Homeಅಂತರಾಷ್ಟ್ರೀಯExplainer: ಏನಿದು ಉಕ್ರೇನ್ ಬಿಕ್ಕಟ್ಟು? ಮತ್ತೆ ಆರಂಭವಾದ ರಷ್ಯಾ v/s ಅಮೆರಿಕ ಶೀತಲ ಸಮರಕ್ಕೆ ಪರಿಹಾರವೇನು?

Explainer: ಏನಿದು ಉಕ್ರೇನ್ ಬಿಕ್ಕಟ್ಟು? ಮತ್ತೆ ಆರಂಭವಾದ ರಷ್ಯಾ v/s ಅಮೆರಿಕ ಶೀತಲ ಸಮರಕ್ಕೆ ಪರಿಹಾರವೇನು?

- Advertisement -
- Advertisement -

2021ರ ಮಾರ್ಚ್‌ನಿಂದ ರಷ್ಯಾದ ಸಾವಿರಾರು ಪಡೆಗಳು ರಷ್ಯಾ-ಉಕ್ರೇನ್ ಗಡಿಯಲ್ಲಿ ಬೀಡುಬಿಟ್ಟಿವೆ. ಆಗಿನಿಂದ ಉಕ್ರೇನ್ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಉಕ್ರೇನ್ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲು ರಷ್ಯಾ ತಯಾರಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಅಮೆರಿಕ ನೇತೃತ್ವದ NATOವನ್ನು (ಉತ್ತರ ಅಟ್ಲಾಂಟಿಕ್ ಸಂಘಟನೆ) ಉಕ್ರೇನ್ ಸೇರುತ್ತಿರುವುದರ ಕುರಿತು ರಷ್ಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್‌ಗೆ ಮಿಲಿಟರಿ ರಕ್ಷಣೆ ನೀಡುವುದಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಭರವಸೆ ನೀಡಿದ್ದಾರೆ. ಇದು ಜಾಗತಿಕ ಕಳವಳದ ವಿಷಯವಾಗಿದೆ. ಏಕೆಂದರೆ ಇದು ಪ್ರಪಂಚದ ಎರಡು ಅತಿ ದೊಡ್ಡ ಮಿಲಿಟರಿ ಶಕ್ತಿಗಳ ನಡುವಿನ ಬಿಕ್ಕಟ್ಟಾಗಿದೆ. ಅಲ್ಲದೆ ಈ ಎರಡು ಬಣಗಳು ಜಗತ್ತಿನ ಅತಿದೊಡ್ಡ ಪರಮಾಣು ಶಕ್ತಿಯನ್ನ ಹೊಂದಿವೆ.

ಉಕ್ರೇನ್ ನ್ಯಾಟೊಗೆ ಸೇರ್ಪಡೆಗೊಳ್ಳುವುದು ತಮಗೆ ಅತಿ ದೊಡ್ಡ ರಕ್ಷಣಾ ಅಪಾಯವನ್ನು ತಂದೊಡ್ಡುತ್ತದೆ ಎಂದು ರಷ್ಯಾ ಮತ್ತೆಮತ್ತೆ ಹೇಳುತ್ತಿದೆ. ಏಕೆಂದರೆ ರಷ್ಯಾವು ಯುರೋಪಿನೊಂದಿಗಿನ ಅತಿ ದೊಡ್ಡ ಗಡಿಯನ್ನು ಉಕ್ರೇನ್‌ನೊಂದಿಗೆ (2000 ಕಿ.ಮೀ ಗೂ ಹೆಚ್ಚು) ಹಂಚಿಕೊಂಡಿದೆ. ಸೋವಿಯತ್ ಯೂನಿಯನ್ ಎದುರಾಗಿ ಹಲವು ದೇಶಗಳ ಒಕ್ಕೂಟ ಮಾಡಿಕೊಂಡು ಸಮತೋಲನ ಸಾಧಿಸಲು NATO ಹುಟ್ಟಿಕೊಂಡಿತು. ಸೋವಿಯತ್ ಯೂನಿಯನ್ ಪತನಗೊಂಡ ನಂತರ NATOವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಅಮೆರಿಕ ಭರವಸೆ ನೀಡಿದ್ದರೂ ಸಹ, ಈಗ ನ್ಯಾಟೊ ರಷ್ಯಾದ ಹತ್ತಿರದವರೆಗೆ ವಿಸ್ತರಣೆಗೊಂಡಿದೆ. ಅಮೆರಿಕ ರಷ್ಯಾದೊಂದಿಗೆ ಮೊದಲಿನಿಂದಲೂ ಕೆಟ್ಟ ಸಂಬಂಧ ಹೊಂದಿದೆ. ನಿರ್ದಿಷ್ಟವಾಗಿ ಸಿರಿಯಾದ ಅಂತರ್ಯುದ್ಧದ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ, ಬಿಕ್ಕಟ್ಟಿನ ವಿರುದ್ಧ ಬಣಗಳ ಪರ ನಿಂತಿದ್ದವು.

