Homeಮುಖಪುಟ’ಬಾಡಿನ’ ಬಾಡದ ಲೋಕ

’ಬಾಡಿನ’ ಬಾಡದ ಲೋಕ

- Advertisement -
- Advertisement -

ಕೋಣನ ಕೊರಬಾಡು ಎಮ್ಮೆಯ ಉರಿಬಾಡು
ಕೋಡೊಲೆ ಮ್ಯಾಲೆ ಕೊತಕೊತನೆ
ಕುದಿವಾಗ ನಿದ್ದೆ ಕೊಡದಲ್ಲೋ ಶಿವನೆ

ಎಂಬುದು ಜನಪದರು ಹಾಡಿಕೊಳ್ಳುವ ಹಾಡು. ಜನಪದರಲ್ಲಿ ಬಾಡನ್ನು ಕುರಿತಾದ ಇಂಥ ವರ್ಣನೆಗಳು ಅಪಾರವಾಗಿವೆ. ನಿದ್ದೆ ಕೆಡಿಸುವ, ರಾತ್ರಿ ಎಷ್ಟು ಹೊತ್ತಾದರೂ ಕಾದು ಉಣ್ಣುವ ಉತ್ಸಾಹವನ್ನು ಈ ಸಮುದಾಯಗಳು ಇನ್ನೂ ಉಳಿಸಿಕೊಂಡಿವೆ. ಬಾಡಿನ ಅಡಿಗೆ ಎಂದರೆ ಒಂದು ರೀತಿಯ ಸಂಭ್ರಮ. ಮನೆಗೆ ಯಾರೇ ಬಂದರೂ ಬಾಡೂಟ ಕಡ್ಡಾಯ. ನೆಂಟರಿಷ್ಟರಿಗೆ ಬಾಡೂಟವೇ ಇಷ್ಟ. ಅದು ಗೌರವಕೊಡುವ ವಿಧಾನವೂ ಹೌದು. ಅಂದು ಎಲ್ಲೂ ಇಲ್ಲದ ಉತ್ಸಾಹ, ಲವಲವಿಕೆ ಮೈದುಂಬಿಕೊಳ್ಳುತ್ತದೆ. ಅಂದಿನ ಎಲ್ಲ ಕ್ರಿಯೆಗೂ ಮೊನಚು, ಆಪ್ತತೆ ಲಭಿಸುತ್ತದೆ. ಬಾಡಿನ ದಿನ ಬಾಣಸಿಗರೇ ಆಗಿಬಿಡುವ ಹೆಚ್ಚಿನ ಕೆಲಸವು ಸೇರಿಕೊಳ್ಳುತ್ತದೆ. ಮಂಗಳವಾರ ಇಲ್ಲವೇ ಭಾನುವಾರ ಬಾಡು ತಪ್ಪುವುದಿಲ್ಲ. ಇದು ಶ್ರಮಿಕ ಮತ್ತು ದಮನಿತ ಸಮುದಾಯಗಳ ಜೀವನ ಕ್ರಮ. ಇದಕ್ಕೆ ಯಾವುದೇ ಕೊರತೆಯಿಲ್ಲದೆ ಜೀವನ ಸಾಗುತ್ತಿರುತ್ತದೆ. ಆದರೆ ಆಧುನಿಕತೆ ಮತ್ತು ಅತಿ ಧಾರ್ಮಿಕತೆ ಇಂಥ ಸಹಜ ಬದುಕಿಗೆ ಕಲ್ಲೆಸೆಯುತ್ತಿದೆ. ಬಾಡು ಕುರಿತಾದ ಚರ್ಚೆಗಳು ಮತ್ತೆಮತ್ತೆ ನಮ್ಮ ಮುಂದೆ ಇಣುಕುಹಾಕುತ್ತಿವೆ. ಬಹುಸಂಖ್ಯಾತರ ’ಆಹಾರ’ ಚರ್ಚೆಯ ವಿಷಯವಾಗುತ್ತಿರುವುದು ಆತಂಕದ ವಿಷಯ.

