Homeಮುಖಪುಟಹರ್ಯಾಣ: ಕಾಲುವೆಯಲ್ಲಿ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ

ಹರ್ಯಾಣ: ಕಾಲುವೆಯಲ್ಲಿ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ

- Advertisement -
- Advertisement -

ಕೊಲೆಯಾದ 12 ದಿನಗಳ ಬಳಿಕ ಪಂಜಾಬ್‌ನ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರ ಮೃತದೇಹ ಹರ್ಯಾಣದ ಗುರುಗ್ರಾಮದ ಕಾಲುವೆಯೊಂದರಲ್ಲಿ ಇಂದು (ಜ.13) ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹರ್ಯಾಣದ ಫತೇಹಾಬಾದ್ ಜಿಲ್ಲೆಯ ತೊಹಾನಾದಲ್ಲಿ ಭಾಕ್ರಾ ಕಾಲುವೆಯ ಉಪ ಕಾಲುವೆಯಿಂದ ದಿವ್ಯಾ ಪಹುಜಾ ಅವರ ಮೃತದೇಹ ಮೇಲೆತ್ತಲಾಗಿದೆ ಎಂದು ಗುರುಗ್ರಾಮ ಸಹಾಯಕ ಕಮಿಷನರ್ (ಅಪರಾಧ) ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಗುರುತಿಸಿದ್ದಾರೆ. ಗುರುಗ್ರಾಮ ಪೋಲೀಸರ ಆರು ತಂಡಗಳು ಪಹುಜಾ ಅವರ ಮೃತದೇಹದ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು.

ಏನಿದು ಪ್ರಕರಣ?

ಹರ್ಯಾಣದ ಮೋಸ್ಟ್‌ ವಾಟೆಂಡ್ ಗ್ಯಾಂಗ್‌ಸ್ಟರ್‌ ಸಂದೀಪ್ ಗಡೋಲಿ ಎಂಬಾತನನ್ನು 2016ರ ಫೆ. 7ರಂದು ನಕಲಿ ಎನ್‌ಕೌಂಟರ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ರೂಪದರ್ಶಿ ದಿವ್ಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಏಳು ವರ್ಷಗಳ ಜೈಲು ಶಿಕ್ಷೆಯ ಬಳಿಕ, ಕಳೆದ ಜೂನ್‌ನಲ್ಲಿ ಇವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ದಿವ್ಯಾ ಅವರೊಂದಿಗೆ ಅವರ ತಾಯಿ, ಐದು ಜನ ಪೊಲೀಸರೂ ಬಂಧನಕ್ಕೊಳಗಾಗಿದ್ದರು.

ಜಾಮೀನಿನ ಮೇಲೆ ಹೊರಬಂದಿದ್ದ ದಿವ್ಯಾ ಅವರನ್ನು ಐದು ಜನರ ಗುಂಪು ಜನವರಿ 2,2024ರಂದು ಹರ್ಯಾಣದ ಗುರುಗ್ರಾಮದ ಹೋಟೆಲ್ ಸಿಟಿ ಪಾಯಿಂಟ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿತ್ತು. ಕೃತ್ಯದ ನಂತರ ಆರೋಪಿಗಳು ಮೃತದೇಹವನ್ನು ಐಷಾರಾಮಿ ಕಾರಿನಲ್ಲಿರಿಸಿ ನಾಶಪಡಿಸುವ ಪ್ರಯತ್ನ ಮಾಡಿದ್ದರು.

ದಿವ್ಯಾ ಪಹುಜಾ ಕೊಲೆಯಾದ ಹೋಟೆಲ್ ಸಿಟಿ ಪಾಯಿಂಟ್‌ನ ಮಾಲೀಕ ಅಭಿಜಿತ್ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಶವ ಸಾಗಿಸಲು ಪ್ರಕಾಶ್ ಮತ್ತು ಇಂದ್ರಜ್ ಎಂಬವರು ಆತನಿಗೆ ನೆರವಾಗಿದ್ದರು. ಅಭಿಜಿತ್‌ನ ಇನ್ನಿಬ್ಬರು ಸಹಚರರಾದ ರವಿ ಬಾಂದ್ರಾ ಮತ್ತು ಬಾಲ್‌ರಾಜ್‌ ಗಿಲ್ ಶವ ವಿಲೇವಾರಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕಾಶ್ ಮತ್ತು ಇಂದ್ರಜ್ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ದಿವ್ಯಾ ಹೋಟೆಲ್ ಮಾಲೀಕ ಅಭಿಜಿತ್‌ನ ‘ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿ’ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದರು.ಈ ಕಾರಣಕ್ಕೆ ಆಕೆಯನ್ನು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ದಿವ್ಯಾಳ ಹತ್ಯೆ ಸುದ್ದಿ ಬೆನ್ನಲ್ಲೇ ಪೊಲೀಸರು ಹೋಟೆಲ್‌ನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದರು. ಈ ವೇಳೆ ಆರೋಪಿಗಳು ಹೋಟೆಲ್ ಕೊಠಡಿಯಿಂದ ದಿವ್ಯಾಳ ಮೃತದೇಹವನ್ನು ಹೊರಗೆ ಸಾಗಿಸಿದ್ದ ದೃಶ್ಯ ಅದರಲ್ಲಿ ದೊರೆತಿತ್ತು. ಈ ವಿಡಿಯೋ ವೈರಲ್ ಆಗುವ ಮೂಲಕ ಪ್ರಕರಣ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು.