ರಷ್ಯಾದೊಂದಿಗೆ ಉಕ್ರೇನ್‌ನ ಐತಿಹಾಸಿಕ ಸಂಬಂಧ

ಉಕ್ರೇನ್ ದೇಶವು ಮೊದಲ ಸಹಸ್ರಮಾನದ ಅಂತ್ಯದ ವೇಳೆಗೆ ಕೀವಾನ್ ರುಸ್ ಪ್ರಾಂತದ ಜನರ ಅಭಿವೃದ್ಧಿಯ ಜೊತೆಗೆ ಬೆಸೆದುಕೊಂಡು ಅಸ್ತಿತ್ವದಲ್ಲಿದೆ. ವಿವಿಧ ಸಮಯದಲ್ಲಿ ವಿವಿಧ ರಷ್ಯನ್ ಸಾಮ್ರಾಜ್ಯಗಳು ಇದನ್ನು ಆಳಿವೆ. ರಷ್ಯಾ ಕ್ರಾಂತಿಯ ನಂತರ ಆರಂಭವಾದ ಉಕ್ರೇನಿಯನ್ ಸ್ವಯಂ-ಅಸ್ತಿತ್ವಕ್ಕಾಗಿನ ಚಳವಳಿಯು ಉಕ್ರೇನ್ ಸ್ವಾತಂತ್ರ್ಯಕ್ಕೆ ಕಾರಣವಾಯಿತು. ಮೊದಲ ಮಹಾಯುದ್ಧದ ನಂತರ ಉಕ್ರೇನ್ ಪ್ರಭುತ್ವವು ಯುಎಸ್‌ಎಸ್‌ಆರ್‌ನೊಂದಿಗೆ ಸೇರುವ ಮೂಲಕ ಉಕ್ರೇನಿಯನ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಯಿತು ಮತ್ತು ಯುಎಸ್‌ಎಸ್‌ಆರ್ ಪತನದವರೆಗೂ ಅದರ ಭಾಗವಾಗಿಯೇ ಇತ್ತು. ಆ ನಂತರ ಮತ್ತೆ ಅದು ಸ್ವತಂತ್ರ ದೇಶವಾಯಿತು.

ಯುಎಸ್‌ಎಸ್‌ಆರ್‌ನ ಹೆಚ್ಚಿನ ಮಾಜಿ ಸದಸ್ಯರು ಯುಎಸ್‌ಎಸ್‌ಆರ್ ಪತನದ ನಂತರವೂ ರಷ್ಯಾದೊಂದಿಗೆ ಬಲವಾದ ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದರು. ಆ ನಂತರ ಉಕ್ರೇನ್ ಮತ್ತಷ್ಟು ಸ್ವತಂತ್ರಗೊಂಡಿತು ಮತ್ತು ಯುರೋಪಿಯನ್ ಶಕ್ತಿಗಳೊಂದಿಗೆ ನಿಕಟ ಸಂಬಂಧಗಳನ್ನು ರೂಪಿಸಿಕೊಂಡಿತು.