ಕಳೆದ ಒಂದೆರಡು ತಿಂಗಳಿನಿಂದ ಈ ಚರ್ಚೆ ತೀವ್ರವಾಗುತ್ತಿದೆ. ಹಂಸಲೇಖ ಅವರು ಕ್ವಚಿತ್ತಾಗಿ ಪ್ರಸ್ತಾಪಿಸಿದ ಆಹಾರದ ವಿಚಾರ ಬಾಡುಪ್ರೇಮಿಗಳಿಗೆ ಸ್ವಾಭಿಮಾನ ಬಡಿದೆಬ್ಬಿಸಿದರೆ, ಉಳಿದವರಿಗೆ ನಿದ್ದೆ ಕೆಡಿಸಿದೆ. ಇದರ ಮುಂದುವರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯರು ಹುಟ್ಟಿಹಾಕಿದ ’ಬಾಡೇ ನಮ್ ಗಾಡು’, ’ಬಾಡೇ ನಮ್ಮ ಮನೆದೇವರು’, ಇತ್ಯಾದಿ ಚಟುವಟಿಕೆಗಳು ಮತ್ತೆಮತ್ತೆ ನಮ್ಮ ಆಹಾರದ ಬಗೆಗೆ ಚಿಂತಿಸಲು ಹಿಂತಿರುಗುವಂತೆ ಮಾಡುತ್ತಿವೆ. ಈ ತರದ ಪ್ರತಿಕ್ರಿಯಾತ್ಮಕ ಮತ್ತು ಸೃಜನಶೀಲ ಟ್ರೋಲ್‌ನಲ್ಲಿ ಯುವ ಸಮುದಾಯವೇ ಹೆಚ್ಚಾಗಿ ಪಾಲ್ಗೊಂಡಿದ್ದು ಆಶಾದಾಯಕ ಬೆಳವಣಿಗೆ. ಏನೇ ಆದರೂ ಈ ಚರ್ಚೆಯಿಂದ ಆಹಾರದ ಆಯ್ಕೆ ಮತ್ತು ಜನಸಾಮಾನ್ಯರ ಆಹಾರ ಸಂಸ್ಕೃತಿ ವಿಚಾರಗಳು ಮುನ್ನೆಲೆಗೆ ಬಂದಿವೆ. ಹಂಸಲೇಖರ ಮಾತು ಮತ್ತು ನಂತರದ ಬೆಳವಣಿಗೆಗಳು, ಮಕ್ಕಳಿಗೆ ಮೊಟ್ಟೆ ನೀಡುವ ವಾದ-ಪ್ರತಿವಾದಗಳು ಈ ಚಿಂತನೆಯನ್ನು ಮತ್ತಷ್ಟು ಉಲ್ಬಣಗೊಳಿಸಿವೆ. ಮುಖ್ಯವಾಗಿ ಶ್ರಮಿಕರ ಆಹಾರವನ್ನು ಅಣಕಿಸುವ ಚರ್ಚೆಗಳು ಹೆಚ್ಚು ಪ್ರಚಾರ ಗಿಟ್ಟಿಸುತ್ತಿವೆ. ವೈಜ್ಞಾನಿಕವಾಗಿ ಸಾಬೀತಾಗಬೇಕಾದ ವಿಚಾರಗಳನ್ನು ಮಠಗಳು, ಮಠದ ಜಗದ್ಗುರುಗಳು, ಸರ್ಕಾರಗಳು ನಿರ್ಧರಿಸುತ್ತಿವೆ. ಇದರಿಂದ ಉಂಟಾಗಲಿರುವ ಸಾಮಾಜಿಕ ಅಸಮತೋಲನ ಭವಿಷ್ಯದಲ್ಲಿ ಸರಿಪಡಿಸಲಾಗದ ಸ್ಥಿತಿಗೆ ಕೊಂಡೊಯ್ಯುತ್ತದೆ. ಜನಬಳಕೆಯ ’ಬಾಡು’, ಶಿಷ್ಟ ರೂಪಕ್ಕೆ ಮಾರ್ಪಾಡಾಗಿ ’ಮಾಂಸ’ ಪದವಾಗಿ ಬಳಕೆ ಮಾಡುತ್ತಿರುವುದರ ಹಿಂದೆಯೂ ಇದೇ ಹುನ್ನಾರವಿದೆ. ಇದರ ತಳಿರೂಪವಾಗಿ, ಇನ್ನೂ ಮುಂದೆಹೋಗಿ, ಆಹಾರ ಜೀವನದ ಮೂಲಭೂತ ಅಗತ್ಯವಾಗದೆ ಅಂತಸ್ತಿನ ಭಾಗವಾಗಿ ಬದಲಾಗಿದೆ.

