಿತಿ ದೂಡುತ್ತದೆ. ಇದು ರಾಜಕೀಯ ಕಾರ್ಯಕರ್ತರಿಗೆ ಮಾತ್ರವಲ್ಲದೇ, ನಮ್ಮಂತಹ ಪತ್ರಿಕೆಗಳಿಗೂ ಇರುವ ಸಂದಿಗ್ಧ.

ದೇಶದ ಸಾರ್ವಭೌಮತೆಯನ್ನು ಮತ್ತಷ್ಟು ಕಿತ್ತುಕೊಳ್ಳುವ ಆರ್‍ಸಿಇಪಿ ಒಪ್ಪಂದದ ಕುರಿತು ರೈತಸಂಘಗಳು ಪ್ರತಿಭಟಿಸುತ್ತಿರುವಾಗ ಅದಕ್ಕೆ ಇಂಬು ಕೊಡುವುದು ನಮ್ಮ ಕರ್ತವ್ಯ; ಕರ್ನಾಟಕದ ಬರ-ನೆರೆ ಸಂಕಷ್ಟಕ್ಕೆ ಪರಿಹಾರವಾಗಿ 1 ಲಕ್ಷ ಕೋಟಿ ಪ್ಯಾಕೇಜ್‍ಅನ್ನು ರೈತರು ಕೇಳುತ್ತಿರುವಾಗಲೇ, ಮತ್ತೊಂದು ಮಳೆ ಇಡೀ ರಾಜ್ಯವನ್ನು ಆವರಿಸಿದೆ. ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಅಪ್ಪಳಿಸಿದೆ. ಬಿಎಸ್‍ಎನ್‍ಎಲ್‍ಅನ್ನು ಮುಳುಗಿಸುವ ಕಾಂಗ್ರೆಸ್‍ನ ಹಳೆಯ ಪ್ಲಾನ್‍ಅನ್ನು ಬಿಜೆಪಿ ಯಶಸ್ವಿ ಮಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಹೀಗಿರುವಾಗ ಸಿ.ಟಿ.ರವಿಯ ಮನೆಹಾಳ ಮಾತು, ಸಾವರ್ಕರ್‍ಗೆ ಭಾರತರತ್ನ ಇತ್ಯಾದಿಗಳು ನಮ್ಮನ್ನು ಬೇರೆ ಕಡೆಗೆ ಎಳೆಯುತ್ತವೆ. ಅದನ್ನು ಮುಗಿಸಿ ಬರುವ ಹೊತ್ತಿಗೆ ಬಿಎಸ್‍ಎನ್‍ಎಲ್ ಮುಳುಗಿ ರೈಲ್ವೇ ಖಾಸಗೀಕರಣದ ಮಾತು ನಡೆಯುತ್ತಿರುತ್ತದೆ. ಅದರ ಬಗ್ಗೆ ಮಾತು ಆಡುವುದು ಸಾಧ್ಯವೇ ಆಗದಂತೆ ದೇಶದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿ ‘ಗೋಡ್ಸೆ ದೇಶಭಕ್ತ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ’ ಎಂದು ಹೇಳುವ ಸಾಧ್ಯತೆ ಇರುತ್ತದೆ.

ಆ ವಾರ ನಿಮಗೆ ಲಭ್ಯವಿರುವ ಮೂರು ಪುಟಗಳಲ್ಲಿ ಗೋಡ್ಸೆಯ ಕುರಿತು ಎಷ್ಟು ಮಾತನಾಡುವಿರಿ, ರೈಲ್ವೇ ಖಾಸಗೀಕರಣದ ಕುರಿತು ಏನು ಹೇಳುವಿರಿ ಎಂಬ ಸಂದಿಗ್ಧ ಎದುರಾಗುತ್ತದೆ. ಇಂತಹ ಸಂದಿಗ್ಧದಿಂದ ಹೊರಬರುವುದು ಸಾಧ್ಯವಿಲ್ಲವೇ? ಸಂತ್ರಸ್ತರು, ಕಾಳಜಿಯುಳ್ಳವರು, ಪ್ರಜಾತಂತ್ರವಾದಿಗಳೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿಕೆ ಹೇಳಿ, ಟ್ವಿಟ್ಟರ್ ಟ್ರೆಂಡ್ ಮಾಡಿಬಿಟ್ಟರೆ ಸಾಕೇ?