ಉಕ್ರೇನ್‌ನಲ್ಲಿ ರಷ್ಯಾಕ್ಕೆ ಬೆಂಬಲ

ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗಗಳು, ಸಾಂಸ್ಕೃತಿಕ ಮತ್ತು ಆರ್ಥಿಕ ಕಾರಣಗಳಿಗಾಗಿ, ರಷ್ಯಾದೊಂದಿಗೆ ನಿಕಟ ಸಂಬಂಧಗಳನ್ನು ಮರುಸ್ಥಾಪಿಸಲು ಒಲವು ತೋರಿದವು. ಜನಾಂಗೀಯವಾಗಿ ಉಕ್ರೇನ್ ಇನ್ನೂ ದೊಡ್ಡ ರಷ್ಯನ್ ಜನಸಂಖ್ಯೆಯನ್ನು ಹೊಂದಿತ್ತು ಮತ್ತು 2003ರಲ್ಲಿ ಅವರು ರಷ್ಯಾ ಪರವಾದ ನಾಯಕತ್ವವನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು. ಆದರೂ ಹೊಸ ಸರ್ಕಾರ ರಷ್ಯಾದೊಂದಿಗಿನ ಹೊಸ ಸಂಬಂಧವನ್ನು ಸಿದ್ಧಿಸಿಕೊಳ್ಳುವ ಮುನ್ನವೇ ಕಿತ್ತಳೆ ಕ್ರಾಂತಿ ಹೆಸರಿನ ಅತಿದೊಡ್ಡ ರಷ್ಯನ್ ವಿರೋಧಿ ಪ್ರತಿಭಟನೆಗಳು ಸಿಡಿದೆದ್ದವು.

2008ರಲ್ಲಿ ಅಮೆರಿಕವು ನ್ಯಾಟೊಗೆ ಸೇರಲು ಉಕ್ರೇನ್‌ಗೆ ಆಹ್ವಾನ ನೀಡಿತು. ಇದರಿಂದ ರಷ್ಯನ್ ಸರ್ಕಾರ ಕಳವಳಕ್ಕೀಡಾಯಿತು. ಶೀತಲ ಸಮರದ ಸಂದರ್ಭದಲ್ಲಿ ಹುಟ್ಟಿಕೊಂಡ ನ್ಯಾಟೊ ಮೈತ್ರಿಕೂಟವು ತನ್ನ ಉದ್ದೇಶಗಳನ್ನು ಮೀರಿ ಬೆಳೆದದ್ದೇ ಅಲ್ಲದೆ, ರಷ್ಯಾದ ಹತ್ತಿರದ ದೇಶಗಳನ್ನು ಸೆಳೆದುಕೊಳ್ಳುವುದರ ಕಡೆಗೂ ಮುಂದುವರೆಯಿತು. ಉಕ್ರೇನ್ NATO ಸದಸ್ಯತ್ವ ಪಡೆಯುವುದರಿಂದ ರಷ್ಯಾವು ಅನಿರ್ದಿಷ್ಟಾವಧಿಗೆ ಮಿಲಿಟರಿ ಅನಾನುಕೂಲತೆಗಳಿಗೆ ಒಳಗಾಗುತ್ತದೆ.

ಈ ಅಸಮಾಧಾನವು ಉಕ್ರೇನ್‌ನ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಅಶಾಂತಿಗೆ ಕಾರಣವಾಯಿತು ಮತ್ತು ಸಾಮೂಹಿಕ ಅಶಾಂತಿ ಉತ್ತುಂಗಕ್ಕೇರಿತು. ರಷ್ಯಾವು ಉಕ್ರೇನ್‌ನ ಕೆಲವು ಪ್ರದೇಶಗಳ ಮೇಲೆ ಹಕ್ಕು ಸಾಧಿಸುತ್ತಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಶಾಂತಿ ಉಂಟಾಯಿತು. ಇದು ಡಾನ್‌ಬಾಸ್ ಯುದ್ಧಕ್ಕೆ ಮತ್ತು ರಷ್ಯಾವು ಕ್ರೈಮಿಯಾ ಪ್ರದೇಶವನ್ನು ಸ್ವಾಧೀನ ಪಡೆಯಲು ಕಾರಣವಾಯಿತು. ಈ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಗುಂಪುಗಳಿಗೆ ಬಲವಾದ ಬೆಂಬಲವಿದ್ದು, ಅವರು ಪೂರ್ವ ಉಕ್ರೇನ್‌ನಲ್ಲಿ ಕೊನೆಯವರೆಗೂ ಯುದ್ಧವನ್ನು ಮುಂದುವರೆಸಿದರು. ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳು ಅತಿ ಹೆಚ್ಚಿನ ಜನಾಂಗೀಯ ರಷ್ಯನ್ ಜನಸಂಖ್ಯೆಯನ್ನು ಹೊಂದಿದ್ದು ಸಂಘರ್ಷದ ಸ್ಥಳಗಳಾಗಿವೆ.