ತಿನ್ನುವ ಆಹಾರ ಅವರವರ ಆಯ್ಕೆ. ಆದರೆ ವರ್ತಮಾನದಲ್ಲಿ ಅದು ಈ ಸ್ವರೂಪದಲ್ಲಿ ಉಳಿದಿಲ್ಲ. ಇನ್ನೊಬ್ಬರ ಆಹಾರವನ್ನು ಗೌರವಿಸದೇ ತಮ್ಮದೇ ಶ್ರೇಷ್ಠವೆಂದು ಹೇರುವ ವಿಚಾರ ಸಹಜ ಪ್ರವೃತ್ತಿಯಾಗುತ್ತಿದೆ. ಈ ಆಹಾರ ಶ್ರೇಷ್ಠತೆಯ ವ್ಯಸನ ಬಹುಸಂಖ್ಯಾತರ ಪ್ರಿಯ ಆಹಾರವನ್ನು ಕಸಿದುಕೊಳ್ಳುತ್ತಿದೆ. ತಿನ್ನುಣ್ಣುವ ವಿಚಾರಗಳು ವೈಯಕ್ತಿಕವಾಗದೆ ಅವುಗಳನ್ನು ಮತ, ಧರ್ಮ, ಮಠಗಳು ನಿರ್ಧರಿಸುವ ಹಂತಕ್ಕೆ ಸಮಾಜ ತಲುಪಿರುವುದು ಅಪಾಯಕಾರಿ. ಇದರ ಪರಿಣಾಮವಾಗಿ ತಟ್ಟೆಯಲ್ಲಿರಬೇಕಾದ ತಿನ್ನುವ ಪದಾರ್ಥಗಳು ಬೀದಿಯಲ್ಲಿ ಕಾಲು ಕೆರೆದು ಜಗಳಕ್ಕೆ ಆಹ್ವಾನಿಸುತ್ತಿವೆ.

ಬಾಡು ತಿನ್ನುವ ಸಮುದಾಯಗಳ ತಲ್ಲಣ

ಬಾಡನ್ನೇ ಪ್ರಮುಖ ತಿನಿಸನ್ನಾಗಿ ಮಾಡಿಕೊಂಡಿರುವ ಸಮುದಾಯಗಳ ಸಂಕಟ ವಿಚಿತ್ರವಾದುದು. ತಮ್ಮ ಸಮಕಾಲೀನದಲ್ಲಿ ನಡೆಯುತ್ತಿರುವ ಆಹಾರದ ತರತಮವನ್ನು ಎದುರಿಸುತ್ತಲೇ ಇಷ್ಟದ ಆಹಾರವನ್ನು ನಿರಾಕರಣೆ ಮಾಡಬೇಕಾದ ಒತ್ತಡದಲ್ಲಿ ಈ ಸಮುದಾಯಗಳು ಸಿಲುಕಿವೆ. ಮಾಂಸ ನಿರಾಕರಣೆಯ ಜೊತೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿರುವ ಬಾಡುಪ್ರಿಯ ಸಮುದಾಯಗಳ ಒತ್ತಡಗಳು ಈ ಕಾಲಕ್ಕೆ ವಿಚಿತ್ರವಾಗಿ ಹೆಣೆದುಕೊಳ್ಳುತ್ತಿವೆ. ವಾರಗಳಲ್ಲಿ ಸೋಮವಾರ, ಗುರುವಾರ, ಶನಿವಾರಗಳಲ್ಲಿ ಬಾಡು ಸೇವನೆ ನಿಷೇಧಿಸಿಕೊಂಡಿರುವ ಸಮುದಾಯಗಳಿವೆ. ಮಾಸಗಳಲ್ಲಿ ಶ್ರಾವಣ, ಕಾರ್ತಿಕಗಳು. ಜೊತೆಗೆ ಗೃಹಪ್ರವೇಶ, ಸತ್ಯನಾರಾಯಣ ಪೂಜೆ-ಪುನಸ್ಕಾರ ಇತ್ಯಾದಿಗಳಲ್ಲಿ ಬಾಡು ಸೇವನೆಯನ್ನು ಬಿಟ್ಟುಕೊಟ್ಟಿವೆ. ಇದು ಆಹಾರ ತರತಮತೆಗೆ ಮಾಡಿಕೊಂಡಿರುವ ಪರ್ಯಾಯ ದಾರಿಗಳಾಗಿರಬಹುದು.