ಖಂಡಿತಾ ಸಾಲದು. ಬೀದಿಯಲ್ಲಿ ಸಂತ್ರಸ್ತರು ಒಟ್ಟುಗೂಡಿ ಶಕ್ತಿಯುತವಾಗಿ ತಮ್ಮ ಅನಿಸಿಕೆಗಳನ್ನು ಮುಂದಿಡುವುದು, ಬುದ್ಧಿಜೀವಿಗಳು ಸರಿಯಾದ ಹತಾರಗಳೊಂದಿಗೆ ತಮ್ಮದೇ ಆದ ಮಾಧ್ಯಮಗಳನ್ನು ಹುಡುಕಿಕೊಂಡು ವಾಗ್ವಾದಕ್ಕಿಳಿಯುವುದು ಎರಡೂ ಆಗಬೇಕು. ಮಾಧ್ಯಮವು ಇವೆರಡಕ್ಕೂ ಸೂಕ್ತ ಅವಕಾಶ ಕಲ್ಪಿಸಿ ಅದನ್ನು ವ್ಯಾಪಕಗೊಳಿಸಬೇಕು; ಅಧಿಕಾರಸ್ಥರ ಮೇಲೆ ಒತ್ತಡ ತರಬೇಕು. ಆಗ ಪರಿಣಾಮ ಕಾಣತೊಡಗುತ್ತದೆ. ಆದರೆ, ಇಂದಿನ ಮಾಧ್ಯಮ ಇವೆರಡನ್ನೂ (ಬೀದಿಯಲ್ಲಿನ ಭಿನ್ನಮತ ಮತ್ತು ಬುದ್ಧಿಜೀವಿಗಳ ಅಭಿಮತ) ದಿಕ್ಕೆಡಿಸುವ ಕೆಲಸ ಮಾಡುತ್ತಿದೆ. ಅದರ ಫಲವಾಗಿ ಎಲ್ಲವೂ ದುರ್ಬಲವಾಗಿಬಿಟ್ಟಿವೆ. ಹಾಗಾದರೆ ದಾರಿಯೇನು? ದಾರಿಯಿಷ್ಟೇ; ಇವು ಮೂರೂ ಅಭಿನ್ನವಾಗಿ ಜೊತೆಗೂಡುವುದು. ಜೊತೆಗೂಡಿಸುವ ಕೆಲಸವನ್ನು ಮಾಧ್ಯಮ ಮಾಡಬೇಕು. ಮಿಕ್ಕೆರಡು ವಲಯಗಳು ಜೊತೆಗೂಡಿ ಮಾಧ್ಯಮವನ್ನು ಕಟ್ಟಿ ನಿಲ್ಲಿಸಬೇಕು. ಅದು ಮಾತ್ರವೇ ದಾರಿ.

ನ್ಯಾಯಪಥ ಮತ್ತು ನಮ್ಮ ವೆಬ್‍ಸೈಟ್‍ಗಳು ಮಾಡಹೊರಟಿರುವುದು ಅದನ್ನೇ. ಇದನ್ನೇ ಈ ವಾರದಲ್ಲಿ ನಡೆಯಲಿರುವ ಜಿಲ್ಲಾ ಸಭೆಗಳಲ್ಲೂ ಚರ್ಚಿಸಲಾಗುವುದು. ಹೊಸ ರೀತಿಯ ಮಾಧ್ಯಮವು ಬೀದಿಯಲ್ಲಿರುವ ಜನತೆ ಮತ್ತು ಹೊಸಕಾಲದ ಬುದ್ಧಿಜೀವಿಗಳನ್ನು ಬೆಸೆಯುತ್ತಾ, ಅವೆರಡರಿಂದ ಪ್ರತ್ಯೇಕವಾಗುಳಿಯದೇ ತಾನೂ ಜೊತೆಗೂಡುತ್ತದೆ.
– ಸಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...