ಡಾನ್‌ಬಾಸ್ ಯುದ್ಧದ ನಂತರ

ಡಾನ್‌ಬಾಸ್ ಯುದ್ಧದ ನಂತರ ಮಿನ್ಸ್ಕ್ ಪ್ರೋಟೋಕಾಲ್ ಎಂದು ಕರೆಯಲ್ಪಡುವ ಉಕ್ರೇನ್, ರಷ್ಯಾ ಮತ್ತು ಯುರೋಪ್‌ನ ಭದ್ರತೆ ಮತ್ತು ಸಹಕಾರಕ್ಕಾಗಿನ ಸಂಸ್ಥೆ (OSCE)ಗಳ ನಡುವಿನ ತ್ರಿಪಕ್ಷೀಯ ಒಪ್ಪಂದವು ಏರ್ಪಟ್ಟು ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸಲಾಯಿತು. ವ್ಯಾಪಕ ಮಾತುಕತೆಗಳ ನಂತರ, ಮಿನ್ಸ್ಕ್ II ಎಂದು ಕರೆಯಲ್ಪಡುವ ಹೊಸ ಪ್ಯಾಕೇಜ್‌ಗೆ 2015ರಲ್ಲಿ ಸಹಿ ಮಾಡಲಾಯಿತು.

ಮಿನ್ಸ್ಕ್ II ಉಕ್ರೇನ್‌ನ ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ಪೂರ್ಣ ಕದನ ವಿರಾಮಕ್ಕೆ ಕರೆ ನೀಡಿತು. ಈ ಎರಡೂ ಪ್ರದೇಶಗಳು ಪ್ರಬಲ ಪ್ರತ್ಯೇಕತಾವಾದಿ ಚಳವಳಿಗಳ ತಾಣಗಳಾಗಿವೆ. ಭಾರೀ ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವುದನ್ನು OSCE ಮೇಲ್ವಿಚಾರಣೆ ಮಾಡಬೇಕಾಗಿತ್ತು. ಉಕ್ರೇನ್ ಸಾಂವಿಧಾನಿಕ ಸುಧಾರಣೆಗಳನ್ನು ಜಾರಿಗೊಳಿಸುವುದು ಮತ್ತು ವಿಕೇಂದ್ರೀಕರಣವನ್ನು ಉತ್ತೇಜಿಸಬೇಕಾಗಿತ್ತು. ಉಕ್ರೇನ್ ಮತ್ತು ರಷ್ಯಾ ಎರಡೂ ಮಿನ್ಸ್ಕ್ II ತಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲಿಲ್ಲ ಎಂದೇ ಭಾವಿಸುತ್ತವೆ.

ಪಶ್ಚಿಮ ಯೂರೋಪಿಯನ್ ದೇಶಗಳು ಅದರಲ್ಲಿಯೂ ಫ್ರಾನ್ಸ್ ಮಿನ್ಸ್ಕ್ II ಅನ್ನು ಪ್ರಬಲವಾಗಿ ಬೆಂಬಲಿಸಿದವು. ಒಪ್ಪಂದವು ಈ ಬಿಕ್ಕಟ್ಟಿನಲ್ಲಿ OSCEಗೆ ಮಧ್ಯಸ್ಥಿಕೆ ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರ ನೀಡಿತು ಹಾಗೂ ಫ್ರಾನ್ಸ್‌ಅನ್ನು ಮಧ್ಯಸ್ಥಗಾರನನ್ನಾಗಿ ಮಾಡಿತು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮಿನ್ಸ್ಕ್ II ಅನ್ನು ಜಾರಿಗೊಳಿಸುವುದು ಉಕ್ರೇನ್ ಮತ್ತು ರಷ್ಯಾಕ್ಕೆ ಉತ್ತಮ ಆಯ್ಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಮೆರಿಕ ಮತ್ತು ರಷ್ಯಾ