ಇದರೊಂದಿಗೆ ನಮ್ಮ ಸಾಮಾಜಿಕ ವಾತಾವರಣವು ಬಾಡಿನ ಆಹಾರಕ್ಕೆ ವ್ಯತಿರಿಕ್ತವಾಗಿಯೇ ಇದೆ. ಶಿಕ್ಷಣ ಕಲಿಸುವ ಶಾಲಾ ಕಾಲೇಜುಗಳಿಂದ ಹಿಡಿದು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮಾಂಸ ಕುರಿತಾದ ಮಾತು-ಕತೆಗಳಿಗೆ ಅಘೋಷಿತ ನಿರ್ಬಂಧವಿದೆ. ಇನ್ನು ಪೋಷಕರು ಮಕ್ಕಳಿಗೆ ತಿನ್ನುವ ಆಹಾರದಲ್ಲಿಯೇ ತರತಮವನ್ನು ಸೇರಿಸಿ ಉಣಬಡಿಸುತ್ತಿದ್ದಾರೆ. “ನಮ್ಮ ಮಗುವಿಗೆ ಮಾಂಸ ಅಂದ್ರೇನೆ ಆಗಲ್ಲ” ಎಂದು ಹೆಮ್ಮೆಯಿಂದ ಬೀಗುವ ನಾವು ನಮ್ಮ ಪರಿಸರದ ಆಹಾರದ ವೈವಿಧ್ಯತೆಯನ್ನು ಪರಿಚಯಿಸುವಲ್ಲಿಯೇ ವಿಫಲರಾಗುತ್ತಿದ್ದೇವೆ. ಇದಲ್ಲದೆ ಬುದ್ಧ, ಗಾಂಧಿ ಮುಂತಾದ ಐತಿಹಾಸಿಕ ದ್ಯಕ್ತಿಗಳ ಹುಟ್ಟಿದ ದಿನಗಳಂದು ಸರ್ಕಾರವೇ ಖುದ್ದಾಗಿ ಮುಂದೆ ನಿಂತು ಮಾಂಸದಂಗಡಿಗಳಿಗೆ ಬೀಗ ಜಡಿಯುತ್ತದೆ. ಸರ್ಕಾರವು ಕೂಡ “ಮಾಂಸ ಎನ್ನುವುದು ಸಾತ್ವಿಕ ವಾತಾವರಣವನ್ನು ಹಾಳುಗೆಡವಿ ಕ್ರೂರತ್ವವನ್ನು ತಂದುಬಿಡುತ್ತದೆ” ಎಂಬ ಹುಸಿ ನಿಲುವನ್ನು ಅಧಿಕೃತವಾಗಿ ಪ್ರಚಾರಪಡಿಸುತ್ತಿದೆ.

ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸಬೇಕಾದ ಆಹಾರದ ಆಯ್ಕೆಯನ್ನು ಧರ್ಮ ಇತ್ಯಾದಿ ಸಂಗತಿಗಳು ನಿರ್ಧರಿಸುತ್ತಿವೆ. ದೇಹ ಪ್ರಕೃತಿಗೆ ಸಂಬಂಧಿಸಿದ ಆಹಾರ ಜಾತಿ, ಸಮುದಾಯ, ಧರ್ಮಗಳೊಂದಿಗೆ ಕೂಡಾವಳಿಯಾಗಿದೆ. ನಮ್ಮ ದೇಹದ ಜೀರ್ಣಾಂಗಗಳು ಮತ್ತು ತಿನ್ನಲು ಬಳಸುವ ಅಂಗಗಳು ಮಾಂಸಾಹಾರದ ಮೂಲಕವೇ ಬೆಳವಣಿಗೆಯಾಗಿವೆ. ಕಾಡು ಮಾನವರಾದ್ದಾಗಿನಿಂದ ಮತ್ತು ಪ್ರಾಣಿಲೋಕದಲ್ಲಿ ಬದುಕಿದ್ದಾಗಿನಿಂದ ಮಾನವರ ಮೊದಲ ಮತ್ತು ಪ್ರಮುಖ ಆಹಾರ ಮಾಂಸವೇ ಆಗಿತ್ತು. ಬೇಟೆ ಪ್ರಧಾನವಾಗಿದ್ದ ಆದಿಮಾನವರ ಮೊದಲ ಆಹಾರ ಮಾಂಸವೇ ಆಗಿತ್ತು. ಅದಕ್ಕೆ ತರತಮಭಾವಗಳಿರಲಿಲ್ಲ. ಈಗ, ಮಾಂಸ ತಿನ್ನದೇ ಇರುವ ಕೆಲವರು ಮೇಲೆ ದಣಿಸ್ಥಾನದಲ್ಲಿ ಕೂತು ಆಹಾರ ನಿರ್ಧಾರಕರಾಗಿದ್ದಾರೆ.

ಈ ಶಕ್ತಿಗಳು ಆಹಾರ ಕ್ರಮದ ಮೂಲಕ ಅಧಿಕಾರ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿಯೇ ಇರುವಂತೆ ತಂತ್ರಗಳನ್ನು ಹೆಣೆಯುತ್ತಿವೆ. ಅದರ ಭಾಗವಾಗಿಯೇ ಮತ್ತೆಮತ್ತೆ ತಿನ್ನುವ ವಸ್ತುಗಳ ಮೇಲೆ ದಾಳಿಯಾಗುತ್ತಿರುತ್ತದೆ. ಅದರ ಮೂಲಕ ತಿನ್ನುವ ಸಮುದಾಯಗಳನ್ನು ಅವಮಾನಿಸುವ, ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಇಂಥ ಹೇರಿಕೆಗಳು ಸಹಜವಾಗಿ ಹುಟ್ಟು, ನಡವಳಿ, ಆಹಾರದ ವಿಷಯಗಳಿಗೇ ಕೇಂದ್ರೀಕೃತವಾಗಿರುತ್ತದೆ.