ಆರೋಪಿಗಳ ಬಂಧನ:

ಹೋಟೆಲ್ ಮಾಲೀಕ ಅಭಿಜಿತ್ ಸೇರಿದಂತೆ ದಿವ್ಯಾಳ ಕೊಲೆ ಮತ್ತು ಶವ ಸಾಗಾಟದಲ್ಲಿ ಪಾಲ್ಗೊಂಡ ಐವರು ಆರೋಪಿಗಳ ಪೈಕಿ ಹೋಟೆಲ್ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಇಂದ್ರಜ್ ಅನ್ನು ಪೊಲೀಸರು ಆರಂಭದಲ್ಲಿ ಬಂಧಿಸಿದ್ದರು. ಗುರುವಾರ (ಜ.11) ಸಂಜೆ ಪಶ್ಚಿಮ ಬಂಗಾಳದಲ್ಲಿ ಆರೋಪಿ ಬಾಲ್‌ರಾಜ್‌ ಗಿಲ್‌ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಟ್ಟು ಮೂವರ ಬಂಧನವಾಗಿದೆ. ಇನ್ನಿಬ್ಬರಾದ ಪ್ರಮುಖ ಆರೋಪಿ ಅಭಿಜಿತ್ ಮತ್ತು ರವಿ ಬಾಂದ್ರಾ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಕಲಿ ಎನ್‌ಕೌಂಟರ್ ಪ್ರಕರಣ:

2016ರ ಗ್ಯಾಂಗ್‌ಸ್ಟರ್‌ ಸಂದೀಪ್ ಗಡೋಲಿ ನಕಲಿ ಎನ್‌ಕೌಂಟರ್ ಪ್ರಕರಣಲ್ಲಿ ದಿವ್ಯಾ ಪಹುಜಾಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಈ ದಿವ್ಯಾ ಪಹುಜಾ ಸಂದೀಪ್‌ನ ಗೆಳತಿಯಾಗಿದ್ದಳು. ಸಂದೀಪ್‌ನ ವಿರೋಧಿ ಬಣದ ಗ್ಯಾಂಗ್‌ಸ್ಟರ್, ಹರ್ಯಾಣ ಮುನ್ಸಿಪಲ್ ಕೌನ್ಸಿಲರ್ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಗಡೋಲಿಯನ್ನು ಹತ್ಯೆ ಮಾಡಲು ಹರ್ಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದ. ಇದಕ್ಕೆ ದಿವ್ಯಾಳನ್ನೇ ಬಳಸಿಕೊಂಡಿದ್ದ. ಆಕೆಯನ್ನು ಹನಿ ಟ್ರ್ಯಾಪ್‌ನಂತೆ ಬಳಸಿಕೊಂಡು ಗಡೋಲಿಯನ್ನು ನಕಲಿ ಎನ್‌ಕೌಂಟರ್ ಮಾಡಿಸಿದ್ದ.

ಸಂದೀಪ್ ಗಡೋಲಿಯ ಯಾರು?

ಆರಂಭದಲ್ಲೇ ಹೇಳಿದಂತೆ ಸಂದೀಪ್ ಹರ್ಯಾಣದ ಮೋಸ್ಟ್‌ ವಾಟೆಂಡ್ ಗ್ಯಾಂಗ್‌ಸ್ಟರ್ ಆಗಿದ್ದ. ಈತನ ಹಲವು ಕೊಲೆ ಪ್ರಕರಣಗಳು ಇತ್ತು. ಈತ 2015 ರ ಅಕ್ಟೋಬರ್‌ನಲ್ಲಿ ಮುನ್ಸಿಪಲ್ ಕೌನ್ಸಿಲರ್ ಬಿಂದರ್ ಗುಜ್ಜರ್‌ನ ಕಾರು ಚಾಲಕನ ಹತ್ಯೆ ಸೇರಿದಂತೆ ಹಲವಾರು ಕೊಲೆಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ. ಗಡೋಲಿ ವಿರುದ್ಧ 36 ಪ್ರಕರಣಗಳು ದಾಖಲಾಗಿದ್ದವು. 2015ರಲ್ಲಿ ಬಾಂದ್ರಾದಲ್ಲಿ ರೂಪದರ್ಶಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಈತನ ಸಹಾಯಕ ಸೋನು ಎಂಬಾತನನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ : ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ POCSO ಕಾಯ್ದೆಯಡಿಯಲ್ಲಿ ಅಪರಾಧವಲ್ಲ: ಮದ್ರಾಸ್ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...