ಶೀತಲ ಯುದ್ಧದ ಅಂತ್ಯವು ಅಮೆರಿಕದ ಅಪರಿಮಿತ ಜಾಗತಿಕ ಮಿಲಿಟರಿ ಪ್ರಾಬಲ್ಯದ ಅವಧಿಗೆ ಸಾಕ್ಷಿಯಾಯಿತು. ಕಳೆದ 15 ವರ್ಷಗಳಲ್ಲಿ ಪ್ರಪಂಚದ ಇತರ ಶಕ್ತಿಗಳು ಸಹ ಜಗತ್ತಿನ ಹಲವು ಭಾಗಗಳಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಂಡಿವೆ. ಸೋವಿಯತ್ ಒಕ್ಕೂಟದಿಂದ ಮುರಿದುಬಿದ್ದ ಹಲವು ದೇಶಗಳ ನಿರ್ಮಾಣವು ಪಾಶ್ಚಿಮಾತ್ಯ ಪ್ರಾಬಲ್ಯಕ್ಕೆ ಸವಾಲು ಹಾಕುವ ಪವರ್ ಬ್ಲಾಕ್‌ಅನ್ನು ರಷ್ಯಾ ಪ್ರತಿನಿಧಿಸುತ್ತದೆ. ಉಕ್ರೇನ್ ಪಶ್ಚಿಮ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುವ ಆಶಯದೊಂದಿಗೆ ತಟಸ್ಥವಾಗಿದೆ. ಉಕ್ರೇನ್ NATOಗೆ ಸೇರುವ ಸಾಧ್ಯತೆಯು ರಷ್ಯಾದ ಹಿತಾಸಕ್ತಿಗಳಿಗೆ ನೇರ ಬೆದರಿಕೆಯನ್ನುಂಟುಮಾಡುತ್ತದೆ. ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ, ಅಮೆರಿಕ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇದು ರಷ್ಯಾದಲ್ಲಿ ವಿದೇಶಿ ಹೂಡಿಕೆಗಳಲ್ಲಿ ಭಾರಿ ಕುಸಿತಕ್ಕೆ ಕಾರಣವಾಯಿತು. ಇದು ರಷ್ಯಾ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಹದಗೆಡಿಸಿದೆ.

ಈ ಎರಡೂ ಬಣಗಳು ಸಹ ನೇರ ಯುದ್ಧವನ್ನು ತಪ್ಪಿಸಲು ಬಯಸುತ್ತವೆ. ಏಕೆಂದರೆ ರಷ್ಯಾ ಮತ್ತು ಅಮೆರಿಕ ನಡುವಿನ ಯುದ್ಧವು ಮಾನವಕುಲದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ರಷ್ಯಾವನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಳ್ಳುವ ಅಮೆರಿಕದ ಯೋಜನೆಗಳ ಕುರಿತು ಅಂತಾರಾಷ್ಟ್ರೀಯ ಸಮುದಾಯವು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೆ ಈಗಾಗಲೇ ಉಕ್ರೇನ್ ತೊರೆಯುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕದ ಪ್ರಜೆಗಳಿಗೆ ಸಲಹೆ ನೀಡಿದ್ದಾರೆ.

ಕ್ಯೂಬ ಕ್ರಾಂತಿಯ ನಂತರ, ಅಮೆರಿಕದ ಗಡಿಗಳ ಬಳಿ ಸೋವಿಯತ್ ಮಿತ್ರ ದೇಶಗಳು ತಲೆಎತ್ತುವುದು ತನಗೆ ಭಾರೀ ಅಪಾಯ ಎನ್ನುವಂತೆ ಅಮೆರಿಕ ಎತ್ತುತ್ತಿದ್ದ ಕಳವಳಗಳನ್ನು ಇತ್ತೀಚಿನ ಪರಿಸ್ಥಿತಿ ವಿಚಿತ್ರವಾಗಿ ಪ್ರತಿಬಿಂಬಿಸುತ್ತದೆ. ಅಮೆರಿಕದ ಕಣ್ಣುಗಳಿಗೆ ಇಂದಿಗೂ ಕ್ಯೂಬ ಬೆದರಿಕೆಯಾಗಿಯೇ ಉಳಿದಿದೆ, ಅದಕ್ಕೆ ಅನುಗುಣವಾಗಿಯೇ ನಿರ್ಬಂಧಗಳನ್ನು ಹೇರುತ್ತಿರುತ್ತದೆ.