ಬಾಡಿನ ವಿಚಾರ ಬಂದಕೂಡಲೆ ನಾವು ಏಕಮುಖವಾಗಿ ಯೋಚಿಸುವಂತೆ ಮಾಡುವ ನಮ್ಮ ಸಾಮಾಜಿಕ ವ್ಯವಸ್ಥೆ ಇಂದು ಸವಾಲಾಗಿದೆ. ನಮ್ಮ ಜನಪದರಿಗೆ ಇದು ಸಮಸ್ಯೆಯಾಗಿ ಕಾಡುವುದಿಲ್ಲ. ನಗರದ ಮಂದಿಗೆ ಆಹಾರ ಬಹುಮುಖ್ಯ ಸಮಸ್ಯೆ. ಎಲ್ಲವುದಕ್ಕಿಂತ ಹೆಚ್ಚಾಗಿ ಶ್ರಮಿಕ ಸಮುದಾಯಗಳ ಆಹಾರದ ಮೇಲೆ ಯಜಮಾನಿಕೆ ಸ್ಥಾಪಿಸುವ ಕಾರಣಕ್ಕಾಗಿ ಅವರ ಆಹಾರವನ್ನು ಮತ್ತೆಮತ್ತೆ ಚರ್ಚೆಗೆ ಎತ್ತಿಕೊಳ್ಳಲಾಗುತ್ತದೆ. ಮಾಂಸ ನಿರಾಕರಣೆಯ ಒತ್ತಡವನ್ನು ಸೃಷ್ಟಿಸಲಾಗುತ್ತದೆ. ಈ ತಂತ್ರದ ಫಲವಾಗಿ ಶ್ರಮಿಕರು ದಿನನಿತ್ಯ ಸಹಜವಾಗಿ ಬಳಸುತ್ತಿದ್ದ ’ಬಾಡ’ನ್ನು ತುಚ್ಚೀಕರಣದ ಹೆಸರಲ್ಲಿ ದೂರವಿಡಲು ಹುನ್ನಾರ ಹೆಣೆಯಲಾಗಿದೆ. ಅವರಿಗೆ ಸುಲಭ ಬೆಲೆಯಲ್ಲಿ ಸಿಗುತ್ತಿದ್ದ ಮಾಂಸವನ್ನು ದುಪ್ಪಟ್ಟಾಗಿಸಲಾಗಿದೆ. ಶ್ರಮಿಕರಿಗೆ ಹೊರೆಯಾಗುತ್ತದೆ ಎಂಬತಹ ಆರ್ಥಿಕ ಆತಂಕಗಳನ್ನು ಈ ಮಾಂಸದ ಚರ್ಚೆಗಳು ತಂದಿಟ್ಟಿವೆ. ತಮ್ಮ ಪಾಡಿಗೆ ತಾವಿರುವ ಸಮುದಾಯಗಳನ್ನು ಅವರು ತಿನ್ನುಣ್ಣುವ ವಿಚಾರಗಳಲ್ಲಿ ವ್ಯವಸ್ಥಿತವಾಗಿ ಸಂಸ್ಕೃತೀಕರಣ ಮಾಡಲಾಗುತ್ತಿದೆ. ಈಗಾಗಲೇ ’ಹೊಲಸಡಿಗೆ’ ಎಂದು ’ಬಾಡನ್ನು’ ಮನೆಯ ಹೊರಗಿಡಲಾಗಿತ್ತು. ಈ ಮಾಂಸ ವರ್ಜನೆಗೆ ನಮ್ಮ ಸಾಮಾಜಿಕ ಭಾಷೆಯೂ ಕೂಡ ಅನೈತಿಕವಾಗಿ ಕೈಜೋಡಿಸಿದೆ. ಈ ಕೂಡಾವಳಿಯ ಕಾರಣದಿಂದ ’ವೆಜ್’, ’ನಾನ್ ವೆಜ್’ ಎಂಬ ರೂಪಗಳು ನಿರ್ಮಾಣವಾಗಿವೆ. ಹೀಗೆ ಕರೆಯುವಾಗಲೂ ವೆಜ್ಜೇ ದಣಿಸ್ಥಾನದಲ್ಲಿದೆ. ’ನಾನ್ ವೆಜ್’ಅನ್ನು ಮತ್ತೆ ’ಹೊಲಸು’ ಎಂಬ ಅನ್ವರ್ಥನಾಮದಲ್ಲಿಯೇ ಗುರುತಿಸಲಾಗುತ್ತಿದೆ. ಈ ’ಹೊಲಸು’ ಎನ್ನುವುದನ್ನು ತಿನ್ನುವವರು ಮತ್ತಷ್ಟು ’ಹೊಲಸು’ ಎಂದು ಶಿಕ್ಷಣವೇ ಕಲಿಸುತ್ತದೆ. ಇದರ ಮುಂದುವರಿಕೆಯ ಭಾಗವಾಗಿ ಅಶ್ಲೀಲ ಜೋಕುಗಳು, ವಿವಾಹಪೂರ್ವ ಕಾಮಕ್ರೀಡೆಗಳ ಮಾತುಗಳನ್ನು ಕೂಡ ’ನಾನ್ ವೆಜ್’ ಎಂದು ಬಗೆದು ಭಾಷಿಕವಾಗಿ ಅಣಕಿಸಲಾಗುತ್ತಿದೆ. ಭಾಷಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕತೆಯ ಹೆಸರಿನಲ್ಲಿ ಬಹುಸಂಖ್ಯಾತರ ತಿನ್ನುಣ್ಣುವ ನೆಲೆಯನ್ನು ಅಣಕಿಸುವ, ತೇಜೋವಧೆ ಮಾಡುವ, ಮುಂದುವರಿದು ಹಲ್ಲೆ ಮಾಡುವ ಅತಿರೇಕಗಳು ನಿತ್ಯ ಸಂಗತಿಗಳಾಗುತ್ತಿವೆ. ಮತ್ತೊಬ್ಬರ ಆಹಾರವನ್ನು ಗೌರವಿಸದೆ ತಮ್ಮ ಆಹಾರವೇ ಶ್ರೇಷ್ಟ ನೀವು ಅದನ್ನೇ ಪಾಲಿಸಬೇಕು ಎಂದು ಆದೇಶಗೈಯ್ಯುವ ದನಿಗಳು ಇತ್ತೀಚೆಗೆ ದ್ವಿಗುಣಗೊಳ್ಳುತ್ತಿವೆ..

ಮಾಂಸದ ವಿಚಾರವನ್ನು ಕೇವಲ ಉಣ್ಣುವ ವಿಚಾರವಾಗಿಯಷ್ಟೇ ನಮ್ಮ ಮುಂದಿಡದೇ ಅದನ್ನು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಸಭ್ಯತೆ, ದಯೆ, ಅನುಕಂಪ ಇತ್ಯಾದಿ ನೆಲೆಯಲ್ಲಿ ವ್ಯಾಖ್ಯಾನಿಸುವ ಇನ್ನೊಂದು ಬಗೆಯುಂಟು. ಆಹಾರ ದೈಹಿಕ ಅವಲಂಬನೆ ಮತ್ತು ಜೀರ್ಣಕ್ರಿಯೆಯ ಸ್ಥಿತಿಯಿಂದ ರೂಪುಗೊಂಡಿರುವಂಥದ್ದು. ಹಾಗೇ ನೋಡಿದರೆ ಪ್ರಾಣಿಜನ್ಯ ಮತ್ತು ಸಸ್ಯಜನ್ಯ ಎಂಬ ವಿಭಾಗೀಕರಣವೇ ಸರಿಯಾದುದಲ್ಲ. ಆಹಾರ ದೇಹಕ್ಕೆ ಹೊಂದಿಕೊಳ್ಳುವ ಗುಣದಿಂದಲೇ ಮನುಷ್ಯನೆಂಬ ಪ್ರಾಣಿ ಇಲ್ಲಿಯವರೆಗೆ ಬದುಕಿಬಂದಿರಲು ಸಾಧ್ಯ. ಅದೇ ರೀತಿ ಮಾನವ ಸ್ವಭಾವ, ಗುಣ, ವಂಶವಾಹಿನಿ ಇವೆಲ್ಲವನ್ನು ತಿನ್ನುವ ಆಹಾರವೇ ನಿರ್ಧರಿಸುವಂತಿದ್ದರೆ ಅಂಥ ಲೋಕ ಮಾನವ ಲೋಕವಾಗಲು ಹೇಗೆ ಸಾಧ್ಯ? ಆದರೆ ಈ ಕಾಲದಲ್ಲಿ ಅವುಗಳು ಹೀಗೆ ನಿರ್ಧಾರವಾಗುವುದೇ ಆದರೆ ಅದಕ್ಕೆ ಬಲಿಯಾಗುವಂಥವು ಮಾತ್ರ ಬಾಡುಪ್ರಿಯ ಸಮುದಾಯಗಳೇ.