ಉಕ್ರೇನ್‌ಅನ್ನು ತಟಸ್ಥವಾಗಿಡುವುದು

ಸೋವಿಯತ್ ಒಕ್ಕೂಟದ ಪತನದ ನಂತರ NATOದ ಪೂರ್ವದ ವಿಸ್ತರಣೆಗೆ ಮತ್ತು ಉಕ್ರೇನ್ NATOದ ಸದಸ್ಯತ್ವ ಪಡೆಯಲು ಮುಂದಾಗಿರುವುದಕ್ಕೆ ನೇರ ಪ್ರತಿಕ್ರಿಯೆಯಾಗಿ ರಷ್ಯಾ ಉಕ್ರೇನ್ ಗಡಿಯಲ್ಲಿ ತನ್ನ ಪಡೆಯನ್ನು ನಿಯೋಜಿಸಿದೆ. ಅಮೆರಿಕ ಹೊರತುಪಡಿಸಿ ಪಶ್ಚಿಮ ಶಕ್ತಿಗಳು ರಾಜತಾಂತ್ರಿಕ ವಿಧಾನಕ್ಕೆ ಒಲವು ತೋರಿವೆ. ಇದು ಉಕ್ರೇನ್‌ಅನ್ನು ತಟಸ್ಥ ಶಕ್ತಿಯಾಗಿ ಉಳಿಸಬಹುದಾಗಿದೆ.

ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳನ್ನು ರಹಸ್ಯವಾಗಿ ಬೆಂಬಲಿಸಲು ರಷ್ಯಾ ಸಮರ್ಥವಾಗಿದ್ದರೂ, ಉಕ್ರೇನ್‌ನಅನ್ನು ಸಂಪೂರ್ಣವಾಗಿ ಆಕ್ರಮಿಸಲು ಅದು ಆಸಕ್ತಿ ತೋರುತ್ತಿಲ್ಲ. ರಾಜತಾಂತ್ರಿಕ ವಿಧಾನವು ರಷ್ಯಾದ ಭದ್ರತಾ ಕಾಳಜಿಗಳನ್ನು ರಕ್ಷಿಸಲು ಸಾಧ್ಯವಾದರೆ, ಸಂಘರ್ಷವನ್ನು ಪರಿಹರಿಸಬಹುದು.

ಉಕ್ರೇನ್ ತಟಸ್ಥವಾಗಿರುವುದು ವಿಶ್ವದ ಅತ್ಯುತ್ತಮ ಹಿತಾಸಕ್ತಿಯಾಗಲಿದೆ. ಉಕ್ರೇನ್ ವಿಶ್ವದ ಎರಡು ದೊಡ್ಡ ಮತ್ತು ಅತ್ಯಂತ ಮಾರಣಾಂತಿಕ ಮಿಲಿಟರಿ ಮೈತ್ರಿಕೂಟಗಳ ನಡುವೆ ಭೌಗೋಳಿಕ ಬಫರ್ ವಲಯವಾಗಿ ಕಾರ್ಯನಿರ್ವಹಿಸುತ್ತದೆ. ಅಮೆರಿಕ ಗೌರವಿಸಲು ನಿರಾಕರಿಸುತ್ತಿರುವ ರಾಜತಾಂತ್ರಿಕ ಮಾರ್ಗದ ಮೂಲಕ ಇದನ್ನು ಉತ್ತಮವಾಗಿ ಸಾಧಿಸಬಹುದು. ಓಂಖಿಔನಲ್ಲಿರುವ ಮಿತ್ರರಾಷ್ಟ್ರಗಳು ಸಹ ರಾಜತಾಂತ್ರಿಕ ಪರಿಹಾರವನ್ನು ಬಯಸುತ್ತಿದ್ದಾರೆ.

(ಕನ್ನಡಕ್ಕೆ): ಮುತ್ತುರಾಜ್

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಕತ್ತಲ ಕಾಲದಲ್ಲಿ ಒಂದಿಷ್ಟು ಬೆಳಕಿನ ಕಥೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...