ಬಾಡೌಷಧಿ

ಬಾಡು ಕೇವಲ ಆಹಾರವಷ್ಟೇ ಅಲ್ಲ. ಅದರ ಬಹುಪಯೋಗಿ ಅರಿವು ನಮ್ಮ ಜನಪದರಿಗಿದೆ. ಈಗಲೂ ನಮ್ಮ ಭಾಗಗಳಲ್ಲಿ (ಬಹುತೇಕ ಕರ್ನಾಟಕದ ಭಾಗಗಳಲ್ಲೂ) ಯಾವ್ಯಾವ ರೋಗಗಳಿಗೆ ಯಾವ್ಯಾವ ’ಬಾಡ’ನ್ನು ಬಳಸಬೇಕೆಂಬುದು ಜನಮಾನಸದಲ್ಲಿದೆ. ಬಾಡು ’ಬಾಡೌಷಧಿ’ಯಾಗಿ ಬಳಕೆಯಾಗುತ್ತಿದೆ. ’ಬಾಡು’ ಆಯಾ ಕಾಲದ, ಅಲ್ಲಿನ ಆಚರಣೆ, ಜೀವನ ಕ್ರಮ, ಪರಿಸರ, ಭೌಗೋಳಿಕ ನೆಲೆಗಳನ್ನೆಲ್ಲ ದಕ್ಕಿಸಿಕೊಂಡಿದೆ. ಎಲ್ಲ ಜಾತ್ರೆಗಳು ಬೇಸಿಗೆಯ ದಿನಗಳಲ್ಲಿಯೇ ನಡೆಯುವುದರ ಬಗ್ಗೆ ಹಿರಿಯರು ಹೇಳುವುದು: “ಕೋಣನ ಮಾಂಸ ತುಂಬಾ ತಂಪು, ಅದ್ಕೆ ಜಾತ್ರೆಗಳು ಬ್ಯಾಸ್ಗೆನಲ್ಲಿವೆ” ಎಂದು. ನಮ್ಮ ಭಾಗದ ಗುರುಮಠಗಳಲ್ಲಿ ತೀರಾ ಸಹಜವಾಗಿ ’ಬಸವನಪತ್ರೆ’ಯನ್ನು (ದನದ ಬಾಡು) ಬಳಸುತ್ತಾರೆ. ಎಷ್ಟೋ ಡಾಕ್ಟರುಗಳು ಕ್ಷಯ ರೋಗಕ್ಕೆ ಮದ್ದನ್ನಾಗಿ ಬಾಡನ್ನು ತಿನ್ನಲು ಸೂಚಿಸಿರುವುದನ್ನು ನಮ್ಮೂರಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಬಾಡಿನ ಪದಕೋಶ

ನಾವು ಗೌರವಯುತವಾಗಿ ಬಳಸುವ ಸಾಂಸ್ಕೃತಿಕ ಪದಕೋಶವು ಮೇಲ್‌ಸ್ತರದ್ದೇ ಆಗಿದೆ. ಬಾಡಿನ ಲೋಕ ವೈವಿಧ್ಯಮಯವಾದುದು. ಅದರದೇ ಆದ ಪರಿಭಾಷೆ, ಲೋಕಸತ್ಯ, ಜೀವನ ದರ್ಶನ ಅಷ್ಟೇ ಅಲ್ಲ ಬದುಕಿನ ಕ್ರಮವೂ ವಿಭಿನ್ನ ಮತ್ತು ವೈವಿಧ್ಯ. ಅದರ ಭಾಷೆಯೂ ಸಹ. ಹಾಗೆ ನೋಡಿದರೆ ಬಾಡಿನದೇ ಒಂದು ನಿಘಂಟು ಸಿದ್ಧಗೊಳ್ಳಬೇಕಾಗಿದೆ. ಹೀರಿ, ಮಣ್ಣೀರಿ, ದೊಮ್ಮೆ, ಪಚ್ಚಿ, ಪುಡುಪೊಚ್ಚಿ, ಉಲುಮೆಕಾಯಿ, ಇಸ್ಕಟ್ಟು, ಕಳ್ಳು, ಗುಂಡ್ಗೆ, ಗ್ವಾಮಳೆ ಸರ, ಮೆದುಳು, ತಲೆಕಾಲು, ಯಲ್ಗ, ನುಚ್ಚೆಲ್ಗ, ಯಮ್ಕೆ, ಗಂಟುಮೂಳೆ, ತುಪ್ದಮೂಳೆ ಮುಂತಾದ ಬಾಡಿನ ಭಾಗಗಳು, ಇವುಗಳಿಂದ ತಯಾರಾಗುವ ಕೊರಬಾಡು, ಉರಬಾಡು, ಸಪ್ಪೆಬಾಡು, ಕೆದುಕ್ಲು, ಉರ್ಗರಿ, ಬಾಡ್ನೆಸ್ರು, ಬಾಡ್ನಾಮ್ರ, ಬೆಸ್ಣೆ, ಇತ್ಯಾದಿ ಬಾಡಿನ ಪದಾರ್ಥಗಳು. ಬಾಡಿನ ಭಾಗವಾಗಿಯೇ ನಿರ್ಮಾಣಗೊಂಡಿರುವ ಭಾಷಿಕ ನೆಲೆಗಳು ಸಂಪೂರ್ಣವಾಗಿ ಮರಗುಭಾಷೆಯಾಗಿ ಶ್ರಮಿಕ ಸಮುದಾಯಗಳಲ್ಲಿ ಈಗಲೂ ಬಳಕೆಯಾಗುವುದುಂಟು. ’ಬೀಳು’, -ಕೋಣನಬಂಡೆ, ಬಾಡಿನ್ನಬಂಡೆ, ಕ್ವಾಣನ ಕುಯ್ಯೋ ತಾವು, ಹಂದಿಕುಯ್ಯೋ ಬಂಡೆ, ಇತ್ಯಾದಿ ತಾಣಗಳು. ಅದಕ್ಕಾಗಿ ಬಳಕೆಯಾಗುವ ಪರಿಕರಗಳು: ಚೂರಿ, ಕತ್ತಿ, ಕಿರುಗತ್ತಿ, ಸಣ್ಚೂರಿ, ದೊಡ್ಚೂರಿ, ಕುಡ್ಲು, ಮಚ್ಕುಡ್ಲು, ಬಾಡ್ಕಡಿಯೋ ತುಂಡು, ಈಳ್ಗೆ, ಬಾಡ್ಣರ್ವಿ, ಒಣಬಾಡನ್ನು ಸಂಗ್ರಹಿಸುವ ಸಣ್ಣ ಬಾಯಿಯಬಾನಿ, ಮರದಸೌಟು, ನಿಲುವಿನಗಾಲು, ಬಾಡಿನ ಸರ, ಆರ್ಬಳಸಿದ ಬಾಡು (ಒಣಬಾಡು)… ಇವೆಲ್ಲ ಶ್ರಮಿಕರ, ದಮನಿತರ ನಿತ್ಯಜೀವನದ ಭಾಗಗಳು. ಆದರೆ ಇವಕ್ಕೆ ಸಾಮಾಜಿಕ ಮನ್ನಣೆ ಇಲ್ಲ.

’ಬಾಡ’ನ್ನೇ ತಮ್ಮ ಸೃಜನಶೀಲತೆಯ ಭಾಗವಾಗಿಸಿಕೊಂಡ ಬಗೆಯೂ ನಮ್ಮಲ್ಲಿದೆ. ಕಲೆ, ಸಂಸ್ಕೃತಿ, ಸಂಗೀತ, ವಾದ್ಯ ಇವುಗಳಿಗೆಲ್ಲ ’ಬಾಡಿನ’ ನಂಟಿದೆ. ಒಂದು ಆಹಾರ ಪದ್ಧತಿಯನ್ನು ಹತ್ತಿಕ್ಕುವುದು ಎಂದರೆ ಅದು ಕೇವಲ ಆಹಾರ ಮಾತ್ರವಾಗಿರದೆ ಆ ಹೊತ್ತಿನ ಸೃಜನಶೀಲ ಮನಸ್ಸುಗಳ ಕಟ್ಟುವಿಕೆಯನ್ನು ನಾಶಮಾಡುವುದೇ ಆಗಿರುತ್ತದೆ.

ಡಾ.ರವಿಕುಮಾರ್ ನೀಹ

ಡಾ.ರವಿಕುಮಾರ್ ನೀಹ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯ ರವಿಕುಮಾರ್ ವಿಮರ್ಶಕರು ಮತ್ತು ಹೊಸ ತಲೆಮಾರಿನ ಭರವಸೆಯ ಬರಹಗಾರ. ಡಾ ರಹಮತ್ ತರೀಕೆರೆ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.


ಇದನ್ನೂ ಓದಿ: ‘ಬಾಡು ಸಪ್ತಾಹ’: ಸಾಮಾಜಿಕ ಜಾಲತಾಣದಲ್ಲಿ #ಬಾಡೇ_ನಮ್_ಗಾಡು ಅಭಿಯಾನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...